ಶನಿವಾರ, ಡಿಸೆಂಬರ್ 14, 2019
22 °C

ಕಂಬನಿ ತಾನಾಗಿ ತೊಟ್ಟಿಕ್ಕುವ ತೆರದಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಬನಿ ತಾನಾಗಿ ತೊಟ್ಟಿಕ್ಕುವ ತೆರದಿ...

ಸಿದ್ಧ ರಾಗಕ್ಕೆ ಹಾಡು ಬರೆದ ಕ್ಷಣ

ನಾನು ವೃತ್ತಿನಿರತ ಚಲನಚಿತ್ರ ಗೀತರಚನಕಾರನಲ್ಲ. ನನ್ನನ್ನು ಒಬ್ಬ ಕವಿಯಾಗಿ ಕನ್ನಡ ಸಾರಸ್ವತಲೋಕ ಗುರುತಿಸಿದೆ. ನನ್ನ ಕೆಲವು ಜನಪ್ರಿಯ ಭಾವಗೀತೆಗಳನ್ನು ( ಉದಾ: ‘ಬಾರೆ ರಾಜಕುಮಾರಿ’, ‘ಬಾ ಮಳೆಯೆ, ಬಾ’, ‘ದೇವರೇ, ಅಗಾಧ’) ಚಲನಚಿತ್ರಗಳಲ್ಲಿ ಬಳಸಿಕೊಂಡಿದ್ದಾರೆ. ಆದರೆ, ಹಾಡಿಗೆಂದು ಮುಖ್ಯಧಾರೆಯ ಚಲನಚಿತ್ರ ಸಂಗೀತ ನಿರ್ದೇಶಕರು ನನ್ನ ಬಳಿ ಬರುವುದು ಅಪರೂಪ.

ಕೆಲವು ತಿಂಗಳ ಹಿಂದೆ, ಜನಪ್ರಿಯ ಚಲನಚಿತ್ರ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ತಮ್ಮೊಂದಿಗೆ ಚಿತ್ರ ನಿರ್ಮಾಪಕರಾದ ನಾಗರಾಜ ಗೋಪಾಲ್ ಅವರನ್ನೂ ಕರೆದುಕೊಂಡು ಅವರ ಹೊಸ ಚಿತ್ರಕ್ಕಾಗಿ ನನ್ನಿಂದ ಒಂದು ಹಾಡು ಬರೆಸಲು ನನ್ನ ಮನೆಗೆ ಬಂದಾಗ, ಮೇಲಿನ ಕಾರಣಗಳಿಂದಲೇ ನನಗೆ ಆಶ್ಚರ್ಯವಾಯಿತು.

‘ಸಿದ್ಧರಾಗಕ್ಕೆ ಹಾಡು ಬರೆಯಲು ನನಗೆ ಬರೋದಿಲ್ಲ’ ಎಂದು ಮೊದಲೇ ಅವರಿಗೆ ನಾನು ಹೇಳಿಬಿಟ್ಟೆ. ‘ಇಲ್ಲ ಸಾರ್, ಈ ಹಾಡು ನೀವೇ ಬರೀಬೇಕು. ಟ್ಯೂನ್ ಕೊಟ್ಟು ಹೋಗ್ತೀವಿ. ಒಂದು ವಾರ ಟೈಂ ತಗೊಳ್ಳಿ ಪರವಾಗಿಲ್ಲ’ ಎಂದರು ಅನೂಪ್ ಮತ್ತು ನಾಗರಾಜ್.

ನಂತರ ಅವರ ಚಿತ್ರದ ಕತೆ ಹೇಳಿದರು. ಮಕ್ಕಳ ಸಿನಿಮಾ. ಒಂದು ಪುಟ್ಟ ಮಿಡ್ಲುಸ್ಕೂಲ್ ಹುಡುಗಿ. ಅವಳಿಗೆ ಬ್ಲಡ್‌ ಕ್ಯಾನ್ಸರ್ ಬರುತ್ತೆ. ಇದು ಗೊತ್ತಾದಾಗ ಅವಳ ಶಾಲಾ ಗೆಳೆಯ, ಗೆಳತಿಯರಿಗೆ ಹಾಗೂ ಉಪಾಧ್ಯಾಯ ವೃಂದಕ್ಕೆ ಆಗುವ ಆಘಾತ, ಅವಳನ್ನು ಉಳಿಸಿಕೊಳ್ಳುವ ಅವರೆಲ್ಲರ ಛಲ- ಇದೆಲ್ಲ ಹಾಡಿನಲ್ಲಿ ಸೂಚ್ಯವಾಗಿ ಬರಬೇಕಿತ್ತು. ಆಯ್ತು, ಎಂದೆ.

