ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಚೂಣಿಯಲ್ಲಿ ಶರದ್‌, ಡಿ.ರಾಜಾ

ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿl ಜೆಡಿಯು ಬೆಂಬಲ ಸಾಧ್ಯತೆ
Last Updated 6 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧಪಕ್ಷಗಳು ಜಂಟಿಯಾಗಿ ಕಣಕ್ಕಿಳಿಸಲು ಉದ್ದೇಶಿಸಿರುವ ಸಂಭಾವ್ಯ ಅಭ್ಯರ್ಥಿ ಪಟ್ಟಿಯಲ್ಲಿ ಜೆಡಿಯು ಹಿರಿಯ ನಾಯಕ ಶರದ್‌ ಯಾದವ್‌ ಮತ್ತು ಸಿಪಿಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರ ಹೆಸರು ಮುಂಚೂಣಿಯಲ್ಲಿದೆ.

ಬಿಜೆಪಿ ಅಭ್ಯರ್ಥಿಯ ವಿರುದ್ಧ ಕಣಕ್ಕಿಳಿಸಲು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುಂದಿನ ಮಂಗಳವಾರ (ಜುಲೈ 11)  ಎಲ್ಲ ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಿಲುವಿಗೆ ವಿರುದ್ಧವಾಗಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಜೆಡಿಯು ಮುಖಂಡರನ್ನು  ಕಾಂಗ್ರೆಸ್‌ ನಾಯಕರು ಈಗಾಗಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕೋವಿಂದ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿರುವುದು ಮುಗಿದು ಹೋದ ವಿಚಾರ. ಕಾಂಗ್ರೆಸ್‌ ನೇತೃತ್ವದ  ವಿರೋಧ ಪಕ್ಷಗಳ ಒಕ್ಕೂಟಕ್ಕೆ ಪಕ್ಷದ ಬೆಂಬಲ ಸದಾ ಇರುತ್ತದೆ ಎಂದು ಜೆಡಿಯು ಕಾಂಗ್ರೆಸ್‌ಗೆ  ಸ್ಪಷ್ಟವಾಗಿ ತಿಳಿಸಿದೆ.

ರಾಷ್ಟ್ರಪತಿ ಅಭ್ಯರ್ಥಿ ಘೋಷಣೆಯಲ್ಲಿ  ಕಾಂಗ್ರೆಸ್‌ನ ವಿಳಂಬ ತಂತ್ರದಿಂದ ಜೆಡಿಯು ಅಧ್ಯಕ್ಷ ನಿತೀಶ್‌ ಕುಮಾರ್‌ ಅಸಮಾಧಾನಗೊಂಡಿದ್ದರು. ಹಾಗಾಗಿ ಜೂನ್‌ 19ರಂದು ಅವರು ಕೋವಿಂದ್‌ಗೆ ಬೆಂಬಲ ಘೋಷಿಸಿದ್ದರು.

ನಾಲ್ಕು ದಿನಗಳ ನಂತರ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ,  ಮೀರಾ ಕುಮಾರ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಮೀರಾ ಕುಮಾರ್‌ ಅಭ್ಯರ್ಥಿತನದ ಬಗ್ಗೆ ಕೆಲವು ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಇತ್ತು. 

ಆದರೆ, ಒಗ್ಗಟ್ಟು ಪ್ರದರ್ಶಿಸುವ ಉದ್ದೇಶಕ್ಕಾಗಿ ಎಲ್ಲ ಪಕ್ಷಗಳು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದವು.ಇತರ ಪಕ್ಷಗಳ ಮನಸ್ಸನ್ನು ಅರ್ಥೈಸಿಕೊಂಡಿರುವ ಕಾಂಗ್ರೆಸ್‌, ಉಪ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಅವುಗಳ ಅಭಿಪ್ರಾಯಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡಲು ನಿರ್ಧರಿಸಿದೆ.

ಎನ್‌ಡಿಎಗೆ ಜೆಡಿಯು ಬೆಂಬಲ ಇಲ್ಲ?: ರಾಷ್ಟ್ರಪತಿ ಚುನಾವಣೆಯಲ್ಲಿ ರಾಮನಾಥ ಕೋವಿಂದ್‌ಗೆ ಬೆಂಬಲ ನೀಡಿರುವ ಜೆಡಿಯು, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುವ ಸಾಧ್ಯತೆ ಇಲ್ಲ.

ಜುಲೈ 11ರಂದು ನಡೆಯಲಿರುವ ವಿರೋಧ ಪಕ್ಷಗಳ ಸಭೆಗೆ ಆಹ್ವಾನಿಸಿದರೆ ಪಕ್ಷವು ಅದರಲ್ಲಿ ಭಾಗವಹಿಸಲಿದೆ ಜೆಡಿಯುನ ರಾಜ್ಯಸಭಾ ಸದಸ್ಯ ಕೆ.ಸಿ. ತ್ಯಾಗಿ ಹೇಳಿದ್ದಾರೆ.

ಎನ್‌ಡಿಎಗೆ ಗೆಲ್ಲಲು ಬೇಕಾದಂತಹ ಮತಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ  ಇರುವುದರಿಂದ ಜೆಡಿಯು ಜೊತೆ ಉಪ ರಾಷ್ಟ್ರಪತಿ ಚುನಾವಣೆ ಸಂಬಂಧ ಅನೌಪಚಾರಿಕ ಮಾತುಕತೆ ನಡೆಸಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎರಡೂ ಸದನಗಳ ಸದಸ್ಯರು ಮಾತ್ರ ಮತದಾನ ಮಾಡಲು ಅವಕಾಶ ಇರುತ್ತದೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಒಟ್ಟು 790 ಸದಸ್ಯರಿದ್ದಾರೆ.

ಮುಂದಿನ ವಾರ  ಎನ್‌ಡಿಎ ಅಭ್ಯರ್ಥಿ ಘೋಷಣೆ: ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ ಹೆಸರನ್ನು ಘೋಷಿಸಲು ಬಿಜೆಪಿಯು ಇದೇ ತಿಂಗಳ 13–15ರ ನಡುವೆ ಪಕ್ಷದ ಸಂಸದೀಯ ಮಂಡಳಿಯ ಸಭೆ ಕರೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT