ಸೋಮವಾರ, ಡಿಸೆಂಬರ್ 9, 2019
23 °C

ಜೇಬುಗಳ ಜಮಾನ

Published:
Updated:
ಜೇಬುಗಳ ಜಮಾನ

ಪ್ಯಾಂಟುಗಳಲ್ಲಿ ಜೇಬುಗಳಿರುವುದು ಮಾಮೂಲು. ಆದರೆ ಈಗ ಜೇಬುಗಳು ಕುರ್ತಾ, ಸ್ಕರ್ಟ್‌, ಗೌನ್‌, ಶರ್ಟ್ ಎಲ್ಲದರಲ್ಲೂ ಉಡುಪುಗಳ ಖದರು ಹೆಚ್ಚಿಸುತ್ತಿವೆ. ಜೇಬುಗಳು ಇರುವ ಉಡುಪುಗಳು ಟ್ರೆಂಡಿ ಎಂಬುದು ಹೆಣ್ಣುಮಕ್ಕಳ ಭಾವನೆಯೂ ಆಗಿದೆ.

ಮೊಬೈಲ್‌ ಫೋನ್‌, ಡೆಬಿಟ್‌/ಕ್ರೆಡಿಟ್‌ ಕಾರ್ಡು, ಮೆಟ್ರೊ ಮತ್ತು ಬಸ್‌ ಪಾಸ್‌... ಹೀಗೆ ಕೈಯಲ್ಲಿಯೋ ಕೈಚೀಲದಲ್ಲಿಯೋ ಇರುತ್ತಿದ್ದ  ವಸ್ತುಗಳೂ ಜೇಬುಗಳಲ್ಲಿ ಬೆಚ್ಚಗೆ ಕೂರುತ್ತಿವೆ. ಜೇಬಿಗೆ ಕೈ ಜೋತುಹಾಕಿ ನಡೆದುಬಂದರೆ ಅವಳತ್ತ ನೋಡುವ ನೋಟವೇ ಬದಲಾಗಿಬಿಡುತ್ತದೆ! ಜೇಬುಗಳ ಜಮಾನಾ ಇದು...

ಸ್ಟೈಲಿಶ್ ಎನಿಸಿಕೊಳ್ಳುವ ನೆಪದಲ್ಲಿ ವಸ್ತ್ರವಿನ್ಯಾಸದಲ್ಲೂ ಈ ಕಿಸೆ ತಪ್ಪದೇ ಜಾಗ ಗಿಟ್ಟಿಸಿಕೊಳ್ಳುತ್ತಿದೆ. ಉದ್ಯೋಗಸ್ಥ ಮಹಿಳೆಯರಲ್ಲೂ ತಮ್ಮ ಉಡುಪಿನಲ್ಲಿ ಕಿಸೆಯನ್ನು ಬಯಸಿ ಹೊಲಿಸಿಕೊಳ್ಳುವವರೆ ಹೆಚ್ಚಾಗಿದ್ದಾರೆ. ದರ್ಜಿಗೆ ಬಟ್ಟೆ ಕೊಟ್ಟು ಹೊಲಿಸುವಾಗ ಕಿಸೆ ಬೇಕು ಅಂದರೆ ಹೆಚ್ಚುವರಿ ಶುಲ್ಕವನ್ನೂ ವಿಧಿಸುತ್ತಾನೆ! ಜೇಬಿನ ಮಹಾತ್ಮೆ ಹೇಗಿದೆ ನೋಡಿ...

ಇದು ವಿನ್ಯಾಸದ ವಿಷಯವಾಗಿ ಮಾತ್ರವಲ್ಲ, ಬಹು ವರ್ಷಗಳಿಂದ ಲಿಂಗ ತಾರತಮ್ಯದ ಜೊತೆ ತಳುಕು ಹಾಕಿಕೊಂಡು ಚರ್ಚೆಗೂ ಕಾರಣವಾಗಿತ್ತು. ಕೆಲವು ದಶಕಗಳ ಹಿಂದೆ ಮಹಿಳೆಯರು ಪ್ಯಾಂಟ್‌ ಧರಿಸುವುದಕ್ಕೇ ಆಕ್ಷೇಪಗಳಿದ್ದುವೆನ್ನಿ. ಆದರೆ ಹೆಣ್ಣುಮಕ್ಕಳ ಪ್ಯಾಂಟ್‌ ಅಥವಾ ಶರ್ಟ್‌ಗಳಲ್ಲಿ ಆಗ ಜೇಬುಗಳಿರಲಿಲ್ಲ. ಕೆಲವರು ಸ್ವಲ್ಪ ಧೈರ್ಯ ಮಾಡಿ ಜೇಬುಗಳನ್ನು ಹೊಲಿಸಿಕೊಂಡು ಗಂಡುಬೀರಿ ಅನಿಸಿಕೊಂಡಿದ್ದರು.

ಇದನ್ನು ಆಗಿನ ಖ್ಯಾತ ವಸ್ತ್ರ ವಿನ್ಯಾಸಕಿ ಕ್ರಿಸ್ಟಿಯನ್‌ ಡಿಯೋರ್‌ ತಮ್ಮ ಲೇಖನವೊಂದರಲ್ಲಿ, ‘ಪುರುಷರ ಉಡುಪುಗಳಲ್ಲಿ ಅವಶ್ಯಕತೆಗೆ ಜೇಬು ಹೊಲಿದರೆ, ಮಹಿಳೆಯರಿಗೆ ಕೇವಲ ಸ್ಟೈಲ್‌ಗಾಗಿ ಜೇಬುಗಳನ್ನು ಇರಿಸಲಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.

ಜೀನ್ಸ್‌ ಪ್ಯಾಂಟುಗಳಲ್ಲಿನ ಪಾಕೆಟ್‌ ಬಗ್ಗೆ ಟ್ವಿಟ್ಟರ್‌ನಲ್ಲಿ #WeWantPockets ಆಂದೋಲನವೇ ನಡೆದಿತ್ತು. ಇದು ವ್ಯಾಪಾರದ ಒಂದು ಟ್ರಿಕ್‌, ನಕಲಿ ಜೇಬು ಎಂದು ಹಲವರು ವಿರೋಧಿಸಿದ್ದರು.

ಬರುಬರುತ್ತಾ ಮಹಿಳೆಯರು ಪುರುಷರ ಉಡುಗೆಗಳನ್ನು ಧರಿಸುವುದು ಅಥವಾ ಅವರಂತೆ ಪ್ಯಾಂಟ್‌ ಮೇಲೆ ಟಿಶರ್ಟ್‌ಗಳನ್ನು ಧರಿಸುವುದು ಟ್ರೆಂಡ್‌ ಆಯಿತು. ಗೌನ್‌ನ ಎರಡೂ ಕಡೆ ಜೇಬಿಗೆ ಕೈಯಿಳಿಸಿಕೊಂಡು ಅನೇಕ ನಟಿಯರು ರೆಡ್‌ ಕಾರ್ಪೆಟ್‌ಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಬಳಿಕ ಬಂದ ಲೊ ಬಾಟಮ್‌ ಪ್ಯಾಂಟ್‌ಗಳಲ್ಲಿ ಜೇಬುಗಳು ಮತ್ತೆ ಕಣ್ಮರೆಯಾದವು. ಇದರ ಬದಲಾಗಿ ಐಷಾರಾಮಿ ಬ್ಯಾಗ್‌ಗಳು ಮಹಿಳೆಯರ ಕೈ ಸೇರಿದವು.

(ಮಹಿಳೆಯರ ಉಡುಗೆಗಳಲ್ಲಿ ಕಿಸೆ)

ಹೀಗಾಗಿ ಜೇಬು ಮಹಿಳೆಯರ ಉಡುಪುಗಳಿಂದ ಕೊಂಚ ಮರೆಯಾಯಿತು. ಮತ್ತೆ ಹಳೆಯ ಫ್ಯಾಷನ್‌ ಮುನ್ನೆಲೆಗೆ ಬರುತ್ತಿದೆ. ಜೀನ್ಸ್‌, ಕುರ್ತಾ, ಕ್ಯಾಶುವಲ್‌ ಉಡುಪುಗಳಲ್ಲಿ ಜೇಬುಗಳು ಮತ್ತೆ ಸ್ಥಾನ ಪಡೆಯುತ್ತಿವೆ. ಈಗಿನ ಜೀನ್ಸ್‌ ಪ್ಯಾಂಟ್‌ಗಳಲ್ಲಿ ಸ್ಟೈಲ್‌ಗಾಗಿ ಜೇಬಿನಂತೆ ಕಾಣುವ ಸಣ್ಣ ಪಾಕೆಟ್‌ಗಳಿರುತ್ತವೆ. ಆದರೆ ಇದು ಚಂದಕ್ಕಷ್ಟೆ. ಉಪಯೋಗಕ್ಕೆ ಬಾರದು.

ಫ್ಯಾಷನ್‌ ದೃಷ್ಟಿಯಿಂದ ಮಾತ್ರವಲ್ಲದೆ ಅನುಕೂಲಕ್ಕೂ ಜೇಬುಗಳು ಒದಗಿಬಂದವು. ದೊಡ್ಡ ಜೇಬುಗಳು ನಿಜಕ್ಕೂ ಸಹಾಯಕ್ಕೆ ಬರುವುದು ಮೊಬೈಲ್‌ ಇಟ್ಟುಕೊಳ್ಳಲು. ಅಗಲವಾದ ಸ್ಮಾರ್ಟ್‌ಫೋನ್‌ಗಳನ್ನು ಎಲ್ಲಾ ವೇಳೆಯಲ್ಲಿಯೂ ಕೈಯಲ್ಲಿಯೇ ಹಿಡಿಯಲು ಕಷ್ಟ. ಆದ್ದರಿಂದ ಜೇಬಿನಲ್ಲಿ ಹಾಕಿಕೊಂಡರೆ ಆಯಿತು. ಇದರೊಂದಿಗೆ ಕರ್ಚೀಫ್‌, ಸಣ್ಣ ಪರ್ಸ್‌ ಕೂಡ ಇಟ್ಟುಕೊಳ್ಳಬಹುದು. ಸಣ್ಣ ಪುಟ್ಟ ವಸ್ತುಗಳಿದ್ದಾಗ ಹ್ಯಾಂಡ್‌ಬ್ಯಾಗ್‌ ಹಿಡಿಯುವುದು ಕೆಲವರಿಗೆ ಇಷ್ಟವಾಗದು.

ಶಾಪಿಂಗ್‌ ಹೋದಾಗ ಕೈ ಖಾಲಿಯಾಗಿದ್ದರೆ ಚೆಂದ. ‘ನಾನು ಈಗ ಶಾಪಿಂಗ್‌ ಹೋದಾಗ ಜೇಬು ಇದ್ದ ಕುರ್ತಾಗಳನ್ನೇ ತೊಡುತ್ತೇನೆ. ಇದರಲ್ಲಿ ಸಣ್ಣಪುಟ್ಟ ವಸ್ತು ಇಟ್ಟುಕೊಳ್ಳಬಹುದು. ಮುಖ್ಯವಾಗಿ ಫೋನ್‌ ಇಟ್ಟುಕೊಳ್ಳಬಹುದು’ ಎನ್ನುತ್ತಾರೆ ವಸ್ತ್ರ ವಿನ್ಯಾಸಕಿ ಶಿಲ್ಪಿ ಚೌಧರಿ.

ಗಂಡಸರ ಉಡುಪಿನಲ್ಲಿ ಜೇಬುಗಳಿರುತ್ತವೆ. ಹೀಗಾಗಿ ಅವರು ಯಾವಾಗಲೂ ಕೈ ಬೀಸಿಕೊಂಡು ಆರಾಮಾಗಿ ಎಲ್ಲಾ ಕಡೆ ತಿರುಗುತ್ತಾರೆ.

‘ನಾನು ನನ್ನ ಗಂಡನ ಜೊತೆ ಹೊರಗೆ ಹೋದಾಗ ಅವರ ಬಳಿ ಮೊಬೈಲ್‌ ಕೊಟ್ಟರೆ ಸಿಡುಕು ನೋಟವೇ ಸಿಗುತ್ತದೆ. ಹೀಗಾಗಿ ನಮ್ಮ ಬಟ್ಟೆಗೂ ಜೇಬು ಇದ್ದರೆ ಆರಾಮ ಎನ್ನುತ್ತಾರೆ ಹಲಸೂರಿನ ಗೀತಾ.

ನಾವು ಪುರುಷರಿಗೆ ತಕ್ಕಂತೆ ಸಮಾನ ಸಂಬಳ ಪಡೆಯುವಾಗ ಅವರಿಗೆ ಸಮಾನವಾಗಿ ಜೇಬುಳ್ಳ ಉಡುಪು ಯಾಕೆ ತೊಡಬಾರದು ಎಂಬುದು ಮಹಿಳಾವಾದಿಗಳ ಪ್ರಶ್ನೆಯೂ ಆಗಿದೆ. ಇದಲ್ಲದೇ ಸಣ್ಣ ಜೇಬು ಆಗಿರುವುದರಿಂದ ಇದರಲ್ಲಿ ಪರ್ಸ್‌, ಮೊಬೈಲ್‌ ಇಟ್ಟುಕೊಂಡರೆ ಕಳೆದುಕೊಳ್ಳುವ ಸಂಭವ ಜಾಸ್ತಿ. ನಾನು ವಸ್ತ್ರ ವಿನ್ಯಾಸ ಮಾಡುವಾಗ ಗ್ರಾಹಕರು ಇಚ್ಛೆ ಪಟ್ಟಲ್ಲಿ ದೊಡ್ಡದಾಗಿರುವ ಜೇಬು ಇರಿಸುತ್ತೇನೆ ಎಂದು ಹೇಳುತ್ತಾರೆ ಶಿಲ್ಪಿ ಚೌಧರಿ.

ಪ್ರತಿಕ್ರಿಯಿಸಿ (+)