ಭಾನುವಾರ, ಡಿಸೆಂಬರ್ 15, 2019
21 °C

ಡೆಂಗಿ ಜ್ವರ ಉಲ್ಬಣ: ಆತಂಕ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಂಗಿ ಜ್ವರ ಉಲ್ಬಣ: ಆತಂಕ ಬೇಡ

ಹಾಸನ: ಜಿಲ್ಲೆಯಲ್ಲಿ ಡೆಂಗಿ ಹಾಗೂ ಸಾಂಕ್ರಾಮಿಕ ರೋಗಗಳ ಪ್ರಕರಣ ಹೆಚ್ಚುತ್ತಿರುವುದರಿಂದ ಗುರುವಾರ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

ದಿನದಿಂದ ದಿನಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲೂ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯಾದ್ಯಂತ ಆರು ತಿಂಗಳಲ್ಲಿ 95 ಡೆಂಗಿ, 20 ಚಿಕೂನ್ ಗುನ್ಯಾ ಹಾಗೂ 1 ಮಲೇರಿಯಾ ಪ್ರಕರಣ ಬೆಳಕಿಗೆ ಬಂದಿದೆ. ಮನೆ ಮನೆ ಲಾರ್ವಾ ಸಮೀಕ್ಷೆಗಾಗಿ 250 ಸದಸ್ಯರ ತಂಡ ಕಾರ್ಯ ನಿರ್ವಹಿಸುತ್ತಿದೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವೆಂಕಟೇಶ್, ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಾಂಕ್ರಾಮಿಕ ರೋಗಗಳ ಪ್ರಮಾಣ ಕಡಿಮೆ ಇದೆ. ಹಾಸನ ತಾಲ್ಲೂಕಿನಲ್ಲಿ 38, ಬೇಲೂರು 8, ಹೊಳೆನರಸೀಪುರ 13, ಅರಸೀಕೆರೆ 10, ಸಕಲೇಶಪುರ 2, ಚನ್ನರಾಯಪಟ್ಟಣ 13, ಅರಕಲಗೂಡು 5 ಹಾಗೂ ಆಲೂರು ತಾಲೂಕಿನಲ್ಲಿ 6 ಡೆಂಗಿ ಪ್ರಕರಣ ಪತ್ತೆಯಾಗಿವೆ. ಹಾಸನದಲ್ಲಿ 3, ಹೊಳೆನರಸೀಪುರ 6, ಅರಸೀಕೆರೆ 2, ಚನ್ನರಾಯಪಟ್ಟಣ 8, ಅರಕಲಗೂಡು ತಾಲ್ಲೂಕಿನಲ್ಲಿ ಒಬ್ಬರಿಗೆ ಚಿಕೂನ್ ಗುನ್ಯಾ ತಗುಲಿದೆ ಎಂದು ಹೇಳಿದರು.

ಅಗತ್ಯ ಔಷಧ, ಚಿಕಿತ್ಸಾ ಸಾಮಗ್ರಿ ಲಭ್ಯ ಇದೆ. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ವೈದ್ಯರ ಸಲಹೆಯಂತೆ ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದರು.

ಡೆಂಗಿ ಜ್ವರದಿಂದ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಸಾವು, ನೋವು ಸಂಭವಿಸಿಲ್ಲ. ಶ್ರವಣಬೆಳಗೊಳ ಹೋಬಳಿ ಬರಾಳು ಗ್ರಾಮದ ವಸಂತ್ ಎಂಬವರು ಪಿತ್ತಕೋಶ ಸಮಸ್ಯೆಯಿಂದ ಸಾವೀಗಿಡಾಗಿದ್ದಾರೆ ಹೊರತು ಡೆಂಗಿ ಕಾಯಿಲೆಯಿಂದ ಅಲ್ಲ ಎಂದು ವೆಂಕಟೇಶ್‌ ಸ್ಪಷ್ಟಪಡಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್ ಮಾತನಾಡಿ, ಆಸ್ಪತ್ರೆಗೆ ಶೀತ, ಜ್ವರ, ಮೈ ಕೈ ನೋಡು ಎಂದು ದಿನಕ್ಕೆ 20 ರಿಂದ 30 ರೋಗಿಗಳು ದಾಖಲಾಗುತ್ತಿದ್ದಾರೆ. ಎಲ್ಲಾ ಚಿಕಿತ್ಸಾ ಸೌಲಭ್ಯ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದರು. ವಾರ್ತಾಧಿಕಾರಿ ವಿನೋದ್ ಚಂದ್ರ ಇದ್ದರು.

ಹೆಚ್ಚಿದ ಸೊಳ್ಳೆಕಾಟ

ಹೊಳೆನರಸೀಪುರ: ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಜನರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದ ಹೇಮಾವತಿ ಬಡಾವಣೆ, ಪೇಟೆ, ಕೋಟೆ, ಅರಕಲಗೂಡು ರಸ್ತೆ, ಕಾರ್ಯಾಲಯ ಬಡಾವಣೆ, ಹೌಸಿಂಗ್‌ ಬೋರ್ಡ್‌, ಸ್ಲಂ ಬೋರ್ಡ್‌ ಆಶ್ರಯ ಬಡಾವಣೆ, ಅಂಬೇಡ್ಕರ್‌ ನಗರಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ಜನರು ದೂರಿದ್ದಾರೆ.

ಪಟ್ಟಣದ ಅನೇಕ ಕಡೆಗಳಲ್ಲಿ ಚರಂಡಿಯನ್ನೇ ಸ್ವಚ್ಛಗೊಳಿಸುವುದಿಲ್ಲ. ಅಲ್ಲಿ ಕೊಳಚೆ ನೀರು ತುಂಬಿ ಸೊಳ್ಳೆಗಳ ಉಗಮ ಸ್ಥಾನವಾಗಿವೆ ಎಂದು ದೂರಿದ್ದಾರೆ. ಪುರಸಭೆಯವರು ಮೊದಲು ಫಾಗಿಂಗ್‌ ಮಾಡುತ್ತಿದ್ದರು. ಈಗ  ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅಂಬೇಡ್ಕರ್‌ ಬಡಾವಣೆಯ ರಾಮ, ಮಂಜುನಾಥ್‌, ಪುರುಷೋತ್ತಮ ದೂರಿದ್ದಾರೆ.

ಪ್ರತಿಕ್ರಿಯಿಸಿ (+)