ಭಾನುವಾರ, ಡಿಸೆಂಬರ್ 15, 2019
17 °C

ಜಿ20 ಶೃಂಗಸಭೆ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆ ಮೋದಿ ಮಾತುಕತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಿ20 ಶೃಂಗಸಭೆ: ಚೀನಾ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್‌ ಜತೆ ಮೋದಿ ಮಾತುಕತೆ

ಹ್ಯಾಂಬರ್ಗ್‌: ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಲು ಜರ್ಮನಿಯ ಹ್ಯಾಂಬರ್ಗ್‌ಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಶುಕ್ರವಾರ ಮಾತುಕತೆ ನಡೆಸಿದ್ದಾರೆ.

ಸಿಕ್ಕಿಂ ವಲಯದ ಭಾರತ–ಚೀನಾ ಗಡಿಯಲ್ಲಿ ಸಂಘರ್ಷಭರಿತವಾದ ಸನ್ನಿವೇಶ ಇರುವ ಕಾರಣ ಮೋದಿ- ಕ್ಸಿ ಮಧ್ಯೆ ಮಾತುಕತೆ ನಡೆಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿತ್ತು. ಆದರೆ ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮುಖಂಡರ ಅನೌಪಚಾರಿಕ ಸಭೆಯ ವೇಳೆ ಉಭಯ ಮುಖಂಡರು ಮಾತುಕತೆ ನಡೆಸಿದ್ದಾರೆ.

ಕೆಲವು ಪ್ರಧಾನ ವಿಷಯಗಳ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಟ್ವೀಟ್ ಮಾಡಿದ್ದಾರೆ. ಆದಾಗ್ಯೂ, ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಈ ನಾಯಕರು ಮಾತನಾಡಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

ಬ್ರಿಕ್ಸ್ ರಾಷ್ಟ್ರಗಳ ನಾಯಕರ ಅನೌಪಚಾರಿಕ ಸಭೆಯ ನಡುವೆ ಚೀನಾ ಅಧ್ಯಕ್ಷ ಮತ್ತು ಭಾರತದ ಪ್ರಧಾನಿ ಪರಸ್ಪರ ಹೊಗಳಿ ಮಾತನಾಡಿದ್ದು ಹೆಚ್ಚು ಗಮನಾರ್ಹವಾಗಿತ್ತು. ಭಯೋತ್ಪಾದನೆ ವಿರುದ್ದ ಭಾರತದ ದಿಟ್ಟ ನಿಲುವನ್ನು ಚೀನಾ ಅಧ್ಯಕ್ಷರು ಹೊಗಳಿದ್ದಾರೆ. ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಶ್ಲಾಘಿಸಿದ ಕ್ಸಿ, ದೇಶ ಇನ್ನಷ್ಟು ಗೆಲುವುಗಳನ್ನು ಸಾಧಿಸಲಿ ಎಂದು ಆಶಿಸಿದ್ದಾರೆ.

ಆನಂತರ ಮಾತನಾಡಿದ ಮೋದಿ, ಮುಂಬರುವ ಬ್ರಿಕ್ಸ್  ಸಮ್ಮೇಳನಕ್ಕೆ ಆತಿಥ್ಯ ವಹಿಸಲಿರುವ ಚೀನಾಗೆ ಅಭಿನಂದನೆ ಸಲ್ಲಿಸಿದ್ದು, ಇದಕ್ಕೆ ಎಲ್ಲ ರೀತಿಯಲ್ಲಿಯೂ ಸಹಕರಿಸುವುದಾಗಿ ಹೇಳಿದ್ದಾರೆ. ಉಭಯ ನಾಯಕರ ಈ ಮಾತುಕತೆ 5 ನಿಮಿಷಗಳ ಕಾಲ ನಡೆದಿದೆ.

ಪ್ರತಿಕ್ರಿಯಿಸಿ (+)