ಕರ್ನಾಟಕದಲ್ಲಿ ಹಿಂದಿ, ಆಂಗ್ಲಭಾಷೆಯನ್ನು ಬಳಸುವುದಾದರೆ ಬೇರೆ ಕಡೆಗಳಲ್ಲೂ ಕನ್ನಡ ಬಳಸಲಿ

ಬೆಂಗಳೂರು: ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದಡಿಯಲ್ಲಿ ಬೆಂಗಳೂರಿನ ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಭಾಷೆಯ ಹೇರಿಕೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯ ವ್ಯಾಪ್ತಿಗೆ ಈಗ ಆಂಗ್ಲ ಭಾಷೆಯೂ ಸೇರ್ಪಡೆಯಾಗಿದ್ದು, ಹೋರಾಟ ತಿರುವು ಪಡೆದುಕೊಂಡಿದೆ.
ಗುರುವಾರ ಪ್ರತಿಭಟನೆ ನಡೆಸಿರುವ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಕಾರ್ಯಕರ್ತರು, ಬೆಂಗಳೂರಿನ ಇಕೋ ಟೆಕ್ ಸಮೀಪದ ಕೆಲ ರೆಸ್ಟೋರೆಂಟ್ ಹಾಗೂ ಮಾಲ್‌ಗಳಲ್ಲಿ ಹಿಂದಿ ಹಾಗೂ ಆಂಗ್ಲ ಭಾಷೆ ಬಳಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವೀಣ್ ಶೆಟ್ಟಿ ಅವರು, ‘ಕಂಪೆನಿಗಳು ಇಲ್ಲಿನ ಸಂಪನ್ಮೂಲವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಆದರೆ, ತಮ್ಮ ಕೆಲಸಕ್ಕಾಗಿ ಕನ್ನಡ ಬಳಸುವುದಿಲ್ಲ. ಕನ್ನಡಿಗರಿಗೆ ಉದ್ಯೋಗವನ್ನು ಸಹ ನೀಡುವುದಿಲ್ಲ. ಹಾಗಾಗಿಯೇ ನಾವು ಹೋರಾಟ ನಡೆಸುತ್ತಿದ್ದೇವೆ’ ಎಂದು ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕರ್ನಾಟಕದಲ್ಲಿ ಹಿಂದಿ ಹಾಗೂ ಆಂಗ್ಲ ಭಾಷೆಯನ್ನು ಬಳಸುವುದಾದರೆ ಬೇರೆ ಕಡೆಗಳಲ್ಲೂ ಕನ್ನಡ ಬಳಸಲಿ ಎಂದು ಸಹ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
#WATCH Karnataka Rakshana Vedike members deface Hindi nameplate of a restaurant in a mall near Bengaluru's Eco tech park pic.twitter.com/LzuBvB6kDs
— ANI (@ANI_news) July 6, 2017
ಬೆಂಗಳೂರಿನ ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿದೆ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಭಾಷೆ ಬಳಕೆ ವಿರೋಧಿಸಿ ಹೋರಾಟಗಳು ಆರಂಭವಾಗಿದ್ದವು. ಇದರಿಂದ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಕೆಲವು ನಿಲ್ದಾಣಗಳ ನಾಮಫಲಕಗಳಲ್ಲಿ ಹಿಂದಿ ಅಕ್ಷರಗಳ ಮೇಲೆ ಟೇಪ್ ಅಂಟಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಹಿಂದಿ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಹಿಂದಿಯೇತರ ಭಾಷೆಯಿರುವ ರಾಜ್ಯಗಳ ಬೆಂಬಲ ಕೋರುವುದಾಗಿ ಹೇಳಿದ್ದಾರೆ.
ನಿಲ್ದಾಣಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿರುವ ಕುರಿತು ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮೆಟ್ರೊ ರೈಲು ನಿಗಮದಿಂದ(BMRC) ವಿವರಣೆ ಕೇಳಿ ನೋಟೀಸ್ ಜಾರಿ ಮಾಡಿತ್ತು.