ಸೋಮವಾರ, ಡಿಸೆಂಬರ್ 9, 2019
26 °C

ಹುಯ್ಯೋ ಹುಯ್ಯೋ ಮಳೆರಾಯ...

ಶಶಿಕಾಂತ ಎಸ್‌. ಶೆಂಬಳ್ಳಿ Updated:

ಅಕ್ಷರ ಗಾತ್ರ : | |

ಹುಯ್ಯೋ ಹುಯ್ಯೋ ಮಳೆರಾಯ...

ಹೊಸಪೇಟೆ: ಜೂನ್‌ ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಸರಾಸರಿಗಿಂತ ಕಡಿಮೆ ಮಳೆ ದಾಖಲಾಗಿರುವುದರಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿತ್ತನೆ ಸ್ಥಗಿತಗೊಂಡಿದೆ.

ಜೂನ್‌ನಲ್ಲಿ ಜಿಲ್ಲೆಯಲ್ಲಿ ಸರಾಸರಿ 71 ಮಿ.ಮೀ. ಮಳೆಯಾಗುತ್ತದೆ. ಆದರೆ, ಈ ಬಾರಿ 58.41 ಮಿ.ಮೀ. ವರ್ಷಧಾರೆ­ಯಾಗಿದೆ. ಕೊರತೆ ಮಳೆಯಾಗಿರುವು­ದರಿಂದ ಮುಂಗಾರು ಹಂಗಾಮಿನಲ್ಲಿ ಯಾವ ಪ್ರಮಾಣದಲ್ಲಿ ಬಿತ್ತನೆ ನಡೆಯಬೇಕಿತ್ತೋ ಆ ರೀತಿ ಆಗಿಲ್ಲ. ಜಿಲ್ಲೆಯ 3.65 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು.

ಆದರೆ, ಇದುವರೆಗೆ 26,410 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ 7.2ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ಮುಗಿದಿದೆ. ಕಾರಣ ಜಿಲ್ಲೆಯ ಶೇ 70ರಷ್ಟು ಪ್ರದೇಶದಲ್ಲಿ ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡಲಾಗುತ್ತದೆ.

ಜೂನ್‌ ಆರಂಭದಲ್ಲಿ ಜಿಲ್ಲೆ­ಯಾ­ದ್ಯಂತ ಉತ್ತಮ ಮಳೆಯಾಗಿತ್ತು. ಮೂರು ವರ್ಷಗಳಿಂದ ಸತತ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯಲ್ಲಿ ಈ ಬಾರಿ ಸಕಾಲಕ್ಕೆ ಮುಂಗಾರು ಮಳೆ ಬಂದಿದ್ದಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಈ ಸಲವಾದರೂ ಉತ್ತಮ ಬೆಳೆ ಬೆಳೆದು ಸಂಕಷ್ಟದಿಂದ ಪಾರಾಗಬಹುದು ಅಂದು­­ಕೊಂಡಿದ್ದರು. ಅದಕ್ಕೆ ಅನುಗುಣ­ವಾಗಿ ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಮಳೆ­ರಾಯ ಮುನಿಸಿ­ಕೊಂಡಿರುವ ಕಾರಣ ರೈತರು ಚಿಂತೆ­ಗೀಡಾಗಿದ್ದಾರೆ. ಜುಲೈ ಮೊದಲ ವಾರ ಮುಗಿಯುತ್ತ ಬಂದರೂ ಮಳೆಯ ಸುಳಿವಿಲ್ಲ. ಇದರಿಂದ ಸಹಜವಾಗಿಯೇ ರೈತರ ಆತಂಕ ಹೆಚ್ಚಿಸಿದೆ.

ತುಂಗಭದ್ರಾ ಜಲಾಶಯದ ಕಾಲುವೆ­ಗಳಿಂದ ಹರಿಸುವ ನೀರನ್ನೇ ಅವಲಂಬಿಸಿ ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ ಹಾಗೂ ಹೂವಿನ­ಹಡಗಲಿಯ ಕೆಲವು ಭಾಗಗಳಲ್ಲಿ ಕೃಷಿ ಮಾಡಲಾಗುತ್ತದೆ. ಕಾಲುವೆಗೆ ನೀರು ಹರಿಸಿದರೆ ಈ ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತದೆ. ಭತ್ತ, ಜೋಳ, ಮೆಕ್ಕೆ ಜೋಳ, ಶೇಂಗಾ, ಹತ್ತಿ, ಸೂರ್ಯಕಾಂತಿ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆಗಳು. ಇದಲ್ಲದೇ ಬಳ್ಳಾರಿ ಹಾಗೂ ಸಿರುಗುಪ್ಪ ತಾಲ್ಲೂಕಿನಲ್ಲಿ ಭತ್ತದ ಜತೆಗೇ ಮೆಣಸಿನಕಾಯಿ ಕೂಡ ಯಥೇಚ್ಛವಾಗಿ ಬೆಳೆಯಲಾಗುತ್ತದೆ.

ಸತತ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಜಲಾಶಯ ಕೂಡ ತುಂಬಿಲ್ಲ. ಇದರಿಂದ ರೈತರಿಗೆ ಎರಡನೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಇದನ್ನೆಲ್ಲ ಪರಿಗಣಿಸಿ ಸರ್ಕಾರ ಬರಪೀಡಿತ ಜಿಲ್ಲೆಯೆಂದು ಘೋಷಿಸಿತ್ತು. ಈ ವರ್ಷವೂ ಆಶಾದಾಯಕವಾಗಿ ಮಳೆಯಾಗಿಲ್ಲ. ಮುಂದೇನಾಗುತ್ತದೋ ಎಂಬ ಚಿಂತೆ ರೈತರನ್ನು ಈಗಲೇ ಕಾಡುತ್ತಿದೆ. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ತುಂಗಾ ಜಲಾಶಯ ಭರ್ತಿಯಾಗಿ, ನೀರು ಬಿಡುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ದಿನೇ ದಿನೇ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಗುರುವಾರ 8.664 ಟಿ.ಎಂ.ಸಿ. ಅಡಿ ಜಲಾಶಯದಲ್ಲಿ ನೀರಿನ ಸಂಗ್ರಹವಿತ್ತು. ಕಳೆದ ಹತ್ತು ದಿನಗಳ ಅವಧಿಯಲ್ಲಿ ಏಳು ಟಿ.ಎಂ.ಸಿ.ಗೂ ಅಧಿಕ ನೀರು ಜಲಾಶಯಕ್ಕೆ ಬಂದಿರುವುದರಿಂದ ಕಾಲುವೆಯ ನೀರನ್ನೇ ನೆಚ್ಚಿಕೊಂಡು ಕೃಷಿ ಮಾಡುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಮಳೆಗೆ ಪ್ರಾರ್ಥನೆ: ಎಲ್ಲೆಡೆ ಉತ್ತಮ ಮಳೆ, ಬೆಳೆಯಾಗಲೆಂದು ರೈತರು ದೇವರ ಮೊರೆ ಹೋಗಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕಪ್ಪೆ, ಕತ್ತೆಗಳ ಮದುವೆ ಮಾಡಿಸುತ್ತಿದ್ದಾರೆ. ಆದರೂ ಮಳೆರಾಯ ಮುನಿಸಿಕೊಂಡಿದ್ದಾನೆ.

* * 

ಮಳೆಯಾಗದ ಕಾರಣ ಬಹುತೇಕ ಎಲ್ಲೆಡೆ ಬಿತ್ತನೆ ಕೆಲಸ ಸ್ಥಗಿತಗೊಂಡಿದೆ. ಕಾಲುವೆ ಭಾಗದ ರೈತರು ಮಾತ್ರ ಬೀಜ ತೆಗೆದುಕೊಂಡು ಹೋಗುತ್ತಿದ್ದಾರೆ

ಮಂಜುನಾಥ ಕನ್ನಾರಿ

ನಿರ್ದೇಶಕರು, ಕೃಷಿ ಇಲಾಖೆ

ಪ್ರತಿಕ್ರಿಯಿಸಿ (+)