ಗುರುವಾರ , ಡಿಸೆಂಬರ್ 12, 2019
17 °C
ರೈತರ ಆರೋಗ್ಯ ಕಾಪಾಡುವ, ಹಣ ಉಳಿಸುವ ತಂತ್ರಜ್ಞಾನ

ರೇಷ್ಮೆ ಸೋಂಕು ನಿವಾರಣಾ ಘಟಕ

Published:
Updated:
ರೇಷ್ಮೆ ಸೋಂಕು ನಿವಾರಣಾ ಘಟಕ

ಮೈಸೂರು: ಮಾನವರ ನೆರವಿಲ್ಲದೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಸೋಂಕು ನಿವಾರಣಾ ಘಟಕವನ್ನು ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಅಭಿವೃದ್ಧಿಪಡಿಸಿದೆ.ರೇಷ್ಮೆ ಹುಳುವಿಗೆ ತಗಲುವ ರೋಗಗಳಿಂದ ಸಂರಕ್ಷಿಸಲು ಕೀಟನಾಶಕ ಸಿಂಪಡಿಸಲಾಗುತ್ತದೆ. ಇದಕ್ಕಾಗಿ ‘ಸ್ಪ್ರೇ ಗನ್‌’ ಬಳಸುತ್ತಾರೆ. ಇದರಿಂದ ರೈತರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅಲ್ಲದೇ, ರೋಗ ನಿಯಂತ್ರಣ ಪರಿಣಾಮಕಾರಿಯೂ ಅಲ್ಲ. ಇದನ್ನು ಮನಗಂಡ ಸಂಸ್ಥೆಯು ಸ್ವಯಂಚಾಲಿತವಾಗಿ ಔಷಧವನ್ನು ಸಿಂಪಡಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಪ್ರಾಯೋಗಿಕವಾಗಿ ಯಶಸ್ಸು ಕಂಡಿದೆ.ಏನಿದು ತಂತ್ರಜ್ಞಾನ?: ರೇಷ್ಮೆ ಹುಳುಗಳನ್ನು ಬೆಳೆಸುವ ಚಂದ್ರಿಕೆಗಳನ್ನು ಸದಾಕಾಲ ಸೋಂಕಿನಿಂದ ಕಾಪಾಡುವುದು ಅತ್ಯವಶ್ಯ. ಹುಳುಗಳಿಗೆ ಹಾಲು ರೋಗ, ಸಪ್ಪೆ ರೋಗ, ಸುಣ್ಣಕಟ್ಟು ರೋಗ, ಗಂಟು ರೋಗ ಕಾಡುತ್ತಿರುತ್ತದೆ. ಆಗಾಗ ಚಂದ್ರಿಕೆ ಹಾಗೂ ಚಂದ್ರಿಕೆಗಳಿರುವ ಕೊಠಡಿಯನ್ನು ಸಂಪೂರ್ಣವಾಗಿ ಸೋಂಕು ಮುಕ್ತಗೊಳಿಸಬೇಕಾಗುತ್ತದೆ.ಇದಕ್ಕಾಗಿ, ಸಂಸ್ಥೆಯು ಕೊಠಡಿಯ ಚಾವಣಿಗೆ ಪೈಪುಗಳನ್ನು ಅಳವಡಿಸಿ, ಸಿಂಪರಣಾ ಸಾಧನ (ಸ್ಪ್ರಿಂಕ್ಲರ್‌) ಜೋಡಿಸಿದೆ. ಈ ಪೈಪುಗಳನ್ನು ಕೊಠಡಿ ಕಿಟಕಿಯ ಮೂಲಕ ಆಚೆ ತಂದು ವಿದ್ಯುತ್‌ ಮೋಟಾರ್‌ಗೆ ಸಂಪರ್ಕಿಸಿದೆ. ದೊಡ್ಡ ಡ್ರಂನಲ್ಲಿ ಇರಿಸಿರುವ ರಾಸಾಯನಿಕ ದ್ರಾವಣವು ಈ ಪೈಪುಗಳ ಮೂಲಕ ಒಳ ಸಾಗಿ ಸ್ಪ್ರಿಂಕ್ಲರ್‌ಗಳ ಮೂಲಕ ಚಂದ್ರಿಕೆಗಳ ಮೇಲೆ ಸಿಂಪರಣೆಯಾಗುತ್ತದೆ. ಕೊಠಡಿಯ ಹೊರಗೆ ನಿಂತು ಒಂದು ಬಟನ್‌ ಒತ್ತಿದರೆ ಎಲ್ಲವೂ ತಂತಾನೆ ನಡೆಯುತ್ತದೆ.ಸಮಯ, ಹಣ ಉಳಿತಾಯ: 20X30 ಅಥವಾ 20X50 ಅಡಿ ಅಳತೆಯ ಕೊಠಡಿಯನ್ನು ಸೋಂಕು ಮುಕ್ತಗೊಳಿಸಲು 1ರಿಂದ 2 ಗಂಟೆ ತಗುಲುತ್ತದೆ. ಹೊಸ ತಂತ್ರಜ್ಞಾನದ ಮೂಲಕ ಕೇವಲ 5 ನಿಮಿಷದಲ್ಲಿ ಕೆಲಸ ಮುಗಿಯುತ್ತದೆ. ಹಣ ಉಳಿತಾಯವೂ ಆಗುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಕೃಷಿ ಕಾರ್ಮಿಕರ ಕೊರತೆ ಇರುವಲ್ಲಿಯೂ ಇದು ಸಹಕಾರಿಯಾಗಲಿದೆ.‘ಸಂಸ್ಥೆಯು ಪ್ರಯೋಗಾರ್ಥವಾಗಿ ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ 46 ಘಟಕಗಳನ್ನು ಅಳವಡಿಸಿದ್ದು ಯಶಸ್ವಿಯೂ ಆಗಿದೆ. ಹಂತ ಹಂತವಾಗಿ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು. 20X30 ಅಡಿ ಹಾಗೂ 20X50 ಅಡಿ ಅಳತೆಯ ಕೊಠಡಿಗಳಿಗೆ ಈ ತಂತ್ರಜ್ಞಾನ ಅಳವಡಿಸಲು ಕ್ರಮವಾಗಿ ₹ 26,500 ಹಾಗೂ ₹ 34,500 ಖರ್ಚಾಗುತ್ತದೆ. ಒಮ್ಮೆ ಅಳವಡಿಸಿದರೆ ಕನಿಷ್ಠ 15 ವರ್ಷ ಯಾವುದೇ ನಿರ್ವಹಣೆ ಇರುವುದಿಲ್ಲ’ ಎಂದು ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಸಂಸ್ಥೆ ವಿಜ್ಞಾನಿ ಎ.ಆರ್.ನರಸಿಂಹ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.₹ 5 ಕೋಟಿ ಅನುದಾನ: ‘ಈ ತಂತ್ರಜ್ಞಾನವನ್ನು ಶ್ಲಾಘಿಸಿರುವ ‘ರಾಷ್ಟ್ರೀಯ ಕೃಷಿ ವಿಜ್ಞಾನ ಯೋಜನೆ’ಯು, ತಂತ್ರಜ್ಞಾನದ ಅಳವಡಿಕೆಗಾಗಿ ₹ 5 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ರೈತರಿಗೆ ಶೇ 50ರಷ್ಟು ಸಹಾಯಧನ ಸಿಗಲಿದೆ. ‘ಭೂ ಸಮೃದ್ಧಿ ಯೋಜನೆ’ ಜಾರಿ ಇರುವ ಜಿಲ್ಲೆಗಳಲ್ಲಿ ಶೇ 100ರಷ್ಟು ಸಹಾಯಧನವೂ ಸಿಗಲಿದೆ’ ಎಂದೂ ಅವರು  ಮಾಹಿತಿ ನೀಡಿದ್ದಾರೆ.ರೈತನ ಸಂಶೋಧನೆ

