ಭಾನುವಾರ, ಡಿಸೆಂಬರ್ 8, 2019
21 °C
ಆಧುನಿಕ, ಪಾರದರ್ಶಕ ತೆರಿಗೆ ವ್ಯವಸ್ಥೆಯತ್ತ ದಾಪುಗಾಲು: ಇಸ್ರೇಲ್‌ನಲ್ಲಿ ಮೋದಿ ಹೇಳಿಕೆ

ಜಿಎಸ್‌ಟಿ ಮಹಾ ಆರ್ಥಿಕ ಸುಧಾರಣಾ ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ಜಿಎಸ್‌ಟಿ ಮಹಾ ಆರ್ಥಿಕ ಸುಧಾರಣಾ ಕ್ರಮ

ಟೆಲ್‌ ಅವೀವ್‌: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನವನ್ನು ಅತೀ ದೊಡ್ಡ ಆರ್ಥಿಕ ಸುಧಾರಣಾ ಕ್ರಮ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ಈಗ ಆಧುನಿಕ, ಪಾರದರ್ಶಕ ಸ್ಥಿರ ಮತ್ತು ಊಹಿಸಬಹುದಾದ ತೆರಿಗೆ ವ್ಯವಸ್ಥೆಯತ್ತ ದಾಪುಗಾಲು ಹಾಕಿದೆ ಎಂದು ಹೇಳಿದರು.ಭಾರತ–ಇಸ್ರೇಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಿಯಂತ್ರಣ ಮತ್ತು ನೀತಿಗೆ ಸಂಬಂಧಿಸಿದಂತೆ ಭಾರತದಲ್ಲಿ ಕಂಪೆನಿಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ದೇಶದಲ್ಲಿ ಸರಾಗವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ’ ಎಂದರು.ಭೇಟಿಯ ಸಂದರ್ಭದಲ್ಲಿ  ಎರಡೂ ರಾಷ್ಟ್ರಗಳ ನಡುವೆ 500 ಕೋಟಿ ಡಾಲರ್‌ (₹32,500 ಕೋಟಿ) ಮೌಲ್ಯದ ಒಪ್ಪಂದ ನಡೆದಿರುವುದನ್ನು ಪ್ರಸ್ತಾಪಿಸಿದ ಅವರು, ‘ಭಾರತ–ಇಸ್ರೇಲ್‌ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ’ ಎಂದು ಪ್ರತಿಪಾದಿಸಿದರು.‘ನಮ್ಮ ಸರ್ಕಾರವು ಭಾರತವನ್ನು ಜಾಗತಿಕ ಮಟ್ಟದಲ್ಲಿ ತಯಾರಿಕೆಯ ಮಹತ್ವದ ಕೇಂದ್ರವನ್ನಾಗಿ ಮಾಡುತ್ತಿದೆ.  ನಮ್ಮ ಯುವಜನರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಇದು ಅನಿವಾರ್ಯ. ಅದಕ್ಕಾಗಿ ಭಾರತದಲ್ಲಿ ತಯಾರಿಸಿ ಯೋಜನೆ ಆರಂಭಿಸಿದ್ದೇವೆ’ ಎಂದು ಅವರು ವಿವರಿಸಿದರು.‘ಇಸ್ರೇಲ್‌ ಅನ್ನು ನವೋದ್ಯಮದ (ಸ್ಟಾರ್ಟ್‌ಅಪ್‌) ರಾಷ್ಟ್ರ ಎಂದು ಕರೆಯಲಾಗುತ್ತದೆ. ಹೊಸ ಹೊಸ ಪರಿಕಲ್ಪನೆಗಳಿಗೆ ಮತ್ತು ಅವುಗಳು ಹೊರಹೊಮ್ಮಲು ಬೇಕಾದಂತಹ ಅತ್ಯಂತ ವಿಶಿಷ್ಟವಾದ ಸೂಕ್ಷ್ಮ ಮತ್ತು ಪೂರಕವಾದ ವಾತಾವರಣ ಇಲ್ಲಿದೆ. ಇದರ ಕೀರ್ತಿ ಇಸ್ರೇಲ್‌ನ ಉದ್ಯಮಿಗಳಿಗೆ ಸಲ್ಲಬೇಕು’ ಎಂದು ಅವರು ಶ್ಲಾಘಿಸಿದರು.‘ಸ್ಟಾರ್ಟ್‌ಅಪ್‌ ಇಂಡಿಯಾ ಯೋಜನೆಯಲ್ಲಿ ಭಾರತ–ಇಸ್ರೇಲ್‌ ಪಾಲುದಾರಿಕೆಗೆ ಸಾಕಷ್ಟು ಅವಕಾಶಗಳಿವೆ. ಇದಕ್ಕಾಗಿ ಎರಡೂ ರಾಷ್ಟ್ರಗಳ ನಡುವೆ  ಇಂದು ಅಧಿಕೃತವಾಗಿ ಬಂಧ ಬೆಸೆಯಲಾಗಿದೆ’ ಎಂದು ಅವರು ಹೇಳಿದರು.

ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಜತೆ ನರೇಂದ್ರ ಮೋದಿ ಅವರು ಇಸ್ರೇಲ್‌ನ ಹಡೆರಾದ ಓಲ್ಗಾ ಕಡಲ ಕಿನಾರೆಯಲ್ಲಿ ಅಡ್ಡಾಡಿದರುಉಪ್ಪು ನೀರು ಶುದ್ಧೀಕರಣ ಕಾರ್ಯ ವೀಕ್ಷಿಸಿದ ಮೋದಿ: ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಓಲ್ಗಾ ಸಮುದ್ರ ತೀರದಲ್ಲಿ ಇರುವ ಸಮುದ್ರ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಕಾರ್ಯವನ್ನು ವೀಕ್ಷಿಸಿದರು.ಈ ಇಬ್ಬರು ಧುರೀಣರು ಸಂಚಾರಿ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣ ಕಾರ್ಯವನ್ನು ವೀಕ್ಷಿಸಿ ಪರಸ್ಪರ ಚರ್ಚೆ ನಡೆಸಿದರು. ನಂತರ ಇಬ್ಬರೂ ಶುದ್ಧೀಕರಿಸಿದ ನೀರಿನ ರುಚಿ ಪರೀಕ್ಷಿಸಿದರು. ಗಾಲ್ ಸಂಚಾರಿ ನೀರು ಶುದ್ಧೀಕರಣ ಘಟಕದಲ್ಲಿ ಉಪ್ಪು ನೀರನ್ನು ಉತ್ತಮ ಗುಣಮಟ್ಟದ ಕುಡಿಯುವ ನೀರನ್ನಾಗಿ ಪರಿವರ್ತಿಸಲಾಗುತ್ತದೆ.ಈ ಘಟಕವು ಪ್ರತಿ ದಿನ 20 ಸಾವಿರ  ಲೀಟರ್ ಸಮುದ್ರ ನೀರು, 80 ಸಾವಿರ ಲೀಟರ್ ರಾಡಿ ನೀರು ಅಥವಾ ಕಲ್ಮಶ ನದಿ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ.

ನೀರಿನ ಸಂರಕ್ಷಣೆ, ತ್ಯಾಜ್ಯ ನೀರು ಶುದ್ಧೀಕರಿಸಿ ಕೃಷಿಗೆ ಬಳಸುವ ವಿಧಾನ ಮತ್ತು ಗಂಗಾ ನದಿ ಶುದ್ಧೀಕರಣ ಯೋಜನೆಯಲ್ಲಿ ಸಹಭಾಗಿತ್ವ ಹೊಂದುವ ಬಗ್ಗೆ ಮೋದಿ ಮತ್ತು ನೆತನ್ಯಾಹು ಚರ್ಚಿಸಿದರು.ವ್ಯಾಪಾರ ಹೆಚ್ಚಿಸುವ ಗುರಿ

ಭಾರತ–ಇಸ್ರೇಲ್‌ ಸಿಇಒ ವೇದಿಕೆ  ಸಭೆ ಸೇರುತ್ತಿರುವುದು ಇದು ಮೊದಲನೇ ಬಾರಿ. ಮುಂದಿನ ಐದು ವರ್ಷಗಳಲ್ಲಿ ಎರಡೂ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ವ್ಯಾಪಾರವನ್ನು 500 ಕೋಟಿ ಡಾಲರ್‌ನಿಂದ (₹32,500 ಕೋಟಿ) 2000 ಕೋಟಿ ಡಾಲರ್‌ಗಳಿಗೆ (₹1.3 ಲಕ್ಷ ಕೋಟಿ) ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ.

ಆರು ಸಮಿತಿಗಳು: ಸಿಇಒ ವೇದಿಕೆಯು ನವೋದ್ಯಮ, ಔಷಧ ಮತ್ತು ಜೀವ ವಿಜ್ಞಾನ, ಆಂತರಿಕ ಭದ್ರತೆ, ಕೃಷಿ, ನೀರು ಮತ್ತು ಇಂಧನ ವಲಯಗಳಲ್ಲಿ ಆರು ಜಂಟಿ ಸಮಿತಿಗಳನ್ನು ರಚಿಸಿದೆ.

ಹುತಾತ್ಮ ಭಾರತೀಯ ಯೋಧರ ಸಮಾಧಿಗೆ ಮೋದಿ ಅವರು ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರುಹುತಾತ್ಮ ಭಾರತೀಯ ಯೋಧರ ಸ್ಮಾರಕಕ್ಕೆ ಮೋದಿ ಗೌರವ

ಹೈಫಾ: ಇಸ್ರೇಲ್‌ ಪ್ರವಾಸದ ಕೊನೆಯ ದಿನವಾದ ಗುರುವಾರ  ಪ್ರಧಾನಿ ಮೋದಿ ಅವರು ಮೊದಲ ಜಾಗತಿಕ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸಮಾಧಿ ಸ್ಥಳಕ್ಕೆ  ಭೇಟಿ ನೀಡಿ ಗೌರವ ಸಲ್ಲಿಸಿದರು.

ಹುತಾತ್ಮ ಯೋಧರ ಕೊಡುಗೆ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯದ ಪ್ರತೀಕ ಎಂದು ಮೋದಿ ಹೇಳಿದರು. ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರು ಮೋದಿ ಅವರೊಂದಿಗೆ ಇದ್ದರು. ಮೊದಲ ಮಹಾಯುದ್ಧದ ‘ಹಫಿಯಾದ ಹೀರೊ’  ಎಂದು ಖ್ಯಾತರಾದ ಮೇಜರ್‌ ಠಾಕೂರ್‌ ದಲಪತ್‌ ಸಿಂಗ್‌ ಎಂ.ಸಿ ಸ್ಮರಣಾರ್ಥ ಫಲಕವನ್ನು ಮೋದಿ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಮುಂದಿನ ವರ್ಷ ಹಫಿಯಾ ವಿಮೋಚನೆಯಾಗಿ ನೂರು ವರ್ಷಗಳು ತುಂಬುತ್ತವೆ. ಅದರ ಸ್ಮರಣಾರ್ಥ  ಆಚರಿಸುವ ಶತಮಾನೋತ್ಸವ  ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ಗಟ್ಟಿಗೊಳಿಸಲು ಮತ್ತೊಂದು ಸಂದರ್ಭವಾಗಲಿದೆ ಎಂದು ಮೋದಿ  ಅಭಿಪ್ರಾಯಪಟ್ಟರು. ಮೊದಲ ಜಾಗತಿಕ ಯುದ್ಧದಲ್ಲಿ  ಟರ್ಕಿಯ ಒಟ್ಟೊಮನ್‌ ಅರಸನ ಸೈನ್ಯ   ಇಸ್ರೇಲ್‌ನ ಹೈಫಾ ನಗರವನ್ನು ಆಕ್ರಮಿಸಿಕೊಂಡಾಗ ಅದರ ವಿಮೋಚನಾ  ಹೋರಾಟದಲ್ಲಿ  ಹುತಾತ್ಮರಾದ 44 ಭಾರತೀಯ ಯೋಧರ ಸಮಾಧಿಗಳು ಇಲ್ಲಿವೆ402 ವರ್ಷ ಟರ್ಕಿಯ ಅರಸೊತ್ತಿಗೆ ಆಡಳಿತಕ್ಕೆ ಒಳಪಟ್ಟಿದ್ದ ಹೈಫಾ ನಗರದ ವಿಮೋಚನೆಗಾಗಿ ನಡೆದ  ಹೋರಾಟ ಮತ್ತು ಭಾರತೀಯ ಯೋಧರ ಕೊಡುಗೆಬಣ್ಣಿಸುವ ಇತಿಹಾಸವನ್ನು 2012ರಲ್ಲಿ ಶಾಲಾ ಪಠ್ಯದಲ್ಲಿ ಸೇರಿಸಲಾಗಿದೆ. ಹುತಾತ್ಮ ಭಾರತೀಯ ಯೋಧರ ಗೌರವಾರ್ಥ ಪ್ರತಿವರ್ಷ ಸಮಾರಂಭ ಏರ್ಪಡಿಸಲು ಹೈಫಾ ನಗರಸಭೆ ತೀರ್ಮಾನಿಸಿದೆ. ಈ ಯೋಧರ ಸ್ಮರಣಾರ್ಥ ಭಾರತೀಯ ಸೇನೆ ಪ್ರತಿ ವರ್ಷ ಸೆಪ್ಟೆಂಬರ್‌ 23ರಂದು ಹಫಿಯಾ ದಿವಸವನ್ನು ಆಚರಿಸುತ್ತದೆ.ಹೈಫಾ ನಗರ ವಿಮೋಚನೆಯಲ್ಲಿ ಮೈಸೂರು ಸೇನೆ

ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸೇನೆಯೂ ಮೊದಲ ಜಾಗತಿಕ ಯುದ್ಧದಲ್ಲಿ ಪಾಲ್ಗೊಂಡಿತ್ತು. ನಾಲ್ವಡಿಯವರು ತಮ್ಮ ಸೇನೆಯ ಮೈಸೂರು ಲ್ಯಾನ್ಸರ್ಸ್‌ ತುಕುಡಿಯನ್ನು ಹೈಫಾ ನಗರದ ವಿಮೋಚನೆಗಾಗಿ  ಹೋರಾಡುತ್ತಿದ್ದ ಬ್ರಿಟಿಷರ ನೆರವಿಗೆ  ಕಳಿಸಿದ್ದರು. ಆ ಯುದ್ಧದಲ್ಲಿ ಮೈಸೂರಿನ ಕೆಲವು ಯೋಧರು ಹುತಾತ್ಮರಾಗಿದ್ದರು.

ಪ್ರತಿಕ್ರಿಯಿಸಿ (+)