ಮಂಗಳವಾರ, ಡಿಸೆಂಬರ್ 10, 2019
17 °C
ಜೆಡಿಎಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಕೊನೆ ಬೆಂಚ್‌: ಪ್ರಜ್ವಲ್ ರೇವಣ್ಣ

‘ಸೂಟ್‌ಕೇಸ್‌’ ನಾಯಕರಿಗೆ ಮಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸೂಟ್‌ಕೇಸ್‌’ ನಾಯಕರಿಗೆ ಮಣೆ

ಹುಣಸೂರು: ‘ಜೆಡಿಎಸ್‌ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಕೊನೆ ಬೆಂಚ್‌. ಸೂಟ್‌ಕೇಸ್‌ ಜತೆ ಬರುವ ನಾಯಕರಿಗೆ ಮುಂದಿನ ಬೆಂಚ್‌ ಎನ್ನುವಂತಾಗಿದೆ. ಈ ಸಂಸ್ಕೃತಿ ಹೋಗಬೇಕಾಗಿದೆ’ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ನಡೆದ ಜೆಡಿಎಸ್ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಜೆಡಿಎಸ್‌ ಕಟ್ಟಿ ಬೆಳೆಸುವಲ್ಲಿ ದೇವೇಗೌಡರ ಕುಟುಂಬ ಶ್ರಮಿಸಿದೆ. ಆ ಕುಟುಂಬದ ಕುಡಿಯಾಗಿ ರಾಜಕೀಯದಲ್ಲಿ ಬೆಳೆಯಬೇಕೆಂಬ ಆಸೆ ಇದ್ದರೂ ಕೆಲವರ ಕುತಂತ್ರದಿಂದ ತಾತ ದೇವೇಗೌಡ ಅವರ ರಾಜಕೀಯ ಆಶೀರ್ವಾದ ಇಲ್ಲವಾಗಿದೆ.

ಆರು ವರ್ಷದ ಹಿಂದೆ ಬೇಲೂರು ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಜನರ ವಿಶ್ವಾಸ ಗಳಿಸಿದ್ದೆ. ಆದರೂ ಅವಕಾಶ ಸಿಗಲಿಲ್ಲ. ಹುಣಸೂರು ಕ್ಷೇತ್ರದಲ್ಲಿ ಪಕ್ಷ ಒಡೆದು ಹೋಗುವ ಪರಿಸ್ಥಿತಿ ಎದುರಾಗುತ್ತಿದ್ದಂತೆ ತಾಲ್ಲೂಕಿಗೆ ಭೇಟಿ ನೀಡಿ ಹಿರಿಯರೊಂದಿಗೆ ಮಾತುಕತೆ ನಡೆಸಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ’ ಎಂದರು.

‘ಹುಣಸೂರು ಅಥವಾ ಬೇಲೂರು ಕ್ಷೇತ್ರದಿಂದ ರಾಜಕೀಯಕ್ಕೆ ಧುಮುಕುವ ಆಸೆ ಇದ್ದರೂ ಕಾಲ ಪಕ್ವವಾಗಿಲ್ಲ. ಹೀಗಾಗಿ, ಪಕ್ಷ ಕಟ್ಟುವ ದಿಕ್ಕಿನಲ್ಲಿ ಹೊರಟಿದ್ದೇನೆ. ಜೆಡಿಎಸ್‌ ಅಧಿಕಾರಕ್ಕೆ ತಂದು ಚಿಕ್ಕಪ್ಪ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಹೊಂದಿದ್ದೇನೆ’ ಎಂದು ಹೇಳಿದರು.

‘ಹುಣಸೂರು ಕ್ಷೇತ್ರದಲ್ಲಿ 4 ವರ್ಷದ ಹಿಂದೆ ಪಕ್ಷಾಂತರ ಮಾಡಿ ರಾಜಕೀಯ ಅಸ್ಥಿರತೆಯಿಂದ ಬಳಲುತ್ತಿದ್ದ ನಾಯಕರೊಬ್ಬರನ್ನು ದೇವೇಗೌಡರ ಕುಟುಂಬ ಕೈ ಹಿಡಿಯಿತು. ಅದೇ ರೀತಿ, ರಾಜಕೀಯ ಜೀವನದ ಸಂಧ್ಯಾಕಾಲ ಎದುರಿಸುತ್ತಿದ್ದ ನಾಯಕ ಸಮಾಜದ ಮುಖಂಡರೊಬ್ಬರ ಕೈ ಹಿಡಿದು ರಾಜಕೀಯ ಜೀವ ನೀಡಿತು.

ಆದರೆ, ಈ ಇಬ್ಬರೂ ದೇವೇಗೌಡರ ಕುಡಿ ಬೆಳೆಯಲು ಬಿಡಲಿಲ್ಲ. ಇನ್ನೂ ಸಾಮಾನ್ಯ ಕಾರ್ಯಕರ್ತರ ಬೆಳವಣಿಗೆ ಸಹಿಸುತ್ತಾರೆಯೆ?’ ಎಂದು ಹೆಸರು ಪ್ರಸ್ತಾಪಿಸದೆ ಶಾಸಕರಾದ ಜಿ.ಟಿ.ದೇವೇಗೌಡ, ಚಿಕ್ಕಮಾದು ವಿರುದ್ಧ ಕಿಡಿಕಾರಿದರು.

ಪ್ರತಿಕ್ರಿಯಿಸಿ (+)