ಮಂಗಳವಾರ, ಡಿಸೆಂಬರ್ 10, 2019
17 °C

ಅಪ್ರಾಮಾಣಿಕತೆ ಪ್ರಜಾತಾಂತ್ರಿಕ ಮೌಲ್ಯ ಅಲ್ಲ

Published:
Updated:
ಅಪ್ರಾಮಾಣಿಕತೆ ಪ್ರಜಾತಾಂತ್ರಿಕ ಮೌಲ್ಯ ಅಲ್ಲ

* ದಿನೇಶ್‌ ಅಮಿನ್‌ ಮಟ್ಟು

ಪೇಜಾವರ ಸ್ವಾಮಿಗಳ ‘ಇಫ್ತಾರ್ ಕೂಟ’ದ ನಡೆಯನ್ನು ‘ಅವರೊಳಗಿನ ಮಾನವೀಯ ಕಳಕಳಿಯ ಪ್ರಚೋದನೆ’ ಎಂದು ಸಾರಿದ ಪ್ರೊ. ರಾಜಾರಾಮ ತೋಳ್ಪಾಡಿ ಮತ್ತು ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅವರ ಅಭಿಪ್ರಾಯ (ಪ್ರ.ವಾ., ಚರ್ಚೆ, ಜುಲೈ 5) ಅಚ್ಚರಿ ಉಂಟುಮಾಡಿದೆ.

ಪೇಜಾವರ ಶ್ರೀಗಳ ನಡೆಯಿಂದ ಭಾವೋದ್ವೇಗಕ್ಕೆ ಒಳಗಾದಂತೆ ಕಾಣುತ್ತಿರುವ  ಲೇಖಕರು, ಸಂಘ ಪರಿವಾರದೊಳಗಿನ ಬಂಡುಕೋರ ಪ್ರಮೋದ ಮುತಾಲಿಕ್ ಅವರ ವಿರೋಧಕ್ಕೆ ಪ್ರತಿಕ್ರಿಯೆ ನೀಡುವ ಆವೇಶದಲ್ಲಿ ಶ್ರೀಗಳನ್ನು  ನಾರಾಯಣ ಗುರುಗಳಿಗೆ ಹೋಲಿಸುವ ಮಟ್ಟಕ್ಕೆ ಮುನ್ನುಗ್ಗಿರುವುದು ವಿಷಾದನೀಯ.

ಹಾಗಿದ್ದರೆ ಸ್ವಾಮೀಜಿ ನಿಗೂಢ ನಡೆಯ ಉದ್ದೇಶಗಳಾದರೂ ಏನು? ಮೊದಲನೆಯದಾಗಿ, ಇದೊಂದು ಸಂಘ ಪರಿವಾರದ ಹಳೆಯ ಕಾರ್ಯತಂತ್ರ. ಸೌಮ್ಯವಾದಿ- ಉಗ್ರವಾದಿ ನಾಯಕರನ್ನು ಹಾಗೂ ಅಂತಹವರನ್ನು ಪೋಷಿಸುವ ಸಂಘಟನೆಗಳನ್ನು ತಮ್ಮೊಳಗೆ ಹುಟ್ಟುಹಾಕಿ ಪರ-ವಿರೋಧದ ಲಾಭಗಳೆರಡೂ ತಮ್ಮ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳುವುದು ಇದರ ಹಿಂದಿನ ಉದ್ದೇಶ.

ಇಲ್ಲಿಯೂ ಮುತಾಲಿಕ್ ಬೆಂಬಲಿಗರು ಮತ್ತು ಪೇಜಾವರರ ಭಕ್ತರು ಚುನಾವಣೆ ಎದುರಾದಾಗ ಯಾರಿಗೆ ಮತ ಹಾಕುತ್ತಾರೆಂದು ತಿಳಿದುಕೊಳ್ಳಲು ಮತಪೆಟ್ಟಿಗೆ ಒಡೆದು ನೋಡಬೇಕಾಗಿಲ್ಲ. ಆದರೆ ಸಂಘ ಪರಿವಾರ ಇಂತಹದ್ದೊಂದು ಹುಸಿ ವಾಗ್ವಾದವನ್ನು ಹುಟ್ಟುಹಾಕುವ ಮೂಲಕ ಒಡ್ಡಿರುವ ಖೆಡ್ಡಾಕ್ಕೆ ಒಬ್ಬೊಬ್ಬರೇ ಬೀಳುತ್ತಿರುವುದು ಮಾತ್ರ ಕಳವಳಕಾರಿಯಾದುದು.

ಎರಡನೆಯದಾಗಿ, ಇದು ಪೇಜಾವರ ಸ್ವಾಮಿಗಳ ‘Image building’ ಕಸರತ್ತು ಇರಬಹುದೇನೋ ಎಂಬ ಸಂಶಯವೂ ಇದೆ. ಹೋಲಿಕೆಗಾಗಿ ಪ್ರಮೋದ ಮುತಾಲಿಕ್ ಎಂಬ ಪ್ರತಿನಾಯಕನನ್ನು ಎದುರು ನಿಲ್ಲಿಸಿದರೆ ವಿರೋಧಿಗಳ ದೃಷ್ಟಿಯಲ್ಲಿಯೂ ಪೇಜಾವರರು ಇನ್ನಷ್ಟು ಎತ್ತರಕ್ಕೆ ಹೋಗಿಯೇ ಹೋಗುತ್ತಾರೆ. ‘ಸ್ವಾಮಿ ವಿವೇಕಾನಂದರ ನಂತರ ನಮಗೊಬ್ಬ ಹಿಂದೂ ಸ್ವಾಮಿ ಇಲ್ಲ. ಪೇಜಾವರರು ಮಠದಿಂದ ಹೊರಬಂದು ಹಿಂದೂ ಸ್ವಾಮಿಯಾಗಿ ಧರ್ಮಜಾಗೃತಿ ಮಾಡುವಂತೆ ಕೇಳಿಕೊಳ್ಳುತ್ತಿದ್ದೇವೆ’ ಎಂದು Image building ಕಸರತ್ತಿನಲ್ಲಿ ಸಕ್ರಿಯರಾಗಿದ್ದ ಆರ್‌ಎಸ್‌ಎಸ್‌ನ ಪ್ರಮುಖ ಕಾರ್ಯಕರ್ತರೊಬ್ಬರು ಹಿಂದೊಮ್ಮೆ ನನ್ನೊಡನೆ ಹೇಳಿದ್ದು ನೆನಪಾಗುತ್ತಿದೆ.

ಮೂರನೆಯದಾಗಿ, ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಮತದಿಂದ ಸಹಕರಿಸುವಂತೆ ಮಾಡುವ ಪ್ರಯತ್ನವನ್ನು ಸಂಘ ಪರಿವಾರ ದೇಶದಾದ್ಯಂತ ಬೇರೆಬೇರೆ ಕಾರ್ಯತಂತ್ರಗಳ ಮೂಲಕ ಪ್ರಾರಂಭಿಸಿದೆ. ಬಿಜೆಪಿ ಇಫ್ತಾರ್ ಕೂಟ ಕೂಡಾ ಆ ಕಾರ್ಯತಂತ್ರಗಳಲ್ಲೊಂದು ಎಂದು ಹೇಳಲಾಗುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳ  ನಡೆಯ ಹಿಂದಿನ ಪ್ರಾಮಾಣಿಕತೆಯನ್ನು ನೋಡಬೇಕಾಗಿದೆ. ‘ಜನಾಂಗೀಯ ರಾಷ್ಟ್ರೀಯವಾದದಿಂದ ಉನ್ಮತ್ತಗೊಂಡ ರಾಜಕೀಯದ ಹಿಂದುತ್ವದ ನಶೆ ಏರಿಸಿಕೊಂಡ ಸಂಘಟನೆಗಳು’ ಎಂದು ಪೇಜಾವರರ ವಿರೋಧಿ ಹಿಂದೂ ಸಂಘಟನೆಗಳನ್ನು ಟೀಕಿಸಿರುವ ಲೇಖಕರು, ಪೇಜಾವರರು ಅವುಗಳಿಂದ ಹೊರಗೆ ಬಂದಿದ್ದಾರೆ ಎನ್ನುವ ಅರ್ಥದಲ್ಲಿ ವಿಶ್ಲೇಷಿಸಿದ್ದಾರೆ.

‘ಹಿಂದುತ್ವದ ನಶೆಯೇರಿಸಿಕೊಂಡ ಸಂಘಟನೆ’ಗಳಲ್ಲಿ ಮುಂಚೂಣಿಯಲ್ಲಿರುವ ಆರ್‌ಎಸ್‌ಎಸ್ ಬಗ್ಗೆ ಪೇಜಾವರರು ಒಂದು ಸಣ್ಣ ಭಿನ್ನಾಭಿಪ್ರಾಯವನ್ನೂ ಇಲ್ಲಿಯವರೆಗೆ ಹೊರಹಾಕಿಲ್ಲ. ಈಗಲೂ ಸ್ವಾಮೀಜಿ ಬೆಂಬಲಕ್ಕೆ ನಿಂತಿರುವುದು ಆರ್‌ಎಸ್‌ಎಸ್, ವಿಎಚ್‌ಪಿ ಮೊದಲಾದ ಸಂಘಟನೆಗಳಲ್ಲವೇ?

ಪ್ರತಿಯೊಬ್ಬ ವ್ಯಕ್ತಿಯೂ ತಾನು ಮಾಡುತ್ತಿರುವ ವೃತ್ತಿಯನ್ನು ನಿಷ್ಠೆ-ಪ್ರಾಮಾಣಿಕತೆಯಿಂದ ಮಾಡಿದರೆ ಅದಕ್ಕಿಂತ ದೊಡ್ಡ ಸಮಾಜಸೇವೆ ಬೇರೆ ಇಲ್ಲ. ಶಿಕ್ಷಕನೊಬ್ಬ ಊರಿನ ರಸ್ತೆ-ನೀರಿಗಾಗಿ ಹೋರಾಟ ನಡೆಸಿದರೆ ತಪ್ಪಲ್ಲ, ಆದರೆ ಆ ಶಿಕ್ಷಕ ತರಗತಿಯಲ್ಲಿ ಪಾಠ ಮಾಡದೆ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಿ ಹೊರಗೆ ಬಂದು ಸಮಾಜಸೇವೆ ನಡೆಸುವುದು ಜನದ್ರೋಹದ ಕೆಲಸ.

ಅದೇ ರೀತಿ ಹಿಂದೂ ಧರ್ಮದ ಸ್ವಾಮೀಜಿಗಳ ಮೊದಲ ಆದ್ಯತೆ ಹಿಂದೂ ಧರ್ಮದ ಸುಧಾರಣೆ. ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳು ಕೋಮು ಸೌಹಾರ್ದಕ್ಕಾಗಿ ಹೋರಾಟ ನಡೆಸಲಿಲ್ಲ. ಅವರು ಮೊದಲು ತಮ್ಮ ಮನೆಯೊಳಗಿನ ಹೊಲಸು ತೊಳೆಯುವ ಕೆಲಸ ನಡೆಸಿದರು. ಹಿಂದೂ ಧರ್ಮ ಈಗಲೂ ದೇಶದ ಬಹುಜನರ ನಂಬಿಕೆಯಾಗಿ ಉಳಿದಿದ್ದರೆ ಅದಕ್ಕೆ ಮುಖ್ಯ ಕಾರಣ ಧಾರ್ಮಿಕ ಚಳವಳಿಗೆ ಇದಿರಾಗಿ ಅದರೊಳಗೆಯೇ ಹುಟ್ಟಿಕೊಂಡ ಪ್ರತಿಭಟನಾ ಚಳವಳಿಗಳು ಕಾರಣ ಎನ್ನುವುದನ್ನು ನಿರಾಕರಿಸಲಾದೀತೇ?

ಹಿಂದೂ ಧರ್ಮ ಎಷ್ಟೊಂದು ಜಡ್ಡುಗಟ್ಟಿ ಹೋಗಿದೆಯೆಂದರೆ ಅದನ್ನು ‘ದಲಿತರ ಕೇರಿಗೆ ಭೇಟಿ’, ‘ದಲಿತರಿಗೊಬ್ಬರು ಸ್ವಾಮೀಜಿ ನೇಮಕ’ ಮೊದಲಾದ ‘ಮೈ ಚಿವುಟುವಂತಹ’ ಕ್ರಮಗಳಿಂದ ಸುಧಾರಿಸಲಾಗದು. ಬದಲಾವಣೆಯಾಗಬೇಕಾದರೆ ಅದಕ್ಕೆ ‘ಶಾಕ್ ಟ್ರೀಟ್‌ಮೆಂಟ್’ ಬೇಕು. ಬಸವಣ್ಣನವರು ಸಮಗಾರ ಹರಳಯ್ಯನ ಮಗನಿಗೆ, ಬ್ರಾಹ್ಮಣ ಸಮುದಾಯದ ಮಧುವರಸನ ಮಗಳನ್ನು  ಮದುವೆ ಮಾಡಿದಾಗ, ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದೊಳಗಿನ ಪುರೋಹಿತಶಾಹಿಯನ್ನು  ಪ್ರಶ್ನಿಸಿದಾಗ,  ನಾರಾಯಣ ಗುರುಗಳು ಲಿಂಗ ಸ್ಥಾಪನೆ ಮಾಡಿ ಇದು ‘ಈಳವರ ಶಿವ’ ಎಂದು ವಿರೋಧಿಗಳ ಬಾಯಿ ಮುಚ್ಚಿಸಿದಾಗ, ಹಿಂದೂ ಧರ್ಮ ಅಂತಹದ್ದೊಂದು ಶಾಕ್ ಟ್ರೀಟ್‌ಮೆಂಟ್‌ಗೆ ಬೆಚ್ಚಿಬಿದ್ದಿತ್ತು.ಅಂತಹ ಧೈರ್ಯ ಪೇಜಾವರ ಶ್ರೀಗಳಿಗೆ ಇದೆಯೇ?

ಎಂಟನೇ ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ್ದ ಸ್ವಾಮೀಜಿ ತಮ್ಮ 80 ವರ್ಷದ ಸನ್ಯಾಸಿ ಜೀವನದಲ್ಲಿ ಇಲ್ಲಿಯವರೆಗೆ ಜಾತೀಯತೆ, ಅಸ್ಪೃಶ್ಯತೆ, ಕೋಮುವಾದ ಇತ್ಯಾದಿ ವಿಷಯಗಳ ಬಗ್ಗೆ ಸಾಮಾನ್ಯ ವೈದಿಕ ಸ್ವಾಮಿಯವರಂತೆ ನಡೆದುಕೊಂಡಿದ್ದಾರೆಯೇ ಹೊರತು ಎಂದೂ ಸಂಪ್ರದಾಯದ ಗೆರೆಯನ್ನು ದಾಟಿರಲಿಲ್ಲ. ವಿದೇಶಕ್ಕೆ ಹೋಗಿಬಂದರೆಂಬ ಕಾರಣಕ್ಕೆ ತನ್ನ ಉತ್ತರಾಧಿಕಾರಿಯನ್ನು ಮನೆಗೆ ಕಳುಹಿಸಿದ ನಿಲುವಿನಿಂದ ಹಿಡಿದು ‘ಉಡುಪಿ ಚಲೋ’ ಕಾರ್ಯಕ್ರಮದಲ್ಲಿ ದಲಿತ-ದಮನಿತರು ಬಂದು ಬೀದಿಯಲ್ಲಿ ಅಡ್ಡಾಡಿದರೆಂಬ ಕಾರಣಕ್ಕೆ ಮಠ ಶುದ್ಧೀಕರಿಸುವವರೆಗೆ ಎಲ್ಲವೂ ಒಬ್ಬ ಕಟ್ಟಾ ಸಂಪ್ರದಾಯವಾದಿ ಸ್ವಾಮಿಗಳ ರೀತಿಯಲ್ಲಿಯೇ ಅವರು ವರ್ತಿಸುತ್ತಾ ಬಂದಿದ್ದಾರೆ.

ಈ ನಡುವೆ ಆಗಾಗ ದಲಿತರ ಕೇರಿಗೆ ಭೇಟಿ ನೀಡಿ ಸುದ್ದಿ ಮಾಡುವುದನ್ನು ಹೊರತುಪಡಿಸಿದರೆ ಅವರೆಂದೂ ಹಿಂದೂ ಧರ್ಮದ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ ಎನ್ನುವುದಕ್ಕೆ ನಂಬಲರ್ಹ ಪುರಾವೆಗಳು ಸಿಗುವುದಿಲ್ಲ.

ರಾಮಜನ್ಮ ಚಳವಳಿಯ ಮುಂಚೂಣಿಯಲ್ಲಿದ್ದದ್ದು ವಿಶ್ವ ಹಿಂದೂ ಪರಿಷತ್. ಆ ಚಳವಳಿಯು ಬಾಬರಿ ಮಸೀದಿ ಧ್ವಂಸದಲ್ಲಿ ಕೊನೆಗೊಂಡಾಗ ವಿಎಚ್‌ಪಿ ಉಪಾಧ್ಯಕ್ಷರಾಗಿದ್ದವರು ಪೇಜಾವರ  ಸ್ವಾಮೀಜಿ. ದೇಶದಲ್ಲಿ ಕೋಮುವಾದದ ಕರಾಳ ಯುಗಕ್ಕೆ ನಾಂದಿ ಹಾಡಿದ ಆ ಘಟನೆ ನಡೆದಾಗ ಮೌನವಾಗಿದ್ದ ಸ್ವಾಮಿಗಳು ಈಗ ‘ಅದನ್ನು ತಡೆಯಲು ಪ್ರಯತ್ನಿಸಿದ್ದೆ’ ಎಂಬ ಹೇಳಿಕೆ ನೀಡಿ ಜಾರಿಕೊಳ್ಳುತ್ತಾರೆ. ‘ಹಿಂದೂ-ಮುಸ್ಲಿಂ ಘರ್ಷಣೆಯ ಕಾಲದಲ್ಲಿ ಸ್ವಾಮೀಜಿ ನಮ್ಮೊಳಗೆ ಕೋಮುದ್ವೇಷದ ವಿಷಬೀಜ ಬಿತ್ತುವ ಬದಲಿಗೆ ಸೌಹಾರ್ದದ ಬಗ್ಗೆ ಯಾಕೆ ಮಾತನಾಡಿಲ್ಲ?’ ಎಂಬ ಶ್ರೀರಾಮ ಸೇನೆಯ ನಾಯಕನ ಪ್ರಶ್ನೆಗೆ ಸ್ವಾಮೀಜಿ ಇನ್ನೂ ಉತ್ತರಿಸಿಲ್ಲ.

ಪೇಜಾವರ ಶ್ರೀಗಳನ್ನು ನಾರಾಯಣ ಗುರುಗಳ ಜತೆ ಹೋಲಿಸಲು ಹೊರಟವರಿಗೆ ವಿನಮ್ರದಿಂದ ಸಣ್ಣದೊಂದು ಸವಾಲು. ‘ನಾರಾಯಣ ಗುರುಗಳ ತತ್ವವನ್ನು ಒಪ್ಪುತ್ತೇನೆ’ ಎಂದು ಪೇಜಾವರ ಸ್ವಾಮೀಜಿ ಬಾಯಿಯಿಂದ ಒಮ್ಮೆ ಹೇಳಿಸಿಬಿಡಿ. ಸವಾಲು ಸರಳವಾದುದು ನಿಜ, ಆದರೆ  ನಾರಾಯಣ ಗುರುಗಳನ್ನು ಒಪ್ಪುವುದೆಂದರೆ ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸುವುದು. ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸುವುದೆಂದರೆ ಪೂಜೆ ಮಾಡುವ ಹಕ್ಕನ್ನು ಶೂದ್ರರು-ದಲಿತರು ಸೇರಿದಂತೆ ಎಲ್ಲರಿಗೂ ನೀಡುವುದು ಎನ್ನುವುದನ್ನು ಮೊದಲೇ ಅವರಿಗೆ ತಿಳಿಸಿಬಿಡಿ.

ಮಠದೊಳಗೆ ಸಹಪಂಕ್ತಿ ಭೋಜನದಂತಹ ಸಣ್ಣ ಸುಧಾರಣೆಯನ್ನು ತರಲು ನಿರಾಕರಿಸುವ, ಸಂಪ್ರದಾಯ ಮುರಿದು ಬ್ರಾಹ್ಮಣರ ಜತೆಯಲ್ಲಿ ಊಟಕ್ಕೆ ಕೂತಿದ್ದ ಬಂಟ ಮಹಿಳೆಯನ್ನು ಎಬ್ಬಿಸಿ ಹೊರಗೆ ಕಳುಹಿಸಿದಾಗ ಬಾಯಿ ಮುಚ್ಚಿಕೊಂಡಿದ್ದ ಸ್ವಾಮಿಗಳು ಬಿಜೆಪಿಯ ಮುಸ್ಲಿಂ ಘಟಕದ ಪದಾಧಿಕಾರಿಗಳ ಜತೆಗೂಡಿ ಮಠದಲ್ಲಿ ಇಫ್ತಾರ್ ಕೂಟ ನಡೆಸಿದ ಕೂಡಲೇ  ಅವರು ‘ಲೋಕದ ಆತಂಕಕ್ಕೆ ಸ್ಪಂದಿಸಲು ಹೊರಟಿದ್ದಾರೆ’ ಎಂದೆಲ್ಲಾ ವ್ಯಾಖ್ಯಾನಿಸುವುದು ಅವಸರದ್ದು ಮಾತ್ರವಲ್ಲ ಅಪಾಯಕಾರಿ ನಿಲುವು ಕೂಡಾ ಆಗಿದೆ.

ಪ್ರತಿಕ್ರಿಯಿಸಿ (+)