ಭಾನುವಾರ, ಡಿಸೆಂಬರ್ 15, 2019
23 °C

‘ರೆಹಮಾನ್ ಜೊತೆ ಹಾಡುವಾಸೆ’

ಸುಮಾ ಬಿ. Updated:

ಅಕ್ಷರ ಗಾತ್ರ : | |

‘ರೆಹಮಾನ್ ಜೊತೆ ಹಾಡುವಾಸೆ’

ಮೈಸೂರಿನ ಅನನ್ಯಾ ಭಟ್ ಸಣ್ಣ ವಯಸ್ಸಿಗೇ ಹಿನ್ನೆಲೆ ಗಾಯಕಿಯಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಹಾಡಿದ ‘ರಾಮ ರಾಮ ರೇ’ ಚಿತ್ರದ ‘ನಮ್ಮ ಕಾಯೋ ದೇವರೇ...’ ಹಾಡಿಗೆ 64ನೇ ದಕ್ಷಿಣ ಫಿಲ್ಮ್‌ಫೇರ್‌ ಪ್ರಶಸ್ತಿ (ಅತ್ಯುತ್ತಮ ಹಿನ್ನೆಲೆ ಗಾಯಕಿ) ಅವರಿಗೆ ಸಂದಿದೆ. ‘ಬ್ಲ್ಯಾಕ್‌ ಲೇಡಿ’ಯನ್ನು ಕೈಯಲ್ಲಿ ಹಿಡಿದು ಪುಳಕಗೊಂಡ ಅವರು ಆ ಗುಂಗಿನಿಂದ ಇನ್ನೂ ಹೊರಬಂದಿಲ್ಲ.

ಅನನ್ಯಾ ಮೈಸೂರಿನ ವಿಶ್ವನಾಥ ಭಟ್‌ ಹಾಗೂ ರೇವತಿ ವಿಶ್ವನಾಥ್‌ ದಂಪತಿಯ ಮಗಳು. ರಂಗಗೀತೆಗಳ ಮೂಲಕ ಮೈಸೂರಿನಲ್ಲಿ ಮನೆಮಾತಾಗಿದ್ದ ಈ ಹುಡುಗಿ 2013ರಲ್ಲಿ ಹಾಡಿದ ಲೂಸಿಯಾ ಚಿತ್ರದ ‘ನೀ ತೊರೆದ ಘಳಿಗೆಯಲಿ...’ ಹಾಡು ಹೆಸರು ತಂದುಕೊಟ್ಟಿತು.‘ಒಲವೇ ಜೀವನ ಲೆಕ್ಕಾಚಾರ’ ಚಿತ್ರ ಅವರ ಮೊದಲ ಹಾಡು. ಅಲ್ಲಿಂದೀಚೆ ‘ಸಿದ್ಧಗಂಗಾ’, ‘ಭುಜಂಗ’ ‘ರಾಕೆಟ್‌’, ‘ಚತುರ್ಭುಜ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹಾಡಿದ್ದಾರೆ. ಈಚೆಗೆ ತೆರೆಕಂಡ ‘ಊರ್ವಿ’ ಚಿತ್ರದಲ್ಲಿ ಬಣ್ಣಹಚ್ಚುವ ಮೂಲಕ ನಟನೆಗೂ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಹೀಗೆ, ಚಿತ್ರರಂಗದ ಮತ್ತು ಪ್ರಶಸ್ತಿ ನಂತರದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ...

* ಪ್ರಶಸ್ತಿ‌ಯ ನಿರೀಕ್ಷೆ ಇತ್ತೆ?

ಖಂಡಿತಾ ಇಲ್ಲ. ಸಂಗೀತ ಕ್ಷೇತ್ರಕ್ಕೆ ಈಗ ತಾನೇ ಪದಾರ್ಪಣೆ ಮಾಡಿದ್ದೇನೆ. ಕಲಿಯಬೇಕಾದ್ದು ಸಾಕಷ್ಟಿದೆ. ಆಯ್ಕೆಪಟ್ಟಿಯಲ್ಲಿ ನನ್ನ ಹೆಸರು ಕೇಳಿ ಬಂದಾಗಲೇ ಆಶ್ಚರ್ಯಗೊಂಡಿದ್ದೆ. ಶ್ರೇಯಾ ಘೋಷಾಲ್‌, ಅನುರಾಧಾ ಭಟ್‌, ಇಂದು ನಾಗರಾಜ್‌, ವಾಣಿ ಹರಿಕೃಷ್ಣ ಅವರ ಹೆಸರೂ ಆಯ್ಕೆಪಟ್ಟಿಯಲ್ಲಿದ್ದವು. ಅವರ ಮಧ್ಯೆ ನನಗೆ ಪ್ರಶಸ್ತಿ ಬರಬಹುದು ಎಂಬ ಕಲ್ಪನೆ ಸಹ ಇರಲಿಲ್ಲ.

* ಚಿಕ್ಕ ವಯಸ್ಸಿಗೇ ದೊಡ್ಡ ಪ್ರಶಸ್ತಿ. ಹೇಗನಿಸುತ್ತಿದೆ?

‘ರಾಮಾ ರಾಮಾ ರೇ’ ಕಲಾತ್ಮಕ ಸಿನಿಮಾ. ಅಂತಹ ಸಿನಿಮಾಗಳ ಹಾಡುಗಳನ್ನೂ ಪ್ರಶಸ್ತಿಗೆ ಪರಿಗಣಿಸುತ್ತಾರೆ ಎಂಬುದು ಗೊತ್ತಿರಲಿಲ್ಲ. ಸಿನಿಮಾ ಸಾಕಷ್ಟು ಜನಪ್ರಿಯತೆ ಗಳಿಸಿತು. ಹಾಗಾಗಿ, ನನ್ನ ಹಾಡನ್ನೂ ಗುರುತಿಸಿದರು ಅಂತ ಅನಿಸುತ್ತೆ. ಕೆಲ ಬಾರಿ ನಾವು ಎಷ್ಟೇ ಚೆನ್ನಾಗಿ ಹಾಡಿದರೂ, ಸಿನಿಮಾ ಹಿಟ್‌ ಆಗಲಿಲ್ಲ ಅಂದ್ರೆ ಹಾಡಿದ ಹಾಡು ಜನರಿಗೆ ತಲುಪುವುದಿಲ್ಲ. ಈ ಸಿನಿಮಾದಲ್ಲಿ 1 ನಿಮಿಷ 43 ಸೆಕೆಂಡ್‌ ಮಾತ್ರ ಆ ಹಾಡು ಬಂದು ಹೋಗುತ್ತೆ. ನನಗಿಷ್ಟವಾದ ಜನಪದ ಶೈಲಿಯಲ್ಲಿ ಹಾಡಿದ ಮೊದಲ ಗೀತೆಗೆ ಪ್ರಶಸ್ತಿ ಬಂದಿರುವುದು ಖುಷಿಯನ್ನು ಇಮ್ಮಡಿಗೊಳಿಸಿದೆ.

* ‘ಉರ್ವಿ’ಯಲ್ಲಿ ನಟಿಸಿದ್ದೀರಿ. ಭವಿಷ್ಯದ ಆಯ್ಕೆ?

ಸಂಗೀತ. ನಟನೆ ಎರಡೂ ನಾನು ನೋಡಿ ಕಲಿತದ್ದು. ಮಂಡ್ಯ ರಮೇಶ್‌ ಅವರ ಮೈಸೂರಿನ ‘ನಟನಾ’ದ ವಿದ್ಯಾರ್ಥಿನಿ ನಾನು. ಅಲ್ಲಿ ನಾಟಕದ ತಾಲೀಮು ನಡೆಯುವಾಗ ಹಿನ್ನೆಲೆ ಗಾಯಕರೂ ಜತೆಗೆ ಇರಬೇಕಿತ್ತು. ನೋಡ್ತಾ ನೋಡ್ತಾ ನಟನೆ ಕಲಿತೆ. ‘ಉರ್ವಿ’ ಚಿತ್ರದಲ್ಲಿ ಅಭಿನಯಿಸಲು ಆಕಸ್ಮಿಕವಾಗಿ ಅವಕಾಶ ಸಿಕ್ಕಿತು. ಇದು ಹವ್ಯಾಸ ಅಷ್ಟೆ. ಸಂಗೀತವೇ ನನ್ನ ಆದ್ಯತೆ.

* ಸಂಗೀತ ಕ್ಷೇತ್ರವನ್ನೇ ಆಯ್ದುಕೊಂಡದ್ದು ಏಕೆ?

ಮನೆಯಲ್ಲಿ ಸಂಗೀತದ ಹಿನ್ನೆಲೆ ಇರುವವರು ಯಾರೂ ಇಲ್ಲ. ಚಿಕ್ಕವಳಿದ್ದಾಗ ಹಾಡ್ತೀನಿ ಅಂತ ಅಮ್ಮ ಸಂಗೀತಕ್ಕೆ ಸೇರಿಸಿದರು. ಗಾಯಕಿಯಾಗಬೇಕು ಅಂತ ಅನಿಸಿದ್ದು ಏಳನೇ ತರಗತಿಯಲ್ಲಿರುವಾಗ. ‘ನಟನಾ’ದಲ್ಲಿ ಸಿಕ್ಕಿದ ಪ್ರೋತ್ಸಾಹದಿದ ಸಂಗೀತವನ್ನು ಗಂಭೀರವಾಗಿ ಪರಿಗಣಿಸಿದೆ. ಈಗ ಅದು ನನ್ನನ್ನು ಕನ್ನಡ ಮತ್ತು ತಮಿಳು ಸಿನಿಮಾ ರಂಗಕ್ಕೆ ತಂದು ನಿಲ್ಲಿಸಿದೆ.

* ತಮಿಳು ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದ್ದು?

ನನ್ನ ಅದೃಷ್ಟ. ತಮಿಳಿನಲ್ಲಿ ಹಾಡಬೇಕು ಎಂಬ ಆಸೆ ಇತ್ತು. ವಿಜಯ್‌ ಸೇತುಪತಿ ನಾಯಕರಾಗಿರುವ, ಡಿ.ಇಮಾನ್‌ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ‘ಕರುಪನ್‌’ ಚಿತ್ರದಲ್ಲಿ ಹಾಡಿದ್ದೇನೆ. ಇಮಾನ್‌ ಸರ್‌ ನನ್ನ ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಟ್ರು. ಜನಪದ ಶೈಲಿಯ ಹಾಡು. ಚೆನ್ನೈನಲ್ಲಿ ರೆಕಾರ್ಡಿಂಗ್‌ ಆಯ್ತು. ಚಿತ್ರ ಶೀಘ್ರದಲ್ಲೇ ತೆರೆಕಾಣಲಿದೆ. ತಮಿಳು ಭಾಷೆ ಅಲ್ಪ ಸ್ವಲ್ಪ ಪರಿಚಯ ಇದೆ. ಹಾಗಾಗಿ, ಉಚ್ಛಾರಣೆ ಸಮಸ್ಯೆ ಆಗಲಿಲ್ಲ.

* ಯಾರ ಜತೆ ಹಾಡುವುದು ನಿಮ್ಮ ಕನಸು?

ಸಂಗೀತ ಲೋಕದ ದಿಗ್ಗಜ ಎ.ಆರ್‌.ರೆಹಮಾನ್‌ ಅವರ ಜತೆ ಹಾಡಬೇಕು ಎಂಬುದು ನನ್ನ ಕನಸು. ಸಂಗೀತ ಲೋಕದಲ್ಲಿ ಅವರು ಹತ್ತಿರುವ ಮೆಟ್ಟಿಲು ಎಷ್ಟಿದೆ ಎಂದು ಎಣಿಸಲೂ ಸಾಧ್ಯವಿಲ್ಲ ಬಿಡಿ. ಅವರ ಸಂಗೀತದ ಜತೆಗೆ ಹರಿಹರನ್‌ ಅವರ ಗಜಲ್‌, ಸೋನು ನಿಗಮ್‌, ಶ್ರೇಯಾ ಘೋಷಾಲ್‌ ಅವರ ಹಾಡುಗಳನ್ನು ಯಾವಾಗಲೂ ಕೇಳುತ್ತಿರುತ್ತೇನೆ.

* ‌ಮುಂದಿರುವ ಗುರಿ ಸಾಧಿಸಲು ಏನು ತಯಾರಿ ಮಾಡಿಕೊಳ್ಳುವಿರಿ?

ಈ ಕ್ಷೇತ್ರದಲ್ಲಿ ಸಫಲಳಾಗಲು ಸಾಕಷ್ಟು ಸವಾಲುಗಳಿವೆ. ಸಿನಿ ಜಗತ್ತಿಗೆ ನಾನಿನ್ನೂ ಹೊಸಬಳು. ಭಾಷೆಯಲ್ಲಿ ಮೊದಲು ಪಕ್ವತೆ ಸಾಧಿಸಬೇಕು. ಎಲ್ಲ ಪ್ರಕಾರದ, ಶೈಲಿಯ ಹಾಡುಗಳನ್ನು ಹಾಡಬೇಕು. ಎಲ್ಲ ಭಾಷೆಗಳಲ್ಲೂ ಹಾಡಬೇಕು. ಆ ಮೂಲಕ ನನ್ನನ್ನು ಸಂಗೀತ ಕ್ಷೇತ್ರಕ್ಕೆ ಸಂಪೂರ್ಣವಾಗಿ ಒಡ್ಡಿಕೊಳ್ಳಬೇಕು... ನೋಡೋಣ ಪ್ರಯತ್ನ ಮಾಡುತ್ತೇನೆ.

ಪ್ರತಿಕ್ರಿಯಿಸಿ (+)