ಭಾನುವಾರ, ಡಿಸೆಂಬರ್ 8, 2019
21 °C
ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನಡೆದ ಪ್ರಕರಣ

ಶಸ್ತ್ರಚಿಕಿತ್ಸೆಗೆ ತೆಗೆದಿದ್ದ ತಲೆಚಿಪ್ಪಿನ ಭಾಗವೇ ನಾಪತ್ತೆ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಸ್ತ್ರಚಿಕಿತ್ಸೆಗೆ ತೆಗೆದಿದ್ದ ತಲೆಚಿಪ್ಪಿನ ಭಾಗವೇ ನಾಪತ್ತೆ!

ಶಿವಮೊಗ್ಗ: ಮರದ ಮೇಲಿಂದ ಜಾರಿ ಬಿದ್ದು ತಲೆಗೆ ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ತುರ್ತು ಶಸ್ತ್ರಚಿಕಿತ್ಸೆ ನೆರವೇರಿಸಲು ತೆಗೆದಿಟ್ಟಿದ್ದ ತಲೆಚಿಪ್ಪಿನ ಭಾಗವೇ ನಾಪತ್ತೆಯಾದ ಪ್ರಕರಣ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನಡೆದಿದೆ.

ಹೊಳೆಹೊನ್ನೂರು ಸಮೀಪದ ಹಾರೋಬೆನವಳ್ಳಿಯ ಎಚ್‌.ಜಿ.ರಮೇಶ್‌ ಅವರ ಕಾಣೆಯಾದ ತಲೆಚಿಪ್ಪಿನ ಭಾಗಕ್ಕೆ ಕೃತಕ ಸಾಧನ ಅಳವಡಿಸಲು ಅವರ ಕುಟುಂಬದವರು ಬೆಂಗಳೂರಿಗೆ ಅಲೆಯುತ್ತಿದ್ದಾರೆ. ಕೃತಕ ಸಾಧನಕ್ಕೆ ತಗಲುವ ವೆಚ್ಚ ಭರಿಸಲು ನಂಜಪ್ಪ ಆಸ್ಪತ್ರೆ ಆಡಳಿತ ಮಂಡಳಿಯು ಹಲವು ಸುತ್ತಿನ ಸಂಧಾನದ ಬಳಿಕ ಸಮ್ಮತಿಸಿದೆ.

ರೈತ ದಂಪತಿ ಗಿರಿತಿಮ್ಮಪ್ಪ–ಲಕ್ಷ್ಮಮ್ಮ ಅವರಿಗೆ ನಾಲ್ವರು ಮಕ್ಕಳು. ಹಿರಿಯ ಮಗ ರಮೇಶ್ ಕೃಷಿ ಕಾರ್ಯದ ಜತೆಗೆ ಗ್ರಾಮದ ಕೇಬಲ್‌ ನಿರ್ವಾಹಕನಾಗಿಯೂ ಕೆಲಸ ಮಾಡುತ್ತಿದ್ದರು. ಇದೇ ವರ್ಷ ಮಾರ್ಚ್‌ 15ರಂದು ಅಡಿಕೆ ಮರಕ್ಕೆ ಕೇಬಲ್‌ ಕಟ್ಟುವಾಗ ಜಾರಿ ಬಿದ್ದು ಮಿದುಳಿನ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರರೋಗ ತಜ್ಞ ಡಾ.ಬಾಲಾಜಿ ಶ್ರೀನಿವಾಸ್‌ ತುರ್ತು ಶಸ್ತ್ರಚಿಕಿತ್ಸೆ ನೆರವೇರಿಸಿದ್ದರು.

ಶಸ್ತ್ರಚಿಕಿತ್ಸೆಗೂ ಮುನ್ನ ತಲೆಚಿಪ್ಪಿನ ಒಂದು ಭಾಗ (ಕ್ರೇನಿಯಲ್‌ ಬೋನ್‌) ತೆಗೆಯಲಾಗಿತ್ತು. ಗಾಯ ವಾಸಿಯಾದ ನಂತರ ತೆಗೆದ ಭಾಗವನ್ನು ಮತ್ತೆ ಅದೇ ಜಾಗಕ್ಕೆ ಅಳವಡಿಸಬೇಕಿತ್ತು. ಆ ಮಧ್ಯೆ ರಮೇಶ್ ಆರೋಗ್ಯದ ಸ್ಥಿತಿ ಗಂಭೀರವಾದದ್ದರಿಂದ ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ದಾಖಲಿಸಲು ಇಲ್ಲಿನ ವೈದ್ಯರು ಶಿಫಾರಸು ಮಾಡಿದ್ದರು.

ಅಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಯಿತು. ಗಾಯ ಒಣಗಿದ ನಂತರ ತೆಗೆದಿಟಿದ್ದ ಭಾಗ ನೀಡುವಂತೆ ವಾರದ ಹಿಂದೆ ಶಿವಮೊಗ್ಗದ ಆಸ್ಪತ್ರೆಗೆ ರಮೇಶ್‌ ಕುಟುಂಬದವರು ಮನವಿ ಮಾಡಿದ್ದರು. ಆದರೆ, ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಎಷ್ಟು ಹುಡುಕಿದರೂ ಅದು ಪತ್ತೆಯಾಗಲೇ ಇಲ್ಲ. ಒತ್ತಡ ಹೆಚ್ಚಾದಾಗ ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡ ಆಸ್ಪತ್ರೆ ಆಡಳಿತ ಮಂಡಳಿ ಕೃತಕ ಭಾಗ ಅಳವಡಿಸಲು ತಗಲುವ ವೆಚ್ಚ ಭರಿಸುವುದಾಗಿ ಭರವಸೆ ನೀಡಿದೆ.

‘ಶಸ್ತ್ರಚಿಕಿತ್ಸೆ, ಆರೈಕೆಗೆ ₹6.5 ಲಕ್ಷ ಖರ್ಚಾಗಿದೆ. ಕಾಣೆಯಾದ ತಲೆಚಿಪ್ಪಿನ ಬದಲು ಕೃತಕ ಸಾಧನ ಅಳವಡಿಸಲು ಸುಮಾರು ₹ 2.5 ಲಕ್ಷ ವೆಚ್ಚವಾಗುತ್ತದೆ ಎಂದು ಬೆಂಗಳೂರಿನ ವೈದ್ಯರು ತಿಳಿಸಿದ್ದಾರೆ. ವೆಚ್ಚ ಭರಿಸುವುದಾಗಿ ನಂಜಪ್ಪ ಆಸ್ಪತ್ರೆ ಆಡಳಿತ ಮಂಡಳಿಯೂ ಒಪ್ಪಿಕೊಂಡಿದೆ. ಏ

ನೇ ಕೃತಕ ಸಾಧನ ಅಳವಡಿಸಿದರೂ, ನೈಜ ಭಾಗದಷ್ಟು ಗಟ್ಟಿ ಇರುವುದಿಲ್ಲ. ಕೊಟ್ಟ ಭರವಸೆಯಂತೆ ತಲೆಚಿಪ್ಪಿನ ಭಾಗವನ್ನು ಸಂರಕ್ಷಿಸದೇ ಇರುವುದು ಆಸ್ಪತ್ರೆಯ ಲೋಪ. ಈ ಘಟನೆಯಿಂದ ನಾವು ಸಾಕಷ್ಟು ಮಾನಸಿಕ ಕಿರಿಕಿರಿಗೆ ಒಳಗಾಗಿದ್ದೇವೆ’ ಎಂದು ರಮೇಶ್ ಅವರ ಸಹೋದರಿಯ ಪತಿ ಎಚ್‌.ವಸಂತಕುಮಾರ್ ಬೇಸರ ಹೊರಹಾಕಿದರು.

‘ತಲೆಚಿಪ್ಪಿನ ಭಾಗ ಹೇಗೆ ನಾಪತ್ತೆಯಾಗಿದೆ ಎಂದು ಗೊತ್ತಾಗಿಲ್ಲ. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೂ ಈಗ ನಮ್ಮಲ್ಲಿ ಇಲ್ಲ. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಅವಿನಾಶ್ ವಿದೇಶಕ್ಕೆ ಹೋಗಿದ್ದಾರೆ. ಅವರು ಮರಳಿದ ನಂತರ ಪ್ರಕರಣ ಇತ್ಯರ್ಥ ಮಾಡುತ್ತಾರೆ’ ಎಂದು ನಂಜಪ್ಪ ಆಸ್ಪತ್ರೆ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಶಾಂತವೀರಪ್ಪ ಮಾಹಿತಿ ನೀಡಿದರು.

***

ಏನಿದು ‘ಕ್ರೇನಿಯಲ್ ಬೋನ್’?

ಪ್ರತಿ ಮನುಷ್ಯನ ತಲೆಬುರುಡೆಯಲ್ಲಿ 22 ಬೋನ್‌ಗಳು ಇರುತ್ತವೆ. ಇವುಗಳಲ್ಲಿ ತಲೆಚಿಪ್ಪಿನಲ್ಲಿ 8 ಕ್ರೇನಿಯಲ್‌ ಬೋನ್‌ಗಳು ಹಾಗೂ ಮುಖಭಾಗದಲ್ಲಿ 14 ಫೇಶಿಯಲ್‌ ಬೋನ್‌ (ಅಸ್ಥಿ)ಗಳು ಇರುತ್ತವೆ.

ಕ್ರೇನಿಯಲ್‌ ಬೋನ್‌ ಮಿದುಳನ್ನು ಸಂರಕ್ಷಿಸುವ ಪ್ರಮುಖ ಕವಚ. ತಲೆಗೆ ಪೆಟ್ಟು ಬಿದ್ದಾಗ ಈ ಕ್ರೇನಿಯಲ್‌ ಬೋನ್‌ ತೆಗೆದು ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಅಳವಡಿ  ಸಲಾಗುತ್ತದೆ. ಒಂದು ವೇಳೆ ಅಸ್ಥಿ ಪುಡಿಯಾಗಿದ್ದರೆ ಮಂಡಿಚಿಪ್ಪು ಬದಲಾಯಿಸುವ  ರೀತಿಯಲ್ಲೇ ಕೃತಕ ಅಸ್ಥಿ ಅಳವಡಿಸಲಾಗುತ್ತದೆ.

ಪ್ರತಿಕ್ರಿಯಿಸಿ (+)