ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು, ತಂಪು ನಗರ ಜಾಗೃತಿ ಆಂದೋಲನ

Last Updated 7 ಜುಲೈ 2017, 11:16 IST
ಅಕ್ಷರ ಗಾತ್ರ

ತುಮಕೂರು: ‘ಹಸಿರು ಮತ್ತು ತಂಪು ನಗರ’ ಜಾಗೃತಿ ಆಂದೋಲನವನ್ನು ಪ್ರತಿ ತಿಂಗಳು ನಗರದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಮನೆಯ ಮುಂದೆ ಮರ–ಗಿಡ ಬೆಳೆಸುವುದು, ರಸ್ತೆಗಳು, ಕೆರೆ ಕಟ್ಟೆಗಳ ಸುತ್ತಮುತ್ತ ಗಿಡಗಳನ್ನು ನಡೆಸುವುದು ಈ ಆಂದೋಲದನ  ಗುರಿಯಾಗಿದೆ’ ಎಂದು  ಅಭಿವೃದ್ಧಿ ರೆವಲ್ಯೂಷನ್ ಫೋರಂ   ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಹೇಳಿದರು.

ದಿನದಿಂದ ದಿನಕ್ಕೆ ನಗರದಲ್ಲಿ ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಹದಿನಾಲ್ಕಕ್ಕೂ ಹೆಚ್ಚು ಕೆರೆಗಳಿದ್ದರೂ ಅವುಗಳಲ್ಲಿ ನೀರಿಲ್ಲ. ನಗರದಲ್ಲಿ ಗಿಡಗಳನ್ನು ಹೆಚ್ಚು ನೆಡಬೇಕು ಮತ್ತು ಕೆರೆಗಳಿಗೆ ನೀರು ತುಂಬುವಂತೆ ಮಾಡಬೇಕು ಎಂಬುದು ಈ ಆಂದೋಲನದ ಪ್ರಮುಖ ಆಶಯವಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿರುದ್ಧ ಶ್ರವಣ್ ಅವರೊಂದಿಗೂ ಫೋರಂ ಈ ಕುರಿತು ಚರ್ಚಿಸಿದೆ. ಇದಕ್ಕೆ ಸ್ಪಂದಿಸಿದ ಅವರು ನಗರದ ನಾಗರಿಕರು ತಮ್ಮ ಮನೆಯಂಗಳ ಅಥವಾ ಮನೆಯ ಮುಂದೆ ಗಿಡಗಳನ್ನು ಬೆಳೆಸಿದರೆ ಪ್ರತಿ ಗಿಡಕ್ಕೆ ಆಸ್ತಿ ತೆರಿಗೆಯಲ್ಲಿ ₹ 100 ವಿನಾಯಿತಿ ನೀಡಬೇಕು ಎಂದು ಪಾಲಿಕೆಗೆ ಪತ್ರ ಬರೆದಿದ್ದಾರೆ. ಆದರೆ ಪಾಲಿಕೆ ಈ ಕುರಿತು ಇನ್ನೂ ಸ್ಪಂದಿಸಿಲ್ಲ’ ಎಂದು ಹೇಳಿದರು.

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ಪಿಜಿಸಿಐಎಲ್) ಜಿಲ್ಲೆಯಲ್ಲಿ ವಿದ್ಯುತ್ ಮಾರ್ಗ ಹಾಕುವಾಗ ಮರಗಳನ್ನು ಕಡಿದಿದೆ. ಅದರ ಬದಲಾಗಿ ಗಿಡಗಳನ್ನು ನೆಡಲು ಜಿಲ್ಲಾಡಳಿತಕ್ಕೆ ₹ 92 ಲಕ್ಷ ಹಣ ನೀಡಿದೆ. ಆ ಹಣದಲ್ಲಿ ತುಮಕೂರು ನಗರದಲ್ಲಿ ಗಿಡ ನೆಡಲು ಯೋಜನೆ ರೂಪಿಸುವಂತೆ ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಈ ಮೂಲಕ ನಗರವನ್ನು  ಹಸಿರು ಮತ್ತು ತಂಪು ನಗರವನ್ನಾಗಿಸುವ ಕಾಳಜಿ ಮೆರೆದಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ನೀರು ಕೊಡಲ್ಲ: ಹೇಮಾವತಿ ಜಲಾಶಯದಿಂದ ತುಮಕೂರು ನಗರಕ್ಕೆ  ಕುಡಿಯುವ ಉದ್ದೇಶಕ್ಕೆ ಹಂಚಿಕೆಯಾಗಿರುವ 1.135 ಟಿಎಂಸಿ ಅಡಿ ನೀರನ್ನು ತುಮಕೂರು ನಗರದ ಜನರಿಗೆ ಕುಡಿಯುವುದಕ್ಕೆ ಪೂರೈಸಬೇಕು. ಬೇರೆ ಉದ್ದೇಶಕ್ಕೆ ಕೊಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷಾ ಗೋಷ್ಠಿಯಲ್ಲಿದ್ದರು.

ನೀರು ಕೊಟ್ಟರೆ ಪೊರಕೆ ಚಳವಳಿ
ಹಿರೇಹಳ್ಳಿ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಬೇಕು ಎನ್ನುವವರು ಹೇಮಾವತಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಸಿಕೊಂಡು ಪ್ರತ್ಯೇಕವಾಗಿ ತೆಗೆದುಕೊಂಡು ಹೋಗಲಿ. ಆದರೆ, ತುಮಕೂರಿಗೆ ನಿಗದಿಪಡಿಸಿದ ನೀರನ್ನು ಅಲ್ಲಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದರೆ ನಾಗರಿಕರು ಪೊರಕೆ ಚಳವಳಿ ನಡೆಸಬೇಕಾಗುತ್ತದೆ. ಸಂಘ ಸಂಸ್ಥೆಗಳು ಪ್ರತಿಭಟಿಸಬೇಕಾಗುತ್ತದೆ ಎಂದು ಕುಂದರನಹಳ್ಳಿ ರಮೇಶ್ ಎಚ್ಚರಿಕೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT