ಭಾನುವಾರ, ಡಿಸೆಂಬರ್ 8, 2019
19 °C

ಬಾಟಲಿಯಲ್ಲಿ ಗಿಡ ಬೆಳೆದಾಗ..

Published:
Updated:
ಬಾಟಲಿಯಲ್ಲಿ ಗಿಡ ಬೆಳೆದಾಗ..

ಬಾಟಲಿಯಲ್ಲಿ ಗಿಡವನ್ನು ಬೆಳೆಸುವುದು ಸಾಧ್ಯವೇ ಎಂದು ಹುಬ್ಬೇರಿಸುತ್ತಿದ್ದ ಮಂದಿಯೂ ಈಗ ಅದರ ಸೌಂದರ್ಯದ ಮೋಡಿಗೆ ಒಳಗಾಗಿದ್ದಾರೆ. ವರ್ಟಿಕಲ್‌, ಟೆರೆಸ್‌, ಬಾಲ್ಕನಿ ಉದ್ಯಾನದಲ್ಲಿ ಬಾಟಲಿ ಕುಂಡಗಳು ಸ್ಥಾನ ಪಡೆದುಕೊಂಡಿವೆ. ಪುಟ್ಟ ಜಾಗದಲ್ಲಿಯೇ ಬೆಳೆಸಬಹುದಾದ ಬಾಟಲಿ ಗಾರ್ಡನ್‌ ಬಗ್ಗೆ ತಿಳಿಯೋಣ...

ಮನೆಯ ಕಿಟಕಿ ಹಾಗೂ ಬಾಲ್ಕನಿಗಳಲ್ಲಿ ಬಾಟಲಿಯಲ್ಲಿ ಗಿಡ ಬೆಳೆಯುವ ಮೂಲಕ ಕರ್ಟನ್‌ ಗಾರ್ಡನಿಂಗ್‌ ಮಾಡಬಹುದು. ಕಿಟಕಿಗಳಿಗೆ ಇರುವ ಕಂಬಿಗಳಿಗೆ ಮನಿ ಪ್ಲಾಂಟ್‌ ಗಾರ್ಲಿಕ್‌ ಕ್ರೀಪರ್‌, ಅಲ್ಮಂಡಾ ಕ್ರೀಪರ್‌ ಸೇರಿದಂತೆ ಅಮೃತ ಬಳ್ಳಿಯಂತಹ ಬಳ್ಳಿಗಳನ್ನು ಹಬ್ಬಿಸಬಹುದು. ಕಿಟಕಿಯ ಮೇಲೆ ಒಂದು ಕಂಬಿಯನ್ನು ಕಟ್ಟಿ ಅದಕ್ಕೆ ಬಾಟಲಿ ಸಿಕ್ಕಿಸುವ ಮೂಲಕ ಅವುಗಳನ್ನು ಜೋತುಬೀಳುವಂತೆ ಇಡಬೇಕು. ಅವುಗಳು ಬೆಳೆದ ನಂತರ ಕರ್ಟನ್‌ ರೀತಿಯಲ್ಲಿ ಕೆಲಸಕ್ಕೆ ಬರುತ್ತವೆ. ಗಾಳಿ, ಬೆಳಕು ಬಳ್ಳಿಗಳ ನಡುವೆಯ ಇರುವ ಜಾಗದಿಂದ ಮನೆಯ ಒಳಕ್ಕೆ ಬರುತ್ತವೆ. ಇದರಿಂದ ಮಲಿನವಾಗಿರುವ ಗಾಳಿ ಗಿಡಗಳ ಮೂಲಕ ಬಂದಾಗ ಶುದ್ಧಗಾಳಿಯಾಗಿ ಪರಿವರ್ತನೆಯಾಗುತ್ತದೆ.

ಮನೆಯ ಕಾಪೌಂಡ್‌ಗಳಿಗೆ ಕಂಬಿಗಳನ್ನು ಹಾಕಿ ಅದಕ್ಕೆ ಚಿಕ್ಕ ಚಿಕ್ಕ ಬಾಟಲಿ ಕುಂಡಗಳನ್ನು ನೇತುಹಾಕಿ ಗಿಡಗಳನ್ನು ಬೆಳೆಯಬಹುದು. ಹೀಗೆ ನೇತುಹಾಕಿದ ಕುಂಡಗಳಲ್ಲಿ ಹೆಚ್ಚು ಬೇಗ ಎತ್ತರವಾಗದ ಗಿಡಗಳನ್ನು ಬೆಳೆಯಬಹುದು.

ಬಾಟಲಿಯಿಂದ ವರ್ಟಿಕಲ್‌ ಗಾರ್ಡನಿಂಗ್‌ ಸುಲಭವಾಗಿ ಮಾಡಬಹುದು. ಮನೆಯ ಬಾಗಿಲಿನ ಪಕ್ಕದ ಗೋಡೆ, ಅಡುಗೆ ಮನೆ, ಕೊಠಡಿಗಳಲ್ಲಿನ ಗೋಡೆ, ಹಾಲ್‌ನಲ್ಲಿರುವ ಗೋಡೆಗಳ ಮೇಲೆ ವರ್ಟಿಕಲ್‌ ಗಾರ್ಡೆನಿಂಗ್‌ ಮಾಡಬಹುದು. ಸೊಪ್ಪು, ಹೂವಿನ ಗಿಡಗಳು ಹಾಗೂ ಅಲಂಕಾರಿಕ ಗಿಡಗಳನ್ನು ಬೆಳೆಯಬಹುದು.

ನಗರದಲ್ಲಿ ಮನೆಯ ಮುಂದೆ ವಿಶಾಲವಾಗಿ ಉದ್ಯಾನ ಬೆಳೆಸುವಷ್ಟು ಸ್ಥಳಾವಕಾಶ ಇರುವುದಿಲ್ಲ. ಹಾಗಾಗಿ ಬಾಟಲಿಯ ಮಧ್ಯ ಭಾಗವನ್ನು ಚೌಕಕಾರಕ್ಕೆ ಗುರುತು ಹಾಕಿಕೊಂಡು ಕತ್ತರಿಸಿಕೊಳ್ಳಿ. ಅಲ್ಲಿ ಮಣ್ಣನ್ನು ತುಂಬಿ, ಕೊತ್ತಂಬರಿ, ಮೆಂತ್ಯೆ, ಪುದೀನಾ ಗಿಡಗಳನ್ನು ಬೆಳೆಯಬಹುದು.

ಯಾವ ರೀತಿಯ ಗಿಡ ಬೆಳೆಯುತ್ತೀರಿ ಎಂಬುದನ್ನು ನಿರ್ಧರಿಸಿ, ಗಿಡದ ಆಯ್ಕೆ ಮಾಡಿಕೊಳ್ಳಿ. ಇದಕ್ಕೆ ಹೆಚ್ಚು ನೀರು ಹಾಕುವ ಅಗತ್ಯವಿಲ್ಲ. ನೀರನ್ನು ಸ್ಪ್ರೇ ಮಾಡಿದರೆ ಸಾಕು.

ಸರಿಯಾಗಿ ಅರ್ಧ ಕತ್ತರಿಸಿದ ಬಾಟಲಿಯ ತಳಭಾಗಕ್ಕೆ ಮಣ್ಣನ್ನು ತುಂಬಿ ಅದರಲ್ಲಿ ದೊಡ್ಡಪತ್ರೆಯಂತಹ ಔಷಧಿ ಗಿಡಗಳನ್ನು ನೆಡಬಹುದು.

ಮರದ ಫ್ರೇಮಿಗೆ ಕಂಬಿಗಳನ್ನು ಹಾಕಿ ಅದರಲ್ಲಿ ಬಾಟಲಿ ಗಿಡಗಳನ್ನು ಬೆಳೆಸಬಹುದು. ಕಡಿಮೆ ಜಾಗದಲ್ಲಿಯೇ ಮನೆ ಬಳಕೆಗೆ ಅಗತ್ಯವಾದ ತರಕಾರಿಗಳನ್ನು ಬೆಳೆಯಲು ಇದು ಉಪಯೋಗಕ್ಕೆ ಬರುತ್ತದೆ.

ಪ್ರತಿಕ್ರಿಯಿಸಿ (+)