ಸೋಮವಾರ, ಡಿಸೆಂಬರ್ 16, 2019
18 °C

ವಿದ್ಯಾರ್ಥಿ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆಗೆ ಹಿನ್ನಡೆ

ನಾಗರಾಜ ಎಸ್.ಎಚ್. Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆಗೆ ಹಿನ್ನಡೆ

ದಾವಣಗೆರೆ: ರಾಜ್ಯದ ಪ್ರತಿ ವಿದ್ಯಾರ್ಥಿಯ ಮಾಹಿತಿ ಬೆರಳ ತುದಿಯಲ್ಲೇ ಸಿಗಲಿ ಎಂಬ ಉದ್ದೇಶದಿಂದ ರೂಪಿಸಿದ ವಿದ್ಯಾರ್ಥಿಗಳ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆಗೆ ಹಿನ್ನಡೆಯಾಗುತ್ತಿದೆ. ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ಯೋಜನೆಗೆ ಶಿಕ್ಷಣ ಇಲಾಖೆ ಸೂಕ್ತ ಸೌಲಭ್ಯಗಳನ್ನೇ ಒದಗಿಸಿಲ್ಲ. ಹೀಗಾಗಿ ಶಿಕ್ಷಕರು ಸೈಬರ್‌ ಕೇಂದ್ರಗಳಿಗೆ ಅಲೆಯುವಂತಾಗಿದೆ.

‘ವಿದ್ಯಾರ್ಥಿಗಳ ದತ್ತಾಂಶವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲು ಪ್ರತಿ ಶಾಲೆಗೆ ಡೈಸ್‌ ಕೋಡ್‌ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗೂ ಆನ್‌ಲೈನ್‌ ಕೋಡ್‌ ಕೊಡಲಾಗಿದೆ. ವಿದ್ಯಾರ್ಥಿಯ ಮಾಹಿತಿಯನ್ನು ಪ್ರತಿ ತಿಂಗಳೂ ಅಪ್‌ಲೋಡ್‌ ಮಾಡಬೇಕು.

ಆದರೆ, ಇದಕ್ಕೆ ವಿಶೇಷ ಅನುದಾನವನ್ನೇನೂ ನೀಡಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್‌, ಇಂಟರ್‌ನೆಟ್‌ ಸಂಪರ್ಕ ಸಹ ಇಲ್ಲ. ಹೀಗಾಗಿ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಸೈಬರ್‌ ಕೇಂದ್ರಗಳಿಗೆ ಅಲೆಯುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಹರಪನಹಳ್ಳಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಗಂಗಾಧರ್.

‘ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ಸೌಲಭ್ಯವಿಲ್ಲ. ಹೀಗಾಗಿ, ಪ್ರತಿ ಶಾಲೆಗೆ ಟ್ಯಾಬ್‌ ಒದಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಇದುವರೆಗೂ ಟ್ಯಾಬ್‌ ವಿತರಣೆಯಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ, ದತ್ತಾಂಶ ನಮೂದಿಸಲು ಮೊಬೈಲ್‌ ಬಳಸಿಕೊಳ್ಳಿ ಎನ್ನುತ್ತಾರೆ. ಆದರೆ, ಶಾಲಾ ಅವಧಿಯಲ್ಲಿ ಶಿಕ್ಷಕರು ಮೊಬೈಲ್‌ ಬಳಸಬಾರದು ಎಂದು ಈ ಹಿಂದೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಹೀಗಾಗಿ ವೆಬ್‌ಸೈಟ್‌ಗೆ ವಿದ್ಯಾರ್ಥಿಗಳ ಮಾಹಿತಿ ತುಂಬಲು ಮೊಬೈಲ್‌ ಬಳಸಬೇಕೊ, ಬೇಡವೊ ಎಂಬ ಗೊಂದಲದಲ್ಲಿ ಮುಖ್ಯ ಶಿಕ್ಷಕರು ಸಿಲುಕಿದ್ದಾರೆ’ ಎಂದು ವಸ್ತುಸ್ಥಿತಿ ಬಿಚ್ಚಿಡುತ್ತಾರೆ ಅವರು.

‘ನಿರ್ದಿಷ್ಟ ವಿದ್ಯಾರ್ಥಿಗೆ ಯಾವಾಗ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸಲಾಯಿತು? ಹಾಜರಾತಿ ಎಷ್ಟಿದೆ? ಓದಿನಲ್ಲಿ ವಿದ್ಯಾರ್ಥಿಯ ಆಸಕ್ತಿ ಹೇಗಿದೆ? ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಎಷ್ಟ ಮಟ್ಟಿಗಿದೆ? ಪರೀಕ್ಷೆಗಳಲ್ಲಿ ಪಡೆಯುತ್ತಿರುವ ಅಂಕಗಳೆಷ್ಟು? ಫಲಿತಾಂಶ ಸುಧಾರಣೆ ಆಗುತ್ತಿದೆಯೇ? ಹೀಗೆ ಒಟ್ಟು 28 ಅಂಶಗಳನ್ನು ತಿಳಿಯಲು ವಿದ್ಯಾರ್ಥಿ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆಯಿಂದ ಸಾಧ್ಯವಾಗಲಿದೆ. ಆದರೆ, ಇಂತಹ ಮಹತ್ವದ ಯೋಜನೆಗೆ ಸೌಲಭ್ಯಗಳನ್ನು ಒದಗಿಸದಿರುವುದು ಶಿಕ್ಷಣ ಇಲಾಖೆಯ ಲೋಪ’ ಎಂದು ದೂರುತ್ತಾರೆ ಅವರು.

‘ಸರ್ಕಾರಿ ಶಾಲಾ ಶಿಕ್ಷಕರಿಗೆ ಈಗಾಗಲೇ ಬಾಹ್ಯ ಕೆಲಸಗಳ ಹೊರೆ ಹೆಚ್ಚಿದೆ. ಇದೀಗ ಶಾಲಾ ಮಕ್ಕಳ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆಯ ನಿರ್ವಹಣೆಯೂ ಸೇರಿಕೊಂಡಿದೆ. ವಿದ್ಯಾರ್ಥಿಗಳ ಮಾಹಿತಿ ದಾಖಲಿಸುವ ಕೆಲಸವನ್ನು ಶಿಕ್ಷಕರು ಜವಾಬ್ದಾರಿಯಿಂದ ಮಾಡುತ್ತೇವೆ. ಆದರೆ, ಶಿಕ್ಷಣ ಇಲಾಖೆ ಯೋಜನೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಬೋಧನೆ ಕಡೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಶಿಕ್ಷಕರ ಪ್ರತಿಭೆಯನ್ನು ಬೋಧನೆ ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸುವ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಗಂಗಾಧರ್.

ಆನ್‌ಲೈನ್‌ನಲ್ಲಿ ವರ್ಗಾವಣೆ ಪತ್ರ

ವಿದ್ಯಾರ್ಥಿ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆ ಬಳಸಿಕೊಂಡರೆ ಬೇರೆ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೂ ಆನ್‌ಲೈನ್‌ನಲ್ಲೇ ವರ್ಗಾವಣೆ ಪತ್ರ ಸಿಗಲಿದೆ. ವಿದ್ಯಾರ್ಥಿ ದಾಖಲಾಗುವ ಶಾಲೆಯ ಆಡಳಿತ ಮಂಡಳಿ ಆನ್‌ಲೈನ್‌ನಲ್ಲೇ ವರ್ಗಾವಣೆ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

2017–18ನೇ ಸಾಲಿನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ವರ್ಗಾವಣೆ ಪತ್ರ ನೀಡಬೇಕಿತ್ತು. ಆದರೆ, ಸೌಲಭ್ಯಗಳ ಕೊರತೆಯಿರುವುದರಿಂದ ಆನ್‌ಲೈನ್‌ನಲ್ಲಿ ವರ್ಗಾವಣೆ ಪತ್ರ ವಿತರಿಸುವ ಪ್ರಕ್ರಿಯೆ ತಡವಾಗಿದೆ. ಹೀಗಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವ ಜತೆಗೆ ಮುದ್ರಿತ ಪ್ರಮಾಣ ಪತ್ರವನ್ನೂ ನೀಡುತ್ತಿದ್ದೇವೆ ಎನ್ನುತ್ತಾರೆ ಗಂಗಾಧರ.

12 ಇಲಾಖೆಗಳಿಗೆ ಮಾಹಿತಿ

ವಿದ್ಯಾರ್ಥಿ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆಯಡಿ ಶಿಕ್ಷಣ ಇಲಾಖೆ ಸಂಗ್ರಹಿಸಿರುವ ಮಾಹಿತಿಯನ್ನು 12 ಇಲಾಖೆಗಳೊಂದಿಗೆ ಹಂಚಿಕೊಳ್ಳಲಿದೆ. ಕಂದಾಯ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪಸಂಖ್ಯಾತರ ಇಲಾಖೆಗಳಿಗೂ ವಿದ್ಯಾರ್ಥಿಗಳ ಮಾಹಿತಿ ಸಿಗಲಿದೆ. ಇದರಿಂದ ವಿದ್ಯಾರ್ಥಿ ವೇತನ ವಿತರಣೆಗೂ ಅನುಕೂಲವಾಗಲಿದೆ.

* * 

ಟ್ಯಾಬ್‌ ವಿತರಿಸುವ ಕಾರ್ಯ ರಾಜ್ಯ ಮಟ್ಟದಲ್ಲಿ ನಡೆಯಬೇಕು.  ಶಿಕ್ಷಕರ ಒತ್ತಡ ತಿಳಿದಿದೆ. ಆದರೆ, ಮಹತ್ವದ ಯೋಜನೆಯಾದ್ದರಿಂದ ಶಿಕ್ಷಕರು ಕೆಲಸ ಮಾಡಲೇಬೇಕಾಗಿದೆ.

–ಎಚ್‌.ಎಂ.ಪ್ರೇಮಾ, ಡಿಡಿಪಿಐ

 

ಪ್ರತಿಕ್ರಿಯಿಸಿ (+)