ಶುಕ್ರವಾರ, ಡಿಸೆಂಬರ್ 13, 2019
20 °C

ಭದ್ರಾವತಿ: ಭತ್ತ ಸಸಿ ಮಡಿ ಕೆಲಸಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ಭತ್ತ ಸಸಿ ಮಡಿ ಕೆಲಸಕ್ಕೆ ಅಡ್ಡಿ

ಭದ್ರಾವತಿ: ಮಳೆ ಹಾಗೂ ಜಲಾಶಯ ನೀರಿನ ಕೊರತೆ ತಾಲ್ಲೂಕಿನಲ್ಲಿ ಭತ್ತ ಸಸಿ ಮಡಿ ಕೆಲಸಕ್ಕೆ ಅಡ್ಡಿಯಾಗಿದೆ. ತಾಲ್ಲೂಕಿನ ಸುಮಾರು 10,300 ಹೆಕ್ಟೇರ್ ಪ್ರದೇಶ ಭತ್ತ ಬೆಳೆಯಲು ಯೋಗ್ಯವಾಗಿದೆ. ನೀರಿನ ಕೊರತೆ ಬಹುತೇಕ ಬೆಳೆಗಾರರು ಈ ಬೆಳೆ ವಿಷಯದಲ್ಲಿ ಹಿಂದೆ ಸರಿಯುವಂತೆ ಮಾಡಿದೆ.

ಕಳೆದ ಸಾಲಿನಲ್ಲಿ ಜಲಾಶಯ ವ್ಯಾಪ್ತಿಯ ಗೊಂದಿನಾಲಾದ ದುರಸ್ತಿ ಕೆಲಸ ನಡೆದಿತ್ತು. ನೀರಿನ ಅಭಾವದಿಂದಾಗಿ ಜನವರಿ–ಫೆಬ್ರುವರಿ ತಿಂಗಳ ಬೆಳೆಗೂ ಸಂಚಕಾರ ಒದಗಿತ್ತು.

ಜಲಾಶಯದ ನೀರಿನ ಮಟ್ಟ ಕನಿಷ್ಠ 145 ಅಡಿ ತುಂಬುವ ತನಕ ನೀರು ಹೊರಬಿಡುವ ಪ್ರಶ್ನೆಯೇ ಇಲ್ಲ. ಅಷ್ಟು ಭರ್ತಿಯಾದ ನಂತರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಎಷ್ಟು ಪ್ರಮಾಣದ ನೀರು ಬಿಡಬೇಕೆಂದು ನಿರ್ಧರಿಸಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈ ಪರಿಸ್ಥಿತಿಯ ನಡುವೆಯೂ ಎಡನಾಲಾ ಭಾಗದ ಹಿರಿಯೂರು ಹಾಗೂ ಕಸಬಾ ಹೋಬಳಿಯ ಸುಮಾರು 4,400 ಹೆಕ್ಟೇರ್ ಪ್ರದೇಶ ದಲ್ಲಿ ಸಸಿ ಮಡಿ ಕಾರ್ಯ

ನಡೆದಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಸಂದೀಪ್.

ಆನವೇರಿ, ಹೊಳೆಹೊನ್ನೂರು, ಕಲ್ಲಿಹಾಳ ಭಾಗದಲ್ಲಿ ನಡೆಯಬೇಕಿದ್ದ ಭತ್ತ ಸಸಿ ಮಡಿ ಕೆಲಸಕ್ಕೆ  ಹಿನ್ನಡೆಯಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆನವೇರಿ ಭಾಗದಲ್ಲಿ ಸುಮಾರು 1,800 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳಕ್ಕೆ ಬಿತ್ತನೆ ಮಾಡಲಾಗಿದ್ದು, ಉತ್ತಮ ಫಲದ ನಿರೀಕ್ಷೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ತಾಲ್ಲೂಕಿನ ಶೇ 40ರಷ್ಟು ಪ್ರದೇಶದಲ್ಲಿ ಮಾತ್ರ ಸದ್ಯಕ್ಕೆ ಭತ್ತ ಸಸಿ ಮಡಿ ಕಾರ್ಯ ನಡೆದಿದೆ ಎಂದೂ ತಿಳಿಸಿದರು.

ಮೈದಾನವಾದ ಕೆರೆಗಳು: ‘ಜಲಾಶಯದ ನೀರಿನ ಅಭಾವ, ಮಳೆ ಅವಕೃಪೆಯ ಕಾರಣ ಭತ್ತ ಬೆಳೆಗೆ ನೀರು ಒದಗಿಸುತ್ತಿದ್ದ ಅನುಪಿನಕೆರೆ ಹಾಗೂ ಹೊಸಕೆರೆ ಬತ್ತಿಹೋಗಿ, ಆಟದ ಮೈದಾನಗಳಂತಾಗಿವೆ’ ಎನ್ನುತ್ತಾರೆ ಹೊಳೆಹೊನ್ನೂರು ಹೋಬಳಿ ಸಿದ್ಲೀಪುರದ ಎನ್.ಎಲ್. ಹನುಮಂತರಾವ್.

‘ಭತ್ತದ ಒಕ್ಕಲು ನಡೆದು ಆಷಾಢದ ವೇಳೆಗೆ ಸಸಿ ಮಡಿ ಮೇಲೆ ಗುಬ್ಬಿ ಬರುತ್ತವೆ. ಅವನ್ನು ಓಡಿಸಬೇಕೆಂದು ಕಾಯುತ್ತಿದ್ದ ನಾವು ಈ ಬಾರಿ ಜಮೀನನ್ನು ಖಾಲಿ ಬಿಡುವಂತಾಗಿದೆ’ ಎಂದು ಮಾರಶೆಟ್ಟಿಹಳ್ಳಿ ವಿಠಲರಾವ್ ಅಳಲು ತೋಡಿಕೊಂಡರು.

‘ಒಂದಿಷ್ಟು ಮಳೆ ನೀರು, ಚಾನಲ್ ಹಾದಿಯಲ್ಲಿ ಉಳಿದಿರುವ ಬಸಿ ನೀರು ಬಳಸಿಕೊಂಡು ಸಸಿ ಮಡಿ ಮಾಡಿದ್ದೇವೆ. ಆದರೆ ಇದನ್ನೇ ನೆಚ್ಚಿಕೊಂಡು ಇರಲು ಸಾಧ್ಯವಿಲ್ಲ’ ಎನ್ನುತ್ತಾರೆ ಕಡದಕಟ್ಟೆ ಶ್ರೀಧರ.

ವರ್ಷಪೂರ್ತಿ ಭತ್ತವಿಲ್ಲ: ವರ್ಷದ ಆರಂಭದಲ್ಲಿ ಜಲಾಶಯದಲ್ಲಿ ನೀರಿದ್ದರೂ ಗೊಂದಿನಾಲ ದುರಸ್ತಿಯಿಂದಾಗಿ ಒಂದೂ ಬೆಳೆ ತೆಗೆಯಲು ಆಗಲಿಲ್ಲ ಎಂದು ತಳ್ಳಿಕಟ್ಟೆ ರಾಜು ಅಲವತ್ತುಕೊಂಡರು. ತೇಜಕುಮಾರ್ ಅಳಲು ಕೂಡ ಇದೇ ಆಗಿದೆ. ಎಲ್ಲ ರೈತರೂ ಮಳೆ ಯಾವಾಗ ಬಂದೀತು ಎಂದು ನಿತ್ಯ ಆಕಾಶ ನೋಡುವ ಪರಿಸ್ಥಿತಿ ಇದೆ.

ಅಂಕಿ ಅಂಶಗಳು

10,300 ಭತ್ತ ಬೆಳೆಯುವ ಒಟ್ಟು ಪ್ರದೇಶ

4,400 ಸಸಿ ಮಡಿ ಮಾಡಿರುವ ಪ್ರದೇಶ

1,800 ಮೆಕ್ಕೆಜೋಳ ಬೆಳೆದ ಪ್ರದೇಶ

* * 

ಈ ತಿಂಗಳು ಮಳೆ ಬಾರದಿದ್ದರೆ, ಜಲಾಶಯ ತುಂಬದಿದ್ದರೆ ತಾಲ್ಲೂಕಿನ ಭತ್ತದ ಬೆಳೆಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.

–ನಾಗರಾಜ್

ಸಹಾಯಕ ಕೃಷಿ ಅಧಿಕಾರಿ

 

ಪ್ರತಿಕ್ರಿಯಿಸಿ (+)