ಭಾನುವಾರ, ಡಿಸೆಂಬರ್ 15, 2019
17 °C

ಮನ್‌ಪ್ರೀತ್ ಕೌರ್, ಲಕ್ಷ್ಮಣನ್‌ಗೆ ಚಿನ್ನದ ಪದಕ ಸಂಭ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ಮನ್‌ಪ್ರೀತ್ ಕೌರ್, ಲಕ್ಷ್ಮಣನ್‌ಗೆ ಚಿನ್ನದ ಪದಕ ಸಂಭ್ರಮ

ಭುವನೇಶ್ವರ: ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌ನಲ್ಲಿ ಮೊದಲ ದಿನವೇ ಭಾರತದ ಖಾತೆಗೆ ಎರಡು ಚಿನ್ನ ಸೇರ್ಪಡೆಯಾಗಿದೆ. ಶಾಟ್‌ಪಟ್‌ನಲ್ಲಿ ಆತಿಥೇಯರ ಸವಾಲು ಎತ್ತಿಹಿಡಿದಿದ್ದ ಮನ್‌ಪ್ರೀತ್‌ ಕೌರ್‌ ಮತ್ತು ದೂರ ಅಂತರದ ಓಟಗಾರ ಜಿ. ಲಕ್ಷ್ಮಣನ್‌ ಅವರು ಚಿನ್ನದ ಸಾಧನೆ ಮಾಡಿದ್ದಾರೆ.

ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಭಾರತದ ಭರವಸೆಯಾಗಿದ್ದ ಕರ್ನಾಟಕದ ವಿಕಾಸ್‌ ಗೌಡ ಅವರು ಕಂಚು ಗೆದ್ದಿದ್ದಾರೆ.

ಶಾಟ್‌ಪಟ್‌ನಲ್ಲಿ ಆತಿಥೇಯರ ಶಕ್ತಿಯಾಗಿದ್ದ ಮನ್‌ಪ್ರೀತ್‌ ಅವರು ಕಳಿಂಗ ಕ್ರೀಡಾಂಗಣದಲ್ಲಿ ಗುರುವಾರ ಸೇರಿದ್ದ ತವರಿನ ಅಥ್ಲೆಟಿಕ್ಸ್‌ ಪ್ರಿಯರಿಗೆ ನಿರಾಸೆ ಮಾಡಲಿಲ್ಲ. ಮಹಿಳಾ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅವರು ಕಬ್ಬಿಣದ ಗುಂಡನ್ನು 18.28 ಮೀಟರ್ಸ್‌ ದೂರ ಎಸೆದು ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು.

ಈ ಮೂಲಕ ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದರು. ಅಷ್ಟೇ ಅಲ್ಲದೆ ತಮ್ಮ ಹುಟ್ಟು ಹಬ್ಬವನ್ನು ಅವರು ಸ್ಮರಣೀಯವಾಗಿಸಿಕೊಂಡರು. ಮನ್‌ಪ್ರೀತ್‌ ಅವರು ಗುರುವಾರ 27ನೇ ವಸಂತಕ್ಕೆ ಕಾಲಿಟ್ಟರು. ಚೀನಾದ ಜಿಯಾನ್‌ಹುದಲ್ಲಿ ನಡೆ ದಿದ್ದ ಏಷ್ಯನ್‌ ಗ್ರ್ಯಾನ್‌ ಪ್ರಿ ಚಾಂಪಿಯನ್‌ ಷಿಪ್‌ನಲ್ಲಿ 18.86 ಮೀಟರ್ಸ್‌ ಸಾಮರ್ಥ್ಯ ತೋರಿ ರಾಷ್ಟ್ರೀಯ ದಾಖಲೆ ಬರೆದಿದ್ದ ಮನ್‌ಪ್ರೀತ್‌ ಅವರು ಇಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದರು.

