ಶುಕ್ರವಾರ, ಡಿಸೆಂಬರ್ 6, 2019
19 °C

ನೀರಿನ ದಾಹ ತಗ್ಗಿಸಿದ ಶಿಲ್ಲೇದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿನ ದಾಹ ತಗ್ಗಿಸಿದ ಶಿಲ್ಲೇದಾರ್

ಚನ್ನಮ್ಮನ ಕಿತ್ತೂರು: ನಿತ್ಯ ಕೂಲಿ ಮಾಡಿ ಜೀವನ ಸಾಗಿಸುವ ಅಂಬಡಗಟ್ಟಿಯ ಜನತಾ ಕಾಲೊನಿ ಜನರಿಗೆ ಸ್ಥಳೀಯ ಮುಖಂಡ ಹಬೀಬ್ ಶಿಲ್ಲೇದಾರ್, ಸ್ವಂತಕ್ಕೆ ತೋಡಿಸಿರುವ ಕೊಳವೆ ಬಾವಿಯಿಂದ ನಿತ್ಯ ನೀರು ಸರಬರಾಜು ಮಾಡುವ ಮೂಲಕ ಅವರ ದಾಹ ತಣಿಸುವಲ್ಲಿ ನೆರವಾಗಿದ್ದಾರೆ.

‘ಮಳೆಯ ಕೊರತೆಯಿಂದಾಗಿ ಊರಿನ ಉರ್ದು ಮತ್ತು ಕನ್ನಡ ಶಾಲೆಯ ಹತ್ತಿರ ಪಂಚಾಯ್ತಿ ವತಿಯಿಂದ ಕೊರೆಸಲಾದ ಎರಡು ಕೊಳವೆ ಬಾವಿಗಳು ಕಡಿಮೆ ಪ್ರಮಾಣದಲ್ಲಿ ನೀರು ಹೊರ ಎಸೆಯುತ್ತಿವೆ. ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚಿರುವ ಕುಟುಂಬಗಳಿಗೆ ಕೆಲಸ ಬಿಟ್ಟು ನೀರು ತುಂಬುವುದೇ ಕೆಲಸವಾಗಿತ್ತು.

ಇದನ್ನು ಮನಗಂಡ ‘ಊರಿನ ಸಾಹುಕಾರ್’ ಶಿಲ್ಲೇದಾರ್ ಅವರು ನೀರು ಕೊಡುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ’ ಎಂದು ಇಮಾಮಸಾಬ್, ಮಕ್ತುಂಬಿ ಮುಜಾವರ ತಿಳಿಸಿದರು.

‘ಮುಂಜಾನೆ ಮತ್ತು ಸಂಜೆ ಎರಡೂ ಹೊತ್ತು ನೀರು ಪೂರೈಕೆ ಮಾಡ ಲಾಗುತ್ತಿದೆ. ‘ಬೋರ್ ಶುರು ಮಾಡ್ಯಾ ರೇನ್‌ ನೋಡ್ರಿ’ ಎಂದು ತಿಳಿದುಕೊಂಡು ಸಾರ್ವಜನಿಕರು ಹತ್ತಾರು ಕೊಡಗಳನ್ನು ಹೊತ್ತುಕೊಂಡು ನಲ್ಲಿ ಎದುರು ಪಾಳೆ ಹಚ್ಚುತ್ತಾರೆ’ ಎಂದು ರುದ್ರಪ್ಪ ಬಡಿಗೇರ, ಮಲ್ಲಪ್ಪ ಬಡಿಗೇರ, ಮಲ್ಲವ್ವ ಮಾತಾರಿ ತಿಳಿಸಿದರು.

‘ಸ್ವಂತ ಜಾಗೆಯಲ್ಲಿ ಕೊಳವೆ ಬಾವಿ ಕೊರೆಸಿ ವರ್ಷ ಸಮೀಪಿಸುತ್ತಿದೆ. ಅಂದಿನಿಂದಲೂ ಜನತೆಗೆ ನೀರು ಕೊಡುವ ಕಾಯಕ ಆರಂಭಿಸಿದ್ದಾರೆ. ಮಳೆಯ ಕೊರತೆಯಿಂದ ಈಗ ಬರಗಾಲ ಬಿದ್ದಿದೆ. ನೀರಿನ ತೀವ್ರ ಕೊರತೆಯನ್ನು ಈ ಭಾಗದ ಜನರು ಎದುರಿಸುತ್ತಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಹಿಂದು, ಮುಂದು ನೋಡದೆ ನಿತ್ಯ ನೀರು ಕೊಡುತ್ತಾರೆ’ ಎಂದು ತಿಪ್ಪವ್ವ ಆರೇರ, ಶಿವಪ್ಪ ಕರೆಪ್ಪನವರ ಸ್ಮರಿಸಿದರು.

‘ಇಲ್ಲಿ ಕೊರೆಸಲಾದ ಕೊಳವೆ ಬಾವಿಯ ನೀರೇ ಎರಡೂ ಗಾಂವಟಾನ್ ಪ್ರದೇಶದ ಜನತೆಗೆ ಆಸರೆ. ಪಂಚಾಯ್ತಿ ಯಿಂದ ಕೊರೆಸಲಾಗಿರುವ ಬೋರ್‌ ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕಡಿಮೆಯಾಗಿದೆ. ಇವರು ನೀರು ಪೂರೈಕೆ ಮಾಡದಿದ್ದರೆ ನಮ್ಮ ತಾಪತ್ರಯ ದೇವರಿಗೆ ಪ್ರೀತಿ ಎನ್ನುವಂತಿರುತ್ತಿತ್ತು’ ಎಂದು ಹೇಳುತ್ತಾರೆ ಪಂಚಾಯ್ತಿ ನೌಕರರೂ ಆಗಿರುವ ಶಿವಲಿಂಗಯ್ಯ ಗುರುವಯ್ಯನವರ.

 

ಪ್ರತಿಕ್ರಿಯಿಸಿ (+)