ಶನಿವಾರ, ಡಿಸೆಂಬರ್ 7, 2019
24 °C

ಕೊನೆ ಬೆಂಚಿನ ಹುಡುಗರ ಬ್ಯಾಂಡ್‌

Published:
Updated:
ಕೊನೆ ಬೆಂಚಿನ ಹುಡುಗರ ಬ್ಯಾಂಡ್‌

ರಲ್ಲಿ ದೀಪಕ್‌ ಧ್ಯಾನಿ ಅವರು ‘ದಿ ಬ್ಯಾಕ್‌ ಬೆಂಚರ್ಸ್‌’ ರಾಕ್‌ ಮ್ಯೂಸಿಕ್‌ ತಂಡವನ್ನು ಪ್ರಾರಂಭಿಸಿದರು. ಈ ತಂಡದ ವಿಶೇಷತೆಯೆಂದರೆ ಎಲ್ಲಾ ಸದಸ್ಯರು 12ರಿಂದ 14ವರ್ಷದೊಳಗಿನವರು.

ಈ ತಂಡದಲ್ಲಿ ಒಟ್ಟು ಏಳು ಸದಸ್ಯರಿದ್ದಾರೆ. ‘ಹಮ್‌ ಅಂಡ್‌ ಸ್ಟ್ರಮ್‌’ ಮ್ಯೂಸಿಕ್‌ ಶಾಲೆ ನಡೆಸುತ್ತಿದ್ದ ದೀಪಕ್‌ ಅವರು ತಮ್ಮ ಬಳಿ ಸಂಗೀತ ಅಭ್ಯಾಸ ಪಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭೆಯನ್ನು ನೋಡಿ ‘ಯಾಕೆ ಮಕ್ಕಳ ರಾಕ್‌ ತಂಡವನ್ನು ಕಟ್ಟಬಾರದು?’ ಎಂದು ಯೋಚಿಸಿದರು. ಇವರ ಆಸೆಗೆ ಮಕ್ಕಳು ಪ್ರೋತ್ಸಾಹ ನೀಡಿದರು. ಈಗ ‘ದಿ ಬ್ಯಾಕ್‌ ಬೆಂಚರ್ಸ್‌‘ ತಂಡದ ಸದಸ್ಯರು ನಗರದ ಬೇರೆ ಬೇರೆ ಕಡೆಗಳಲ್ಲಿ ರಾಕ್‌ ಮ್ಯೂಸಿಕ್‌ ಪ್ರದರ್ಶನ ನೀಡುತ್ತಿದ್ದಾರೆ.

ಪೃಥ್ವಿ ಧ್ಯಾನಿ, ಆಟ್ರಿಯೊ, ನಿರ್ಮಲ್‌, ಅನಿಕೇತ್‌, ಅನುಪಮ್‌, ತೃಷ್ಣಾ , ಆಗ್ನೇಯ್‌ ಈ ತಂಡದ ಸದಸ್ಯರು. ಇದರಲ್ಲಿ ತೃಷ್ಣಾ, ಪೃಥ್ವಿ ಧ್ಯಾನಿ ಗಾಯಕರಾಗಿದ್ದರೆ, ಆಗ್ನೇಯ್‌ ಡ್ರಮ್ಮರ್‌. ಉಳಿದ ಐವರು ಗಿಟಾರ್‌ ನುಡಿಸುತ್ತಾರೆ. ಈ ತಂಡದ ಎಲ್ಲಾ ಸದಸ್ಯರಿಗೆ ಸಂಗೀತವೆಂದರೆ ಜೀವ. ಸ್ಪರ್ಧೆಗಾಗಿ ಸಂಗೀತ ತಂಡ ಕಟ್ಟಿದವರು ಇವರಲ್ಲ. ಮನಸ್ಸಿನ ಖುಷಿ ಹಾಗೂ ಪ್ರತಿಭೆಯ ಅಭಿವ್ಯಕ್ತಿಗಾಗಿ ತಂಡ ಕಟ್ಟಿದ್ದಾರೆ ದೀಪಕ್‌. ಈ ತಂಡದ ಸದಸ್ಯರು ವಿಧ್ಯಾಬ್ಯಾಸದ ಜೊತೆಜೊತೆಗೆ ಸಂಗೀತ ಕ್ಷೇತ್ರದಲ್ಲೂ ಮುಂದುವರಿಯುವ ಹಂಬಲ ಹೊಂದಿದ್ದಾರೆ.

(ದಿ ಬ್ಯಾಕ್‌ ಬೆಂಚರ್ಸ್‌ ರಾಕ್‌ ತಂಡ)

ಈ ತಂಡದ ಸದಸ್ಯರು ಭಾನುವಾರ ಹಾಗೂ ರಜಾದಿನಗಳಂದು ಒಟ್ಟು ಸೇರಿ ಅಭ್ಯಾಸ ನಡೆಸುತ್ತಾರೆ. ಇವರು ಕಾರ್ಯಕ್ರಮಕ್ಕೂ ಮುನ್ನ ಹಲವು ಬಾರಿ ರಿಹರ್ಸಲ್‌ಗಳನ್ನು ನಡೆಸಿ, ಸಂಪೂರ್ಣ ತಯಾರಾಗಿಯೇ ವೇದಿಕೆ ಕಾರ್ಯಕ್ರಮ ನೀಡುತ್ತಾರೆ. ದೀಪಕ್‌ ಸಂಗೀತ ತರಗತಿಗಳನ್ನೂ ನಡೆಸುತ್ತಾರೆ. ‘ಸಂಗೀತಕ್ಕೆ ನಗರದಲ್ಲಿ ಹೆಚ್ಚು ಪ್ರೋತ್ಸಾಹ ಇದೆ. ಜನರ ಉತ್ಸಾಹ, ಬೆಂಬಲ ಈ ತಂಡದ ಕಾರ್ಯಕ್ರಮಗಳಿಗೆ ಸ್ಫೂರ್ತಿ’ ಎಂದು ಹೇಳುತ್ತಾರೆ ದೀಪಕ್‌.

ನಗರದ ವಿ.ಆರ್‌ ಮಾಲ್‌, ಫೋರಂ ಮಾಲ್‌ ಮಾಲ್‌ ಸೇರಿದಂತೆ 25ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಈ ತಂಡ ನೀಡಿದೆ. ಇದಲ್ಲದೇ ಮಕ್ಕಳ ಕಾರ್ಯಕ್ರಮಗಳಲ್ಲಿ ಈ ತಂಡ ರಾಕ್‌ ಸಂಗೀತ ಕಾರ್ಯಕ್ರಮ ನೀಡುತ್ತದೆ.

‘ಬೆಂಗಳೂರಿನಲ್ಲಿ ರಾಕ್‌ ಸಂಗೀತ ತಂಡಗಳಿಗೆ ವೇದಿಕೆಗಳ ಕೊರತೆಗಳಿಲ್ಲ. ಬಹುತೇಕ ಪಬ್‌, ರೆಸ್ಟೊರೆಂಟ್‌ಗಳು ವಾರಾಂತ್ಯಗಳಲ್ಲಿ ರಾಕ್‌ ಮ್ಯೂಸಿಕ್‌ಗೆ ಅವಕಾಶ ಒದಗಿಸುತ್ತವೆ. ಆದರೆ ’ದಿ ಬ್ಯಾಕ್‌ ಬೆಂಚರ್ಸ್‌’ ತಂಡ ವಿದ್ಯಾರ್ಥಿಗಳ ತಂಡವಾಗಿರುವುದರಿಂದ ಅಲ್ಲಿಗೆಲ್ಲಾ ಹೋಗಿ ಕಾರ್ಯಕ್ರಮ ನೀಡುವುದು ಅಸಾಧ್ಯ. ಸಂಘಟಕರು ಆಹ್ವಾನಿಸಿದರೂ ಅಲ್ಲಿಗೆ ಈ ತಂಡವನ್ನು ಕಳುಹಿಸುವುದಿಲ್ಲ. ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳಿಗೆ ಮಾತ್ರ ತಂಡ ಸೀಮಿತವಾಗಿದೆ’ ಎಂದು ವಿವರಿಸುತ್ತಾರೆ.

(ದೀಪಕ್‌ ಧ್ಯಾನಿ)

ಇದು ರಾಕ್‌ ಬಾಂಡ್‌ ಆಗಿರುವುದರಿಂದ ಈ ತಂಡ ಸದಸ್ಯರು ಪಾಶ್ಚಾತ್ಯ ಸಂಗೀತ ಹಾಗೂ ಬಾಲಿವುಡ್‌ ಹಾಡುಗಳನ್ನು ಹೆಚ್ಚಾಗಿ ಹಾಡುತ್ತಾರೆ.

‘ಈ ತಂಡದ ಕಾರ್ಯಕ್ರಮಗಳನ್ನು ಮಕ್ಕಳ ಕಾರ್ಯಕ್ರಮ ಎಂದು ಅಲಕ್ಷಿಸುವಂತಿಲ್ಲ. ಹಾಡುಗಾರಿಕೆ ಮತ್ತು ವಾದ್ಯ ಸಂಗೀತದ ಗುಣಮಟ್ಟದಲ್ಲಿ ಯಾವುದೇ ರಾಕ್‌ ತಂಡಕ್ಕಿಂತ ಇದು ಕಡಿಮೆಯೇನಿಲ್ಲ. ಎಲ್ಲಾ ಮಕ್ಕಳು ಸರಿಸಮಾನವಾಗಿ ಕಾರ್ಯಕ್ರಮ ನೀಡುತ್ತಾರೆ’ ಎನ್ನುವ ದೀಪಕ್‌ಗೆ  ತಮ್ಮ ತಂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂಬ ಮಹತ್ವಾಕಾಂಕ್ಷೆಯಿದೆ.

ಸಂಪರ್ಕಕ್ಕೆ: 97390 39928.

ಪ್ರತಿಕ್ರಿಯಿಸಿ (+)