ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ

Last Updated 7 ಜುಲೈ 2017, 10:27 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಆರೋಪಿಸಿ ಕೆಆರ್‌ಎಸ್‌ ಜಲಾಶಯಕ್ಕೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕಿನ 50  ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಕೆಆರ್‌ಎಸ್‌ ಮುಖ್ಯದ್ವಾರದ ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದರು. ಪೊಲೀಸ್‌ ವಾಹನದ ಮುಂದೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ತೇಜಸ್ವಿನಿ ರಮೇಶ್‌, ಕ್ಷೇತ್ರಾಧ್ಯಕ್ಷ ಟಿ.ಶ್ರೀಧರ್‌, ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್‌.ದೇವರಾಜು, ನಗರ ಘಟಕದ ಅಧ್ಯಕ್ಷ ಪುಟ್ಟರಾಮು, ರಾಜ್ಯ ಪರಿಷತ್‌ ಸದಸ್ಯ ಜಿ.ಉಮಾಶಂಕರ್‌, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಂಜುನಾಥ್‌, ತಾಲ್ಲೂಕು ಘಟಕದ ಅಧ್ಯಕ್ಷ ರಾಜುಗೌಡ, ವಕೀಲ ಪ್ರಶಾಂತ್‌, ಪೀಹಳ್ಳಿ ರಮೇಶ್‌, ಅರಕೆರೆ ಜಗದೀಶ್‌, ದೇವೀರಮ್ಮ ಅವರನ್ನು ಪೊಲೀಸರು ಬಂಧಿಸಿದರು. ಕೆಆರ್‌ಎಸ್‌ ಬಳಿಯ ಎಂಜಿನಿ ಯರಿಂಗ್‌ ಸಂಶೋಧನಾ ಕೇಂದ್ರದಲ್ಲಿ ಕೆಲಹೊತ್ತು ಪ್ರತಿಭಟನಾಕಾರರನ್ನು ಇರಿಸಿ ನಂತರ ಬಿಡುಗಡೆ ಮಾಡಿದರು.

ಬಂಧನದ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ, ‘ಕೆಆರ್‌ಎಸ್‌ ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರು ನಿಲ್ಲಿಸಲು ಸದ್ಯಕ್ಕೆ ಆಗುವುದಿಲ್ಲ.

ಮೇಲಧಿಕಾರಿಗಳ ಸೂಚನೆ ಪಾಲಿಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದಾಗ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಕಾವೇರಿ ನೀರಾವರಿ ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರು ನೀರುಗಂಟಿ ಕೆಲಸ ಮಾಡುತ್ತಿದ್ದು, ರಾಜ್ಯದ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ’ ಎಂದು ದೂರಿದರು.

ತೇಜಸ್ವಿನಿ ರಮೇಶ್‌ ಮಾತನಾಡಿ, ‘ಸರ್ಕಾರದ ರೈತ ವಿರೋಧಿ ಧೋರಣೆಯಿಂದಾಗಿ ರಾಜ್ಯದಲ್ಲಿ 2,550 ಮಂದಿ, ಮಂಡ್ಯ ಜಿಲ್ಲೆಯಲ್ಲಿ 210 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತತ 3 ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ದನ, ಕರುಗಳಿಗೆ ಕುಡಿಯಲು ನೀರು ಸಿಗದ ದುಸ್ಥಿತಿ ಬಂದಿದೆ.

ಕೆಆರ್‌ಎಸ್‌ ಜಲಾಶಯದಿಂದ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಬೇಕು. ಮುಂಗಾರು ಹಂಗಾಮಿನಲ್ಲಿ ಭತ್ತದ ಬೀಜ ಬಿತ್ತಲು ನಾಲೆಗಳಿಗೆ ನೀರು ಹರಿಸಬೇಕು. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಮಹಿಳೆಯರು, ಮಕ್ಕಳ ಜತೆಗೂಡಿ ಹೆದ್ದಾರಿಗಳನ್ನು ಬಂದ್‌ ಮಾಡಿಸುತ್ತೇವೆ’ ಎಂದು ಎಚ್ಚರಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಟಿ.ಶ್ರೀಧರ್‌ ಮಾತನಾಡಿ, ‘ಜಿಲ್ಲೆಯಲ್ಲಿ ಸಂಸದ, ಶಾಸಕರು ಇದ್ದಾರೆಯೆ ಎಂಬ ಪ್ರಶ್ನೆ ಕಾಡುತ್ತಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಜಿಲ್ಲೆಗೆ ಬರುವ ಮಂತ್ರಿಗಳಿಗೆ ಘೇರಾವ್‌ ಹಾಕುತ್ತೇವೆ’ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಕೆ. ಬಲರಾಂ, ಸದಸ್ಯ ಆರ್ಮುಗಂ ಕಿಶೋರ್‌, ಕೆ.ಆರ್‌.ಸೊಸೈಟಿ ಉಪಾಧ್ಯಕ್ಷ ಉಮೇಶ್‌ಕುಮಾರ್‌, ರಾಜ್ಯ ಸ್ಲಂ ಮೋರ್ಚಾ ಕಾರ್ಯದರ್ಶಿ ಅಶೋಕ್‌, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್‌.ಕೆ.ಮಂಜುನಾಥ್‌, ಉಪಾಧ್ಯಕ್ಷ ಎಂ.ಸಿ.ನಾಗರಾಜು, ಎಂ.ಬಿ.ಲೋಕೇಶ್‌, ಬಿ.ಸಿ.ಸಂತೋಷ್‌ಕುಮಾರ್‌, ಸಿ.ಟಿ. ಮಂಜುನಾಥ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಸಂಸದ ಪುಟ್ಟರಾಜು– ಧಮಕಿ ರಾಜು’
ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸುತ್ತಿದ್ದರೂ ತುಟಿ ಬಿಚ್ಚದ ಸಂಸದ ಸಿ.ಎಸ್‌.ಪುಟ್ಟರಾಜು ಅವರನ್ನು ಧಮಕಿ ರಾಜು ಎಂದು ಕರೆಯುವುದೇ ಲೇಸು’ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ತೇಜಸ್ವಿನಿ ರಮೇಶ್‌ ಟೀಕಿಸಿದರು. ಕೆಆರ್‌ಎಸ್‌ನಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

‘ತಮ್ಮ ಬಗ್ಗೆ ಮಾತನಾಡುವವರ ಬಾಯಿ ಮುಚ್ಚಿಸಲು ಧಮಕಿ ಹಾಕುವ ಪುಟ್ಟರಾಜು ಅವರಿಗೆ ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಿರುವುದು ಕಾಣುತ್ತಿಲ್ಲವೆ. ಅವರಿಗೆ ರೈತರ ಪರ ಕಾಳಜಿ ಇಲ್ಲವೆ. ಸಂಸದರಾಗಿ ತಮ್ಮ ಜವಾಬ್ದಾರಿ ಗೊತ್ತಿಲ್ಲವೆ’ ಎಂದು ಪ್ರಶ್ನಿಸಿದರು.

‘ಪುಟ್ಟರಾಜು ದೊಡ್ಡರಾಜು ಆಗಬೇಕಾದರೆ ಕಾವೇರಿ ನದಿ ನೀರಿನ ವಿಷಯದಲ್ಲಿ ಮಂಡ್ಯ ಜಿಲ್ಲೆಯ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬೀದಿಗಿಳಿಯಬೇಕು. ಜನರು ತಮ್ಮನ್ನು ಆರಿಸಿರುವುದು ಜನ ಸೇವೆಗೆ ಎಂದು ತಿಳಿಯಬೇಕು’ ಎಂದು ಹೇಳಿದರು.

ಕೆರೆ–ಕಟ್ಟೆಗಳಿಗೆ ನೀರು ಬಿಡಿ
ಕೆ.ಆರ್.ಪೇಟೆ: ತಾಲ್ಲೂಕಿನ ಹೇಮಾವತಿ ಅಣೆಕಟ್ಟೆ ವ್ಯಾಪ್ತಿಯ ಕೆರೆ- ಕಟ್ಟೆಗಳಿಗೆ ನೀರು ಹರಿಸಬೇಕು ಹಾಗೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಒಕ್ಕಲಿಗ ಯುವ ವೇದಿಕೆ ಸದಸ್ಯರು ಗುರುವಾರ ಪಟ್ಟಣದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ತಾಲ್ಲೂಕಿನಲ್ಲಿ ತೀವ್ರ ಬರದಿಂದ ಕೆರೆ-ಕಟ್ಟೆಗಳು ಒಣಗಿವೆ. ಕೂಡಲೇ ನೀರು ಹರಿಸಬೇಕು. ಗೊರೂರು ಜಲಾಶಯದಿಂದ 1,500 ಕ್ಯೂಸೆಕ್‌ ನೀರನ್ನು ಹರಿಬಿಡುವ ಮೂಲಕ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು. ನಂತರ ತಹಶೀಲ್ದಾರ್ ಕೆ.ರತ್ನಾ ಅವರಿಗೆ ಮನವಿ ಸಲ್ಲಿಸಿದರು.

ವಕೀಲರಾದ ನವೀನ್ ಕುಮಾರ್, ಎನ್.ಆರ್.ರವಿಶಂಕರ್, ರಾಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು, ತಾ.ಪಂ ಮಾಜಿ ಅಧ್ಯಕ್ಷ ಜಯರಂಗ, ಹೆಮ್ಮನಹಳ್ಳಿ ತಮ್ಮಣ್ಣ, ಹೊಸಕೋಟೆ ಮಹೇಶ್, ಜಾಗಿನಕೆರೆ ಅಂಬರೀಷ್‌, ಕೈಗೋನಹಳ್ಳಿ ಜಯರಾಮು, ಕಿಕ್ಕೇರಿ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT