ಶನಿವಾರ, ಡಿಸೆಂಬರ್ 14, 2019
20 °C
ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಮತ್ರಿ ಸಿದ್ದರಾಮಯ್ಯ ಹೇಳಿಕೆ

ಕಂದಾಯ ಆಯುಕ್ತಾಲಯ ಸ್ಥಾಪನೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂದಾಯ ಆಯುಕ್ತಾಲಯ ಸ್ಥಾಪನೆಗೆ ಚಿಂತನೆ

ಬೆಂಗಳೂರು: ‘ಕಂದಾಯ ವಿಭಾಗಗಳನ್ನು ರದ್ದುಪಡಿಸಿ ಆಯುಕ್ತಾಲಯ ಸ್ಥಾಪನೆ ಮಾಡಲು ಗಂಭೀರ ಚಿಂತನೆ ಮಾಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘವು ನಗರದ ಅರಮನೆ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಕಂದಾಯ ದಿನಾಚರಣೆ ಹಾಗೂ ರಾಜ್ಯಮಟ್ಟದ ಕಂದಾಯ ನೌಕರರ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘1998ರಲ್ಲಿ ಜೆ.ಎಚ್‌.ಪಟೇಲ್‌ ಅವರ ಸರ್ಕಾರದಲ್ಲಿ ನಾನು ಉಪ ಮುಖ್ಯಮಂತ್ರಿ ಆಗಿದ್ದೆ. ಆಗಲೇ ಕಂದಾಯ ವಿಭಾಗಗಳನ್ನು ತೆಗೆದು ಹಾಕಿ ಎಂದು ಶಿಫಾರಸು ಮಾಡಿದ್ದೆ’ ಎಂದು ಹೇಳಿದರು.

‘ಗ್ರಾಮ ಲೆಕ್ಕಾಧಿಕಾರಿಗಳ ವೇತನ ತಾರತಮ್ಯವನ್ನು ನನ್ನ ಗಮನಕ್ಕೆ ತಂದಿದ್ದೀರಿ. ಆರನೇ ವೇತನ ಆಯೋಗದ ಮುಂದೆ ನಿಮ್ಮ ಬೇಡಿಕೆಗಳನ್ನು ಮಂಡಿಸಿರಿ. ಆಯೋಗವು ಮಾಡುವ ಶಿಫಾರಸು ಆಧರಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

‘ಗ್ರಾಮ ಸಹಾಯಕರನ್ನು ಕಾಯಂ ಮಾಡುವ ಸಂಬಂಧ ಕಂದಾಯ, ಕಾನೂನು ಹಾಗೂ ಹಣಕಾಸು ಇಲಾಖೆಗಳ ಅಧಿಕಾರಿಗಳ ಜತೆ ಸಭೆಗಳನ್ನು ನಡೆಸಿದ್ದೆ. ಕಾಯಂ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಸುಪ್ರೀಂಕೋರ್ಟ್‌ನ ಆದೇಶ ಇದಕ್ಕೆ ಅಡ್ಡಿ ಬರುತ್ತದೆ ಎಂದು ಕೆಲ ಅಧಿಕಾರಿಗಳು ಹೇಳಿದ್ದರು. ಆದರೆ, ಎಲ್ಲಕ್ಕಿಂತ ಮಾನವೀಯತೆ ಮುಖ್ಯ. ಹೀಗಾಗಿ ಕಾಯಂಗೊಳಿಸುವ ಕುರಿತು ಕಾನೂನು ಇಲಾಖೆಯು ಶಿಫಾರಸು ಮಾಡಿದರೆ,  ಅದನ್ನು ಪರಿಗಣಿಸುತ್ತೇನೆ’ ಎಂದು ಹೇಳಿದರು.

‘ಬೇರೆ ಇಲಾಖೆಗಳ ಅಧಿಕಾರಿಗಳನ್ನು ಕಂದಾಯ ಇಲಾಖೆಗೆ ನಿಯೋಜನೆ ಮಾಡಲಾಗುತ್ತಿದೆ. ಇನ್ನು ಮುಂದೆ ಹೀಗೆ ನಿಯೋಜನೆ ಮಾಡುವುದಿಲ್ಲ’ ಎಂದರು. ‘ಕಂದಾಯ, ಪೊಲೀಸ್‌ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸರಿಯಾಗಿ ಕೆಲಸ ಮಾಡಿದರೆ, ಜನರ ಅರ್ಧ ಸಮಸ್ಯೆಗಳು ನಿವಾರಣೆ ಆಗುತ್ತವೆ.

ಕಂದಾಯ ಇಲಾಖೆ ನೌಕರರಿಗೆ ರೈತರು, ಬಡವರ ಜತೆ ನೇರ ಸಂಪರ್ಕ, ಸಂಬಂಧ ಇರುತ್ತದೆ. ಅವರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಯಾಂತ್ರಿಕವಾಗಿ ಕೆಲಸ ಮಾಡದೆ, ಸೃಜನಶೀಲ ಹಾಗೂ ಕ್ರಿಯಾಶೀಲವಾಗಿ  ಕಾರ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಪುರಾತನವಾದ ಕಂದಾಯ ಇಲಾಖೆಯು ಇತ್ತೀಚಿನ ದಿನಗಳಲ್ಲಿ ಮಹತ್ವ ಕಳೆದುಕೊಳ್ಳುತ್ತಿದೆ. ಇದನ್ನು ಹೋಗಲಾಡಿಸಲು ನೌಕರರು ಶ್ರಮಿಸಬೇಕು. ಭೂಕಂದಾಯ ಕಾಯ್ದೆಯನ್ನು ಸಕಾಲದಡಿ ಸೇರಿಸಲಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಗಳು ಆಗುತ್ತಿಲ್ಲ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ’ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ‘ಸರ್ಕಾರಿ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾಲೇಜು ಸ್ಥಾಪಿಸಲು 81 ಎಕರೆ ಭೂಮಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಅಧಿಕಾರಿಗಳು ಇದಕ್ಕೆ ಅಡ್ಡಿಪಡಿಸದೆ, ಕೂಡಲೇ ಜಾಗವನ್ನು ನೀಡಬೇಕು’ ಎಂದು ಮನವಿ ಮಾಡಿದರು.

***

‘ಸೇವಾ ಸವಲತ್ತು ನೀಡಿ’

‘ಕಂದಾಯ ಇಲಾಖೆಯ ನೌಕರರು 47 ಕಾಯ್ದೆಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 35 ಸಾವಿರ ನೌಕರರಿದ್ದಾರೆ. ಆದರೆ, ನಿರ್ದಿಷ್ಟ ಕೆಲಸದ ಪಟ್ಟಿ ಇಲ್ಲ. ಸರ್ಕಾರ ವಹಿಸುವ ಕೆಲಸಗಳನ್ನು ನೌಕರರು ಕತ್ತೆಗಳ ರೀತಿಯಲ್ಲಿ ಮಾಡುತ್ತಿದ್ದಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಸೇವಾ ಸವಲತ್ತು ನೀಡುತ್ತಿಲ್ಲ’ ಎಂದು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಎಂ.ವಿಜಯಕುಮಾರ್‌ ಬೇಸರ ವ್ಯಕ್ತಪಡಿಸಿದರು.

‘ಗ್ರಾಮ ಲೆಕ್ಕಾಧಿಕಾರಿಗಳನ್ನು ದ್ವಿತೀಯ ದರ್ಜೆ ನೌಕರರೆಂದು ಪರಿಗಣಿಸಲಾಗಿದೆ. ಆದರೆ, ಬೇರೆ ಇಲಾಖೆಗಳ ನೌಕರರಿಗೆ ನೀಡುವ ವೇತನಕ್ಕೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡುವ ವೇತನಕ್ಕೂ ವ್ಯತ್ಯಾಸ ಇದೆ. ಈ ವೇತನ ತಾರತಮ್ಯವನ್ನು ನಿವಾರಿಸಬೇಕು. ಗ್ರಾಮ ಸಹಾಯಕರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಶಿರಸ್ತೇದಾರ್‌, ತಹಶೀಲ್ದಾರ್‌ ಹುದ್ದೆಗಳಿಗೆ ಬೇರೆ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಅವರಿಗೆ ಸರಿಯಾದ ತರಬೇತಿ, ಅನುಭವ ಇರುವುದಿಲ್ಲ. ಇದರಿಂದ ಅನುಕೂಲಕ್ಕಿಂತ ಅನನುಕೂಲ ಹೆಚ್ಚು’ ಎಂದರು.

ಪ್ರತಿಕ್ರಿಯಿಸಿ (+)