ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆತ್ತರ ಕಮಟಿನ ನಡುವಿನ ಪ್ರೇಮಕಮಲ

Last Updated 6 ಜುಲೈ 2017, 19:30 IST
ಅಕ್ಷರ ಗಾತ್ರ

ಹತ್ತು ವರ್ಷಗಳ ಹಿಂದೆ ’ದುನಿಯಾ’ ಚಿತ್ರದ ಲೂಸ್‌ ಮಾದ ಪಾತ್ರದ ಮೂಲಕವೇ ಗಮನ ಸೆಳೆದಿದ್ದ ಯೋಗೀಶ್‌, ನಂತರ ಹಲವು ಭಿನ್ನ ಪಾತ್ರಗಳಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಈಗ ‘ಕೋಲಾರ’ ನೆಲದ ನೆತ್ತರ ಕಥೆಯೊಂದನ್ನು ಹೇಳಲು ಸಜ್ಜಾಗಿದ್ದಾರೆ. ಅವರು ನಾಯಕನಾಗಿ ನಟಿಸಿರುವ, ತಂಗಂ ಎಂಬ ರೌಡಿಯ ಬದುಕನ್ನು ಆಧರಿಸಿದ ‘ಕೋಲಾರ’ ಎಂಬ ಸಿನಿಮಾ ಇಂದು (ಜು. 07) ತೆರೆಕಾರಣಲಿದೆ. ಮೂರು ವರ್ಷಗಳ ನಂತರ ಅವರ ಅಭಿನಯದ ಚಿತ್ರ ತೆರಕಾಣುತ್ತಿದೆ ಎನ್ನುವುದೂ ಈ ಚಿತ್ರದ ವಿಶೇಷತೆಗಳಲ್ಲೊಂದು. ’ಚಂದನವನ’ ಪುರವಣಿಯ ಜತೆಗಿನ ಮಾತುಕತೆಯಲ್ಲಿ ಅವರು ಚಿತ್ರದ ಬಗ್ಗೆ, ತಮ್ಮ ವೃತ್ತಿಬದುಕಿನ ಇಂಗಿತಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 

* ಮೂರು ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಬರುತ್ತಿದ್ದೀರಾ. ಈ ಗ್ಯಾಪ್‌ ಉದ್ದೇಶಪೂರ್ವಕವಾದದ್ದೆ?
ಈ ಸಿನಿಮಾದ ಕೆಲಸವೇ ಅಷ್ಟಿತ್ತು. ಕೋಲಾರ ಪಕ್ಕಾ ರಿಯಲಿಸ್ಟಿಕ್‌ ಸಿನಿಮಾ. ತಂಗಂ ಎಂಬವನ ಬದುಕನ್ನು ಆಧರಿಸಿದ ಸಿನಿಮಾ. ಆ ಪಾತ್ರಕ್ಕೆ ತಕ್ಕ ಹಾಗೆ ಕೂದಲು ಬೆಳೆಸುವುದು, ದಾಡಿ ಬಿಡುವುದು ಈ ಬದಲಾವಣೆಗಳಿಗೇ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ನಡುವೆ ನಾನೊಂದು ರಿಯಾಲಿಟಿ ಷೋ ಸಹ ಮಾಡಿದೆ. ಅದಕ್ಕೆ ನಾಲ್ಕು ತಿಂಗಳು ವ್ಯಯವಾಯ್ತು. ಹಾಗೆಯೇ ರೀರೆಕಾರ್ಡಿಂಗ್‌, ಹಾಡುಗಳು ಇವೆಲ್ಲವನ್ನೂ ತುಂಬ ಸಮಯ ತೆಗೆದುಕೊಂಡು ಶ್ರದ್ಧೆಯಿಂದ ಮಾಡಿದ್ದೇವೆ. ಸಮಯದ ಬಗ್ಗೆ ನಾವು ಹೆಚ್ಚು ಗಮನ ಹರಿಸಿಲ್ಲ. ಬದಲಿಗೆ ಗುಣಮಟ್ಟ ಚೆನ್ನಾಗಿರಬೇಕು ಎಂಬುದೇ ನಮ್ಮ ಗುರಿಯಾಗಿತ್ತು. 

* ‘ಕೋಲಾರ ಯಾವ ಪ್ರಕಾರದ ಸಿನಿಮಾ? ಅದನ್ನು ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?
ಮೊದಲೇ ಹೇಳಿದಂತೆ ಇದೊಂದು ರಿಯಲಿಸ್ಟಿಕ್‌ ಸಿನಿಮಾ. ಸತ್ಯಘಟನೆ ಆಧರಿಸಿದ್ದು. ಈ ಕಥೆ ಕೇಳಿದಾಗಲೇ ನನಗೆ ತುಂಬ ಇಷ್ಟವಾಗಿತ್ತು. ತಂಗಂ ಎಂಬ ವ್ಯಕ್ತಿಯ ಬದುಕಿನ ವಿವರಗಳನ್ನು ಕೇಳುತ್ತಾ ಹೋದಾಗ ಅದು ಇನ್ನಷ್ಟು ಆಪ್ತವಾಗುತ್ತ, ನಾನು ಮಾಡಲೇಬೇಕು ಅನಿಸಿತು.

* ಸಿನಿಮಾದ ಟ್ಯಾಗ್‌ಲೈನ್‌ನಲ್ಲಿಯೇ ’ರಕ್ತದೋಕುಳಿ’ ಇದೆ. ಸಿನಿಮಾದಲ್ಲಿ ಬರೀ ರಕ್ತದೋಕುಳಿಯಷ್ಟೇ ಇರುತ್ತದೆಯಾ?
ಇಲ್ಲ ಇಲ್ಲ.. ರಕ್ತಪಾತ ಬಿಟ್ಟೂ ತುಂಬ ಸಂಗತಿಗಳು ಚಿತ್ರದಲ್ಲಿವೆ. ಇದೊಂದು ಒಳ್ಳೆಯ ಪ್ರೇಮಕಥೆಯೂ ಹೌದು. ಕೌಟುಂಬಿಕ ಅಂಶಗಳೂ ಇವೆ. ಆದ್ದರಿಂದ ಹಲವು ಅಂಶಗಳು ಸೇರಿ ಆಗಿರುವ ಒಳ್ಳೆಯ ಸಿನಿಮಾ ಇದು. 

* ಈ ಸಿನಿಮಾದಲ್ಲಿ ನಿಮ್ಮೊಳಗಿನ ನಟನಿಗೆ ಯಾವ ಬಗೆಯ ತೃಪ್ತಿ ಸಿಕ್ಕಿದೆ?
ಈ ಸಿನಿಮಾದಿಂದ ನನಗೆ ತುಂಬಾನೇ ತೃಪ್ತಿ ಸಿಕ್ಕಿದೆ. ಕಲಾವಿದನಾಗಿ ಇಂಥದ್ದೊಂದು ಅಂಡರ್‌ವರ್ಲ್ಡ್‌ ಕಥೆಯ ಪಾತ್ರದಲ್ಲಿ ನಾನು ಇದುವರೆಗೂ ಕಾಣಿಸಿಕೊಂಡಿರಲಿಲ್ಲ. ಎಲ್ಲ ಬಗೆಯ ಪಾತ್ರಗಳಲ್ಲಿಯೂ ನಟಿಸಬೇಕು ಎಂಬ ನನ್ನ ಆಸೆಗೆ ಈ ಚಿತ್ರ ಪೂರಕವಾಗಿ ಬಂದಿದೆ. ಸಿನಿಮಾ ಅಷ್ಟೇ ಚೆನ್ನಾಗಿದೆ ಕೂಡ. 

* ಬೇರೆ ರೌಡಿಸಮ್‌ ಸಿನಿಮಾಗಿಂತ ಇದು ಹೇಗೆ ಭಿನ್ನ?
ನನ್ನ ಮಟ್ಟಿಗೆ ತುಂಬ ಭಿನ್ನ ಸಿನಿಮಾ ಇದು. ಬೇರೆ ಹಲವು ಸಿನಿಮಾಗಳಲ್ಲಿ ಕಥೆ ಬರೆದು ಆಮೇಲೆ ಚಿತ್ರ ತೆಗೆಯುತ್ತಾರೆ. ಆದರೆ ಇಲ್ಲಿ ತಂಗಂ ಎಂಬ ರೌಡಿಯ ಬದುಕೇ ಕಥೆ. ಅದನ್ನೇ ಸಿನಿಮಾ ಮಾಡಿದ್ದೇವೆ. ನೈಜ ಘಟನೆಯೇ ಈ ಸಿನಿಮಾದ ಭಿನ್ನತೆಗೆ ಕಾರಣ.

* ಇಂಥ ನೈಜ ಘಟನೆ ಆಧರಿಸಿದ ಸಿನಿಮಾ ಮಾಡುವಾಗ ಕಲಾವಿದನಿಗೆ ಎದುರಾಗುವ ಸವಾಲುಗಳೇನು?
ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ಸವಾಲುಗಳಿರುತ್ತವೆ. ಆದರೆ ನೈಜವಾಗಿ ಜೀವಿಸಿದ್ದ ವ್ಯಕ್ತಿಯನ್ನು ತೆರೆಯ ಮೇಲೆ ಕಟ್ಟಿಕೊಡುವಾಗ ಆ ಸವಾಲು ಇನ್ನೂ ಹೆಚ್ಚಾಗಿರುತ್ತದೆ. ಅವನ ರೀತಿಯೇ ವರ್ತಿಸುವುದು, ಕಾಣಿಸಿಕೊಳ್ಳುವುದು ಎಲ್ಲವೂ ಸವಾಲೇ.

* ಈ ಪಾತ್ರಕ್ಕೆ ನೀವು ಯಾವ ರೀತಿ ಸಿದ್ಧತೆ ನಡೆಸಿದ್ದೀರಿ?
ನಮ್ಮ ನಿರ್ದೇಶಕರು ತಂಗಂ ಎಂಬ ವ್ಯಕ್ತಿಯ ಬಗ್ಗೆ ಸಾಕಷ್ಟು ವಿವರಗಳನ್ನು ಸಂಗ್ರಹಿಸಿ ನನ್ನ ಬಳಿ ವಿವರಿಸಿದ್ದರು. ಹಾಗೆಯೇ ಅವನ ಸ್ನೇಹಿತರನ್ನೂ ಪರಿಚಯ ಮಾಡಿಕೊಟ್ಟರು. ಅವರ ಬಳಿ ಮಾತನಾಡಿ ತಂಗಂ ಹೇಗೆಲ್ಲ ಇದ್ದ, ಅವನ ಸ್ವಭಾವಗಳೇನು, ಯಾವ ಸಮಯದಲ್ಲಿ ಅವನಿಗೆ ಕೋಪ ಬರುತ್ತಿತ್ತು ಎಂಬುದನ್ನೆಲ್ಲ ತಿಳಿದುಕೊಂಡೆ. ಇವೆಲ್ಲವೂ ಮನಸ್ಸಿನಲ್ಲಿಟ್ಟೊಂಡು ಆ ಪಾತ್ರವನ್ನು ನನ್ನ ಮನಸ್ಸಿನಲ್ಲಿಯೇ ಕಟ್ಟಿಕೊಳ್ಳುತ್ತಾ ಹೋದೆ. ಈ ಸಿದ್ಧತೆಯ ಕಾರಣದಿಂದಲೇ ಹೆಚ್ಚು ನೈಜವಾಗಿ ಆ ಪಾತ್ರವನ್ನು ಕಟ್ಟಿಕೊಡಲು ಸಾಧ್ಯವಾಗಿದೆ.

* ಇನ್ನು ಮುಂದಿನ ಸಿನಿಮಾಗಳಲ್ಲಿ ಯೋಗಿ ಅವರನ್ನು ಯಾವ ರೀತಿಯ ಪಾತ್ರಗಳಲ್ಲಿ ನೋಡಬಹುದು?
ಯಾವುದೋ ಒಂದೇ ರೀತಿಯ ಪಾತ್ರಕ್ಕೆ ಅಂಟಿಕೊಳ್ಳುವುದು ನನಗೆ ಖುಷಿಕೊಡುವ ಸಂಗತಿ ಅಲ್ಲ. ನಟ ಎಂದ ಮೇಲೆ ಎಲ್ಲ ಬಗೆಯ ಪಾತ್ರಗಳಲ್ಲಿಯೂ ನಟಿಸಬೇಕು. ಭಿನ್ನ ಭಿನ್ನ ಮಾದರಿಯ ನಟನೆಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು. ಆಗ ಮಾತ್ರ ನಮ್ಮೊಳಗಿನ ನಟ ಬೆಳೆಯಲು ಸಾಧ್ಯ. ಇದೇ ಕಾರಣಕ್ಕೆ ನಾನು ಸಾಧ್ಯವಾದಷ್ಟೂ ಭಿನ್ನ ರೀತಿಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಮುಂದಿನ ಸಿನಿಮಾ ‘ಆಲೋಚನೆ ಆರಾಧನೆ’ ಸಿನಿಮಾ ಪೂರ್ತಿ ಪ್ರಮಾಣದ ಕೌಟುಂಬಿಕ ಚಿತ್ರ.  ಆ ಸಿನಿಮಾದಲ್ಲಿ ನನ್ನನ್ನು ಪೂರ್ತಿ ಬೇರೆಯದೇ ಗೆಟಪ್‌ನಲ್ಲಿ ನೋಡಬಹುದು.

**

ಯಾವುದೋ ಒಂದೇ ರೀತಿಯ ಪಾತ್ರಕ್ಕೆ ಅಂಟಿಕೊಳ್ಳುವುದು ನನಗೆ ಖುಷಿಕೊಡುವ ಸಂಗತಿ ಅಲ್ಲ. ನಟ ಎಂದ ಮೇಲೆ ಎಲ್ಲ ಬಗೆಯ ಪಾತ್ರಗಳಲ್ಲಿಯೂ ನಟಿಸಬೇಕು. ಭಿನ್ನ ಭಿನ್ನ ಮಾದರಿಯ ನಟನೆಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು. ಆಗ ಮಾತ್ರ ನಮ್ಮೊಳಗಿನ ನಟ ಬೆಳೆಯಲು ಸಾಧ್ಯ.
-ಯೋಗೀಶ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT