ಶುಕ್ರವಾರ, ಡಿಸೆಂಬರ್ 6, 2019
18 °C

ಸದ್ಯದಲ್ಲೇ ‘ರಾಜ್ ವಿಷ್ಣು’ ತೆರೆಗೆ

Published:
Updated:
ಸದ್ಯದಲ್ಲೇ ‘ರಾಜ್ ವಿಷ್ಣು’ ತೆರೆಗೆ

ಸದ್ಯದಲ್ಲೇ ‘ರಾಜ್ ವಿಷ್ಣು’ ತೆರೆಗೆ

ಅದ್ದೂರಿ ಚಿತ್ರ ನಿರ್ಮಾಣಕ್ಕೆ ಹೆಸರಾಗಿರುವ ರಾಮು ಅವರು ತಮ್ಮ ರಾಮು ಫಿಲಂಸ್ ಸಂಸ್ಥೆಯಡಿ ನಿರ್ಮಿಸಿರುವ 37ನೇ ಚಿತ್ರ ‘ರಾಜ್‍ವಿಷ್ಣು’. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರವನ್ನು ವೀಕ್ಷಿಸಿದ ಮಂಡಳಿಯ ಸದಸ್ಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿತ್ರ ಸದ್ಯದಲ್ಲೇ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿರುವ ‘ರಾಜ್ ವಿಷ್ಣು’ ಚಿತ್ರ ಅದ್ದೂರಿಯಾಗಿ ನಿರ್ಮಾಣಗೊಂಡಿದೆ. ತಮಿಳಿನಲ್ಲಿ ನಿರ್ಮಾಣಗೊಂಡು ಯಶಸ್ವಿಯಾಗಿದ್ದ ‘ರಜನಿ ಮುರುಘ’ ಚಿತ್ರದ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ‘ರಾಜ್ ವಿಷ್ಣು’ ಸಿನಿಮಾವನ್ನು ರೂಪಿಸಲಾಗಿದೆ. ಈ ಹಿಂದೆ ‘ಅಧ್ಯಕ್ಷ’ ಚಿತ್ರಕ್ಕೆ ಕಥೆ ಬರೆದಿದ್ದ ಪೊನ್ ರಾಜ್ ಅವರು ‘ರಜನಿ ಮುರುಘ’ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದರು. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಹಿಂದೆ ಆಕಾಶ್ ಮತ್ತು ಅರಸು ಚಿತ್ರಗಳಿಗೆ ಕಥೆ ಒದಗಿಸಿದ್ದ ಖ್ಯಾತ ಬರಹಗಾರ ಜನಾರ್ಧನ ಮಹರ್ಷಿ ‘ರಾಜ್ ವಿಷ್ಣು’ ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ.

ಕೆ.ಮಾದೇಶ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಜೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ, ಥ್ರಿಲ್ಲರ್ ಮಂಜು, ವಿನೋದ್ ಅವರ ಸಾಹಸ ಸಂಯೋಜನೆ, ಯೋಗರಾಜ್ ಭಟ್, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಗೀತರಚನೆ, ರಘು ನಿಡುವಳ್ಳಿ ಸಂಭಾಷಣೆ, ಜನಾರ್ಧನ ಮಹರ್ಷಿ ಚಿತ್ರಕತೆ, ಸುರೇಶ್ ಗೋಸ್ವಾಮಿ ಸಹ ನಿರ್ದೇಶನ, ಅನಿಲ್ ಕುಮಾರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ಶರಣ್ ಮತ್ತು ಚಿಕ್ಕಣ್ಣ ಪ್ರಮುಖವಾಗಿರುವ ಈ ಚಿತ್ರದಲ್ಲಿ ಸಾಧು ಕೋಕಿಲ, ರವಿಶಂಕರ್, ಶ್ರೀನಿವಾಸಮೂರ್ತಿ, ವೀಣಾ ಸುಂದರ್, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಮತ್ತು ಸ್ವಾತಿ ಸೇರಿದಂತೆ ಇನ್ನು ಅನೇಕರ ತಾರಾಗಣವಿದೆ. ಮುಂಬೈ ಮೂಲದ ವೈಭವಿ ‘ರಾಜ್ ವಿಷ್ಣು’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

***

ಯೂಟ್ಯೂಬ್‍ನಲ್ಲಿ ‘ಮೋಜೊ’ ಹಾಡು

ಗಜಾನನ ಭಟ್ ಅವರ ನಿರ್ಮಾಣದಲ್ಲಿ, ಶ್ರೀಶ ಬೆಳಕವಾಡಿ ನಿರ್ದೇಶನದ ಮೊದಲ ಚಿತ್ರ ‘ಮೋಜೊ’. ಈ ಚಿತ್ರದ ಮೊದಲ ಹಾಡನ್ನು ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿದೆ.  `ಲಾಸ್ಟ್ ಬಸ್` ಚಿತ್ರದ ಸಂಗೀತ ನಿರ್ದೇಶಕ ಎಸ್.ಡಿ.ಅರವಿಂದ್ (ಇವರ ದೂರಿ ದೂರಿ ಹಾಡು ಬಿಬಿಸಿ ನೆಟ್‍ವರ್ಕ್‍ನಲ್ಲಿ ಪ್ರಪಂಚದಾದ್ಯಂತ ಪ್ರಸಾರಗೊಂಡ ಖ್ಯಾತಿಯಿದೆ) ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಯೂಟ್ಯೂಬ್‍ನಲ್ಲಿ ಬಿಡುಗಡೆಯಾದ ಚಿತ್ರದ ಮೊದಲ ಹಾಡನ್ನು ಸರಿಗಮಪ ಖ್ಯಾತಿಯ ಅಂಕಿತಾ ಕೂಂಡು ಹಾಗೂ ಶಾಸ್ತ್ರೀಯ ಸಂಗೀತ ವಿದ್ವಾಂಸ ಶ್ರೀಮುರುಳಿ ರಾಮನಾಥ್ ಹಾಡಿದ್ದಾರೆ. ಪ್ರದೀಪ್ ಗೌತಮ್ ಈ ಹಾಡನ್ನು ರಚಿಸಿದ್ದಾರೆ.

ಸಿಲಿಕಾನ್ ವ್ಯಾಲಿಯ ಉದ್ಯಮಿಗಳಾದ ಶ್ರೀ ಸತೀಶ್ ಪಾಠಕ, ಮನಯ್ಯ ಬೆಳ್ಳಿಗನೂರ, ಹಾಗೂ ಸಂತೋಷ್ ಪಾಟೀಲ್ ಅವರ ಸಹ ನಿರ್ಮಾಣವಿರುವ ಈ ಚಿತ್ರದ ನಾಯಕ ಮನು. ನಾಯಕಿ ಅನೂಶಾ. ಜುಲೈ ಎರಡನೇ ವಾರದಲ್ಲಿ ಆಡಿಯೋ ರಿಲೀಸ್ ಆಗಲಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಸದ್ಯದಲ್ಲೇ ಪ್ರಕಟಸಲಿದೆ.

***

‘ಮೊಂಬತ್ತಿ’ಗೆ ಸೆನ್ಸಾರ್

ಬ್ರೈಟ್‍ಕಟ್ ಸಿನಿ ಲಾಂಛನಲ್ಲಿ ಪ್ರಭಾಕರ್ ಎಂ. ನಿರ್ಮಿಸುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕ್ರೈಂ ಕಥಾನಕ ಹೊಂದಿರುವ ‘ಮೊಂಬತ್ತಿ’ ಚಿತ್ರವನ್ನು ಇತ್ತೀಚೆಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ ‘ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರದಲ್ಲಿ ಹೆಚ್ಚಾಗಿ ಕ್ರೈಂ ಕಥೆ ಹೊಂದಿರುವುದರಿಂದ ಎ ಪ್ರಮಾಣ ಪತ್ರ ದೊರೆತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಇದೇ ತಿಂಗಳ ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಶ್ರೀನಿವಾಸ್ ಕೌಶಿಕ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ಯಾಂಸುಂದರ್ ಛಾಯಾಗ್ರಹಣ, ಸತೀಶ್‍ಬಾಬು ಸಂಗೀತ, ಸಂಜೀವ್‍ರೆಡ್ಡಿ ಸಂಕಲನ, ಕೌರವ ವೆಂಕಟೇಶ್ ಸಾಹಸ, ರವಿಕುಮಾರ್ ಕಥೆ, ಜಾನಪದ ಸಾಹಿತ್ಯ ಮತ್ತು ಸಹ ನಿರ್ದೇಶನ, ಕಂಬೀರಾಜು, ಜಗ್ಗು ನೃತ್ಯ ನಿರ್ದೇಶನ, ಸುರೇಶ್ ಕಣ್ಣನ್ ಸಹ ನಿರ್ಮಾಪಕರಾಗಿದ್ದು, ರವಿಕುಮಾರ್, ನೀತು, ರಚನ ಸ್ಮಿತ, ಯತಿರಾಜ್, ಗಿರೀಶ್ ಜತ್ತಿ, ಬಿಗ್ ಬಾಸ್ ಸಂಜನಾ, ಅಕ್ಷಯ, ಪ್ರಭಾಕರ್ ಎಂ., ಸಂಗೀತ, ಚಂದ್ರಕಾಂತ್, ಮೈಕೋಶಿವು ಮಾರುತಿರಾಜ್ ಮುಂತಾದವರಿದ್ದಾರೆ.

***

ಬಿಡುಗಡೆಗೆ ಸಿದ್ಧವಾದ ‘ವಿನಾಶಿನಿ’

ಸೃಷ್ಟಿ ಮೂವಿ ಮೇಕರ್ಸ್ ಲಾಂಛನದಲ್ಲಿ ಎಂ.ಧನಂಜಯ, ಎಸ್.ನಾಗೇಶ್, ಹರೀಶ್ ಮತ್ತು ಕೃಷ್ಣ ನಿರ್ಮಿಸುತ್ತಿರುವ ‘ವಿನಾಶಿನಿ’ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು, ಲವ್, ಹಾರಾರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ 4 ಹಾಡುಗಳಿದ್ದು, ಇದೇ ತಿಂಗಳಲ್ಲಿ ಹಾಡುಗಳ ಸಿಡಿ ಬಿಡುಗಡೆಯಾಗಲಿದ್ದು, ಆಗಸ್ಟ್ ತಿಂಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಈ ಹಿಂದೆ ನವರಂಗಿ, ಹಳ್ಳಿ ಪಂಚಾಯತಿ ಚಿತ್ರವನ್ನು ನಿರ್ದೇಶಿದ್ದ ಜಿ.ಉಮೇಶ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಸಿ.ಮಹೇಂದ್ರನ್ ಛಾಯಾಗ್ರಹಣ, ಹರಿಕಾವ್ಯ ಸಂಗೀತ, ನಾಗೇಶ್ ಕಥೆ, ಎ ಮೋಹನ್ ಸಂಕಲನ, ಸೂರಿ ನೃತ್ಯ ನಿರ್ದೇಶನವಿದೆ. ಆರ್ಯನ್, ಸುಮಲತಾ ಶೆಟ್ಟಿ, ಆಶಿಕ್ ಗೌಡ, ಕಿಲ್ಲರ್ ವೆಂಕಟೇಶ್, ಹೊನ್ನಾವಳ್ಳಿ ಕೃಷ್ಣ, ಶ್ರೀನಿವಾಸ್‍ಗೌಡ, ಬೌಬೌ ಜಯರಾಂ, ಜ್ಯೋತಿ ಮುಂತಾದವರ ತಾರಾಬಳಗವಿದೆ.

ಪ್ರತಿಕ್ರಿಯಿಸಿ (+)