ಶುಕ್ರವಾರ, ಡಿಸೆಂಬರ್ 6, 2019
17 °C

ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

Published:
Updated:
ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

ಪುಣೆ: ಅಮೋಘ ಸಾಮರ್ಥ್ಯ ತೋರಿದ ಕರ್ನಾಟಕ ತಂಡ ಗುರುವಾರ ಇಲ್ಲಿ ಮುಕ್ತಾಯಗೊಂಡ 44ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ ಷಿಪ್‌ನಲ್ಲಿ ಒಟ್ಟಾರೆ 558 ಪಾಯಿಂಟ್ಸ್ ಕಲೆಹಾಕುವ ಮೂಲಕ ಸಮಗ್ರ ಪ್ರಶಸ್ತಿ ಎತ್ತಿ ಹಿಡಿದಿದೆ.

ಮೂರು ನೂತನ ಕೂಟ ದಾಖಲೆಗಳನ್ನು ನಿರ್ಮಿಸಿರುವ ರಾಜ್ಯದ ಶ್ರೀಹರಿ ನಟರಾಜ್‌ 37 ಪಾಯಿಂಟ್ಸ್‌ಗಳಿಂದ ಉತ್ತಮ ಈಜುಪಟು ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಪದಕಗಳ ಪಟ್ಟಿಯಲ್ಲಿ ಕರ್ನಾಟಕ 23 ಚಿನ್ನ, 28 ಬೆಳ್ಳಿ, 20 ಕಂಚಿನ ಪದಕಗಳನ್ನು ಗೆದ್ದು ಒಟ್ಟಾರೆ 71 ಪದಕಗಳಿಂದ ಎರಡನೇ ಸ್ಥಾನದಲ್ಲಿದೆ.

26 ಚಿನ್ನದ ಪದಕ ಗೆದ್ದಿರುವ ಮಹಾರಾಷ್ಟ್ರ ಒಟ್ಟು 57 ಪದಕಗಳಿಂದ ಮೊದಲ ಸ್ಥಾನ ಗಳಿಸಿದೆ.ಕರ್ನಾಟಕದ ಬಾಲಕರ ವಿಭಾಗ 132 ಪಾಯಿಂಟ್ಸ್‌ಗಳಿಂದ ತಂಡ ಚಾಂಪಿಯನ್‌ಷಿಪ್ ಗೆದ್ದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದರೆ, ಕರ್ನಾಟಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ 25 ನೂತನ ಕೂಟ ದಾಖಲೆಗಳನ್ನು ಈಜುಸ್ಪರ್ಧಿಗಳು ನಿರ್ಮಿಸಿದ್ದಾರೆ. ಅಂತಿಮ ದಿನ ಕರ್ನಾಟಕದ ಈಜುಪಟುಗಳು ಒಟ್ಟು 12 ಪದಕಗಳನ್ನು ಗೆದ್ದುಕೊಂಡರು. ಅದರಲ್ಲಿ ಎರಡು ಚಿನ್ನದ ಪದಕಗಳು ಸೇರಿವೆ. ಗುಂಪು 1ರ 100ಮೀ ಬಾಲಕರ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಶ್ರೀಹರಿ ನಟರಾಜ್‌ (57.33ಸೆ) ಇದೇ ವರ್ಷ ನಿರ್ಮಿಸಿದ್ದ ತಮ್ಮದೇ (57.99) ದಾಖಲೆಯನ್ನು ಉತ್ತಮಪಡಿಸಿ

ಕೊಂಡರು. ಬಾಲಕರ 200ಮೀ ಬಟರ್‌ಫ್ಲೈ ವಿಭಾಗದಲ್ಲಿ ರಾಜ್ಯದ ಎಮ್‌.ರಾಹುಲ್ (2:10.83) ಚಿನ್ನಕ್ಕೆ ಕೊರಳೊಡ್ಡಿದರು. ಮಹಿಳೆಯರ 400ಮೀ ಮೆಡ್ಲೆ ವಿಭಾಗದಲ್ಲಿ ಜಾನತಿ ರಾಜೇಶ್ (5:31.52) ಬೆಳ್ಳಿ ಗೆದ್ದರು. ಜಿ. ಸಾಚಿ (5:42.14) ಬಾಲಕಿಯರ 400ಮೀ ಮೆಡ್ಲೆ ವಿಭಾಗದ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಬಾಲಕರ 200ಮೀ ಬಟರ್‌ಫ್ಲೈ ವಿಭಾಗದಲ್ಲಿ ಕರ್ನಾಟಕ ಎರಡು ಪದಕಗಳನ್ನು ಗೆದ್ದುಕೊಂಡಿದೆ. ತನಿಷ್ ಜಾರ್ಜ್ ಮ್ಯಾಥ್ಯೂ (2:12.29) ಬೆಳ್ಳಿ ಗೆದ್ದರೆ, ಪಿ.ಎ. ಪ್ರಸಿದ್ಧ ಕೃಷ್ಣ (2:12.80) ಕಂಚು ಜಯಿಸಿದರು. ಮಯೂರಿ ಲಿಂಗರಾಜು ಮಹಿಳೆಯರ 100ಮೀ ಬಟರ್‌ಫ್ಲೈ ವಿಭಾಗದಲ್ಲಿ (1:05.95) ಬೆಳ್ಳಿಗೆ ಕೊರಳೊಡ್ಡಿದರು.

ಬಾಲಕರ 100ಮೀ ಫ್ರೀಸ್ಟೈಲ್ ವಿಭಾಗದಲ್ಲಿ ತನಿಷ್ (55.54) ಬುಧವಾರ ತಮ್ಮ ವೈಯಕ್ತಿಕ ಎರಡನೇ ಬೆಳ್ಳಿ ಪದಕ ಗೆದ್ದರು. ಖುಷಿ ದಿನೇಶ್ 100ಮೀ ಫ್ರೀಸ್ಟೈಲ್ ಬಾಲಕಿಯರ ವಿಭಾಗದಲ್ಲಿ (1:02.80) ಎರಡನೇಯ ವರಾಗಿ ಗುರಿ ಸೇರುವ ಮೂಲಕ ಬೆಳ್ಳಿ ಜಯಿಸಿದರು.800ಮೀ ಬಾಲಕರ ಫ್ರೀಸ್ಟೈಲ್ ವಿಭಾಗದಲ್ಲಿ ರಾಜ್ ವಿನಾಯಕ್ ರೆಲೆಕರ್‌ (9:24.70) ಕಂಚು ಗೆದ್ದರು.ಮಹಿಳೆಯರ 4x100 ಮೀ ಫ್ರೀಸ್ಟೈಲ್ ವಿಭಾಗದಲ್ಲಿ ರಾಜ್ಯ ತಂಡ (4:18.89) ಬೆಳ್ಳಿಗೆ ಕೊರಳೊಡ್ಡಿದೆ. ಬಾಲಕಿಯರ 4x100ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕ (4:17.47) ಬೆಳ್ಳಿ ಜಯಿಸಿದೆ.

ಪ್ರತಿಕ್ರಿಯಿಸಿ (+)