ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಆರಿದ್ರಾ; ಪುನರ್ವಸುವಿನತ್ತ ಚಿತ್ತ...

Last Updated 7 ಜುಲೈ 2017, 7:18 IST
ಅಕ್ಷರ ಗಾತ್ರ

ವಿಜಯಪುರ: ‘ಮಿರಗಾ’ ಅಬ್ಬರಕ್ಕೆ ತೊಗರಿ, ಸಜ್ಜೆ, ಸೂರ್ಯಕಾಂತಿ, ಮುಸು ಕಿನ ಜೋಳ, ಹೆಸರು, ಉದ್ದು ಬಿತ್ತಿದ್ದ ಜಿಲ್ಲೆಯ ರೈತ ಸಮೂಹ ‘ಆರಿದ್ರಾ’ ಮಳೆ ಕೈಕೊಟ್ಟಿದ್ದರಿಂದ ಚಿಂತೆಗೀಡಾಗಿದೆ. ಬುಧವಾರ ‘ಪುನರ್ವಸು’ ಮಳೆ ಆರಂಭಗೊಂಡಿದ್ದು, ಬಾನಂಗಳದಲ್ಲೂ ಕಪ್ಪು ಮೋಡ ದಟ್ಟೈಸುತ್ತಿರುವುದು, ಗಾಳಿ ಅಬ್ಬರ ಅರ್ಧಕ್ಕರ್ಧ ತಗ್ಗಿರುವುದು ರೈತ ಸಮೂಹದಲ್ಲಿ ಮಳೆಯ ನಿರೀಕ್ಷೆ ಹೆಚ್ಚಿಸಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯೂ ಇದಕ್ಕೆ ಪೂರಕವಾಗಿದ್ದು, ತೇವಾಂಶ ಕೊರತೆಯಿಂದ ಸೊರಗುತ್ತಿದ್ದ ಬೆಳೆಗಳಿಗೆ ಮೇಘರಾಜನ ಕೃಪೆಯಾದರೆ, ಮೂರ್ನಾಲ್ಕು ವರ್ಷಗಳಿಂದ ಹೈರಾಣಾಗಿರುವ ರೈತ ಸಮೂಹ ಕೊಂಚ ಚೇತರಿಸಿ ಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಿಜಯಪುರ ತಾಲ್ಲೂಕು ಅರಕೇರಿಯ ರೈತ ಸದಾಶಿವ ಗೋಪಾಲ ಮೋಹಿತೆ ತಿಳಿಸಿದರು.

‘20 ಎಕ್ರೆ ಹೊಲದಲ್ಲಿ 15 ಎಕ್ರೆ ಭೂಮಿಗೆ ಗೊಂಜಾಳ (ಮುಸುಕಿನ ಜೋಳ), ಹೆಸರು, ಸಜ್ಜೆ ಬಿತ್ವೀನಿ. ಬಿತ್ನೇ ಬೀಜ, ಗೊಬ್ಬರ ಸೇರಿ ₹ 25000 ಖರ್ಚಾಗೈತಿ. ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳದೆ, ಮನೆ ಮಂದಿಯೇ ಬಿತ್ತನೆ ಕೆಲ್ಸಾ ಮಾಡಿದ್ವಿ.

ಉಳಿದ ಐದ್‌ ಎಕ್ರಿಗೂ ಸಜ್ಜಿ ಬಿತ್ತಬೇಕ್ರೀ. ಭೂಮಿಯ ಹಸಿ ಆರೈತಿ. ಮಳೆಯಾದರೆ ಬಿತ್ತೋಣ ಅಂತಾ 15 ದಿನದಿಂದ ಕಾಯ್ತ್ವೀನಿ. ಒಂದ್‌ ಹನಿ ಮಳೆ ಬಿದ್ದಿಲ್ಲ. ಚೋಟುದ್ದ ಬೆಳೆದ ಪೈರು ಹಸಿ ಆರ್ತಿರೋದ್ರಿಂದ ಸೊರಗಕತ್ತೈತಿ.

ಈ ಬಾರಿನೂ ಭಗವಂತ ನಮ್‌ ಕೈ ಹಿಡಿದಿದ್ರ ಬದುಕು ಬಾಳಾ ಕಷ್ಟ ಐತ್ರಿ. ಮೂರ್ನಾಲ್ಕು ವರ್ಷದಿಂದ ಒಂದೇ ಸಮನೆ ಹೊಡೆತ ತಿಂದು ಸಾಕಾಗೈತಿ. ಆಕಾಶದಾಗ ಮೋಡ ಮೇಳೈಸ್ತಾವೆ. ಜೋರಾಗಿ ಕೂಡಕತ್ಯಾವೆ. ಆ ನಮ್ಮಪ್ಪನ ಕೃಪೆನಿಂದ ಮಳೆಯಾದ್ರಾ ನಾವು ಬದ್ಕೊಂತೀವಿ’ ಎಂದು ಮೋಹಿತೆ ಕೈಮುಗಿದು ಭಗವಂತನಲ್ಲಿ ಮಳೆಗಾಗಿ ಪ್ರಾರ್ಥಿಸಿದರು.

ಮೇವಿಗೂ ತ್ರಾಸು: ‘ಮೂರ್ನಾಲ್ಕ್‌ ವರ್ಷದಿಂದ ದನ–ಕರ ಸಾಕ್ತಿರೋದೇ ಕಷ್ಟವಾಗೈತಿ. ಮೇವು ಖಾಲಿಯಾಗೈತಿ. ಮಾರಿದ್ರೆ ಮೂರ್‌ ಕಾಸ್‌ ಸಿಗಲ್ಲ ಎಂಬ ಕಿಚ್ಚಿಗೆ ಹೊರಗಿನಿಂದ ಟ್ರ್ಯಾಕ್ಟರ್ ಬಾಡ್ಗಿ ಕೊಟ್ಟು ₹ 5, 10000 ಮೊತ್ತದಲ್ಲಿ ಮೇವು ತಂದೀವಿ.

ಇದೇ ಕೊನೆ. ಇನ್ಮುಂದೆ ಮೇವು ತಂದು ದನ ಸಾಕೋ ತಾಕತ್‌ ನಮ್ಗಿಲ್ಲ. ಮಳಿ ಆಗುತ್ತೆ ಎಂಬೋ ಆಶ ಐತ್ರೀ. ಚಲೋ ಮಳಿ ಸುರಿದು ಮೇವು ಆಗ ದಿದ್ರಾ, ವಿಧಿಯಿಲ್ಲದೆ ಎಷ್ಟಾಕ್ಕಾರ ಹೋಗಲಿ ಅಂತ ಯಾಡ್‌ ಎತ್ತು, ಒಂದ್‌ ಆಕಳ, ಒಂದ್‌ ಎಮ್ಮೀನಾ ಸಂತಿಗಿ ಹೊಡಿತೀವಿ’ ಎಂದು ಅರಕೇರಿಯ ದಿಲೀಪ ಮೋಹಿತೆ ರೈತರು ಮೇವಿಗಾಗಿ ಪಡುತ್ತಿರುವ ಸಂಕಷ್ಟವನ್ನು ಬಿಚ್ಚಿಟ್ಟರು.

‘ಎಲ್ಲೂ ಜೋಳದ ಕಣಕಿ ಸಿಗದಿದ್ದ ರಿಂದ ಕಬ್ಬಿನ ರವದಿಗೆ ರೊಕ್ಕ ಕೊಟ್ಟು, ಟ್ರ್ಯಾಕ್ಟರ್‌ಗೆ ಬಾಡ್ಗಿ ನೀಡಿ ತರ್ತಿದ್ದೇವೆ. ಇದೇ ಪರಿಸ್ಥಿತಿ ಮುಂದುವರಿದ್ರಾ ಭಾಳಾ ಕಷ್ಟವಾಗಲಿದೆ’ ಎಂದು ಮೋಹಿತೆ ಹೇಳಿದರು.

ಅಂಕಿ–ಅಂಶ
4.30 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ನಿರೀಕ್ಷೆ

35 ಸಾವಿರ ಹೆಕ್ಟೇರ್‌ನಲ್ಲಿ ಸಜ್ಜೆ ಬಿತ್ತನೆ

₹ 1.75 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಪೂರ್ಣ

20 ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆ

* * 

ಮಳೆಯ ಸಾಧ್ಯತೆ ಹೆಚ್ಚಿದೆ. ಈ ಆಶಾಭಾವವೇ ರೈತ ಸಮೂಹದ ಆತ್ಮಸ್ಥೈರ್ಯ ಹೆಚ್ಚಿಸಿದೆ. ಜುಲೈ ಅಂತ್ಯದ ವರೆಗೂ ತೊಗರಿ ಬಿತ್ತನೆಗೆ ಅವಕಾಶ ಇದೆ. ನಿರೀಕ್ಷಿತ ಹಂತ ತಲುಪಲಿದೆ
ಡಾ.ಬಿ.ಮಂಜುನಾಥ್‌
ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT