ಶುಕ್ರವಾರ, ಡಿಸೆಂಬರ್ 6, 2019
17 °C

ರಾಜ್ಯಪಾಲರ ಕಚೇರಿ ಆರ್‌ಟಿಐ ವ್ಯಾಪ್ತಿಗೆ ಏಕೆ ಒಳಪಟ್ಟಿಲ್ಲ----:‘ಸುಪ್ರೀಂ’

ಪಿಟಿಐ Updated:

ಅಕ್ಷರ ಗಾತ್ರ : | |

ರಾಜ್ಯಪಾಲರ ಕಚೇರಿ ಆರ್‌ಟಿಐ ವ್ಯಾಪ್ತಿಗೆ ಏಕೆ ಒಳಪಟ್ಟಿಲ್ಲ----:‘ಸುಪ್ರೀಂ’

ನವದೆಹಲಿ:  ರಾಜ್ಯಪಾಲರ ಕಚೇರಿ ಏಕೆ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

‌2007ರಲ್ಲಿ ಗೋವಾದಲ್ಲಿ ಇದ್ದ ಸ್ಥಿತಿಯ ಬಗ್ಗೆ ರಾಜ್ಯಪಾಲರು ರಾಷ್ಟ್ರಪತಿ ಅವರಿಗೆ ಸಲ್ಲಿಸಿದ್ದ ವರದಿಯನ್ನು ಬಹಿರಂಗಪಡಿಸಬೇಕು ಎಂದು ಬಾಂಬೆ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಮಿತಾವ್‌ ರಾಯ್ ಅವರಿದ್ದ ನ್ಯಾಯಪೀಠವು ಮಾಹಿತಿ ಹಕ್ಕು ಕಾಯ್ದೆಯು ರಾಜ್ಯಪಾಲರಿಗೆ ಏಕೆ ಅನ್ವಯಿಸುವುದಿಲ್ಲ ಎಂದು ಕೇಳಿದೆ.

ಸುಪ್ರೀಂ ಕೋರ್ಟ್‌ನ  ಮುಖ್ಯ ನ್ಯಾಯಮೂರ್ತಿಗಳ ಆಸ್ತಿ ವಿವರ ಬಹಿರಂಗಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಂವಿಧಾನ ಪೀಠದ ಪರಿಶೀಲನೆಗೆ ಕಳುಹಿಸಲಾಗಿದ್ದು, ಈ ಅರ್ಜಿಯನ್ನೂ ಅದರ ಜತೆಯಲ್ಲಿ ವಿಚಾರಣೆ ನಡೆಸಬೇಕು ಎಂದು ಸಾಲಿಸಿಟರ್ ಜನರಲ್ ರಣಜಿತ್ ಕುಮಾರ್ ಸಲಹೆ ಮಾಡಿದರು.

ಮುಖ್ಯ ನ್ಯಾಯಮೂರ್ತಿಗಳು ಸಹ ತಮ್ಮ ಆಸ್ತಿ ವಿವರಗಳನ್ನು ಗೋಪ್ಯವಾ ಗಿಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತು. ಆಗ ಮಧ್ಯ ಪ್ರವೇಶಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ‘ರಾಜ್ಯಪಾಲರ ವರದಿಯನ್ನೂ ಗೋಪ್ಯವಾಗಿಡಬಾರದು, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಅದನ್ನು ಬಹಿರಂಗಪಡಿಸಬೇಕು’ ಎಂದು ಹೇಳಿದರು. ನಂತರ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಆಗಸ್ಟ್ ಮೂರನೇ ವಾರಕ್ಕೆ ಮುಂದೂಡಿತು.

***

‘ರಾತ್ರಿ ಬೆಳಗಾಗುವುದರಲ್ಲಿ ರೈತರ ಸಮಸ್ಯೆ ಪರಿಹಾರ ಅಸಾಧ್ಯ’

ನವದೆಹಲಿ: ರೈತರ ಆತ್ಮಹತ್ಯೆ ಸಮಸ್ಯೆಯನ್ನು ರಾತ್ರಿ ಬೆಳಗಾಗುವುದರಲ್ಲಿ ಬಗೆಹರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ರೈತರ ಆತ್ಮಹತ್ಯೆ ತಡೆಯುವ ಉದ್ದೇಶದ ಫಸಲ್ ಭಿಮಾ ಯೋಜ ನೆಯೂ ಸೇರಿದಂತೆ ರೈತರ ಪರ ಜಾರಿ ಮಾಡಲಾಗಿರುವ ವಿವಿಧ ಯೋಜನೆಗಳು ಫಲ ನೀಡಲು ಒಂದು ವರ್ಷವಾದರೂ ಬೇಕು ಎಂಬ ಕೇಂದ್ರ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಯೋಜನೆಗಳು ಪರಿಣಾಮ ಬೀರಲು ಒಂದು ವರ್ಷವಾದರೂ ಬೇಕು ಎಂದು ಅಟಾರ್ನಿ ಜನರಲ್ ಅವರು ಹೇಳಿರುವುದು ಸರಿಯಾಗಿ ಇದೆ. ರೈತರ ಆತ್ಮಹತ್ಯೆ ಸಮಸ್ಯೆಯನ್ನು ರಾತ್ರಿ ಬೆಳಗಾಗುವುದರಲ್ಲಿ ಪರಿಹರಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್ ನೇತೃತ್ವದ ಪೀಠವು ಹೇಳಿದೆ.

ಎನ್‌ಡಿಎ ಸರ್ಕಾರವು ರೈತರ ಕಲ್ಯಾಣಕ್ಕಾಗಿ ತೆಗೆದುಕೊಂಡ ಕಾರ್ಯಕ್ರಮಗಳ ವಿವರ ನೀಡಿದ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರು, ರೈತರ ಪರ ಕಾರ್ಯಕ್ರಮಗಳ ಪರಿಣಾಮ ಗೊತ್ತಾಗಲು ಸಮಯ ಹಿಡಿಯುವುದರಿಂದ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

12 ಕೋಟಿ ರೈತರ ಪೈಕಿ 5.34 ಕೋಟಿ ರೈತರು ಈಗಾಗಲೇ ಫಸಲ್ ಬಿಮಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ವ್ಯಾಪ್ತಿಗೆ ಬಂದಿದ್ದಾರೆ ಎಂದು ಹೇಳಿದರು. ಶೇಕಡ 30ರಷ್ಟು ಕೃಷಿ ಸಾಲವು ಫಸಲ್ ಬಿಮಾ ಯೋಜನೆಯ ವ್ಯಾಪ್ತಿಗೆ ಬಂದಿವೆ. 2018ರ ವೇಳೆಗೆ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದು ವೇಣುಗೋಪಾಲ್ ಹೇಳಿದರು.

ಪ್ರತಿಕ್ರಿಯಿಸಿ (+)