ಭಾನುವಾರ, ಡಿಸೆಂಬರ್ 15, 2019
23 °C

ಮೊಟ್ಟೆಯ ನೆವದಲ್ಲಿ ಅಪರಿಪೂರ್ಣತೆಯ ಕಥೆ!

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಮೊಟ್ಟೆಯ ನೆವದಲ್ಲಿ ಅಪರಿಪೂರ್ಣತೆಯ ಕಥೆ!

ಯಾರೂ ಪರಿಪೂರ್ಣರಲ್ಲ. ಈ ವಿಚಾರದಲ್ಲಿ ಸಾಮಾನ್ಯರ ನಡುವೆ ಭಿನ್ನಾಭಿಪ್ರಾಯವೇನೂ ಇಲ್ಲ. ‘ನಾನು ಇನ್ನಷ್ಟು ಸುಂದರವಾಗಿದ್ದಿದ್ದರೆ? ನನ್ನ ಎತ್ತರ ಸ್ವಲ್ಪ ಕಡಿಮೆ ಇದ್ದಿದ್ದರೆ? ನನ್ನ ಇಂಗ್ಲಿಷ್ ಇನ್ನೂ ಉತ್ತಮವಾಗಿದ್ದಿದ್ದರೆ?...’ ಹೀಗೆ ‘ಇನ್ನೊಂಚೂರು ಚೆನ್ನಾಗಿದ್ದಿದ್ದರೆ...’ ಎಂಬ ಬಯಕೆ ಹೊಂದಿರುವ ವ್ಯಕ್ತಿಯನ್ನೇ ಸಿನಿಮಾ ಕಥೆಯ ವಸ್ತುವನ್ನಾಗಿಸಿಕೊಂಡರೆ?

ಹಾಗೆ ಮಾಡಿದಾಗ ‘ಒಂದು ಮೊಟ್ಟೆಯ ಕಥೆ’ ಎಂಬ ಸಿನಿಮಾ ಸಿದ್ಧವಾಗುತ್ತದೆ. ಈ ಕೆಲಸ ಮಾಡಿದ್ದಾರೆ ನಿರ್ದೇಶಕ ರಾಜ್ ಬಿ. ಶೆಟ್ಟಿ. ‘ಮೊಟ್ಟೆಯ ಕಥೆ’ಯು ತಲೆಯ ಮೇಲೆ ಕೂದಲಿಲ್ಲದ ವ್ಯಕ್ತಿಯೊಬ್ಬನ ಕಥೆಯೂ ಹೌದು, ‘ಖಾಲಿತನ ಎಲ್ಲರಲ್ಲಿಯೂ ಇದೆ’ ಎನ್ನುವ ಕಥೆಯೂ ಹೌದು ಎನ್ನುತ್ತದೆ ಚಿತ್ರತಂಡ. ಈ ಸಿನಿಮಾ ಇಂದು (ಜುಲೈ 7) ತೆರೆ ಕಾಣುತ್ತಿದೆ.

ಬೊಕ್ಕತಲೆಯ ಜನಾರ್ದನ ವಧು ಹುಡುಕಲು ಆರಂಭಿಸಿದಾಗ ಎದುರಾಗುವುದು ಅಪಹಾಸ್ಯ. ಇದಕ್ಕೆ ಕಾರಣ ಆತನ ತಲೆ ‘ಮೊಟ್ಟೆ’ಯಾಗಿರುವುದು! ‘ಇಂಥದ್ದೊಂದು ಎಳೆಯನ್ನು ಸಿನಿಮಾ ಕಥೆಯನ್ನಾಗಿಸುವುದಕ್ಕೆ ಕಾರಣ ಏನು’ ಎಂಬ ಪ್ರಶ್ನೆಗೆ ಜನಾರ್ದನನ ಪಾತ್ರ ನಿಭಾಯಿಸಿರುವ ರಾಜ್ ಅವರು, ‘ಅಪರಿಪೂರ್ಣ ಎಂಬುದು ನನಗೆ ಬಹಳ ಇಷ್ಟದ ಪರಿಕಲ್ಪನೆ. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಆದರೆ, ಬೇರೆಯವರು ಬಹಳ ಚೆನ್ನಾಗಿದ್ದಾರೆ, ಅವರ ಜೀವನ ಸಲೀಸಾಗಿ ಸಾಗುತ್ತಿದೆ ಎಂದು ನಾವು ಅಂದುಕೊಳ್ಳುತ್ತೇವೆ. ಅವರ ಜೀವನದ ಒಳಹೊಕ್ಕು ನೋಡಿದಾಗ, ಅವರ ಜೀವನದ ಸಂಕೀರ್ಣತೆಗಳು ನಮಗೆ ಅರ್ಥವಾಗುತ್ತವೆ. ನಮಗಿರುವಂಥ ಇನ್ನಷ್ಟು ಉತ್ತಮವಾಗಿರಬಹುದಿತ್ತು ಎಂಬ ಆಸೆಗಳು ಅವರಲ್ಲೂ ಇರುತ್ತವೆ. ಅಂದರೆ, ಎಲ್ಲರ ಜೀವನವೂ ಒಂದರ್ಥದಲ್ಲಿ ಮೊಟ್ಟೆಯಂತೆ ಶೂನ್ಯ’ ಎನ್ನುತ್ತಾರೆ.

