ಭಾನುವಾರ, ಡಿಸೆಂಬರ್ 8, 2019
21 °C

ಮಹಿಳಾ ವಿಶ್ವಕಪ್ ಕ್ರಿಕೆಟ್; ನ್ಯೂಜಿಲೆಂಡ್‌ಗೆ ಜಯ

Published:
Updated:
ಮಹಿಳಾ ವಿಶ್ವಕಪ್ ಕ್ರಿಕೆಟ್; ನ್ಯೂಜಿಲೆಂಡ್‌ಗೆ ಜಯ

ಟಂಟನ್‌: ರಾಚೆಲ್ ಪ್ರೀಸ್ಟ್ (90) ಹಾಗೂ ಲೀ ಕ್ಯಾಸ್ಪರೆಕ್‌ (17ಕ್ಕೆ 3) ಅವರ ಉತ್ತಮ ಆಟದ ನೆರವಿನಿಂದ ನ್ಯೂಜಿಲೆಂಡ್ ತಂಡ ಇಲ್ಲಿ ನಡೆದ ಮಹಿಳೆಯರ ವಿಶ್ವಕಪ್ ಪಂದ್ಯದಲ್ಲಿ ಗುರುವಾರ ವೆಸ್ಟ್‌ಇಂಡೀಸ್ ಎದುರು 8 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಟಾಸ್ ಗೆದ್ದುಕೊಂಡ ನ್ಯೂಜಿಲೆಂಡ್ ತಂಡ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. 43 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ವೆಸ್ಟ್ಇಂಡೀಸ್ ಬಳಗ 150 ರನ್‌ ಕಲೆಹಾಕಿತು. ಸುಲಭ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಪಡೆ ಕೇವಲ 18.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ದಾಖಲಿಸಿ ಒಂದು ಪಂದ್ಯ ಸೋತಿರುವ (ಒಂದು ಫಲಿತಾಂಶ ಇಲ್ಲ) ನ್ಯೂಜಿಲೆಂಡ್ ಪಡೆ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಉತ್ತಮ ಆರಂಭ: ನ್ಯೂಜಿಲೆಂಡ್ ಬಳಗಕ್ಕೆ ಉತ್ತಮ ಆರಂಭ ದೊರಕಿತು. ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದ ತಂಡದ ನಾಯಕಿ ಸೂಜಿ ಬೇಟ್ಸ್‌ ಅಜೇಯ 40ರನ್‌ ದಾಖಲಿಸಿದರು. 43 ಎಸೆತಗಳನ್ನು ಎದುರಿಸಿದ ಬೇಟ್ಸ್  5 ಬೌಂಡರಿಗಳನ್ನು ಬಾರಿಸಿ

ದರು. ಇವರಿಗೆ ಜತೆಯಾದ ರಾಚೆಲ್‌ ಪ್ರೀಸ್ಟ್ (90) ಅತ್ಯುತ್ತಮ ಇನಿಂಗ್ಸ್ ಕಟ್ಟಿದರು. 55 ಎಸೆತಗಳಲ್ಲಿ ಅವರು 17 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 120 ರನ್‌ ಕಲೆಹಾಕಿತು.

ಬೇಟ್ಸ್ ಹಾಗೂ ಪ್ರೀಸ್ಟ್ ಅವರ ಜತೆಯಾಟವನ್ನು ವೆಸ್ಟ್‌ಇಂಡೀಸ್ ತಂಡದ ಬೌಲರ್ ಅನಿಸಾ ಮೊಹಮ್ಮದ್ ಮುರಿದರು. ಶಾನೆಲ್ ಡೆನೆ ಅವರಿಗೆ ಪ್ರೀಸ್ಟ್ ಕ್ಯಾಚ್‌ ನೀಡಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಸೋಫಿಯಾ ಡಿವೈನ್ (4) ಎರಡು ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಬಾರಿಸಿದ್ದರು. ಈ ವೇಳೆ ಸ್ಟಫನಿ ಟೇಲರ್ ಅವರ ಬೌಲಿಂಗ್‌ನಲ್ಲಿ ಔಟಾದರು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್: 43 ಓವರ್‌ಗಳಲ್ಲಿ 150 (ನಾಯಕಿ ಸಾರಾ ಟೇಲರ್ 20,  ಮೆರಿಸ್ಸಾ 41; ಲೀ ತಹಹು 39ಕ್ಕೆ3, ಲೀ ಕ್ಯಾಸ್ಪರೆಕ್‌ 17ಕ್ಕೆ3). ನ್ಯೂಜಿಲೆಂಡ್: 18.2 ಓವರ್‌ಗಳಲ್ಲಿ 2 ವಿಕೆಟ್‌ಗೆ 151 (ಸೂಜಿ ಬೇಟ್ಸ್‌ 40, ರಾಚೆಲ್ ಪ್ರೀಸ್ಟ್ 90; ಸ್ಟಫನಿ ಟೇಲರ್ 27ಕ್ಕೆ1). ಫಲಿತಾಂಶ: ನ್ಯೂಜಿಲೆಂಡ್ ಮಹಿಳೆಯರಿಗೆ 8 ವಿಕೆಟ್‌ಗಳ ಜಯ.

ಪ್ರತಿಕ್ರಿಯಿಸಿ (+)