ಶನಿವಾರ, ಡಿಸೆಂಬರ್ 7, 2019
16 °C

ದೆಹಲಿ: ಲೈಂಗಿಕ ಕಾರ್ಯಕರ್ತೆಯ ಪ್ರೀತಿಯಲ್ಲಿ ಬಿದ್ದ ವ್ಯಕ್ತಿ, ವೇಶ್ಯಾಗೃಹದಿಂದ ಪ್ರೇಯಸಿ ರಕ್ಷಿಸಿದ!

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದೆಹಲಿ: ಲೈಂಗಿಕ ಕಾರ್ಯಕರ್ತೆಯ ಪ್ರೀತಿಯಲ್ಲಿ ಬಿದ್ದ ವ್ಯಕ್ತಿ, ವೇಶ್ಯಾಗೃಹದಿಂದ ಪ್ರೇಯಸಿ ರಕ್ಷಿಸಿದ!

ನವದೆಹಲಿ: ಇದು ಅಸಾಮಾನ್ಯ ಪ್ರೇಮ ಕಥೆ. ಪ್ರೀತಿಯಿಂದಾಗಿ ಅಸಂಭವನೀಯ ಎನ್ನಬಹುದಾದ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಲೈಂಗಿಕ ಕಾರ್ಯಕರ್ತೆಯ ಪ್ರೀತಿಯಲ್ಲಿ ಬಿದ್ದು, ಆಕೆಯನ್ನು ಮದುವೆಯಾಗಲು ನಿರ್ಧಿಸಿದ ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಆಧರಿಸಿ, ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು) 27 ವರ್ಷದ ನೇಪಾಳದ ಮಹಿಳೆಯನ್ನು ಇಲ್ಲಿನ ಜಿಬಿ ರಸ್ತೆಯ ವೇಶ್ಯಾಗೃಹದಿಂದ ಗುರುವಾರ ರಕ್ಷಿಸಿದೆ. 

ಲೈಂಗಿಕ ಕಾರ್ಯಕರ್ತೆಯನ್ನು ರಕ್ಷಿಸಲು ನೆರವಾಗಿದ್ದು ಸ್ಥಳೀಯ ಸದರ್‌ ಬಜಾರಿನ ವ್ಯಕ್ತಿ.

ಶುಭಿ ಮತ್ತು ಸಾಗರ್‌ (ಹೆಸರು ಬದಲಾಯಿಸಲಾಗಿದೆ) ಇಬ್ಬರು ಎರಡು ವರ್ಷಗಳ ಹಿಂದೆ ಉತ್ತರ ದೆಹಲಿಯ ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಭೇಟಿಯಾಗಿದ್ದರು ಮತ್ತು ಆ ಕ್ಷಣಕ್ಕೆ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಗ್ರಾಹಕರ ವೇಷದಲ್ಲಿ ಸಾಗರ್‌ ಆಕೆಯನ್ನು ವೇಶ್ಯಾಗೃಹದಲ್ಲಿ ಭೇಟಿ ಮಾಡಲಾರಂಭಿಸಿದ. ಭೇಟಿ ನೀಡಿದಾಗಲೆಲ್ಲ ‘ಕೋತಾ’ದ ಮಾಲಿಕನ ಕೈಗೆ ಸಿಕ್ಕಿ ಬೀಳುತ್ತಿದ್ದರು. ಬಳಿಕ, ಇಬ್ಬರೂ ಮದುವೆಯಾಗಿ ಹೊಸ ಜೀವನ ಆರಂಭಿಸಲು ನಿರ್ಧರಿಸಿದರು.

ಶುಭಿ ಈ ಕುರಿತು ತನ್ನ ಕೆಲ ಸಹರ್ತಿ–ಕಾರ್ಯಕರ್ತರಿಗೆ ತಿಳಿಸಿ, ವೇಶ್ಯಾಗೃಹದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ತಪ್ಪಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ವೇಳೆ ಸಾಗರ್‌, ಡಿಸಿಡಬ್ಲ್ಯು ಸಹಾಯವಾಣಿಗೆ ಕರೆ ಮಾಡಿ ತಮ್ಮ ಕಥೆಯನ್ನು ಅವರಿಗೆ ತಿಳಿಸಿದ್ದಾನೆ. ಪೊಲೀಸ್‌ ಅಧಿಕಾರಿಗಳು ಮತ್ತು ಡಿಸಿಡಬ್ಲ್ಯು ಕೌನ್ಸಿಲರ್‌ಗಳು ‘ಕೋತಾ’ದ ಮೇಲೆ ದಾಳಿ ನಡೆಸಿ, ಮಹಿಳೆಯನ್ನು ರಕ್ಷಿಸಿ ಕರೆತಂದಿದ್ದಾರೆ.

‘ತಾನು ಪ್ರೀತಿಸಿದ ಮಹಿಳೆಯ ಜತೆ ಮದುವೆಯಾಗುವುದಾಗಿ ಮತ್ತು ಈ ಬಗ್ಗೆ ತನ್ನ ಕುಟುಂಬದವರ ಮನವೊಲಿಸಿರುವುದಾಗಿ’ ಸಾಗರ್ ಹೇಳಿದ್ದಾನೆ.

‘ಸಾಗರ್‌ ತಾನು ಮಹಿಳೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಕರೆ ಮಾಡಿದ್ದರು. ವೇಶ್ಯಾಗೃಹದ 68ನೇ ಕೊಠಡಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಿ ಕರೆ ತಂದಿದ್ದೇವೆ. ಆಕೆ ತನ್ನ ವೃತ್ತಿಯನ್ನು ಬಿಟ್ಟು ವಿವಾಹವಾಗಲು ಉತ್ಸುಕರಾಗಿದ್ದಾರೆ‘ ಎಂದು ಡಿಸಿಡಬ್ಲ್ಯುನ ಹಿರಿಯ ಅಧಿಕಾರಿ ಹೇಳಿದ್ದಾರೆ. ಈ ಕುರಿತು ಇಂಡಿಯಾ ಟುಡೆ ವರದಿ ಮಾಡಿದೆ.

ಶುಭಿ 2015ರಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಬಳಿಕ ನೇಪಾಳದಿಂದ ಭಾರತಕ್ಕೆ ಬಂದಿದ್ದಾರೆ. ಅವರು ಕಡು ಬಡತನ ಕುಟುಂಬದವರಾಗಿದ್ದರು ಮತ್ತು ಎಲ್ಲವನ್ನೂ ಕಳೆದುಕೊಂಡಿದ್ದರು. ಆಹಾರ ಮತ್ತು ಜೀವನೋಪಾಯಕ್ಕಾಗಿ ದೆಹಲಿಗೆ ಬಂದಿದ್ದರು. ಯಾರೋ ವ್ಯಕ್ತಿಯೊಬ್ಬರಿಗೆ ಶಭಿಯನ್ನು ಜಿಬಿ ರಸ್ತೆಯಲ್ಲಿ ಮರಾಟ ಮಾಡಿದ್ದರು.

ಜಿಬಿ ಅಥವಾ ಗಾರ್ಸ್ಟಿನ್‌ ಬಾಸ್ಟಿನ್ ರಸ್ತೆ

ಜಿಬಿ ರಸ್ತೆ ಅಥವಾ ಗಾರ್ಸ್ಟಿನ್‌ ಬಾಸ್ಟಿನ್ ರಸ್ತೆ ರಾಷ್ಟ್ರ ರಾಜಧಾನಿಯಲ್ಲಿನ ದೊಡ್ಡ ‘ರೆಡ್‌ ಲೈಟ್‌’ ಪ್ರದೇಶ. ಇದು ಅಜ್ಮೀರ್‌ ಗೇಟ್‌ನಿಂದ ಲಾಹೋರ್‌ ಗೇಟ್‌ ವರೆಗಿನ ದೆಹಲಿ ರೈಲ್ವೆ ನಿಲ್ದಾಣದ ಬಳಿ ಲೈಲು ಮಾರ್ಗಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಇಲ್ಲಿ 93 ವೇಶ್ಯಾಗೃಹಗಳಿದ್ದು, 3,500 ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಲೈಂಗಿಕ ಕಾರ್ಯಕರ್ತರ ಸುಮಾರು 800 ಮಕ್ಕಳು ಇಲ್ಲಿ ವಾಸವಿದ್ದಾರೆ. ಕೆಲ ಸ್ವಯಂ ಸೇವಾ ಸಂಸ್ಥೆಗಳು ಶಿಕ್ಷಣ ಮತ್ತು ವಿವಿಧ ಕೌಶಲ ತರಬೇತಿ ನೀಡುವಲ್ಲಿ ನಿರತವಾಗಿವೆ.

ಪ್ರತಿಕ್ರಿಯಿಸಿ (+)