ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಸುತ್ತಿಗೆ ಮುನ್ನಡೆದ ನೊವಾಕ್‌

Last Updated 6 ಜುಲೈ 2017, 19:30 IST
ಅಕ್ಷರ ಗಾತ್ರ

ಲಂಡನ್‌ (ರಾಯಿಟರ್ಸ್‌/ಎಎಫ್‌ಪಿ): ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ನಾಲ್ಕನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ನೊವಾಕ್‌ ಜೊಕೊವಿಚ್‌ ಅವರು ಈ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸರ್ಬಿಯಾದ ಆಟಗಾರ ನೊವಾಕ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಹಣಾಹಣಿಯಲ್ಲಿ ನೊವಾಕ್‌ 6–2, 6–2, 6–1ರ ನೇರ ಸೆಟ್‌ಗಳಿಂದ ಜೆಕ್‌ ಗಣರಾಜ್ಯದ ಆ್ಯಡಮ್‌ ಪ್ಯಾವಲಸೆಕ್‌ ಅವರನ್ನು ಪರಾಭವಗೊಳಿಸಿದರು. ಶನಿವಾರ ನಡೆಯುವ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ನೊವಾಕ್‌ ಅವರು ಅರ್ನೆಸ್ಟ್‌ ಗುಲ್ಬಿಸ್‌ ವಿರುದ್ಧ ಸೆಣಸಲಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ನೊವಾಕ್ ಮೊದಲ ಸೆಟ್‌ನಲ್ಲಿ ಮಿಂಚು ಹರಿಸಿದರು. ಸೆಂಟರ್‌  ಕೋರ್ಟ್‌ನಲ್ಲಿ ನಡೆದ ಹಣಾಹಣಿಯಲ್ಲಿ ಅವರು ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದರು. ಆಕರ್ಷಕ ಸರ್ವ್‌ ಹಾಗೂ ಫೋರ್‌ ಹ್ಯಾಂಡ್‌ ಹೊಡೆತಗಳ ಮೂಲಕ ಅಭಿ ಮಾನಿಗಳನ್ನು ರಂಜಿಸಿದ ಅವರು ಲೀಲಾ ಜಾಲವಾಗಿ ಗೇಮ್‌ ಬೇಟೆಯಾಡಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 136ನೇ ಸ್ಥಾನ ಹೊಂದಿರುವ ಪ್ಯಾವಲಸೆಕ್‌ ಮೊದಲ ನಾಲ್ಕು ಗೇಮ್‌ಗಳಲ್ಲಿ ಎದುರಾಳಿಗೆ ತೀವ್ರ ಪೈಪೋಟಿ ಒಡ್ಡಿದರು. ಆ ನಂತರ ನೊವಾಕ್‌ ಆಟ ರಂಗೇರಿತು. ಸರ್ಬಿಯಾದ ಆಟಗಾರನ ರ್‍ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಬಿರುಗಾಳಿ ವೇಗದ ಕ್ರಾಸ್‌ಕೋರ್ಟ್‌ ಹೊಡೆತಗಳಿಗೆ ಪ್ಯಾವಲ ಸೆಕ್‌ ನಿರುತ್ತರರಾದರು. 30 ವರ್ಷದ ಜೊಕೊವಿಚ್‌ ಇದರ ಪೂರ್ಣ ಲಾಭ ಎತ್ತಿಕೊಂಡರು. ತಮ್ಮ ಸರ್ವ್್ ಉಳಿಸಿ
ಕೊಳ್ಳುವ ಜೊತೆಗೆ ಎರಡು ಬಾರಿ ಎದುರಾಳಿಯ ಸರ್ವ್‌ ಮುರಿಯುವಲ್ಲಿ ಯಶಸ್ವಿಯಾದ ಸರ್ಬಿಯಾದ ಆಟಗಾರ ಸುಲಭವಾಗಿ ಗೆಲುವಿನ ತೋರಣ ಕಟ್ಟಿದರು.

ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ 12 ಕಿರೀಟ ಮುಡಿಗೇರಿಸಿಕೊಂಡ ಸಾಧನೆ ಮಾಡಿರುವ ನೊವಾಕ್‌ ಎರಡನೇ ಸೆಟ್‌ನಲ್ಲಿ ಇನ್ನಷ್ಟು ಆಕ್ರಮಣಕಾರಿಯಾ ದರು. ಅಂಗಳದ ಮೂಲೆ ಮೂಲೆಗೂ ಚೆಂಡನ್ನು ಬಡಿದಟ್ಟಿದ ಅವರು ಎದುರಾಳಿಯನ್ನು ಹೈರಾಣಾಗಿಸಿದರು.
ಮೊದಲ ನಾಲ್ಕು ಗೇಮ್‌ಗಳಲ್ಲಿ ಪ್ಯಾವ ಲಸೆಕ್‌ ದಿಟ್ಟ ಸಾಮರ್ಥ್ಯ ತೋರಿದ್ದರಿಂದ ಅವರು ತಿರುಗೇಟು ನೀಡಬಹುದೆಂಬ ಕುತೂಹಲ ಗರಿ
ಗೆದರಿತ್ತು. ಆದರೆ ಸರ್ಬಿಯಾದ ಆಟಗಾರ ಇದಕ್ಕೆ ಎಳ್ಳಷ್ಟು ಅವಕಾಶ ನೀಡಲಿಲ್ಲ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಜೊಕೊವಿಚ್‌, ಅಂಗಳದಲ್ಲಿ ಪಾದರಸದಂತಹ ಚಲನೆಯ ಮೂಲಕ ಗಮನ ಸೆಳೆದರು. ನೆಟ್‌ನ ಸಮೀಪದಲ್ಲಿ ಚೆಂಡನ್ನು ಡ್ರಾಪ್‌ ಮಾಡುವ ತಂತ್ರ ಅನುಸರಿಸಿದ ಅವರು ಇದರಲ್ಲಿ ಯಶಸ್ವಿಯಾದರು. ಹೀಗಾಗಿ ಜೆಕ್‌ ಗಣರಾಜ್ಯದ ಪ್ಯಾವಲಸೆಕ್‌ ತಮ್ಮ ಸರ್ವ್‌ ಉಳಿಸಿಕೊಳ್ಳಲು ಪರದಾಡಿದರು.

ಜೊಕೊವಿಚ್‌ ಶೀಘ್ರವೇ ಮುನ್ನಡೆ ಗಳಿಸಿದ್ದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಅವರು ಬೇಸ್‌ಲೈನ್‌ ಹೊಡೆತ ಗಳನ್ನು ಬಾರಿಸಲು ಹೋಗಿ ಕೈ ಸುಟ್ಟು ಕೊಂಡರು. ಅವರು ಬಾರಿಸುತ್ತಿದ್ದ ಚೆಂಡು ಪದೇ ಪದೇ ಅಂಗಳದ ಆಚೆಗೆ ಹೋಗಿ ಬೀಳುತ್ತಿತ್ತು. ಹೀಗಾಗಿ ನೊವಾಕ್‌ ಜಯದ ಹಾದಿ ಸುಗಮ
ವಾಯಿತು. ಎದುರಾಳಿ ಮಾಡಿದ ತಪ್ಪುಗಳ ಪೂರ್ಣ ಪ್ರಯೋಜನ ಪಡೆದ ಅವರು ನಂತರದ ನಾಲ್ಕೂ ಗೇಮ್‌ಗಳಲ್ಲೂ ಪಾರಮ್ಯ ಮೆರೆದು ಗೆಲುವು ಒಲಿಸಿಕೊಂಡರು.

ಮೂರನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಪ್ಯಾವಲಸೆಕ್‌, ತಿರುಗೇಟು ನೀಡ ಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು.ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ವಿಶ್ವದ ಘಟಾನುಘಟಿಗಳನ್ನು ಮಣಿಸಿದ ಅನುಭವ ಹೊಂದಿರುವ ನೊವಾಕ್‌, ವೇಗದ ಆಟದ ಮೂಲಕ ಅಂಗಳದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದರು.  ನೊವಾಕ್‌ ಗರ್ಜನೆಗೆ ಬೆಚ್ಚಿದ ಪ್ಯಾವಲಸೆಕ್‌ ಸುಲಭವಾಗಿ ಸೋಲೊಪ್ಪಿಕೊಂಡರು.

ಪೊಟ್ರೊಗೆ ಆಘಾತ ನೀಡಿದ ಅರ್ನೆಸ್ಟ್‌: ಲಾಟ್ವಿಯಾದ ಅರ್ನೆಸ್ಟ್‌ ಗುಲ್ಬಿಸ್‌ ಅವರು ವಿಂಬಲ್ಡನ್‌ ಟೂರ್ನಿಯ ನಾಲ್ಕನೇ ದಿನ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಅರ್ನೆಸ್ಟ್‌  6–4, 6–4, 7–6ರಲ್ಲಿ ಅರ್ಜೆಂಟೀನಾದ ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ವಿರುದ್ಧ ಗೆಲುವಿನ ಸಿಹಿ ಸವಿದರು.

ಮೊದಲ ಎರಡು ಸೆಟ್‌ಗಳಲ್ಲಿ ಪಾರಮ್ಯ ಮೆರೆದ ಅರ್ನೆಸ್ಟ್‌ ಅವರು ಮೂರನೇ ಸೆಟ್‌ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು. ಜಿದ್ದಾಜಿದ್ದಿನಿಂದ ಕೂಡಿದ್ದ ಹೋರಾಟದ ‘ಟೈ ಬ್ರೇಕರ್‌’ನಲ್ಲಿ ಲಾಟ್ವಿಯಾದ ಆಟಗಾರ ಗೆಲುವಿನ ತೋರಣ ಕಟ್ಟಿದರು.

ರಾಡ್ವಾಂಸ್ಕಾ ಮಿಂಚು: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಅವರು ಗೆಲುವಿನ ಓಟ ಮುಂದುವರಿಸಿದ್ದಾರೆ.
ಎರಡನೇ ಸುತ್ತಿನ ಹಣಾಹಣಿಯಲ್ಲಿ ರಾಡ್ವಾಂಸ್ಕಾ 5–7, 7–6, 6–3ರಲ್ಲಿ ಅಮೆರಿಕಾದ ಕ್ರಿಸ್ಟಿನಾ ಮೆಕ್‌ಹಾಲೆ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT