ಭಾನುವಾರ, ಡಿಸೆಂಬರ್ 8, 2019
21 °C

ನಮ್ಮ ಮೆಟ್ರೊ ಸಿಬ್ಬಂದಿ ಪ್ರತಿಭಟನೆ; ರೈಲು ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಮೆಟ್ರೊ ಸಿಬ್ಬಂದಿ ಪ್ರತಿಭಟನೆ; ರೈಲು ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

ಬೆಂಗಳೂರು: ಮೆಟ್ರೊ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್‌) ಪೊಲೀಸರ ನಡುವೆ ಗುರುವಾರ ಮಾರಾಮಾರಿ ನಡೆದಿದ್ದು, ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ಖಂಡಿಸಿ ಶುಕ್ರವಾರ ನಮ್ಮ ಮೆಟ್ರೊ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಬೆಳಿಗ್ಗೆಯಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಬೆಳಿಗ್ಗೆ ಮೆಟ್ರೊ ರೈಲು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ನಿಲ್ದಾಣದ ಬಾಗಿಲು ಮುಚ್ಚಿರುವುದನ್ನು ಕಂಡು ಕಚೇರಿಗಳಿಗೆ ತೆರಳಲು ಪರದಾಡಿದರು. ಬಳಿಕ ಬಸ್, ಆಟೋ ಹಿಡಿದು ತೆರಳಿದ್ದು ಕಂಡುಬಂತು. ನಿಲ್ದಾಣದ ಬಳಿ ಬೈಕ್‌ ನಿಲ್ಲಿಸಿ ಅಲ್ಲಿಂದ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದವರು ಬೈಕ್‌ಗಳಲ್ಲಿಯೇ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದರು.

ರೈಲು ಸಂಚಾರವನ್ನು ಯಾವ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಪ್ರಯಾಣಿಕರು ಪ್ರಶ್ನಿಸಿಸುತ್ತಿದ್ದರು. ‘ನಮಗೆ ಕಾರಣ ಗೊತ್ತಿಲ್ಲ, ಯಾವಾಗ ರೈಲು ಸಂಚಾರ ಆರಂಭವಾಗುತ್ತದೆ ಎಂಬ ಮಾಹಿತಿಯೂ ನಮಗಿಲ್ಲ. ಬಂದ್‌ ಮಾಡಿ ಎಂದಿದ್ದಾರೆ, ಬಾಗಿಲು ಹಾಕಿದ್ದೇವೆ’ ಎಂದು ಅಲ್ಲಿದ್ದ ಭದ್ರತಾ ಸಿಬ್ಬಂದಿ ಉತ್ತರಿಸಿತ್ತಿದ್ದರು.

ಕೆಲ ಗಂಟೆಗಳಲ್ಲಿ ಸಂಚಾರ ಆರಂಭ

‘ಸದ್ಯಕ್ಕೆ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಲ ಗಂಟೆಗಳಲ್ಲಿ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತ ರಾವ್ ಅವರು ಬೆಳಿಗ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ಮೆಟ್ರೊ ಸಿಬ್ಬಂದಿ ಬೈಯಪ್ಪನಹಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ, ‘ಟರ್ಮಿನಲ್‌’ಗಳಿಂದಲೇ ರೈಲುಗಳು ಸಂಚಾರ ಆರಂಭಿಸಿಲ್ಲ. ಎಲ್ಲಾ ಮಾರ್ಗಗಳ ಸಂಚಾರ ಸ್ಥಗಿತವಾಗಿದೆ.

ಘಟನೆ ವಿವರ: ನಗರದ ಸರ್‌ ಎಂ. ವಿಶ್ವೇಶ್ವರಯ್ಯ (ಸೆಂಟ್ರಲ್‌ ಕಾಲೇಜು) ನಿಲ್ದಾಣದಲ್ಲಿ ಗುರುವಾರ ಮೆಟ್ರೊ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್‌) ಪೊಲೀಸರ ನಡುವೆ ಮಾರಾಮಾರಿ ನಡೆದಿದೆ.

ಘಟನೆ ಸಂಬಂಧ ಕಾನ್‌ಸ್ಟೆಬಲ್‌ ಆನಂದ ಗುಡ್ಡದ ಎಂಬುವರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದು, ಅದರನ್ವಯ ಎಫ್‌ಐಆರ್‌ ದಾಖಲಾಗಿದೆ. ಐವರು ಮೆಟ್ರೊ ಸಿಬ್ಬಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇವನ್ನೂ ಓದಿ...

ಮೆಟ್ರೊ ಸಿಬ್ಬಂದಿ–ಪೊಲೀಸರ ಮಾರಾಮಾರಿ: ಐವರು ವಶಕ್ಕೆ

ಪ್ರತಿಕ್ರಿಯಿಸಿ (+)