ಸೋಮವಾರ, ಡಿಸೆಂಬರ್ 16, 2019
23 °C

ಉತ್ತರ ಕೊರಿಯಾ ಬೆದರಿಕೆ ಮಾತುಕತೆಯೇ ಸೂಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಕೊರಿಯಾ ಬೆದರಿಕೆ  ಮಾತುಕತೆಯೇ ಸೂಕ್ತ

ಅಮೆರಿಕವನ್ನು ತಲುಪಬಹುದಾದ ಖಂಡಾಂತರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವುದು ಉತ್ತರ ಕೊರಿಯಾಗೆ  ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಡೊನಾಲ್ಡ್ ಜೆ. ಟ್ರಂಪ್ ಅವರು ಜನವರಿ ತಿಂಗಳಲ್ಲಿ ಟ್ವೀಟ್ ಮಾಡಿದ್ದರು.

ಆದರೆ ಇಂತಹದೊಂದು ಗುರಿ ಸಾಧನೆಗೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಎಷ್ಟು ಹತ್ತಿರವಾಗಿದ್ದಾರೆ ಹಾಗೂ ಈ ವಿಚಾರದಲ್ಲಿ ಅವರನ್ನು ತಡೆಯಲು ಅಮೆರಿಕ ಅಧ್ಯಕ್ಷರಿಗಿರುವ ಆಯ್ಕೆಗಳೂ ಎಷ್ಟು ಸೀಮಿತವಾಗಿವೆ ಎಂಬುದು ಬಹುಶಃ  ಟ್ರಂಪ್ ಅರಿವಿಗೆ  ಆಗ ನಿಲುಕಿರಲಿಲ್ಲ. 

ಸದ್ಯದ  ಬೆಳವಣಿಗೆಗಳು ಇದನ್ನು ದೃಢಪಡಿಸುತ್ತಿವೆ. ಏಕೆಂದರೆ, ತನ್ನ ಮೊದಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂಬಂತಹ ಹೇಳಿಕೆಯನ್ನು ಉತ್ತರ ಕೊರಿಯಾ ಮಂಗಳವಾರ ಬಿಡುಗಡೆ ಮಾಡಿದೆ. ಅಮೆರಿಕವನ್ನು ಗುರಿಯಾಗಿಸಿಕೊಂಡು ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ಮಾಡುತ್ತಿರುವ ಉತ್ತರ ಕೊರಿಯಾದ ಪ್ರಯತ್ನಕ್ಕೆ ಲಭಿಸಿರುವ ಈ ಯಶಸ್ಸು ಆತಂಕಕಾರಿಯಾದದ್ದು. 

ಈಗಾಗಲೇ ಪ್ರಬಲ ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರ ಉತ್ತರ ಕೊರಿಯಾ. ಇನ್ನು ಅದು ಖಂಡಾಂತರ ಕ್ಷಿಪಣಿಯ ಸಾಮರ್ಥ್ಯ  ಪಡೆದುಕೊಂಡಿರುವುದು ಆತಂಕವನ್ನು ಇನ್ನಷ್ಟು ತೀವ್ರಗೊಳಿಸುವಂತಹದ್ದು.  ಅಮೆರಿಕದ ಅಲಾಸ್ಕಾ ಮೇಲೆ ದಾಳಿ ಮಾಡಬಹುದಾದ ಸಾಮರ್ಥ್ಯ ಈ ಕ್ಷಿಪಣಿಗಿದೆ.  ಈ ಸಾಧ್ಯತೆ ಎಲ್ಲಾ ಲೆಕ್ಕಾಚಾರಗಳನ್ನೂ ಬದಲಿಸುವಂತಹದ್ದು.

ಇಂತಹ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಜೊತೆ ಜಂಟಿ ಸಮರಾಭ್ಯಾಸ ನಡೆಸುವ ಮೂಲಕ ಉತ್ತರ ಕೊರಿಯಾದ ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಅಮೆರಿಕ ಪ್ರತ್ಯುತ್ತರ ನೀಡಿದೆ. ದಕ್ಷಿಣ ಕೊರಿಯಾಕ್ಕೆ ಸೇರಿದ ನಿರ್ದಿಷ್ಟ ಜಲ ಪ್ರದೇಶದಲ್ಲಿ ಕ್ಷಿಪಣಿ ಇಳಿಸುವ ಮೂಲಕ ತಮ್ಮ ನಿಖರ ದಾಳಿ  ಸಾಮರ್ಥ್ಯವನ್ನು ಅದು ಪ್ರದರ್ಶಿಸಿದೆ. ಆದರೆ ಇಂತಹ ಕಸರತ್ತುಗಳು ಎಷ್ಟು  ಫಲಕಾರಿ ಎಂಬುದು ಪ್ರಶ್ನೆ.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಣ್ವಸ್ತ್ರ ಪ್ರಯೋಗದ ಭೀತಿಯನ್ನು ಒಡ್ಡಿಕೊಂಡೇ ಬಂದಿದ್ದಾರೆ. 2011ರಲ್ಲಿ ಅಧಿಕಾರಕ್ಕೆ ಏರಿದಾಗಲಿಂದಲೂ ಅವರು  ಕ್ಷಿಪಣಿ ಕಾರ್ಯಕ್ರಮ ವಿಸ್ತರಿಸುತ್ತಲೇ ಬಂದಿದ್ದಾರೆ. ಅಮೆರಿಕಕ್ಕೆ ಸವಾಲೊಡ್ಡುವುದು ಉತ್ತರ ಕೊರಿಯಾ  ವಿದೇಶಾಂಗ ನೀತಿಯ ಪ್ರಮುಖ ತತ್ವವಾಗಿದೆ.  ಆದರೆ ಈ ವಿಚಾರದಲ್ಲಿ ಯಾವುದೇ ಗೆರೆ ದಾಟುವುದು ಆತ್ಮಹತ್ಯಾಕಾರಿ ನಡೆ ಎಂಬುದನ್ನು ಉತ್ತರ ಕೊರಿಯಾ ತಿಳಿಯಬೇಕು. 

ವಿಶ್ವ ಶಾಂತಿಗೆ ಆತಂಕ ಒಡ್ಡುವಂತಹ ನಡೆ ಸೃಷ್ಟಿಸುವ ತಲ್ಲಣ ತೀವ್ರವಾದದ್ದು. ‘ಜಾಗತಿಕ ಆತಂಕವನ್ನು ತಡೆಯಲು ಜಾಗತಿಕ ನೆಲೆಯಲ್ಲೇ ಕ್ರಮ ಕೈಗೊಳ್ಳಬೇಕು’ ಎಂಬಂತಹ ಅಭಿಪ್ರಾಯವನ್ನು ಅಮೆರಿಕದ ವಿದೇಶಾಂಗ ಸಚಿವಾಲಯ ವ್ಯಕ್ತಪಡಿಸಿದೆ. ಆದರೆ  ಉತ್ತರ ಕೊರಿಯಾ  ಅನೇಕ ನಿರ್ಬಂಧಗಳನ್ನು  ಈಗಾಗಲೇ ಎದುರಿಸುತ್ತಿದೆ.  ಇನ್ನೂ ಹೆಚ್ಚಿನ ನಿರ್ಬಂಧಗಳಿಂದ ಹೆಚ್ಚು ಪ್ರಯೋಜನವಾಗುವಂತೇನೂ ಕಾಣುತ್ತಿಲ್ಲ.

ಜೊತೆಗೆ ಪ್ರತೀಕಾರಾತ್ಮಕ ಕ್ರಮಗಳು ಉತ್ತಮ ಫಲಿತಾಂಶ ತರುವುದು ಸಾಧ್ಯವಿಲ್ಲ. ಸದ್ಯದ ಸ್ಥಿತಿಯಲ್ಲಿ ಮಾತುಕತೆಯೇ ಪರಿಹಾರ.  ಅದು ಕಷ್ಟಕರ ಎನಿಸಬಹುದು. ಆದರೆ ಅದು ಹೆಚ್ಚು ವಾಸ್ತವವಾದಿ ಆಯ್ಕೆಯಾಗಿ ಕಾಣಿಸುತ್ತದೆ. ಈ ಅಸಂಬದ್ಧ ಪ್ರಯೋಗದ ಮೇಲೆ ಒತ್ತಡ ಹೇರಬೇಕು ಎಂದು ಟ್ರಂಪ್ ಅವರು ಉತ್ತರ ಕೊರಿಯಾದ ಪ್ರಮುಖ ಮಿತ್ರ ರಾಷ್ಟ್ರವಾದ ಚೀನಾವನ್ನು ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ. ಯುದ್ಧೋನ್ಮಾದಿ ಕಿಮ್‌ ಅವರನ್ನು ಸಂಧಾನ ಮೇಜಿಗೆ ಕರೆತರಲು ಅಮೆರಿಕ ಮತ್ತು ಚೀನಾ ಪ್ರಯತ್ನಿಸುವುದು ಸೂಕ್ತ.

ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್  ಜೆ ಇನ್ ಅವರೂ ಈ ಬಿಕ್ಕಟ್ಟನ್ನು ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಎದುರಿಸಲು ಬದ್ಧವಾಗಿರುವುದು ಸಕಾರಾತ್ಮಕವಾದದ್ದು. 1994ರಲ್ಲಿ ಅಮೆರಿಕ ನೇತೃತ್ವದಲ್ಲಿ ವಿಶ್ವ ನಾಯಕರ ಜೊತೆ ಒಪ್ಪಂದವಾದ ನಂತರ ಸುಮಾರು ಒಂದು ದಶಕ ಕಾಲ ಉತ್ತರ ಕೊರಿಯಾ ಅಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ ಇತಿಹಾಸವೂ ಇದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. 

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾತುಕತೆ ನಡೆಸುವುದು ಯಾವಾಗಲೂ ಪ್ರಯೋಜನಕಾರಿ. ಸದ್ಯದ ಪರಿಸ್ಥಿತಿಯಲ್ಲಂತೂ ಶಾಂತಿ ಸಂಧಾನಗಳ ಮಾರ್ಗವೇ  ಉತ್ತಮ ಆಯ್ಕೆ.

ಪ್ರತಿಕ್ರಿಯಿಸಿ (+)