ಶುಕ್ರವಾರ, ಡಿಸೆಂಬರ್ 6, 2019
17 °C

ಬೆಲ್ಲಿ ಪೇಟಿಂಗ್ ಬಗ್ಗೆ ಬೆನ್ನ ಹಿಂದೆ ಮಾತನಾಡುವ ಮುನ್ನ

Published:
Updated:
ಬೆಲ್ಲಿ ಪೇಟಿಂಗ್ ಬಗ್ಗೆ ಬೆನ್ನ  ಹಿಂದೆ ಮಾತನಾಡುವ ಮುನ್ನ

'ತುಂಬು ಗರ್ಭಿಣಿ ಈ ರೀತಿ ಫೋಟೊ ಹಾಕಿದ್ದು ಸರಿಯಲ್ಲ. ಇದೇನಾ ನಮ್ಮ ಸಂಸ್ಕೃತಿ? ಹೊಟ್ಟೆಯಲ್ಲಿ ಚಿತ್ರ ಬಿಡಿಸಿ ಅದನ್ನು ಪ್ರದರ್ಶನಕ್ಕಿಡುವ ಅಗತ್ಯವೇನಿತ್ತು? ಸಿನಿಮಾ ನಟಿಯರಿಗೆ ಇದೆಲ್ಲಾ ಫ್ಯಾಷನ್. ಆದರೆ ಇದು ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಇವರಿಗೆ ಗೊತ್ತಾಗಲ್ಲ’ ಸಾಮಾಜಿಕ ತಾಣಗಳಲ್ಲಿ ಈ ರೀತಿಯ ಟೀಕೆ, ಚರ್ಚೆಗಳಿಗೆ ಎಡೆಮಾಡಿದ್ದು ಚಂದನವನದ ನಟಿ ಶ್ವೇತಾ ಶ್ರೀವಾತ್ಸವ್ ಹಂಚಿಕೊಂಡಿರುವ ಪ್ರೆಗ್ನೆನ್ಸಿ ಫೋಟೊಗಳು.

ಅಮ್ಮನಾಗುತ್ತಿರುವ ಖುಷಿಯಲ್ಲಿರುವ ಶ್ವೇತಾ, ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಹೊಟ್ಟೆ ಮೇಲೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರಿಂದ 3ಡಿ ಪೇಟಿಂಗ್ ಮಾಡಿಸಿಕೊಂಡು ತಾಯ್ತನದ ಖುಷಿಯ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು.

ಈ ಚಿತ್ರಗಳನ್ನು ನೋಡಿ ಕೆಲವರು ಮೆಚ್ಚುಗೆ ಸೂಚಿಸಿದ್ದರೆ, ಇನ್ನು ಕೆಲವರು ತುಂಬಾ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾರೆ. ’ತುಂಬು ಗರ್ಭಿಣಿ ಹೊಟ್ಟೆ ಮೇಲೆ ಈ ರೀತಿ ಬಣ್ಣದ ಚಿತ್ತಾರ ಬಿಡಿಸಿದ್ದು ಸರಿಯೇ? ದೃಷ್ಟಿಯಾಗುವುದಿಲ್ಲವೇ? ಬಣ್ಣದಿಂದ ಏನಾದರೂ ಅಲರ್ಜಿ ಆದರೆ ಏನು ಗತಿ?’ ಎಂದು ಕೆಲವರು ಆರೋಗ್ಯದ ದೃಷ್ಟಿಯಿಂದ ಕೇಳಿದರೆ ಇನ್ನು ಕೆಲವರು ’ಇದೇನು ಅಸಹ್ಯ, ಇಂಥಾ ವಿಷಯಗಳನ್ನು ನಾಲ್ಕುಗೋಡೆಗಳ ಮಧ್ಯೆಯೇ ಇರಿಸಬೇಕು. ಇದೆಲ್ಲಾ ಪ್ರದರ್ಶನಕ್ಕಿಡುವ ಅಗತ್ಯವೇನಿತ್ತು?’ ಎಂದು ಮೂಗು ಮುರಿದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಅಸಮಾಧಾನದ ಕಾಮೆಂಟುಗಳಲ್ಲಿ ಹೆಣ್ಣು ಮಕ್ಕಳ ಕಾಮೆಂಟುಗಳು ಜಾಸ್ತಿ ಇದ್ದವು! ಕೆಲವೊಂದು ಕಾಮೆಂಟುಗಳು ತೀರಾ ಅಸಭ್ಯ ಭಾಷೆಯಲ್ಲಿದ್ದವು.

ತಾಯ್ತನವೂ ಒಂದು ಸಂಭ್ರಮದ ಘಳಿಗೆ. ಇಂಥಾ ಘಳಿಗೆಯನ್ನು ಯಾವ ರೀತಿ ಸಂಭ್ರಮಿಸಬೇಕೆಂಬುದು ತೀರಾ ವೈಯಕ್ತಿಕ ವಿಷಯ. ಶ್ವೇತಾ ಆಕೆಯ ಪತಿಯ ಬೆಂಬಲದಿಂದಲೇ ಈ ಚಿತ್ತಾರ ಬಿಡಿಸಿ ಸಂಭ್ರಮಿಸಿದ್ದು. ಆಕೆಗೂ ತನ್ನ ಆರೋಗ್ಯದ ಬಗ್ಗೆ ಕಾಳಜಿ ಇದೆ. ಅಲ್ಲಿ ಬಳಸಿದ ಪೇಂಟ್‌ನಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ, ಅದು ನೀರಿನಲ್ಲಿ ಒರೆಸಿದರೆ ಹೋಗಿ ಬಿಡುತ್ತದೆ ಎಂದು ಸ್ವತಃ ಶ್ವೇತಾ ಅವರೇ ಹೇಳಿದ್ದಾರೆ.

ಇನ್ನು ಆಕೆ ಫೋಟೊ ಅಪ್‌ಲೋಡ್ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದಾದರೆ, ಅದು ಆಕೆಯ ಅಭಿವ್ಯಕ್ತಿ ಸ್ವಾತಂತ್ರ್ಯ. ತಾನು ತಾಯ್ತನವನ್ನು ಸಂಭ್ರಮಿಸುತ್ತಿದ್ದೇನೆ ಎಂದು ಹಾಲಿವುಡ್, ಬಾಲಿವುಡ್ ಬೆಡಗಿಯರು ಫೋಟೊಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವಂತೆ ಚಂದನವನದ ತಾರೆಯೂ ಮಾಡಿದ್ದಾರೆ ಅಷ್ಟೇ. ಅದು ಆಕೆಯ ವೈಯಕ್ತಿಕ ಆಯ್ಕೆಯೂ ಹೌದು.

ಹೀಗಿರುವಾಗ ಆಕೆಯ ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸೋಣ, ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದಾಗ ಅದನ್ನು ಖಂಡಿಸೋಣ. ಆದರೆ ಹೆಣ್ಣು ಮಗಳೊಬ್ಬಳು ಆಕೆಯ ಬದುಕಿನ ಖುಷಿಯನ್ನು ಸಂಭ್ರಮಿಸುವಾಗ ಅದೇ ಮಹಾ ಅಪರಾಧ ಎನ್ನುವ ರೀತಿಯಲ್ಲಿ ನೋಡುವ ದೃಷ್ಟಿಕೋನ ಬದಲಾಗಲಿ.

**

-ರಶ್ಮಿ ಕೆ.

ಪ್ರತಿಕ್ರಿಯಿಸಿ (+)