ಸಂಭಾವನೆ ಬಗ್ಗೆ ಕೇಳಿದರು. ‘ಮೊದಲು ಹಾಡು ಬರೀತೇನೆ. ಅದು ನಿಮಗೆ ಇಷ್ಟವಾದರೆ ಆ ಮೇಲೆ ಸಂಭಾವನೆ ಬಗ್ಗೆ ಮಾತಾಡೋಣ’ ಎಂದೆ.

ಹಾಡು ಬರೆದೆ. ಅದು ಒಂದು ಕವಿತೆಯಾಗಿಯೂ ಚೆನ್ನಾಗಿದೆ ಅನ್ನಿಸಿತು. ಸಿನಿಮಾ ತಂಡಕ್ಕೂ ಅದು ಇಷ್ಟವಾಯಿತು.

ಅನೂಪ್ ಸೀಳಿನ್ ತಾವೇ ಅದನ್ನು ಮನೋಜ್ಞವಾಗಿ ಹಾಡಿದರು. ಚಿತ್ರದಲ್ಲೂ ಆ ಹಾಡನ್ನು ನಿರ್ದೇಶಕ ವಿಕ್ರಂ ಸೂರಿ ಮನ ಮುಟ್ಟುವಂತೆ, ಕಂಬನಿ ತಾನಾಗಿ ತೊಟ್ಟಿಕ್ಕುವಂತೆ ಚಿತ್ರೀಕರಿಸಿದ್ದಾರೆ ಎಂದರು ಬಿ.ಆರ್. ಲಕ್ಷ್ಮಣರಾವ್.

***

ಚಿತ್ರ: ಎಳೆಯರು, ನಾವು ಗೆಳೆಯರು

ಹಾಡು: ಕಿಂಚಿತ್ತೂ ದಯವಿಲ್ಲದ...

ಸಾಹಿತ್ಯ: ಬಿ.ಆರ್. ಲಕ್ಷ್ಮಣರಾವ್

ಸಂಗೀತ: ಅನೂಪ್ ಸೀಳಿನ್

ಕಿಂಚಿತ್ತೂ ದಯವಿಲ್ಲದ.. ಅಂತಕ...

ಹಿಂಗ್ಯಾಕೆ ಮುಗಿಬಿದ್ದೆಯೋ

ಈ ನಗೆಮಲ್ಲಿಗೆಗೆ?

ಇಷ್ಟ್ಯಾಕೆ ಆತುರವೋ ನಿನಗೆ

ಹಚ್ಚಲು ಕರಿಮಸಿಯ

ರಂಗಾದ ಚಿತ್ತಾರಕೆ?

ಸೋಲುವೆ ನೀನು, ಇಲ್ಲಿದೆ ಕಾಣು

ನಮ್ಮೆಲ್ಲರ ಅಭಯ||

ಹಚ್ಚನೆ ಹಸಿರು, ತೊರೆಯ ತಣ್ಣೀರು,

ಬೆಚ್ಚನೆ ಎಳೆಬಿಸಿಲ ಚುಮುಚುಮು ನಸುಕಿನಲಿ|

ಗೆಳೆಯರ ಜೋಡಿ ಜಿಗಿಜಿಗಿದಾಡಿ

ನಲಿದಿತ್ತು ಹೊಂಬಣ್ಣದ ಮುದ್ದಾದ ಜಿಂಕೆಮರಿ|

ಇಂಥ ಈ ವೇಳೆಗೆ, ಏಕೆ ಬಂದೆರಗಿದೆ

ನೀ ಮರಿಜಿಂಕೆ ಎದೆ ಬಗೆಯಲು

ಹೆಬ್ಬುಲಿ ರೀತಿಯಲಿ?||

ಇಲ್ಲಿತ್ತು ಪ್ರೀತಿ, ಇಲ್ಲಿತ್ತು ಸ್ನೇಹ,

ಇಲ್ಲಿತ್ತು ಗರಿ ಬಿಚ್ಚಿದ ಮುದ್ದಾದ ಹಕ್ಕಿಮರಿ|

ಚಿಮ್ಮುತ್ತ ಹಾರಿ, ಬಾನಲ್ಲಿ ಏರಿ,

ಜಗವ ಜಾಲಾಡುವ ಕನಸಿತ್ತು ನೂರು ಪರಿ|

ಇಂಥ ಈ ವೇಳೆಗೆ, ಏಕೆ ಬಂದೆರಗಿದೆ

ನೀ ಮರಿಹಕ್ಕಿ ಎದೆ ಕುಕ್ಕಲು

ಹದ್ದಿನ ರೀತಿಯಲಿ?

ಪ್ರತಿಕ್ರಿಯಿಸಿ (+)