ಬುಧವಾರ, ಡಿಸೆಂಬರ್ 11, 2019
26 °C

‘ವಿ.ವಿಗಳು ಹಳಗನ್ನಡ ಬೋಧನೆ ಕೈಬಿಟ್ಟಿವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿ.ವಿಗಳು ಹಳಗನ್ನಡ ಬೋಧನೆ ಕೈಬಿಟ್ಟಿವೆ’

ಬೆಂಗಳೂರು:  ‘ಹಿಂದಿ, ಇಂಗ್ಲಿಷ್‌ ದಬ್ಬಾಳಿ ನಡೆಯುತ್ತಿದೆ ಎನ್ನುವ ನಾವು, ನಮ್ಮ ಬೇರು ಆಗಿರುವ ಹಳಗನ್ನಡವನ್ನು ಮರೆಯುತ್ತಿದ್ದೇವೆ. ವಿಶ್ವವಿದ್ಯಾಲಯಗಳೂ ಹಳಗನ್ನಡ ಬೋಧನೆಯನ್ನೇ ಕೈಬಿಟ್ಟಿವೆ’ ಎಂದು ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌ ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಗುರುವಾರ ಆಯೋಜಿಸಿದ್ದ ಡಾ.ದೇ. ಜವರೇಗೌಡ ಅವರ ಜನ್ಮಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಹಳಗನ್ನಡ ಕಲಿಯಲು ಇಚ್ಛಿಸಿದರೂ ಪಾಠ ಮಾಡಲು ಶಿಕ್ಷಕರಿಲ್ಲ. ನಮ್ಮ ಭಾಷೆ ಉಳಿಸಿಕೊಳ್ಳುತ್ತಾ ಇತರೆ ಭಾಷೆಗಳ ಹೇರಿಕೆ ವಿರುದ್ಧ ಹೋರಾಟ ಮಾಡಬೇಕು’ ಎಂದರು.

‘ಜವರೇಗೌಡ ಅವರು ಕನ್ನಡಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಜನ್ಮಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಕನ್ನಡದ ಬುನಾದಿಯೇ ಅಲುಗಾಡುತ್ತಿದೆ ಎಂದು ಮಾತನಾಡುವುದು ವಿಪರ್ಯಾಸ. ದಿನದಿಂದ ದಿನಕ್ಕೆ ವಿಶ್ವವಿದ್ಯಾಲಯಗಳು ಹೆಚ್ಚಾಗುತ್ತಿದ್ದು, ಕುಲಪತಿಗಳು ಯಾರು ಎನ್ನುವುದೇ ತಿಳಿಯುವುದಿಲ್ಲ’ ಎಂದು ಹೇಳಿದರು.

***

ಶಾಸ್ತ್ರೀಯ ಸ್ಥಾನಮಾನ ಏನಾಗಿದೆ?

‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕು ಎಂದು ಸಾಕಷ್ಟು ಹೋರಾಟ ಮಾಡಿ, ಅದನ್ನು ದೊರಕಿಸಿಕೊಂಡಿದ್ದೇವೆ. ಆದರೆ, ಇಲ್ಲಿ ಅದು ಉಸಿರು ಕಳೆದುಕೊಂಡ ಸ್ಥಿತಿಯಲ್ಲಿದೆ. ಅದಕ್ಕೆ ಮೀಸಲಾಗಿರುವ ಹಣ ಖರ್ಚು ಮಾಡಲು ಯಾಕೆ ಮೀನಮೇಷ ಎಣಿಸುತ್ತಿದ್ದಾರೆ. ಅದಕ್ಕೊಂದು ಕೇಂದ್ರ ಸ್ಥಾಪಿಸಲು ಜಗಳ ಆಡುತ್ತಿದ್ದರೆ, ಕೆಲಸ ಮಾಡಲು ಇನ್ನಷ್ಟು ದಿನ ಬೇಕು’ ಎಂದು ಬಿ.ಎಲ್‌. ಶಂಕರ್‌ ಪ್ರಶ್ನಿಸಿದರು.

***

ಕನ್ನಡದ ಕೆಲಸ ಮಾಡಬೇಕು ಎನ್ನುವುದನ್ನು ತಿಳಿಸಿದವರು ದೇ. ಜವರೇಗೌಡರು. ಇಂತಹ ವ್ಯಕ್ತಿಯೊಬ್ಬರು ಪ್ರಸ್ತುತ ಸನ್ನಿವೇಶಕ್ಕೆ ಅಗತ್ಯವಾಗಿದ್ದಾರೆ.

ಮನು ಬಳಿಗಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

ಪ್ರತಿಕ್ರಿಯಿಸಿ (+)