ಈ ತಂತ್ರಜ್ಞಾನವನ್ನು ಸಂಶೋಧಿಸಿರುವುದು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಯಲಂಗನಹಳ್ಳಿ ರೈತ ಎಸ್‌.ವಿ.ರಾಜಶೇಖರಪ್ಪ. ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಹುಳು ಸಾಕಾಣಿಕಾ ಮನೆಯಲ್ಲಿ ಪ್ರಾಯೋಗಿಕವಾಗಿ ನೀರು ಸಿಂಪಡಿಸುವ ಪೈಪುಗಳನ್ನು ತಲೆಕೆಳಗಾಗಿ ಸೂರಿಗೆ ಅಳವಡಿಸಿದ್ದರು. ತಮ್ಮ ಪ್ರಯೋಗ ಯಶಸ್ವಿಯಾಗಿದ್ದನ್ನು ಕಂಡು ಈ ತಂತ್ರಜ್ಞಾನವನ್ನು ಸಂಸ್ಥೆಗೆ ನೀಡಿದ್ದಾರೆ. ಇದೇ ಆಧಾರದ ಮೇಲೆ ಸಂಸ್ಥೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.

*

8 ವರ್ಷದಿಂದ ಈ ತಂತ್ರಜ್ಞಾನವನ್ನು ಬಳಸುತ್ತಿದ್ದೇನೆ. ಪ್ರಾಯೋಗಿಕವಾಗಿ ಕಂಡುಹಿಡಿದ ಈ ತಂತ್ರಜ್ಞಾನದಿಂದ ರೈತರಿಗೆ ಅನುಕೂಲವಾಗಲಿದೆ.

ಎಸ್‌.ವಿ.ರಾಜಶೇಖರಪ್ಪ,

ಪ್ರಗತಿಪರ ರೈತ

ಪ್ರತಿಕ್ರಿಯಿಸಿ (+)