ಶುಕ್ರವಾರ, ಡಿಸೆಂಬರ್ 13, 2019
20 °C

ಜಿಲ್ಲೆಯಲ್ಲಿ ಡೆಂಗಿ– ಚಿಕೂನ್‌ಗುನ್ಯಾ ಉಲ್ಬಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ಡೆಂಗಿ– ಚಿಕೂನ್‌ಗುನ್ಯಾ ಉಲ್ಬಣ

ಕೋಲಾರ: ಜಿಲ್ಲೆಯಾದ್ಯಂತ ಡೆಂಗಿ ಮತ್ತು ಚಿಕೂನ್‌ಗುನ್ಯಾ ಕಾಯಿಲೆ ಉಲ್ಬಣಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಜ್ವರಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶ್ರೀನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ಹೋಗಿವೆ. ಪ್ರತಿನಿತ್ಯ ಸಾವಿರಾರು ಮಂದಿಯ ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಕಣ್ಗಾವಲು ಘಟಕಕ್ಕೆ ಕಳುಹಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಜೂನ್‌ ತಿಂಗಳ ಆರಂಭದಿಂದ ಡೆಂಗಿ ಮತ್ತು ಚಿಕೂನ್‌ ಗುನ್ಯಾ ಪ್ರಕರಣಗಳು ವರದಿಯಾಗುತ್ತಿವೆ. ಎಸ್‌ಎನ್‌ಆರ್‌ ಆಸ್ಪತ್ರೆಯ ರಕ್ತ ಪ್ರಯೋಗಾಲಯದಲ್ಲಿ ಗುರುವಾರ ಜ್ವರಪೀಡಿತರ ದೊಡ್ಡ ದಂಡೇ ಕಂಡುಬಂತು. ಜೂನ್‌ ತಿಂಗಳಿಗೂ ಮುನ್ನ ಆಸ್ಪತ್ರೆಯಲ್ಲಿ ದಿನಕ್ಕೆ ಸುಮಾರು 100 ಮಂದಿಯ ರಕ್ತ ಪರೀಕ್ಷೆ ನಡೆಯುತ್ತಿತ್ತು. ಇದೀಗ ಡೆಂಗಿ ಹಾಗೂ ಚಿಕೂನ್‌ ಗುನ್ಯಾ ಶಂಕೆ ಹಿನ್ನೆಲೆಯಲ್ಲಿ ಪ್ರತಿನಿತ್ಯ 200ಕ್ಕೂ ಹೆಚ್ಚು ಮಂದಿಯ ರಕ್ತ ಪರೀಕ್ಷೆ ಮಾಡಲಾಗುತ್ತಿದೆ.

ಜೂನ್‌ ಆರಂಭದಿಂದ ಗುರುವಾರದವರೆಗೆ ಜಿಲ್ಲಾ ಕಣ್ಗಾವಲು ಘಟಕದಲ್ಲಿ ಸುಮಾರು 550 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 85 ಮಂದಿಗೆ ಡೆಂಗಿ ಹಾಗೂ 17 ಮಂದಿಗೆ ಚಿಕೂನ್‌ಗುನ್ಯಾ ಇರುವುದು ದೃಢಪಟ್ಟಿದೆ. ಅದೇ ರೀತಿ ಮೂರು ಮಂದಿ ಮಲೇರಿಯಾ ಕಾಯಿಲೆಗೆ ತುತ್ತಾಗಿದ್ದಾರೆ. ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಡೆಂಗಿ ಪ್ರಕರಣಗಳು ವರದಿಯಾಗಿವೆ. ಕೋಲಾರ ನಗರ ಒಂದರಲ್ಲೇ 40 ಮಂದಿಗೆ ಡೆಂಗಿ ಇರುವುದು ಖಚಿತವಾಗಿದೆ.

ನೈರ್ಮಲ್ಯ ಸಮಸ್ಯೆ: ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯದಲ್ಲಿ ಮಳೆಯಾಗಿದ್ದರಿಂದ ಗುಂಡಿ, ಚರಂಡಿ ಹಾಗೂ ಕೊಳಚೆ ಪ್ರದೇಶದಲ್ಲಿ ನೀರು ನಿಂತು ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಿದ್ದು, ಜನರಿಗೆ ಜ್ವರ, ಶೀತ, ತಲೆನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವಿನ ಲಕ್ಷಣ ಕಾಣಿಸಿಕೊಂಡಿದೆ.

ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರು ಜ್ವರದಿಂದ ಬಳಲುತ್ತಿದ್ದಾರೆ. ಜ್ವರಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಮನೆಯ ತೊಟ್ಟಿಗಳು ಮತ್ತು ಡ್ರಮ್‌ಗಳಲ್ಲಿ ಶೇಖರಿಸಿದ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ನಡೆಯುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕದ ವೈದ್ಯಕೀಯ ಸಿಬ್ಬಂದಿ ಮನೆ ಮನೆಗೂ ಭೇಟಿ ನೀಡಿ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.

ಜತೆಗೆ ನೀರು ಸಂಗ್ರಹಿಸಿ ಇಟ್ಟುಕೊಳ್ಳದಂತೆ ತಿಳಿ ಹೇಳುತ್ತಿದ್ದಾರೆ. ಕಾಯಿಲೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರಸಭೆ ವತಿಯಿಂದ ಕರಪತ್ರ ಹಂಚಲಾಗುತ್ತಿದೆ ಮತ್ತು ಆಟೊಗಳಲ್ಲಿ ಪ್ರಚಾರ ನಡೆಸಲಾಗುತ್ತಿದೆ.

ಫಾಗಿಂಗ್‌ ನಡೆಯುತ್ತಿಲ್ಲ: ಆರೋಗ್ಯ ಇಲಾಖೆ ಅಧಿಕಾರಿಗಳು ಕೋಲಾರ ನಗರದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ರಾಸಾಯನಿಕ ಹೊಗೆ ಸಿಂಪಡಿಸುವಂತೆ (ಫಾಗಿಂಗ್‌) ನಗರಸಭೆಗೆ ಪತ್ರ ಬರೆದಿದ್ದಾರೆ. ನಗರಸಭೆಯಲ್ಲಿ ಒಂದೇ ಫಾಗಿಂಗ್‌ ವಾಹನವಿದ್ದು, ಅದು ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಫಾಗಿಂಗ್‌ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ.

ಕಾರ್ಯ ನಿರ್ವಹಿಸಲು ಆದೇಶ

ಜಿಲ್ಲೆಯಲ್ಲಿ ಡೆಂಗಿ ಮತ್ತು  ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರೋಗ ಹತೋಟಿಗೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸರ್ಕಾರಿ ರಜಾ ದಿನಗಳಾದ ಎರಡನೇ ಶನಿವಾರ (ಜುಲೈ 8) ಮತ್ತು ಭಾನುವಾರವೂ (ಜುಲೈ 9) ಕಾರ್ಯ ನಿರ್ವಹಿಸುವಂತೆ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಆದೇಶಿಸಲಾಗಿದೆ. ಡಾ.ಎಸ್‌.ಎನ್‌.ವಿಜಯಕುಮಾರ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಪ್ರತಿಕ್ರಿಯಿಸಿ (+)