ಬುಧವಾರ, ಫೆಬ್ರವರಿ 19, 2020
24 °C

ಹೊರಗೆ ಮಳೆ, ಮೊಗಕೆ ಕಳೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊರಗೆ ಮಳೆ, ಮೊಗಕೆ ಕಳೆ...

ಮಳೆಗಾಲದಲ್ಲಿ ಸೆಕೆಯೂ ಇರುತ್ತದೆ. ಮೋಡ ಕವಿದ ವಾತಾವರಣವಿದ್ದರೂ, ಉಷ್ಣಾಂಶಕ್ಕೇನೂ ಕೊರತೆ ಇರುವುದಿಲ್ಲ. ಆದರೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಚರ್ಮ ಒಣಗುವುದಿಲ್ಲ. ಬೆವರುವುದಿಲ್ಲ. ಪರಿಣಾಮವಾಗಿ ದೂಳು ಚರ್ಮದೊಳಗೆ ಅವಿತುಕೊಳ್ಳಲು ಸಾಕಷ್ಟು ಅವಕಾಶಗಳಿರುತ್ತವೆ.

ಮಳೆಗಾಲದಲ್ಲೂ ಮೊಡವೆ, ಗುಳ್ಳೆಗಳ ಕಾಟ ತಪ್ಪದು. ಆಗಾಗ ಫೇಸ್‌ಪ್ಯಾಕ್‌ ಬಳಸುವುದು ಇದಕ್ಕೊಂದು ಉತ್ತಮ ಪರಿಹಾರ. ಬಿಡುವಿದ್ದಾಗ ಟೊಮೆಟೊ ರಸದಿಂದ ಮುಖ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ಮುಖದ ಮೇಲಿನ ಕಲೆಗಳೆಲ್ಲವೂ ತಿಳಿಯಾಗುತ್ತದೆ.

ಅಕ್ಕಿ ಹಿಟ್ಟು ಮತ್ತು ಸೌತೆಕಾಯಿ ಮಿಶ್ರಣದ ಫೇಸ್‌ಪ್ಯಾಕ್ ಸರ್ವ ಋತುಗಳಿಗೂ ಹೊಂದಿಕೆಯಾಗುತ್ತದೆ. ಸೌತೆಕಾಯಿಯನ್ನು ಕೋಸಂಬರಿಗೆ ಹೆಚ್ಚುವಂತೆ ಮಾಡಿ ರಸ ಸೋಸಿಕೊಳ್ಳಬೇಕು. ಸೋಸಿದ ರಸಕ್ಕೆ ಅಕ್ಕಿ ಹಿಟ್ಟು ಬೆರೆಸಿ ಪೇಸ್ಟ್‌ ಮಾಡಿಕೊಳ್ಳಬೇಕು. ಮುಖದ ಮೇಲೆ ತೆಳುವಾಗಿ ಲೇಪಿಸಿಕೊಂಡು, ಕಣ್ಣಿನ ಮೇಲೆ ಸೌತೆಕಾಯಿಯ ಚೂರನ್ನು15 ನಿಮಿಷ ಇರಿಸಿಕೊಳ್ಳಿ.

ಮುಖದ ಮೇಲಿನ ಲೇಪ ಒಣಗಿದಂತಾಗುವವರೆಗೂ ಮಾತಿಲ್ಲದೆ, ನಗುವಿಲ್ಲದೆ, ಆಕಳಿಕೆಯೂ ಇಲ್ಲದೇ ಧ್ಯಾನಸ್ಥ ಸ್ಥಿತಿಯಲ್ಲಿ ಏಕಾಗ್ರತೆಯಿಂದ ಇರಬೇಕು. ಲೇಪ ಒಣಗಿದಂತಾದಾಗ ತಣ್ಣೀರಿನಿಂದ ಮುಖ ತೊಳೆದುಕೊಳ್ಳಬೇಕು. ಮುಖದ ಮೇಲಿನ ತೆರೆದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುವವು. ಬೆಣ್ಣೆಯಂಥ ನುಣ್ಣಗಿನ ನುಣುಪಿನ ಕೆನ್ನೆ ನಿಮ್ಮದಾಗುವುದು.

ಚರ್ಮದ ಬಣ್ಣ ತಿಳಿಗೊಳಿಸುವ ಇನ್ನೊಂದು ಪ್ರಮುಖ ಅಂಶವೆಂದರೆ ಆಲೂಗಡ್ಡೆಯ ಮಸಾಜ್‌. ಆಲೂಗಡ್ಡೆಯನ್ನು ಕೊಬ್ಬರಿಯಂತೆ ತುರಿದುಕೊಂಡು ಅದರ ತಿರುಳನ್ನು ಮುಖದ ತುಂಬ ಉಜ್ಜಿಕೊಳ್ಳಬೇಕು. ನವಿರಾಗಿ ನೀವುತ್ತಲೇ ಮಸಾಜ್‌ ಮಾಡಿಕೊಳ್ಳಬೇಕು. ಆಲೂಗಡ್ಡೆಯ ತಿರುಳು ಒಣಗುವವರೆಗೂ ಈ ಮಸಾಜ್‌ ಮುಂದುವರಿಯಲಿ. ಅದು ಕೈಯಿಂದ ಒಣಗಿ ಉದುರುವಾಗ ಈ ವರ್ತುಲಾಕಾರವಾಗಿ ಮಾಡುತ್ತಿದ್ದ ಮಸಾಜ್‌ ಅನ್ನು ನಿಲ್ಲಿಸಬೇಕು. ಒಂದೆರಡು ನಿಮಿಷಗಳ ನಂತರ ಮುಖ ತೊಳೆದುಕೊಳ್ಳಬೇಕು. ಮಳೆಯಲ್ಲಿ ಮಿಂದೆದ್ದು ಬಂದ ಚೆಲುವೆಯಂತೆ ಕಾಣಲು ಈ ಸರಳ ಉಪಾಯಗಳು ಸಹಕಾರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)