ಸೋಮವಾರ, ಡಿಸೆಂಬರ್ 16, 2019
25 °C

ಲಾಲೂ ಪ್ರಸಾದ್ ಯಾದವ್ ಮನೆ ಸೇರಿ 12 ಕಡೆ ಸಿಬಿಐ ದಾಳಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಲಾಲೂ ಪ್ರಸಾದ್ ಯಾದವ್ ಮನೆ ಸೇರಿ 12 ಕಡೆ ಸಿಬಿಐ ದಾಳಿ

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪಟ್ನಾದಲ್ಲಿರುವ ನಿವಾಸ ಮತ್ತು ದೇಶದಾದ್ಯಂತ 12 ಕಡೆ ಸಿಬಿಐ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಲಾಲೂ ಅವರು ರೈಲ್ವೆ ಸಚಿವರಾಗಿದ್ದಾಗ (2006) ರೈಲು ನಿಲ್ದಾಣಗಳ ಬಳಿ ಇರುವ ಹೋಟೆಲ್‌ಗಳ ನಿರ್ವಹಣೆಗಾಗಿ ಇಲಾಖೆ ನಡೆಸಿದ್ದ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ.

ಲಾಲೂ, ಅವರ ಪತ್ನಿ ರಾಬ್ರಿ ದೇವಿ, ಮಗ ಹಾಗೂ ಬಿಹಾರದ ಉಪ ಮುಖ್ಯಮಂತ್ರಿಯಾಗಿರುವ ತೇಜಸ್ವಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ರೈಲ್ವೆಯ ಆಹಾರ ವಿತರಣೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಮಾಜಿ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಗೋಯಲ್ ಮತ್ತು ಲಾಲೂ ಆಪ್ತ ಪ್ರೇಮ್‌ ಚಂದ್ ಗುಪ್ತಾ ಅವರ ಪತ್ನಿ ಸುಜಾತಾ ಅವರು ಪ್ರಕರಣದ ಇತರ ಆರೋಪಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತಾ ಅವರು ಕೇಂದ್ರದ ಮಾಜಿ ಸಚಿವರಾಗಿದ್ದಾರೆ.

ಪಟ್ನಾ, ದೆಹಲಿ, ಹರಿಯಾಣದ ಗುರುಗ್ರಾಮ, ಒಡಿಶಾದ ಪುರಿ, ಜಾರ್ಖಂಡ್‌ನ ರಾಂಚಿ ಸೇರಿ ಒಟ್ಟು 12 ಕಡೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಲಾಲೂ ಅವರ ಪತ್ನಿ ಮನೆಯಲ್ಲಿರಲಿಲ್ಲ. ಅವರು ಮೇವು ಹಗರಣದ ವಿಚಾರಣೆಗಾಗಿ ರಾಂಚಿಯ ಸಿಬಿಐ ನ್ಯಾಯಾಲಯಕ್ಕೆ ತೆರಳಿದ್ದರು.

ಹೋಟೆಲ್‌ಗಳ ನಿರ್ವಹಣೆಗೆ ಸಂಬಂಧಿಸಿ ನಡೆಸಿದ್ದ ಹರಾಜು ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಪ್ರತಿಕ್ರಿಯಿಸಿ (+)