ಚೀನಾದ ಸ್ಪರ್ಧಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಗಾಂಗ್‌ ಲಿಜಿಯಾವೊ ಅವರು ಚಾಂಪಿ ಯನ್‌ಷಿಪ್‌ನಿಂದ ಹಿಂದೆ ಸರಿದಿದ್ದರು. ಹೀಗಾಗಿ ಪಂಜಾಬ್‌ನ ಪಟಿಯಾಲದ ಅಥ್ಲೀಟ್‌ನ ಚಿನ್ನದ ಹಾದಿ ಸುಗಮವಾಯಿತು. ಚೀನಾದ ಗುವೊ ತಿಯಾನ್‌ಕ ್ವಿಯಾನ್‌ ಅವರು ಈ ವಿಭಾಗದ ಬೆಳ್ಳಿ ತಮ್ಮದಾಗಿಸಿ ಕೊಂಡರು. ತಿಯಾನ್‌ಕ್ವಿಯಾನ್‌  ಅವರು 17.91 ಮೀಟರ್ಸ್‌ ದೂರ ಗುಂಡು ಎಸೆದರು.  ತಿಯಾನ್‌ಕ್ವಿಯಾನ್‌  ಅವರು ಹೋದ ವರ್ಷ ಚಿನ್ನದ ಸಾಧನೆ ಮಾಡಿದ್ದರು. ಈ ವಿಭಾಗದ  ಕಂಚು ಜಪಾನ್‌ನ ಅಯಾ ಒಟಾ (15.45 ಮೀ.) ಅವರ ಪಾಲಾಯಿತು.

ಲಕ್ಷ್ಮಣನ್‌ ಮಿಂಚು: ಪುರುಷರ 5000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಜಿ. ಲಕ್ಷ್ಮಣನ್‌ ಅವರು ಆತಿಥೇಯರ ಖಾತೆಗೆ ಎರಡನೇ ಚಿನ್ನ ಸೇರ್ಪಡೆ ಮಾಡಿದರು. ಅವರು 14 ನಿಮಿಷ 54.48 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಲಕ್ಷ್ಮಣನ್‌ ಅವರು 2013ರಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದರು. ಈ ಬಾರಿ ಅವರು ತಮ್ಮ ಸಾಮರ್ಥ್ಯ ಉತ್ತಮಪಡಿಸಿಕೊಂಡರು.

ನೀನಾಗೆ ಬೆಳ್ಳಿ: ವಿ. ನೀನಾ ಮತ್ತು ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ನಯನಾ ಜೇಮ್ಸ್‌ ಅವರು ಮಹಿಳೆಯರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಕೈಗೂಡದ ‘ಹ್ಯಾಟ್ರಿಕ್‌ ಕನಸು: ಪುರುಷರ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಆತಿಥೇಯರ ಕಣ್ಮಣಿಯಾಗಿದ್ದ ವಿಕಾಸ್‌ ಗೌಡ ಅವರು ‘ಹ್ಯಾಟ್ರಿಕ್‌’ ಚಿನ್ನದ ಸಾಧನೆ ಮಾಡುವ ಅವಕಾಶ ಕಳೆದುಕೊಂಡರು. ಹಿಂದಿನ ಎರಡು ಆವೃತ್ತಿಗಳಲ್ಲಿ ಚಿನ್ನ ಜಯಿಸಿದ್ದ ವಿಕಾಸ್‌ ಅವರು ಇಲ್ಲಿ ಕಂಚಿಗೆ ತೃಪ್ತಿಪಡಬೇಕಾಯಿತು. ವಿಕಾಸ್‌ ಅವರು 60.81 ಮೀಟರ್ಸ್‌ ದೂರ ಡಿಸ್ಕ್‌ ಎಸೆಯಲಷ್ಟೇ ಶಕ್ತರಾದರು.

ಇರಾನ್‌ನ ಎಹಸಾನ್‌ ಹದಾದಿ ಅವರು  ಈ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರು. ಎಹಸಾನ್‌ ಅವರು 64.54 ಮೀಟರ್ಸ್‌  ದೂರ ಡಿಸ್ಕಸ್‌ ಎಸೆದರು. ಇದು ಅವರು ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿದೆ. ಮಲೇಷ್ಯಾದ ಮಹಮ್ಮದ್‌ ಇರ್ಫಾನ್‌ (60.96 ಮೀ.) ಅವರು ಬೆಳ್ಳಿಗೆ ಕೊರಳೊಡ್ಡಿದರು.

ಸೆಮಿಫೈನಲ್‌ಗೆ ರಾಜೀವ್‌: ಪುರುಷರ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಭಾರತದ ಸವಾಲು ಎತ್ತಿಹಿಡಿದಿರುವ ರಾಜೀವ್‌ ಅರೋಕಿಯಾ ಮತ್ತು ಮಹಮ್ಮದ್‌ ಅನಾಸ್‌ ಅವರು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಎರಡನೇ ಹೀಟ್‌ನಲ್ಲಿ ಭಾಗವಹಿಸಿದ್ದ ರಾಜೀವ್‌ 46.42 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅನಾಸ್‌ ಅವರು ಮೊದಲ ಹೀಟ್‌ನಲ್ಲಿ 46.70 ಸೆಕೆಂಡುಗ ಳಲ್ಲಿ ಅಂತಿಮ ಗೆರೆ ಮುಟ್ಟಿದರು.

ಕೇರಳದ 22 ವರ್ಷದ ಓಟಗಾರ ಅನಾಸ್‌ ಅವರು ಈಗಾಗಲೇ ವಿಶ್ವ ಚಾಂಪಿಯನ್‌ ಷಿಪ್‌ಗೆ ಅರ್ಹತೆ ಗಳಿಸಿದ್ದಾರೆ. ಇದೇ ವಿಭಾಗದಲ್ಲಿ ಕಣಕ್ಕಿಳಿದಿದ್ದ ಭಾರತದ ಅಮೊಜ್‌ ಜಾಕೊಬ್‌ ಕೂಡ ಸೆಮಿಫೈನಲ್‌ಗೆ ಅರ್ಹತೆ ಪಡೆದರು.ಮೂರನೇ ಹೀಟ್‌ನಲ್ಲಿ ಸ್ಪರ್ಧಿಸಿದ್ದ ಅವರು ನಿಗದಿತ ದೂರ ಕ್ರಮಿಸಲು 47.08 ಸೆಕೆಂಡು ತೆಗೆದುಕೊಂಡರು.

ಫೈನಲ್‌ಗೆ ಅಜಯ್‌ಕುಮಾರ್‌: ಪುರುಷರ 1500 ಮೀಟರ್ಸ್‌ ವಿಭಾಗದಲ್ಲಿ ಸ್ಪರ್ಧಿಸಿರುವ ಅಜಯ್‌ ಕುಮಾರ್‌ ಸರೋಜ್‌ ಅವರು ಫೈನಲ್‌ಗೆ ಅರ್ಹತೆ ಗಳಿಸಿದರು. ಸರೋಜ್‌ ಅವರು ನಿಗದಿತ ಗುರಿ ಮುಟ್ಟಲು 3 ನಿಮಿಷ 51.37 ಸೆಕೆಂಡು ಸಮಯ ತೆಗೆದುಕೊಂಡರು. ಭಾರತದ ಮತ್ತೊಬ್ಬ ಸ್ಪರ್ಧಿ ಸಿದ್ಧಾಂತ್‌ ಅಧಿಕಾರಿ ಕೂಡ ಫೈನಲ್‌ ಪ್ರವೇಶಿಸಿದರು. ಎರಡನೇ ಹೀಟ್‌ನಲ್ಲಿ ಓಡಿದ ಅಧಿಕಾರಿ 3 ನಿಮಿಷ 57.46 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಮಹಿಳೆಯರ ವಿಭಾಗದಲ್ಲಿ ಕಣದಲ್ಲಿರುವ ಮೋನಿಕಾ ಚೌಧರಿ  ಮತ್ತು ಯು. ಚಿತ್ರಾ ಅವರೂ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಚಿನ್ನದ ಕನಸು ಚಿಗುರೊಡೆಯುವಂತೆ ಮಾಡಿದ್ದಾರೆ.

ಫೈನಲ್‌ಗೆ ಜಿಗಿದ ಚೇತನ್‌: ಪುರುಷರ ಹೈ ಜಂಪ್‌ ಸ್ಪರ್ಧೆಯಲ್ಲಿ ಭಾಗವಹಿಸಿರುವ ಬಿ. ಚೇತನ್‌ ಮತ್ತು ಅಜಯ್‌ ಕುಮಾರ್‌ ಅವರು ಫೈನಲ್‌ ತಲುಪಿದರು.ಇವರು 2.10 ಮೀಟರ್ಸ್‌ ಎತ್ತರದ ಗುರಿಯನ್ನು ಸುಲಭವಾಗಿ ಜಿಗಿದರು.

ಪ್ರತಿಕ್ರಿಯಿಸಿ (+)