ಭಾನುವಾರ, ಡಿಸೆಂಬರ್ 8, 2019
23 °C
ಶಿವಾನಂದ ವೃತ್ತದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಅಸ್ತು: ಒಟ್ಟು 326.25 ಮೀಟರ್‌ ಉದ್ದ

10 ದಿನಗಳಲ್ಲಿ ಕಾಮಗಾರಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

10 ದಿನಗಳಲ್ಲಿ ಕಾಮಗಾರಿ ಆರಂಭ

ಬೆಂಗಳೂರು: ನಗರ ಹೃದಯ ಭಾಗದ ಶಿವಾನಂದ ವೃತ್ತದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಬಿಬಿಎಂಪಿ ಕೈಗೆತ್ತಿಕೊಂಡಿರುವ  ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ 10 ದಿನಗಳಲ್ಲಿ ಆರಂಭವಾಗಲಿದೆ.

ಹರೇಕೃಷ್ಣ ರಸ್ತೆ ಕಡೆಯಿಂದ ಶೇಷಾದ್ರಿಪುರ ರಸ್ತೆ ಕಡೆಗೆ(ನೆಹರೂ ವೃತ್ತ) 326.25 ಮೀಟರ್‌ ಉದ್ದದ ಉಕ್ಕಿನ ಮೇಲ್ಸೇತುವೆ ₹19.86 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಭೂಸ್ವಾಧೀನ ಮತ್ತು ನಿರ್ಮಾಣ ಕಾಮಗಾರಿ ಸೇರಿ ಉಕ್ಕಿನ ಮೇಲ್ಸೇತುವೆಗೆ ಅಂದಾಜು ₹50 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ಯೋಜನೆಗೆ ಕಳೆದ ಜೂನ್‌ 7ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮತಿ ದೊರೆತಿದೆ. 6 ವರ್ಷಗಳ ಹಿಂದಿನ ಯೋಜನೆಗೆ ಪುನಃ ಚಾಲನೆ ಸಿಕ್ಕಂತಾಗಿದೆ.

‘ಟೆಂಡರ್‌ ಪ್ರಕ್ರಿಯೆ ಅಂತಿಮವಾಗಿದೆ. ಎಂ.ವೆಂಕಟರಾವ್‌ ಇನ್ಪ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪೆನಿ ಗುತ್ತಿಗೆ ಪಡೆದಿದೆ. ಇದೇ 15ರೊಳಗೆ ಕಾಮಗಾರಿ ಆರಂಭಿಸಲಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ಉಕ್ಕು ಮತ್ತು ಸಿಮೆಂಟ್‌ ಮಿಶ್ರಿತ ಸಂರಚನೆಯ ಮೇಲ್ಸೇತುವೆ. ವಾಹನಗಳು ಸಂಚರಿಸುವ ಭಾಗದಲ್ಲಿ ಕಾಂಕ್ರೀಟ್‌ ಇರಲಿದೆ. ಚತುಷ್ಪಥದ ಈ ರಸ್ತೆಯ ಒಟ್ಟು ಅಗಲ 15 ಮೀಟರ್‌ ಇರಲಿದೆ’ ಎಂದು ಮಾಹಿತಿ ನೀಡಿದರು.

‘ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಂಡಿರುವ ಈ ಕಾಮಗಾರಿಗಾಗಿ 1500.36 ಚದರ ಮೀಟರ್ ಜಾಗ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. 9 ತಿಂಗಳೊಳಗೆ ಕಾಮಗಾರಿ ಪೂರ್ಣವಾಗಲಿದೆ’ ಎಂದು  ತಿಳಿಸಿದರು. ‘ಈ ರಸ್ತೆಯಲ್ಲಿ ಬೆಳಗಿನ ಸಮಯ ಸಂಚಾರ ದಟ್ಟಣೆ ಇರುವಾಗ ಗಂಟೆಗೆ ಸುಮಾರು 14ರಿಂದ 15 ಸಾವಿರ ವಾಹನಗಳು ಸಂಚರಿಸುತ್ತಿವೆ.

ಚಾಲಕರು ಮತ್ತು ಬೈಕ್‌ ಸವಾರರು ಸಿಗ್ನಲ್‌ನಲ್ಲಿ  ಕನಿಷ್ಠ ಎರಡೂವರೆಯಿಂದ ಮೂರು ನಿಮಿಷ ಕಾಯಬೇಕು. ಉಕ್ಕಿನ ಮೇಲ್ಸೇತುವೆ ನಿರ್ಮಾಣವಾದರೆ ಈ ಮಾರ್ಗ ಸಿಗ್ನಲ್‌ ಮುಕ್ತವಾಗಲಿದೆ. ಸಂಚಾರ ದಟ್ಟಣೆ ಸಮಸ್ಯೆಯೂ ಶೇ 90ರಷ್ಟು ಪರಿಹಾರವಾಗಲಿದೆ’ ಎಂದು ಹೇಳಿದರು.

‘ಸೇತುವೆ ನಿರ್ಮಾಣಕ್ಕೆ ಹೆಚ್ಚು ಮರ ಕಡಿಯಬೇಕಾಗಿಲ್ಲ.

ಕೆಲವು ಮರಗಳನ್ನು ತೆರವುಗೊಳಿಸುವ ಸನ್ನಿವೇಶ ಎದುರಾದರೆ, ಪಾಲಿಕೆ ವತಿಯಿಂದಲೇ ತಂತ್ರಜ್ಞಾನ ಬಳಸಿಕೊಂಡು ಮರಗಳನ್ನು ಜೀವಂತವಾಗಿ  ಬೇರೆಡೆಗೆ ಸ್ಥಳಾಂತರಿಸಿ, ಮರು ನಾಟಿ ಮಾಡಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)