ಭಾನುವಾರ, ಡಿಸೆಂಬರ್ 8, 2019
23 °C

ಕುತೂಹಲವಿದ್ದವರ ಕೈಗೆಟುಕುವ ವರ... ಕಲೆ

Published:
Updated:
ಕುತೂಹಲವಿದ್ದವರ ಕೈಗೆಟುಕುವ ವರ... ಕಲೆ

-ರಮ್ಯಾ ಕೆದಿಲಾಯ

***

ಕುತೂಹಲವಿದ್ದವರಿಗೆ ಬಿಡುವಿನ ವೇಳೆ ಸಿಕ್ಕಿದರೆ ಏನಾದರೊಂದು ಕಲೆ ಸೃಷ್ಟಿಯಾಗುತ್ತದೆ. ಆಸಕ್ತಿಯುಳ್ಳವರ ಕೈಗೆಟುಕುವ ವರವೆಂದರೆ ಅದು ಕಲೆ ಮಾತ್ರ. ಹಾಗೆ ವಿರಾಮದ ವೇಳೆಯನ್ನು ತಮ್ಮ ಕ್ರಿಯಾಶೀಲತೆಗಾಗಿ ಬಳಸಿಕೊಂಡು ಆಭರಣಗಳ ತಯಾರಿಯಲ್ಲಿ ತೊಡಗುವ ಅನುಷಾ ಆರ್ ಬಡಿಗೇರ್‌ ಇದಕ್ಕೊಂದು ನಿದರ್ಶನ.

ಅನುಷಾ ಈಗ ಎಂ.ಎಸ್ಸಿ ವಿದ್ಯಾರ್ಥಿನಿ. ಆಭರಣ ತಯಾರಿಕೆಯಲ್ಲಿ ಒಲವು ಮೂಡಿದ್ದು ಬಿಎಸ್ಸಿ ಮಾಡುತ್ತಿದ್ದಾಗಿನ ಹಾಸ್ಟೆಲ್ ವಾಸದ ವೇಳೆ. ಕಾಲೇಜು ಮುಗಿಸಿ ಹಾಸ್ಟೆಲ್‍ಗೆ ಬಂದ ಬಳಿಕ ಬಿಡುವಿನ ವೇಳೆಯನ್ನು ಕಳೆಯಲು ಸಹಾಯಕವಾಗಿದ್ದೇ ಈ ಹವ್ಯಾಸ. ಯೂ ಟ್ಯೂಬ್‌ನಲ್ಲಿ ಸಿಗುವ ವಿಡಿಯೊಗಳನ್ನು ನೋಡಿ ಕಲಿತು ಅವರು ಆಭರಣ ತಯಾರಿಸುತ್ತಾರೆ.

ಮೂಲತಃ ಕೊಪ್ಪಳದವರಾದ ಅನುಷಾ ಈಗ ಬೆಂಗಳೂರು ನಿವಾಸಿ. ಕೆಲವು ತಿಂಗಳ ಹಿಂದೆ ಅಷ್ಟೇ ಆರಂಭಿಸಿದ ಈ ಆಭರಣ ತಯಾರಿಕೆಗೆ ಅವರ ಮನೆಯವರಿಂದ ಸಂಪೂರ್ಣವಾದ ಪ್ರೋತ್ಸಾಹವಿದೆ. ಗಂಡ ಪ್ರವೀಣ್ ಕುಮಾರ್‌ಗೂ ಕಲೆಯಲ್ಲಿ ಅಭಿರುಚಿ ಇರುವ ಕಾರಣ ಆಭರಣ ತಯಾರಿಕೆಗೆ ಅವರೂ ನೆರವಾಗುತ್ತಿದ್ದಾರಂತೆ. ಮಣ್ಣಿನ ಆಭರಣಗಳು, ರೇಷ್ಮೆನೂಲಿನ ಆಭರಣ, ಕಿವಿಯೋಲೆ. ಬಳೆಗಳು, ಸರಗಳು ಇವರ ಕೈಚಳಕದಲ್ಲಿ ಸೃಷ್ಟಿಯಾಗುತ್ತವೆ. ಬಣ್ಣಗಳ ಮೇಲೆ ಪ್ರಯೋಗ ಮಾಡುವುದು ಅನುಷಾ ಅವರಿಗೆ ಇಷ್ಟ. ಗುಲಾಬಿ, ನೀಲಿ ಹಾಗೂ ಹಸಿರು ಬಣ್ಣವನ್ನು ಆಭರಣಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈಗ ಹೆಚ್ಚು ಪ್ರಚಲಿತದಲ್ಲಿರುವ ಚಾಂದ್‌ಬಲಿ ಕಿವಿಯೋಲೆ ತಯಾರಿಸುವುದರಲ್ಲಿ ಅನುಷಾ ಪಳಗಿದ್ದಾರೆ. ರೇಷ್ಮೆ ದಾರ ಮತ್ತು ಮುತ್ತುಗಳನ್ನು ಬಳಸಿ ಹೆಚ್ಚಾಗಿ ಒಡವೆಗಳನ್ನು ಮಾಡುತ್ತಾರೆ.

ಆನ್‌ಲೈನ್‌ ಮೂಲಕ ಆಭರಣಕ್ಕೆ ಬೇಕಾದ ವಸ್ತುಗಳನ್ನು ತರಿಸಿಕೊಂಡು, ಸದ್ಯಕ್ಕೆ ಕುಟುಂಬವರಿಗೆ ಹಾಗೂ ಸ್ನೇಹಿತೆಯರಿಗೆ ಆಭರಣವನ್ನು ಮಾಡಿಕೊಡುತ್ತಿದ್ದಾರೆ. ತಾವು ತಯಾರಿಸಿದ ಆಭರಣಗಳ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತಾರೆ. ವೈವಿಧ್ಯಮಯ ಆಭರಣವನ್ನು ತಯಾರಿಸುವ ಅನುಷಾ ಮುಂದೆ ಉಪನ್ಯಾಸಕಿ ಆಗಬೇಕಂಬ ಗುರಿಯನ್ನು ಹೊಂದಿದ್ದಾರೆ. ಅವರ ಸಂಪರ್ಕಕ್ಕೆ Anusha R Badiger ಫೇಸ್‌ಬುಕ್‌ ಖಾತೆಯನ್ನು ನೋಡಬಹುದು.

ಪ್ರತಿಕ್ರಿಯಿಸಿ (+)