ಬುಧವಾರ, ಡಿಸೆಂಬರ್ 11, 2019
25 °C

‘ಗಾಯಿತ್ರಿ’ಗೆ ಹಾರರ್‌ ಸ್ಪರ್ಶ

Published:
Updated:
‘ಗಾಯಿತ್ರಿ’ಗೆ ಹಾರರ್‌ ಸ್ಪರ್ಶ

ಚಂದನವನದಲ್ಲಿ ಈಗ ಹಾರರ್‌ ಸಿನಿಮಾಗಳ ಅಬ್ಬರ ಜೋರಿದೆ. ಯುವ ನಿರ್ದೇಶಕರು ಹಾರರ್‌ ಚಿತ್ರಗಳ ಬೆನ್ನುಬಿದ್ದಿದ್ದಾರೆ. ಥ್ರಿಲ್ಲರ್‌, ಹಾರರ್‌ ಕಥೆ ಹೊಸೆದು ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದ್ದಾರೆ. ಇಂಥಹ ಚಿತ್ರಗಳ ಸಾಲಿಗೆ ಈಗ ‘ಗಾಯಿತ್ರಿ’ ಚಿತ್ರವೂ ಸೇರಿದೆ. ಸಕಲೇಶಪುರ, ಚೆನ್ನೈ, ಮಂಗಳೂರು, ಚಾರ್ಮುಡಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಪ್ರೇಕ್ಷಕರಿಗೆ ಮುಂದೆ ಬರಲು ಚಿತ್ರತಂಡ  ಸುದ್ದಿಗೋಷ್ಠಿ ನಡೆಸಿತು.

ನಿರ್ದೇಶಕ ಸತ್ಯ ಸಾಮ್ರಾಟ್‌, ‘ಚಿತ್ರದಲ್ಲಿ ಮೂವರು ಯುವಕರು ಇರುತ್ತಾರೆ. ದುಶ್ಚಟಗಳಿಗೆ ದಾಸರಾಗಿರುತ್ತಾರೆ. ಒಮ್ಮೆ ಸಮಸ್ಯೆಯ ಸುಳಿಗೆ ಸಿಲುಕುತ್ತಾರೆ. ಅಲ್ಲಿಂದ ಅವರ ಹೇಗೆ ಹೊರಬರುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇನೆ’ ಎಂದು ಕಥೆಯ ಎಳೆಯನ್ನು ಬಿಚ್ಚಿಟ್ಟರು.

(ಸ್ಮೈಲ್‌ ಶಿವು)

‘ನಾಲ್ಕು ಹಾಡುಗಳು ಚಿತ್ರದಲ್ಲಿವೆ. ಒಂದು ಐಟಂ ಸಾಂಗ್‌ ಇದೆ. ರೊಮ್ಯಾಂಟಿಕ್ ಸಾಂಗ್‌ ಇದೆ’ ಎಂದರು.

ನಾಯಕ ರೋಹಿತ್‌ ಶೆಟ್ಟಿ, ‘8 ವರ್ಷದಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೂವರು ಸ್ನೇಹಿತರು ಸಮಸ್ಯೆಯಿಂದ ಹೊರಬರುವಾಗ ಎದುರಿಸುವ ಸಂಕಷ್ಟಗಳನ್ನು ಚಿತ್ರ ಕಟ್ಟಿಕೊಡುತ್ತದೆ’ ಎಂದು ಅನುಭವ ಹಂಚಿಕೊಂಡರು.

ಸ್ಮೈಲ್‌ ಶಿವು, ‘ಅನಕ್ಷರಸ್ಥ ಯುವಕರು ಎದುರಿಸುವ ಸಂಕಷ್ಟ ಚಿತ್ರದಲ್ಲಿದೆ’ ಎಂದು ಮಾತು ಮುಗಿಸಿದರು.

ನಿರ್ಮಾಪಕ ಕೃಷ್ಣೇಗೌಡ, ‘ಶೇಕಡವಾರು ಪದ್ಧತಿ ಅನುಷ್ಠಾನಗೊಂಡರೆ ಮಾತ್ರ ನಿರ್ಮಾಪಕರು ಉಳಿಯುತ್ತಾರೆ. ಈ ನೀತಿಗೆ ಪ್ರದರ್ಶಕರ ಒಪ್ಪಿಗೆ ಇದೆ. ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯಬೇಕಿದೆ’ ಎಂದರು. ‘ಪ್ರಸ್ತುತ ಸಿನಿಮಾ ಇಂಡಸ್ಟ್ರಿಯಲ್ಲಿ ಹಣ ಇದ್ದವರಿಗೆ ಬೆಲೆ ಹೆಚ್ಚು. ನಮ್ಮಂತಹವರಿಗೆ ಗೌರವ ಕಡಿಮೆ. ಚಿತ್ರರಂಗಕ್ಕೆ ಸಾಕಷ್ಟು ದುಡಿದರೂ ಗುರುತಿಸುವುದು ವಿರಳ’ ಎಂದ ಲಹರಿ ವೇಲು ಅವರ ಮಾತಿನಲ್ಲಿ ವಿಷಾದವಿತ್ತು.

(ಸತ್ಯ ಸಾಮ್ರಾಟ್‌)

ಕೆ. ಭಾರತಿ ಮತ್ತು ಕುಮಾರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ಯಾಮ್‌ ಅವರ ಛಾಯಾಗ್ರಹಣವಿದೆ. ಚೇತನ್, ಶೋಭಾರಾಣಿ, ನಯನಾ ಕೃಷ್ಣ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)