ಶುಕ್ರವಾರ, ಡಿಸೆಂಬರ್ 13, 2019
20 °C

ಅಂತರರಾಷ್ಟ್ರೀಯ ಪ್ರದರ್ಶನಕ್ಕೆ ಚಿತ್ರಗಳು ಆಯ್ಕೆ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ಪ್ರದರ್ಶನಕ್ಕೆ ಚಿತ್ರಗಳು ಆಯ್ಕೆ

ಚಿತ್ರದುರ್ಗ: ಕೋಟೆನಾಡಿನ ಇಬ್ಬರು ಚಿತ್ರಕಲಾವಿದರಾದ ಮೋಹನಮುರಳಿ ತಳಕ್ ಹಾಗೂ ಕ್ರಿಯೇಟಿವ್ ಟಿ.ಎಂ.ವೀರೇಶ್ ಅವರ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಮೋಹನಮುರಳಿ ತಳಕ್ ಅವರ ‘ದ್ವಾರಕೆ ಮುಳುಗಡೆ’ ಕುರಿತ ತೈಲವರ್ಣ ಚಿತ್ರ, ನೆದರ್ಲೆಂಡ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ನಾಲ್ಕನೇ ಅಂತರರಾಷ್ಟ್ರೀಯ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ನೆದರ್ಲೆಂಡ್ ಹೇಗ್ ವರ್ಲ್ಡ್ ಫೈನ್ ಆರ್ಟ್ ಅಸೋಸಿಯೇಷನ್ ಮತ್ತು ಭಾರತೀಯ ದೂತವಾಸದ ಸಹಯೋಗದಲ್ಲಿ ಆಯೋಜಿಸಿರುವ ಈ ಚಿತ್ರ ಪ್ರದರ್ಶನ ನೆದರ್ ಲೆಂಡ್  ‘ದಿ ಹೇಗ್ ಆರ್ಟ್ ಗ್ಯಾಲರಿ’ಯಲ್ಲಿ ನಡೆಯಲಿದೆ. ವಿಶ್ವದ ವಿವಿಧ ರಾಷ್ಟ್ರಗಳ 80 ಚಿತ್ರಗಳ ಪೈಕಿ ಮುರಳಿ ಅವರ ಚಿತ್ರವೂ ಪ್ರದರ್ಶನಗೊಳ್ಳುತ್ತಿದೆ. ‘ಪ್ರೀತಿ, ಶಾಂತಿ ಮತ್ತು ಮಾನವೀಯತೆ’ ಎಂಬ ಘೋಷವಾಕ್ಯದಡಿ ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.

ಪೆನ್ ಡ್ರಾಯಿಂಗ್, ತೈಲವರ್ಣ, ಅಮೂರ್ತ ಕಲೆಗಳ ರಚನೆಯಲ್ಲಿ ಖ್ಯಾತಿ ಪಡೆದಿರುವ ಮೋಹನಮುರಳಿ ತಳಕ್, ಮೂರು ದಶಕಗಳಿಂದಲೂ ಚಿತ್ರಕಲಾ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ರಾಜ್ಯದ ಶಿವಮೊಗ್ಗ, ಮೈಸೂರು, ನಾಗರಹೊಳೆ, ಚಿತ್ರದುರ್ಗದ ಅರಣ್ಯ ಇಲಾಖೆಯ ಕಚೇರಿಯ ಗೋಡೆಗಳ ಮೇಲೆ ಮುರಳಿ ಅವರ ಚಿತ್ರಗಳು ರಾರಾಜಿಸುತ್ತಿವೆ. ಪ್ರಸ್ತುತ ಮುರಳಿ ಅವರು ವಿಜ್ಞಾನದ ತಳಹದಿಯ ಮೇಲೆ ರಾಮಾಯಣ ಕಥಾನಕವನ್ನು ಜಲವರ್ಣ ಅಮೂರ್ತ ಚಿತ್ರಗಳ ಮೂಲಕ ವಿವರಿಸುವ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಮತ್ತೊಬ್ಬ ಚಿತ್ರಕಲಾವಿದ ಕ್ರಿಯೇಟಿವ್ ಸ್ಟುಡಿಯೊದ ಟಿ.ಎಂ.ವೀರೇಶ್ ಅವರ ರಚಿಸಿರುವ ‘ಇಂಕ್ಲಿಮೆಂಟ್ ಆರ್ಟ್’ ಜಲವರ್ಣ ಚಿತ್ರ ಎರಡನೇ ಅಂತರರಾಷ್ಟ್ರೀಯ ವಾಟರ್ ಕಲರ್ ಸೊಸೈಟಿ ಇಂಡಿಯಾ ಬಿನಾಲೆ 2017-12018’ ಚಿತ್ರಪ್ರದರ್ಶನಕ್ಕೆ ಆಯ್ಕೆಯಾಗಿದೆ. ‘ಜಲ ವರ್ಣ ಚಿತ್ರಕಲೆ ಮೂಲಕ ಸಾಮರಸ್ಯ’ ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ಈ ಪ್ರದರ್ಶನಕ್ಕೆ 70 ರಾಷ್ಟ್ರಗಳ 111 ಕಲಾವಿದರ ಚಿತ್ರಗಳು ಆಯ್ಕೆಯಾಗಿವೆ.

ಅದರಲ್ಲಿ ವೀರೇಶ್ ಅವರ ಚಿತ್ರವೂ ಆಯ್ಕೆಯಾಗಿದೆ. ಡಿಸೆಂಬರ್ 12ರಿಂದ 16ರವರೆಗೆ ನವದೆಹಲಿಯಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ‘ಕಲಾವಿದನ ಭಾವಗಳ ಅನುವಾದ ಬಣ್ಣ, ಆಕಾರ ಪಡೆದು ಚಿತ್ರವಾಗಿ ರೂಪುಗೊಂಡಿದೆ. ಈ ಚಿತ್ರದಲ್ಲಿ ಕಠಿಣ, ಬಿರುಗಾಳಿ, ಅತಿಶೀತಲ ಭಾವನೆಗಳು ವ್ಯಕ್ತವಾಗಿವೆ. ಆದರೆ, ಚಿತ್ರ ಪ್ರೇಕ್ಷಕರ ಭಾವಕ್ಕೆ ತಕ್ಕಂತ ಸಂವಹನವಾಗುತ್ತದೆ’ ಎಂದು ಕಲಾವಿದ ವೀರೇಶ್ ಅಭಿಪ್ರಾಯಪಡುತ್ತಾರೆ.

ಕಲಾವಿದ ವೀರೇಶ್, ಬಾಲ್ಯದಿಂದಲೇ ಚಿತ್ರ ರಚನೆ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಪೆನ್ಸಿಲ್ ನಿಂದ ಚಿತ್ರಗಳ ರಚನೆಯಲ್ಲಿ ಸಿದ್ಧಹಸ್ತರು. ಇತ್ತೀಚೆಗೆ ತೈಲವರ್ಣ, ಜಲವರ್ಣ ಚಿತ್ರಗಳನ್ನು ರಚಿಸುತ್ತಾ, ಜತೆಗೆ ವಿಶೇಷ ಛಾಯಾಗ್ರಹಣದಲ್ಲೂ ಪರಿಣತಿ ಪಡೆದಿದ್ದಾರೆ. ಪ್ರಸ್ತುತ ಜಲವರ್ಣ ಚಿತ್ರಗಳಲ್ಲಿ ಶೂನ್ಯಪೀಠಾಧ್ಯಕ್ಷ ಅಲ್ಲಮಪ್ರಭುವಿನ ವಚನ ಸಾರಗಳನ್ನು ವಿವರಿಸುವ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೋಟೆನಾಡಿನ ಇಬ್ಬರು ಕಲಾವಿದರ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಕ್ಕೆ ಆಯ್ಕೆ ಆಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

* * 

ಈ  ಚಿತ್ರವನ್ನು ನೆದರ್ಲೆಂಡ್ ದೂತವಾಸಕ್ಕೆ ಕಳುಹಿಸುತ್ತೇನೆ. ಪ್ರದರ್ಶನದ ನಂತರ ಹಿಂತಿರುಗಿಸುತ್ತಾರೆ. ಪ್ರದರ್ಶನದಲ್ಲಿ ಮಾರಾಟವಾದರೆ, ನಿಯಮಾನಸಾರ ಹಣ ಕಳುಹಿಸುತ್ತಾರೆ.

ಮೋಹನಮುರಳಿ ತಳಕ್

ಕಲಾವಿದರು

ಪ್ರತಿಕ್ರಿಯಿಸಿ (+)