ಶನಿವಾರ, ಡಿಸೆಂಬರ್ 7, 2019
25 °C

ಸಿನಿಮಾ ನಿರ್ದೇಶಿಸಿದ ಖುಷಿಯಲ್ಲಿ ‘ಕಾಮಾಕ್ಷಿ’

Published:
Updated:
ಸಿನಿಮಾ ನಿರ್ದೇಶಿಸಿದ ಖುಷಿಯಲ್ಲಿ ‘ಕಾಮಾಕ್ಷಿ’

ಬಿ.ಎ.ಪದವಿ ಮುಗಿಸಿದ ನಂತರ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದವರು ಜೆ.ಪಿ.ನಗರದ ಮೋಹನ್‌ ಕಾಮಾಕ್ಷಿ. ಈ ಕ್ಷೇತ್ರದಲ್ಲಿ ನಟರಾಗಬೇಕೆಂದು ಬಯಸುವವರೇ ಹೆಚ್ಚು. ಆದರೆ ಇವರು ನಿರ್ದೇಶಕ ಆಗುವ ಕನಸಿನೊಂದಿಗೆ ಬಂದರು. ಸಂಕಲನಕಾರರಾಗಿ ಚಿತ್ರೋದ್ಯಮದಲ್ಲಿ ಪ್ರಸಿದ್ಧರಾದರು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಶಿಷ್ಯ ಮೋಹನ್‌ ಚಿಕ್ಕಂದಿನಲ್ಲಿಯೇ ಸಿನಿಮಾ ನಿರ್ದೇಶನದ ಕನಸು ಕಂಡವರು. ಪತ್ರಿಕೆಗಳಲ್ಲಿ ಸಿನಿಮಾ ಲೇಖನಗಳನ್ನು ಓದುವುದು, ಟಿ.ವಿ.ಗಳಲ್ಲಿ ಸಿನಿಮಾ ನೋಡುತ್ತಾ, ತಾನೂ ಒಂದು ದಿನ ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದು ಪಣತೊಟ್ಟರು.

‘ಮುಸ್ಸಂಜೆ ಮಾತು’ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ ಮೋಹನ್‌ ಅವರು ‘ಇನಿಯ’, ಅನನ್ಯ ಕಾಸರವಳ್ಳಿ ಅವರ ‘ಬಾನಾಡಿ’, ಅಪೂರ್ವ ಕಾಸರವಳ್ಳಿ ನಿರ್ದೇಶನದ ’ಹರಿಕಥಾ ಪ್ರಸಂಗ’ ಚಿತ್ರಗಳಿಗೆ ಸಂಕಲನಕಾರರಾಗಿ ದುಡಿದಿದ್ದಾರೆ.

‘ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಬಿ.ಎ. ಮಾಡಿದ ನಂತರ ಕಂಪೆನಿ ಒಂದರಲ್ಲಿ ಎಂಟು ವರ್ಷ ಕೆಲಸ ಮಾಡಿದೆ. ನಂತರ ಗಾಂಧಿನಗರಕ್ಕೆ ಬಂದೆ. ಸಂಕಲನಕಾರನಾಗುವ ಮೂಲಕ ಚಿತ್ರರಂಗ ಎಂಟ್ರಿ ಕೊಟ್ಟೆ’ ಎನ್ನುತ್ತಾರೆ ನಿರ್ದೇಶಕ ಮೋಹನ್‌.

ಗಿರೀಶ್‌ ಕಾಸರವಳ್ಳಿ ಅವರು ಯು.ಆರ್‌.ಅನಂತಮೂರ್ತಿ ಕುರಿತು ನಿರ್ದೇಶನ ಮಾಡಿದ ಸಾಕ್ಷ್ಯಚಿತ್ರಗಳಿಗೂ ಇವರು ಕೆಲಸ ಮಾಡಿದ್ದಾರೆ. ಗುರುಪ್ರಸಾದ್‌ ನಿರ್ದೇಶನದ 'ಡೈರೆಕ್ಟರ್‌ ಸ್ಪೆಷಲ್' ಚಿತ್ರಕ್ಕೆ ಸಹನಿರ್ದೇಶನ ಮಾಡಿದ್ದಾರೆ. ’ಯಾರೇ ಕೂಗಾಡಲಿ’, ’ಹುಡುಗರು’ ಚಿತ್ರಗಳಿಗೆ ಸಂಭಾಷಣೆ ಕೆಲಸದಲ್ಲಿ ಸಹಾಯಕರಾಗಿ ದುಡಿದಿದ್ದಾರೆ.

ಇಂತಿಪ್ಪ ಸಂಕಲನಕಾರ ಮೋಹನ್‌ ತಮ್ಮ ಅನುಭವಗಳನ್ನೆಲ್ಲಾ ಸೇರಿಸಿ ‘ಆದಿ ಪುರಾಣ’ ಎಂಬ ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಆದಿ ಪುರಾಣ ರೊಮ್ಯಾಂಟಿಕ್‌ ಕಾಮಿಡಿ ಚಿತ್ರವಾಗಿದ್ದು, ಕಲಾತ್ಮಕ ಚಿತ್ರದಂತೆ ಸಂದೇಶ ಸಾರುತ್ತದೆ ಎನ್ನುತ್ತಾರೆ ನಿರ್ದೇಶಕ ಮೋಹನ್‌.

‘ಸಂಕಲನಕಾರನಾಗಿ ಕೆಲಸ ಮಾಡಿದ್ದರಿಂದ ಹಲವಾರು ನಿರ್ದೇಶಕರ ಪರಿಚಯವಾಯಿತು. ಅವರ ವಿಭಿನ್ನ ನೋಟಗಳು, ನಿರ್ದೇಶನ ಕೌಶಲಗಳನ್ನು ಕಲಿತೆ. ನನಗೂ ನಿರ್ದೇಶಕನಾಗಬೇಕೆಂಬ ಗುರಿ ಇದ್ದುದರಿಂದ ಎಲ್ಲವನ್ನೂ ಕಲಿತೆ. ಒಂದು ಕಥೆ ಸಿದ್ಧವಾಗಿತ್ತು, ನಿರ್ದೇಶನಕ್ಕೆ ಮುಂದಾದೆ. ಚಿತ್ರ ಹಾಸ್ಯದಿಂದ ಕೂಡಿದ್ದು, ಯುವಕರನ್ನು ರಂಜಿಸಲಿದೆ. ಕಾಮಿಡಿಯಾದರೂ ಕಲಾತ್ಮಕ ಸಿನಿಮಾದಂತೆ ಸಂದೇಶ ನೀಡುತ್ತದೆ’ ಎಂದು ಚಿತ್ರದ ಬಗ್ಗೆ ವಿವರಿಸುತ್ತಾರೆ ಅವರು. ಆದಿ ಪುರಾಣ' ಸಿನಿಮಾಕ್ಕೆ ನಾಯಕನಾಗಿ ಶಶಾಂಕ್‌, ನಟಿಯರಾಗಿ ಅಹಲ್ಯಾ ಸುರೇಶ್ ಮತ್ತು ಮೋಕ್ಷಾ ಕುಶಾಲ್‌ ಅವರನ್ನು ಪರಿಚಯಿಸಲಾಗಿದೆ. ಹಾಸ್ಯನಟ ರಂಗಾಯಣ ರಘು, ನಾಗೇಂದ್ರ ಷಾ, ಕರಿಸುಬ್ಬು ತಾರಾಗಣದಲ್ಲಿದ್ದಾರೆ.

'ಚಿತ್ರೀಕರಣ ಗುರುವಾರದಿಂದ (ಜುಲೈ6) ಆರಂಭವಾಗಲಿದೆ. ಶೇ30 ರಷ್ಟು ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಯುತ್ತದೆ. ಒಂದು ಹಾಡು ಕೆ.ಆರ್‌.ಎಸ್‌. ಹಿನ್ನಿರಿನ ಪ್ರದೇಶದಲ್ಲಿ ನಡೆಯಲಿದೆ. ಉಳಿದ ಭಾಗ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಆಗುತ್ತದೆ’ ಎನ್ನುತ್ತಾರೆ ಮೋಹನ್‌.

‘ನಿರ್ದೇಶನಕ್ಕೂ ಸಂಕಲನಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಸಿನಿಮಾದ ಒಂದು ಭಾಗ ಸಂಕಲನ. ಆದರೆ ಸಿನಿಮಾ ಜೀವಾಳವೇ ನಿರ್ದೇಶನದ ಮೇಲಿರುತ್ತದೆ. ನಿರ್ದೇಶಕನಿಗೆ ಎಲ್ಲಾ ವಿಭಾಗದ ಪರಿಚಯವೂ ಇರಬೇಕು. ಒಟ್ಟಾರೆ ಜವಾಬ್ದಾರಿ ಹೆಚ್ಚಿರುತ್ತದೆ’  ಎಂದು ಸಿನಿಮಾ ಸಂಕಲನಕ್ಕೂ, ನಿರ್ದೇಶನಕ್ಕೂ ಇರುವ ವ್ಯತ್ಯಾಸವನ್ನು ಮೋಹನ್‌ ಗುರುತಿಸುತ್ತಾರೆ.

 

ಪ್ರತಿಕ್ರಿಯಿಸಿ (+)