‘ಇವನ್ನೆಲ್ಲ ಸಿನಿಮಾ ಮೂಲಕ ಹೇಳಬೇಕು ಅನಿಸಿದಾಗ ನನಗೆ ಸಿಕ್ಕಿದ್ದು ನನ್ನ ಬೋಳುತಲೆ! ಮಂಗಳೂರಿನ ಒಬ್ಬ ಸಾಮಾನ್ಯ ಕನ್ನಡ ಪ್ರಾಧ್ಯಾಪಕ ತಲೆಯಲ್ಲಿ ಕೂದಲಿಲ್ಲದ್ದಕ್ಕೆ ಅಪಹಾಸ್ಯಕ್ಕೆ ಗುರಿಯಾಗಬೇಕಾದ ಪರಿಸ್ಥಿತಿ ಎದುರಿಸುವಾಗ ಏನಾಗುತ್ತದೆ ಎನ್ನುವುದೇ ಈ ಸಿನಿಮಾದ ಕಥೆ’ ಎಂದು ಹೇಳಿದರು ರಾಜ್.

ಈ ಸಿನಿಮಾದ ಜನಾರ್ದನ ಜನಿವಾರ ಧರಿಸಬೇಕು. ಆದರೆ ರಾಜ್ ಅವರು ಜನಿವಾರದವರಲ್ಲ! ಜನಿವಾರ ಎನ್ನುವುದು ತಮ್ಮ ಪಾತ್ರದ ಜೊತೆ ಬೆರೆಯಬೇಕು ಎಂಬ ಕಾರಣಕ್ಕೆ ರಾಜ್ ಅವರು ಸಿನಿಮಾ ಚಿತ್ರೀಕರಣಕ್ಕೆ ಆರಂಭವಾಗುವ ಅರ್ಧ ತಿಂಗಳು ಮೊದಲಿನಿಂದಲೇ ಜನಿವಾರ ಹಾಕಿಕೊಂಡಿದ್ದರಂತೆ!

ನಿರ್ಮಾಣದ ಹೊಣೆ ಹೊತ್ತ ಪವನ್ ಕುಮಾರ್:

ಈ ಸಿನಿಮಾವಕ್ಕೆ ಆರಂಭದಲ್ಲಿ ಹಣ ಹೂಡಿಕೆ ಮಾಡಿದ್ದು ಸುಹಾನ್ ಪ್ರಸಾದ್. ಆದರೆ ನಂತರದ ದಿನಗಳಲ್ಲಿ ಇದರ ನಿರ್ಮಾಣದ ಹೊಣೆಯನ್ನು ಪವನ್ ಕುಮಾರ್ ವಹಿಸಿಕೊಂಡರು. ಇದರ ಹಿಂದೆಯೂ ಒಂದು ಕಥೆಯಿದೆ.

‘ಸ್ನೇಹಿತ ಹರೀಶ್ ಮಲ್ಯ ಮತ್ತು ನಾನು ಒಟ್ಟಿಗೆ ಸಿನಿಮಾ ನೋಡುತ್ತಿರುತ್ತೇವೆ. ಮಲ್ಯ ಅವರು ಈ ಸಿನಿಮಾ ತಂಡದ ಸ್ನೇಹಿತರೂ ಹೌದು. ಅವರು ಈ ಸಿನಿಮಾ ಬಗ್ಗೆ ನನಗೆ ಹೇಳಿದರು. ಆ ವೇಳೆಗೆ ನಾವು, ಪವನ್ ಕುಮಾರ್ ಸ್ಟುಡಿಯೋಸ್‌ನಿಂದ ಸಿನಿಮಾ ನಿರ್ಮಾಣ ಮಾಡಲು ಉತ್ತಮ ಕಥೆ ಹುಡುಕುತ್ತಿದ್ದೆವು’ ಎಂದು ನೆನಪಿಸಿಕೊಂಡರು ಪವನ್ ಕುಮಾರ್.

‘ಸಿನಿಮಾ ತಂಡದವರು ಬೆಂಗಳೂರಿಗೆ ಬಂದು ನಮಗೆ ಸಿನಿಮಾ ತೋರಿಸಿದರು. ನಮಗೆ ಇಷ್ಟವಾಯಿತು. ಆಗ ನಾವು ಇದರ ನಿರ್ಮಾಣದ ಹೊಣೆ ವಹಿಸಿಕೊಂಡೆವು’ ಎಂದರು.

‘ನೀವು ಬಯಸುವ ಯಾವ ಗುಣ ಈ ಸಿನಿಮಾದಲ್ಲಿ ಇತ್ತು’ ಎಂಬ ಪ್ರಶ್ನೆಗೆ ಪವನ್ ಕುಮಾರ್ ನೀಡುವ ಉತ್ತರ ಹೀಗಿದೆ: ‘ಈ ಸಿನಿಮಾದಲ್ಲಿ ಒಂದು ಮುಗ್ಧತೆ ಇದೆ. ನೋಡುಗರಿಗೆ ಇಷ್ಟವಾಗಲಿ ಎಂಬ ಒಂದೇ ಕಾರಣಕ್ಕೆ ಅವರು ಸಿನಿಮಾ ಮಾಡಿಲ್ಲ. ಅವರಿಗೆ ಒಂದು ಕಥೆ ಹೇಳಬೇಕಿತ್ತು. ಆ ಕಥೆ ಆಧರಿಸಿ ಪ್ರಾಮಾಣಿಕವಾಗಿ ಸಿನಿಮಾ ಮಾಡಿದ್ದಾರೆ. ಯಾರಿಗೂ ಕಡಿಮೆ ಇಲ್ಲದ ಗುಣಮಟ್ಟ ಈ ಸಿನಿಮಾದಲ್ಲಿ ಇದೆ. ಕಡಿಮೆ ಬಜೆಟ್ ಎಂಬ ನೆಪ ಮುಂದಿಟ್ಟಿಲ್ಲ’.

ಈ ಸಿನಿಮಾದಲ್ಲಿ ಬಳಸಿರುವ ಮಂಗಳೂರು ಕನ್ನಡ ಪವನ್ ಕುಮಾರ್ ಅವರಿಗೆ ಇಷ್ಟವಾಗಿರುವಂತಿದೆ. ‘ಈ ಸಿನಿಮಾದ ಕಥೆ ಹೇಳಲು ಮೃದು ಕನ್ನಡವೊಂದು ಬೇಕಿತ್ತು. ಆ ಮೃದುತ್ವ ಮಂಗಳೂರು ಕನ್ನಡಕ್ಕೆ ಇದೆ. ಈ ಸಿನಿಮಾದ ಸಂಭಾಷಣೆಗಳು ಕಾವ್ಯಾತ್ಮಕವಾಗಿವೆ’ ಎಂಬ ಮೆಚ್ಚುಗೆಯ ಮಾತುಗಳನ್ನು ಅವರು ಹೇಳಿದರು.

ಇಲ್ಲಿ ಬಳಸಿರುವ ಭಾಷೆ ಸುಂದರವಾಗಿದೆ. ಒಂದು ಟ್ರೇಲರ್‌ನಲ್ಲಿ ‘ಪ್ರಾಯ’ ಎನ್ನುವ ಪದ ಬಳಕೆಯಾಗಿದೆ. ಆಡುಮಾತಿನಲ್ಲಿ ನಾವು ‘ಏಜ್’ ಎಂದುಬಿಡುತ್ತೇವೆ. ಆದರೆ ಈ ಸಿನಿಮಾದಲ್ಲಿ ಹಾಗಿಲ್ಲ. ಇದರಲ್ಲಿ ಇಂಗ್ಲಿಷ್ ಬಳಕೆ ಕಡಿಮೆ. ದಿನನಿತ್ಯದ ಮಾತುಕತೆಗಳಲ್ಲಿ ನಾವೆಷ್ಟು ಇಂಗ್ಲಿಷ್ ಬಳಸುತ್ತಿದ್ದೇವೆ ಎಂಬುದು ಈ ಸಿನಿಮಾ ನೋಡಿದ ನಂತರ ಅರಿವಾಗುತ್ತದೆ ಎಂದೂ ಪವನ್ ಕುಮಾರ್ ಹೇಳಿದರು.

ಪಾತ್ರಗಳೆಲ್ಲವೂ ಮಂಗಳೂರು ಕನ್ನಡದಲ್ಲೇ ಮಾತನಾಡಿರುವಾಗ, ಈ ಸಿನಿಮಾ ರಾಜ್ಯದ ಇತರ ಭಾಗಗಳ ಜನರಿಗೆ ಹತ್ತಿರವಾಗಬಹುದೇ ಎಂಬ ಪ್ರಶ್ನೆ ಪವನ್ ಅವರನ್ನು ಕಾಡಲಿಲ್ಲವಂತೆ. ‘ನಾನೊಂದು ಹೊಸ ಬಗೆಯ ಸಿಹಿ ತಿಂಡಿಯನ್ನು ಇಷ್ಟಪಟ್ಟೆ ಎಂದು ಭಾವಿಸಿ. ಆಗ ಆ ತಿಂಡಿಯ ಬಗ್ಗೆ ನನ್ನ ಸ್ನೇಹಿತರಲ್ಲಿ ಹೇಳಿ, ಅವರೂ ಅದರ ರುಚಿ ನೋಡಲಿ ಎಂದು ಬಯಸುತ್ತೇನೆ. ಅದೇ ಮುಗ್ದ ಭಾವದಿಂದ ನಾನು ಈ ಸಿನಿಮಾ ನಿರ್ಮಾಣದ ಹೊಣೆ ವಹಿಸಿಕೊಂಡಿದ್ದೇನೆ. ಸಿನಿಮಾದಲ್ಲಿನ ಸಂಭಾಷಣೆಗಳು ಬೇರೆ ಭಾಗಗಳ ಜನರಿಗೆ ಅರ್ಥವಾಗುತ್ತದೆಯೋ, ನಾವು ಹಾಕಿದ ಹಣ ವಾಪಸ್ ಬರುತ್ತದೆಯೋ ಎಂಬ ಯೋಚನೆ ಕೂಡ ಮಾಡಿಲ್ಲ. ಇದನ್ನು ಇನ್ನಷ್ಟು ಜನರಿಗೆ ತೋರಿಸಬೇಕು ಎಂಬ ಆಸೆಯೊಂದೇ ನನ್ನಲ್ಲಿ ಇದೆ. ಭಾಷೆ ಎಂಬುದು ಸಮಸ್ಯೆಯಾಗದು’ ಎಂದು ಅವರು ಹೇಳುತ್ತಾರೆ.

ಈ ಚಿತ್ರ ‘ನ್ಯೂಯಾರ್ಕ್‌ ಭಾರತೀಯ ಚಲನಚಿತ್ರೋತ್ಸವ’ ಹಾಗೂ ‘ಲಂಡನ್ ಭಾರತೀಯ ಚಲನಚಿತ್ರೋತ್ಸವ’ಗಳಲ್ಲಿ ಈಗಾಗಲೇ ಪ್ರದರ್ಶನ ಕಂಡಿದೆ.

‘ಮಂಗಳೂರು, ಉಡುಪಿಯಲ್ಲಿ ಚಿತ್ರ ಬಿಡುಗಡೆ ಆದರೆ ಸಾಕು, ಹಾಕಿದ ಹಣ ವಾಪಸ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸಿನಿಮಾ ಮಾಡಿದೆವು. ಈಗ ಇದು ಇಲ್ಲಿಯವರೆಗೆ ಬಂದು ನಿಂತಿದೆ’ ಎಂದು ಮಾತು ಕೊನೆಗೊಳಿಸುವ ಮೊದಲು ಹೇಳಿದರು ರಾಜ್ ಶೆಟ್ಟಿ.

ಪ್ರತಿಕ್ರಿಯಿಸಿ (+)