ಸೋಮವಾರ, ಡಿಸೆಂಬರ್ 16, 2019
23 °C

ಅರ್ಜುನ್‌ ಸರ್ಜಾಗೆ 150ನೇ ‘ವಿಸ್ಮಯ’

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಅರ್ಜುನ್‌ ಸರ್ಜಾಗೆ  150ನೇ ‘ವಿಸ್ಮಯ’

ಅದು 90ರ ದಶಕದ ಸಮಯ. ಅರ್ಜುನ್ ಸರ್ಜಾ ಚಿತ್ರರಂಗ ಪ್ರವೇಶಿಸಿ ಒಂದು ದಶಕ ಉರುಳಿತ್ತು. ಅದೇ ವೇಳೆಗೆ ಕನ್ನಡದ ಬೆಳ್ಳಿತೆರೆಯಲ್ಲಿ ಅವರು ನಟಿಸಿದ ‘ಪ್ರತಾಪ್’ ಚಿತ್ರ ಎಲ್ಲರ ಮನೆಸೂರೆಗೊಳಿಸಿತು. ಈ ಸಿನಿಮಾದ ‘ಪ್ರೇಮ ಬರಹ, ಕೋಟಿ ತರಹ ಬರೆದರೆ ಮುಗಿಯದ ಕವನವಿದು...’ ಹಾಡು ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿತ್ತು. ಇಂದಿಗೂ ಈ ಜನಪ್ರಿಯ ಹಾಡಿಗೆ ಮನಸೋಲದವರು ವಿರಳ.

ಕನ್ನಡದಲ್ಲಿ ‘ಪುಟಾಣಿ ಏಜೆಂಟ್ 123’, ‘ಮಕ್ಕಳ ಸೈನ್ಯ’ ಚಿತ್ರದ ಮೂಲಕ ಆರಂಭಗೊಂಡ ಅವರ ಸಿನಿಯಾನ ‘ವಿಸ್ಮಯ’ ಚಿತ್ರದ ಮೂಲಕ 150ರ ಹೊಸ್ತಿಲಿಗೆ ಬಂದು ನಿಂತಿದೆ. ಬಾಲನಟನಾಗಿ ಬಣ್ಣದ ಬದುಕು ಪ್ರವೇಶಿಸಿ, ಬಹುಭಾಷಾ ತಾರೆಯಾಗಿ ಅರಳಿದ್ದು ಅವರ ಹೆಗ್ಗಳಿಕೆ. ಅವರ ವೃತ್ತಿ ಬದುಕಿಗೆ ಈಗ 37ರ ಹರೆಯ.

‘ವಿಸ್ಮಯ’ದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹೊರಟಿರುವ ಅರ್ಜುನ್‌ ಸರ್ಜಾ ಅವರು, ಚಂದನವನದೊಂದಿಗೆ ಚಿತ್ರದ ಅನುಭವ ಹಂಚಿಕೊಂಡಿದ್ದು ಹೀಗೆ.

‘ಸಿನಿಮಾ ಪಯಣ ಬಹಳಷ್ಟು ಕಲಿಸಿಕೊಟ್ಟಿದೆ. ಅದು ಕೂಡ ಒಂದು ವಿಸ್ಮಯ ಅಲ್ಲವೇ. ಈ ಸಿನಿಮಾವು ನಾನು ಈವರೆಗೆ ನಟಿಸಿರುವ ಚಿತ್ರಗಳಿಗಿಂತ ವಿಭಿನ್ನವಾಗಿದೆ’ ಎಂದು ‘ವಿಸ್ಮಯ’ ಮೂಡಿಸಿದರು. ಅಂದಹಾಗೆ ತಮಿಳಿನಲ್ಲಿ ‘ವಿಸ್ಮಯ’ ಚಿತ್ರವು ‘ನಿಬುನನ್‌’ ಹೆಸರಿನಡಿ ಏಕಕಾಲಕ್ಕೆ ತೆರೆಕಾಣುತ್ತಿದೆ.

‘ನಿರ್ದೇಶಕ ಅರುಣ್‌ ವೈದ್ಯನಾಥನ್‌ ಕಥೆ ಹೇಳಿದರು. ಈ ಕಥೆಯೇ ಒಂದು ವಿಸ್ಮಯ. ಹಾಗಾಗಿ, ಒಪ್ಪಿಕೊಂಡೆ. ನಾನು ಸಾಕಷ್ಟು ಚಿತ್ರಗಳಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದೇನೆ. ಈ ಚಿತ್ರದಲ್ಲಿಯೂ ನನ್ನದು ಪೊಲೀಸ್‌ ಅಧಿಕಾರಿಯ ಪಾತ್ರ. ಆದರೆ, ಈ ಚಿತ್ರದಲ್ಲಿನ ಪಾತ್ರದ ವಿಶಿಷ್ಟವಾದುದು. ಪೊಲೀಸರ ಸೇವೆಯನ್ನು ಭಿನ್ನವಾಗಿ ತೋರಿಸಿದ್ದೇವೆ’ ಎಂದ ಅವರ ಮಾತಿನಲ್ಲಿ ಚಿತ್ರ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ ಎಂಬ ವಿಶ್ವಾಸ ಎದ್ದುಕಾಣುತ್ತಿತ್ತು.

‘ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಮಾಡಿರುವ ಅನುಭವ ನನಗಿದೆ. ಈ ಚಿತ್ರದ ಮೂಲಕ ಪೊಲೀಸ್‌ ಅಧಿಕಾರಿಯನ್ನು ಇನ್ನೊಂದು ದೃಷ್ಟಿಕೋನದಲ್ಲಿ ನೋಡಬಹುದು. ಸಿನಿಮಾದಲ್ಲಿ ಥ್ರಿಲ್ಲಿಂಗ್‌, ಆಕ್ಷನ್‌ ಇದೆ. ಜತೆಗೆ, ಅಪರೂಪದ ಕಥೆ. ಇದೊಂದು ಕೌಟುಂಬಿಕ ಚಿತ್ರವೂ ಹೌದು’ ಎಂದು ಕಥೆಯ ಎಳೆಯನ್ನು ಬಿಚ್ಚಿಟ್ಟರು.

ಜೀವನದಲ್ಲಿ ಆಗುಹೋಗುಗಳು ನಡೆಯುತ್ತವೆ. ಎಲ್ಲರಲ್ಲೂ ವೀರಾವೇಷ, ದೌರ್ಬಲ್ಯ, ಸಾಮರ್ಥ್ಯ ಇರುವುದು ಸಹಜ. ವ್ಯಕ್ತಿಗೆ ಕುಟುಂಬವೂ ಮುಖ್ಯ. ವೃತ್ತಿಯ ಜತೆಗೆ ಅದನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರಕಥೆಯ ಹಂದರ. ಚಿತ್ರದ ನಿರೂಪಣಾ ಶೈಲಿಯು ಪ್ರೇಕ್ಷಕರಿಗೆ ಮುದ ನೀಡಲಿದೆ ಎಂದರು ಅರ್ಜುನ್‌ ಸರ್ಜಾ.

‘ನಾನು ಯಾವುದೇ ಪಾತ್ರಗಳಿಗೆ ಸಿದ್ಧತೆ ನಡೆಸಿದ ನಿದರ್ಶನವಿಲ್ಲ. ಹೇರ್‌ಸ್ಟೈಲ್‌ಗಷ್ಟೇ ಪ್ರಾಮುಖ್ಯತೆ ನೀಡುತ್ತೇನೆ. ಉಳಿದಂತೆ ಪಾತ್ರದ ಸನ್ನಿವೇಶ ಮತ್ತು ಆ ಕ್ಷಣಕ್ಕೆ ಮನಸ್ಸಿಗೆ ಅನಿಸಿದಂತೆ ನಟಿಸುತ್ತೇನೆ.

ನಟನೆಗೆ ಪೂರ್ವ ತಯಾರಿ ಸಲ್ಲದು. ವಿಸ್ಮಯದಲ್ಲಿನ ಪಾತ್ರಕ್ಕೂ ವಿಶೇಷ ತಯಾರಿ ನಡೆಸಿಲ್ಲ’ ಎಂದು ತಮ್ಮ ನಟನೆಯ ಹಿಂದಿನ ಸತ್ಯ ತೆರೆದಿಟ್ಟರು.

‘ವಿಸ್ಮಯ’ ಸಂದೇಶ ನೀಡುವ ಸಿನಿಮಾವಲ್ಲ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ ಎಂದಷ್ಟೇ ಹೇಳಬಲ್ಲೆ. ಅವರ ಹಣಕ್ಕೆ ಮೋಸವಾಗುವುದಿಲ್ಲ. ಈ ನಂಬಿಕೆ ನನಗಿದೆ’ ಎಂದರು.

150 ಸಿನಿಮಾಗಳಲ್ಲಿ ನಟಿಸಿರುವುದು ದೊಡ್ಡ ಸಾಧನೆಯಲ್ಲ. ಇದಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದರು ನಮ್ಮೊಟ್ಟಿಗೆ ಇದ್ದಾರೆ. ಇಷ್ಟು ವರ್ಷದ ನನ್ನ ಸಿನಿ ಪಯಣ ಜನರಿಗೆ ಇಷ್ಟವಾಗಿದೆ. ಇದಕ್ಕಿಂತ ಖುಷಿ ಬೇರೊಂದಿಲ್ಲ ಎಂದ ಅವರ ಮಾತಿನಲ್ಲಿ ವೃತ್ತಿ ಬದುಕಿನ ಸಂತೃಪ್ತಿ ಇತ್ತು.

‘ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದೇನೆ. ನಾನು ಮೊದಲು ಚಿತ್ರರಂಗಕ್ಕೆ ಬಂದಾಗ ಜನರು ಪ್ರೀತಿ ತೋರಿದರು. ಅವರ ಪ್ರೀತಿಯೇ ನನಗೆ ಶ್ರೀರಕ್ಷೆ. ಅಂದಿನ ಪ್ರೀತಿಯನ್ನು ಈಗಲೂ ಉಣಬಡಿಸುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕೆ?’ ಎಂದಾಗ ಅವರ ಮಾತಿನಲ್ಲಿ ಧನ್ಯತಾ ಭಾವ ಮೂಡಿತು.

‘ಪ್ರತಾಪ್‌’ ಚಿತ್ರದ ಹಾಡಿನೊಂದಿಗೆ ಅರ್ಜುನ್ ಸರ್ಜಾ ಅವರಿಗೆ ಒಂದು ಭಾವನಾತ್ಮಕ ನಂಟು ಬೆಸೆದಿದೆ. ನಟಿ ಸುಧಾರಾಣಿ ಅವರೊಂದಿಗೆ ಈ ಹಾಡಿನ ಚಿತ್ರೀಕರಣದಲ್ಲಿ ಸರ್ಜಾ ತೊಡಗಿದ್ದರು. ಆಗ ಅವರು ಹೆಣ್ಣು ಮಗುವಿಗೆ ತಂದೆಯಾದ ಸುದ್ದಿ ಚೆನ್ನೈನಿಂದ ಬಂದಿತ್ತು.‘ಪ್ರೇಮ ಬರಹ’ ಕನ್ನಡದಲ್ಲಿ ಅವರ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ. ಆ ಮಗುವೇ (ಪುತ್ರಿ ಐಶ್ವರ್ಯ) ಈ ಚಿತ್ರದ ನಾಯಕಿ!

‘ಪ್ರೇಮ ಬರಹ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಉಳಿದ ಹಂತದ ಕೆಲಸಗಳು ನಡೆಯುತ್ತಿವೆ. ಆಗಸ್ಟ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸುತ್ತಿದ್ದೇನೆ’ ಎಂದರು.

***

ಚಿತ್ರಕ್ಕಾಗಿ ವಿಶೇಷ ತಯಾರಿ ನಡೆಸುವ ಪರಿಪಾಠ ನನಗಿಲ್ಲ. ಹಾಗೆ ಮಾಡುವುದು ನಾಟಕೀಯತೆ. ಪಾತ್ರಕ್ಕೆ ಸಹಜತೆ ಸಿಗುವುದಿಲ್ಲ. ಅದು ನನಗೆ ಇಷ್ಟವೂ ಇಲ್ಲ. ಕಲಾವಿದನ ಅಭಿನಯ ನೈಜವಾಗಿರಬೇಕು. ಆಗಲೇ ಪಾತ್ರಕ್ಕೆ ಜೀವ ತುಂಬಲು ಸಾಧ್ಯ.

ಪ್ರತಿಕ್ರಿಯಿಸಿ (+)