ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಗೆ ರಾಜಸ್ಥಾನದಿಂದ ಮತ್ತಷ್ಟು ಕಲ್ಲು

ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಗೆ ವೇಗ
Last Updated 6 ಜುಲೈ 2017, 19:50 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯಲ್ಲಿನ ರಾಮಸೇವಕಪುರದಲ್ಲಿರುವ ವಿಶ್ವ ಹಿಂದೂ ಪರಿಷತ್‌ನ  (ವಿಎಚ್‌ಪಿ) ಕಚೇರಿಯ ಸಮೀಪದ ಗೋದಾಮಿಗೆ ಬುಧವಾರ ಬೆಳಿಗ್ಗೆ ಮೂರು ಟ್ರಕ್‌ಗಳಲ್ಲಿ ಕೆತ್ತನೆ ಕಲ್ಲುಗಳು ಬಂದಿದ್ದು, ಈ ಬಗ್ಗೆ ಕೆಲವು ಮುಸ್ಲಿಂ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

‘ರಾಜಸ್ಥಾನದಿಂದ ಸುಮಾರು 200 ಟನ್‌ನಷ್ಟು ಕಲ್ಲುಗಳು ಬಂದಿವೆ. ಅವನ್ನು ಕಚೇರಿ ಸಮೀಪದ ಗೋದಾಮಿನಲ್ಲಿ ನಡೆಸುತ್ತಿರುವ ಕೆತ್ತನೆ ಕಾರ್ಯಾಗಾರದ ಬಳಿ ಇಳಿಸಲಾಗಿದೆ’ ಎಂದು ವಿಎಚ್‌ಪಿ ಮೂಲಗಳು ದೃಢಪಡಿಸಿವೆ.

‘ಸುಮಾರು 15 ದಿನಗಳ ಹಿಂದೆ ಎರಡು ಟ್ರಕ್‌ಗಳಲ್ಲಿ ಕಲ್ಲುಗಳನ್ನು ತರಿಸಲಾಗಿತ್ತು. ಇನ್ನು ಮುಂದೆಯೂ ಮತ್ತಷ್ಟು ಕಲ್ಲುಗಳು ಇಲ್ಲಿಗೆ ಬರುತ್ತವೆ. ಗೋದಾಮಿನಲ್ಲಿ ಕೆತ್ತನೆ ಕಾರ್ಯ ಹಗಲು–ರಾತ್ರಿ ನಡೆಯುತ್ತಿದೆ’ ಎಂದು ಮೂಲಗಳು ಹೇಳಿವೆ.

ವಿಎಚ್‌ಪಿ ವಕ್ತಾರ ಶರದ್ ಶರ್ಮಾ, ‘ಇಲ್ಲಿಗೆ ಕಲ್ಲುಗಳನ್ನು ತರುವುದರ ಮೇಲೆ ನಿರ್ಬಂಧ ಇಲ್ಲ. 1990ರಿಂದಲೂ ಇಲ್ಲಿಗೆ ಕಲ್ಲುಗಳನ್ನು ತರಲಾಗುತ್ತಿದೆ. ಈ ಕೆಲಸ ಮುಂದೆಯೂ ನಡೆಯಲಿದೆ’ ಎಂದು ಹೇಳಿದ್ದಾರೆ.

‘ಈ ಹಿಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ತಮ್ಮ ಸಲಹೆಗಾರರ ಪ್ರಭಾವಕ್ಕೆ ಸಿಲುಕಿ, ಇಲ್ಲಿಗೆ ಕಲ್ಲುಗಳನ್ನು ತರುವುದನ್ನು ಮೌಖಿಕವಾಗಿ ನಿರ್ಬಂಧಿಸಿದ್ದರು. ಈಗ ಆ ತೊಂದರೆ ಇಲ್ಲ. ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಅನುವು ಮಾಡಿಕೊಡುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ ಕಾರಣ, ರಾಮ ಮಂದಿರ ನಿರ್ಮಾಣದ ಉದ್ದೇಶದಿಂದ ಇಲ್ಲಿಗೆ ಕಲ್ಲುಗಳನ್ನು ತರುವುದನ್ನು ಸರ್ಕಾರ ತಡೆಯಬೇಕು. ತೀರ್ಪು ಬರುವವರೆಗೂ ಎಲ್ಲರೂ ಕಾಯಬೇಕು. ದೇಶದಲ್ಲಿನ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ಮುಸ್ಲಿಂ ಸಂಘಟನೆಗಳು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT