ಭಾನುವಾರ, ಡಿಸೆಂಬರ್ 8, 2019
21 °C

ಮೀಸಲಾತಿಯ ಗೊಂದಲಗಳು

Published:
Updated:
ಮೀಸಲಾತಿಯ ಗೊಂದಲಗಳು

ಮೀಸಲಾತಿ ಕುರಿತ ಆಲೋಚನೆಗಳು ಅದರ ಮೂಲ ಆಶಯದಿಂದಲೇ ದೂರವಾದ ಚರ್ಚೆಗಳಾಗಿ ಇತ್ತೀಚೆಗೆ ಬೆಳೆಯುತ್ತಿವೆ. ‘ಮೇಲು ಜಾತಿಗಳಲ್ಲಿ ಬಡವರು ಇಲ್ಲವೇ’ ಎನ್ನುವುದೇ ಮೀಸಲಾತಿ ವಿರೋಧಕ್ಕೆ ಈಗಿನ ಪ್ರಮುಖ ಪ್ರಶ್ನೆ. ಮೀಸಲಾತಿಯ ಪರ ಇರುವವರು ಅದು ಕೆಳಜಾತಿಗಳ ಹಕ್ಕು ಎನ್ನುತ್ತಾರೆಯೇ ಹೊರತು ಅದರ ಆಶಯವನ್ನು ವಿವರಿಸುತ್ತಿಲ್ಲ.ಆದರೆ ಮೀಸಲಾತಿಯ ಮೂಲ ಕಾಳಜಿ ಆರ್ಥಿಕತೆಯಲ್ಲ. ಸಾಮಾಜಿಕ ತಡೆಯ ನಿವಾರಣೆ ಅದರ ಕಾಳಜಿ. ಖಂಡಿತವಾಗಿಯೂ ಮೇಲು ಜಾತಿಗಳಲ್ಲಿ ಬಡವರಿದ್ದಾರೆ. ಆದರೆ ಬಡತನವನ್ನು ನೀಗಿಕೊಳ್ಳಲು ಮನಸು ಮಾಡಿದ ಮೇಲು ಜಾತಿಯವನಿಗೆ ತನಗಿಷ್ಟ ಬಂದ ಶಿಕ್ಷಣ ಪಡೆಯುವುದನ್ನು, ಇಷ್ಟಬಂದ ಉದ್ಯೋಗ ಕೈಗೊಳ್ಳುವುದನ್ನು ತಡೆಯುವ ಶಕ್ತಿ ಸಮಾಜಕ್ಕೆ ಇಲ್ಲ. ದಲಿತನ ಸ್ಥಿತಿ ಹಾಗಿಲ್ಲ. ದಲಿತ ಒಂದು ಹೋಟೆಲ್ ಆರಂಭಿಸಲು ಯಾರ ಅಡ್ಡಿಯೂ ಇಲ್ಲ, ನಿಜ. ಆದರೆ ಆ ಹೋಟೆಲ್‌ನಲ್ಲಿ ತಿಂಡಿ ತಿನ್ನಲೂ ಹೋಗದಿರುವ ಮನೋಭಾವ ಇದೆಯಲ್ಲ? ಆ ಮನೋಭಾವವು ನಿರ್ದಿಷ್ಟ ವ್ಯಕ್ತಿಯನ್ನು ನಿರಾಕರಿಸುವುದೋ, ನಿರ್ದಿಷ್ಟ ಹೋಟೆಲ್ ಚೆನ್ನಾಗಿಲ್ಲವೆಂಬ ಧೋರಣೆಯೋ ಆಗಿರುವುದಿಲ್ಲ. ದಲಿತ ತಯಾರಿಸಿದ ತಿಂಡಿಯನ್ನು ತಿನ್ನಬಾರದು ಎಂಬ ಜಾತಿ ಕೇಂದ್ರಿತವಾದ ಧೋರಣೆ ಅದಕ್ಕೆ ಕಾರಣವಾಗಿರುತ್ತದೆ.ಅಂದರೆ ಒಬ್ಬ ದಲಿತ ತನ್ನನ್ನು ತಾನು ಉತ್ತಮೀಕರಿಸಿಕೊಳ್ಳಲು ಪ್ರಯತ್ನಿಸಿದರೂ ಸಾಮಾಜಿಕ ಮಾನಸಿಕತೆ ಅವನ ಉತ್ತಮೀಕರಣಕ್ಕೆ ಸಹಕಾರಿಯಾಗಿ ಇಲ್ಲ. ಒಬ್ಬ ಬ್ರಾಹ್ಮಣ ಬಡವನೇ ಆಗಿದ್ದಾಗಲೂ ಅವನು ಹೋಟೆಲ್ ಮಾಡಿದಾಗ ಈ ಸಮಸ್ಯೆ ಎದುರಿಸಬೇಕಾಗಿಲ್ಲ. ಸಾಮಾಜಿಕವಾಗಿ ಅಡೆತಡೆಗಳನ್ನು ಎದುರಿಸಬೇಕಿರುವ ದಲಿತನಿಗೆ ಒಂದಷ್ಟು ಪ್ರೋತ್ಸಾಹ, ಬೆಂಬಲ ನೀಡುವುದು ಮೀಸಲಾತಿಯ ಆಶಯ. ಮೀಸಲಾತಿ ಇರುವ ಮಾತ್ರಕ್ಕೆ, ಎಲ್ಲ ದಲಿತರಿಗೂ ಲಾಭವಾಯಿತೆಂದು ಅರ್ಥವಲ್ಲ. ಅಲ್ಲಿಯೂ ಮೆರಿಟ್‌ನ ಪ್ರಶ್ನೆ ಬರುತ್ತದೆ. ಆದರೆ ಮೀಸಲಾತಿ ಎನ್ನುವುದು ಒಂದು ಭಾವನಾತ್ಮಕ ಭದ್ರತೆ, ಆತ್ಮವಿಶ್ವಾಸವನ್ನು ಆ ಸಮುದಾಯದಲ್ಲಿ ಉಳಿಸುತ್ತದೆ.ಹಾಗೆಯೇ ಒಬ್ಬ ಮಹಿಳೆಗೆ ಪುರುಷರ ಹಾಗೆ ರಾತ್ರಿ ಹನ್ನೆರಡು ಗಂಟೆಗೆ ಬೇಕಾದರೂ ಹೋಗಿ ಅಧ್ಯಯನ ಮಾಡುವ ಪರಿಸ್ಥಿತಿ ಇಲ್ಲ. ಆಕೆ ಮಹಿಳೆಯಾಗಿರುವುದರಿಂದಾಗಿಯೇ ಆಕೆಯ ವಿಕಾಸಕ್ಕೆ ಅನೇಕ ಅಡ್ಡಿಗಳನ್ನು ಸಮಾಜ ನಿರ್ಮಿಸಿದೆ. ಆಗ ಮಹಿಳಾ ಮೀಸಲಾತಿಯು ಮಹಿಳೆಯರಿಗೆ ಭರವಸೆಯ ಒಂದು ಸಾಧ್ಯತೆಯಾಗಿರುತ್ತದೆ. ಅಂದರೆ ಮೀಸಲಾತಿಯು ಸಾಮಾಜಿಕ ಹಿಂದುಳಿಯುವಿಕೆಯನ್ನು ಮಾನದಂಡವಾಗಿ ಇರಿಸಿಕೊಂಡಿದೆ. ಶೈಕ್ಷಣಿಕ ಅಧ್ಯಯನ ವರದಿಗಳ ಪ್ರಕಾರ,  ಭಾರತದಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಶೇಕಡ 80ರಷ್ಟು ಮಕ್ಕಳು ಸಾಮಾಜಿಕ ಹಿಂದುಳಿಯುವಿಕೆಯ ಕಾರಣದಿಂದಾಗಿ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಅಂಥವರಿಗೆ ಮೀಸಲಾತಿ ಸಾಮಾಜಿಕ ವಿಕಸನಕ್ಕೆ ಒಂದು ಸಾಧ್ಯತೆ ಅಷ್ಟೆ. ಅದೇ ಅಂತಿಮ ಅಲ್ಲ.ಜಾತಿ ಮತ್ತು ಲಿಂಗಗಳ ವಿಕಾಸಕ್ಕೆ ಸಮಾಜದಲ್ಲಿ ತಡೆ ಇರದಂತಹ ಸ್ಥಿತಿ ನಿರ್ಮಾಣವಾಗುವುದು ಅಂತಿಮ ಗುರಿ ಆಗಬೇಕು. ಬ್ರಾಹ್ಮಣರ ವಿಚಾರದಲ್ಲಿ ಇದು ಸಾಧ್ಯವಾಗಿದೆ. ಶಾಸ್ತ್ರಗಳ ಪ್ರಕಾರ ಬ್ರಾಹ್ಮಣ ಅಧ್ಯಯನ, ಅಧ್ಯಾಪನ, ಪೂಜೆಗೆ ಸೀಮಿತನಾಗಿ ಭಿಕ್ಷಾನ್ನದಿಂದ ಜೀವಿಸಬೇಕು. ಆದರೆ ಅದನ್ನು ಮೀರಿ ಬ್ರಾಹ್ಮಣರು ಯಾವ ಉದ್ಯೋಗವನ್ನೂ ಕೈಗೊಳ್ಳುವ ಮುಕ್ತ ಅವಕಾಶ ಹೊಂದಿದ್ದಾರೆ. ಸಮಾಜ ಇದೇ ಅವಕಾಶಗಳನ್ನು ಮಹಿಳೆಯರು ಮತ್ತು ದಲಿತರವರೆಗೆ ವಿಸ್ತರಿಸುವವರೆಗೂ ಮೀಸಲಾತಿಯ ಅಗತ್ಯ ಇರುತ್ತದೆ.

ಮೀಸಲಾತಿಯು ಬಡವರಿಗಾಗಿ ಇರುವುದು ಎಂಬ ಭಾವನೆ ಮೂಡಲು ಕಾರಣವಾದದ್ದಕ್ಕೆ ಕಾರಣಗಳು, ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಸೌಲಭ್ಯ ವಿಸ್ತರಿಸುವಾಗ ಮಾಡಿಕೊಂಡ ಎಡವಟ್ಟುಗಳು.

ಬ್ರಾಹ್ಮಣರಲ್ಲಿಯೂ ಸ್ಥಾನಿಕ ಬ್ರಾಹ್ಮಣರಿಗೆ ಮೀಸಲಾತಿ ಇದೆ. ಲಿಂಗಾಯತರಿಗೆ, ಒಕ್ಕಲಿಗರಿಗೆ ಮೀಸಲಾತಿ ಇದೆ. ಈ ವರ್ಗಗಳೆಲ್ಲ ಶಿಕ್ಷಣ ಪಡೆಯಲು, ಸಾಮಾಜಿಕ ಅವಕಾಶಗಳನ್ನು ಪಡೆಯಲು ಸಮಾಜದ ಮಾನಸಿಕತೆ ತಡೆ ಒಡ್ಡುತ್ತದೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ. ಈ ವರ್ಗಗಳಿಗೆ ಸೇರಿದವರು, ದೇವಸ್ಥಾನಗಳಲ್ಲಿ ಅರ್ಚಕರಾಗಲು ಬಯಸಿದಾಗ ಸಮಾಜದ ಮಾನಸಿಕತೆ ತಡೆ ಒಡ್ಡಬಹುದು, ಅಷ್ಟೆ. ಅದೂ  ಈಗ ಅಷ್ಟಿಷ್ಟು ಬದಲಾಗಿದೆ. ಈ ಸಮುದಾಯಗಳಿಗೆ ಮೀಸಲಾತಿ ನೀಡುವಾಗ, ವಾರ್ಷಿಕ ಆದಾಯದ ಮಿತಿ ವಿಧಿಸಿ, ಆ ಮಿತಿ ದಾಟಿದವರಿಗೆ ಮೀಸಲಾತಿ ಸಿಗುವುದಿಲ್ಲ ಎಂದು ಹೇಳಲಾಯಿತು. ಅತೀ ಪ್ರಬಲ ಜಾತಿಗಳಿಗೆ ಮೀಸಲಾತಿ ನೀಡಿ, ಆ ಸಮುದಾಯಗಳಿಗೆ ಸೇರಿದ ಕುಟುಂಬಗಳ ವಾರ್ಷಿಕ ಆದಾಯ ಒಂದು ಮಿತಿಗಿಂತ ಹೆಚ್ಚಿದರೆ ಮೀಸಲಾತಿ ಇಲ್ಲ ಎಂಬ ನಿಯಮ ರೂಪಿಸಿದ ನಂತರ ಸಮಾಜವು, ‘ಮೀಸಲಾತಿ ಇರುವುದು ಯಾವುದೇ ಜಾತಿಯಲ್ಲಿರುವ ಬಡವರ ಅಭಿವೃದ್ಧಿಗಾಗಿ’ ಎಂದು ಅರ್ಥ ಮಾಡಿಕೊಳ್ಳತೊಡಗಿತು.ಸಾಮಾಜಿಕ ಹಿಂದುಳಿಯುವಿಕೆಗೆ ಕಾರಣವಾಗಿರುವ ಬೇಲಿಗಳ ಪರಿಕಲ್ಪನೆ ಮಾಸಲು ಆರಂಭವಾಯಿತು. ಯಾರು ಹಿಂದುಳಿದವರು ಎಂದು ನಿರ್ಧರಿಸುವಾಗ ವೈಜ್ಞಾನಿಕ ಅಧ್ಯಯನಕ್ಕೆ ಮಹತ್ವ ಕೊಡದೇ ರಾಜಕೀಯ ಅವಶ್ಯಕತೆಗಳಿಗೆ ಹೆಚ್ಚು ಸ್ಪಂದಿಸಿದುದರ ಪರಿಣಾಮವಿದು. ಇದರಿಂದ ಇನ್ನೊಂದು ಸಮಸ್ಯೆಯೂ ಆಗಿದೆ. ಕರ್ನಾಟಕದಲ್ಲಿ ಕೊರಗ ಸಮುದಾಯದವರು ಅಂದಾಜು ಎಂಟೋ ಹತ್ತೋ ಸಾವಿರದಷ್ಟು ಇದ್ದಾರೆ. ಅವರು ದಲಿತರಿಗಿಂತ ಕಠಿಣವಾದ ಸಾಮಾಜಿಕ ತಡೆಗಳನ್ನು ಎದುರಿಸುತ್ತಿದ್ದಾರೆ. ದಲಿತರಲ್ಲಿ ಒಂದು ಮಟ್ಟಿನ ಸಾಮಾಜಿಕ ಎಚ್ಚರ ಇದೆ. ಕೊರಗರಲ್ಲಿ ಅದೂ ಇಲ್ಲ. ಆದರೆ ಕೊರಗರು ಪರಿಶಿಷ್ಟ ಪಂಗಡದಲ್ಲಿದ್ದಾರೆ.ಅಲ್ಪಸಂಖ್ಯಾತರ ವಿಚಾರದಲ್ಲೂ ಮೀಸಲಾತಿ ನೀತಿ ಹಿಂದುಳಿದ ವರ್ಗಗಳ ವಿಚಾರದಲ್ಲಿ ಆದಂತೆಯೇ ಆಗಿದೆ. ಜೈನ, ಕ್ರೈಸ್ತ, ಮುಸ್ಲಿಂ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಮೀಸಲಾತಿಯನ್ನು ರೂಪಿಸಲು ಬರುವುದಿಲ್ಲ. ಮುಸ್ಲಿಮರದು ಹೆಚ್ಚು ಜಟಿಲವಾದ ಸಮಸ್ಯೆ. ಮುಸ್ಲಿಮರಲ್ಲಿ ಅಂದಾಜು ಶೇ 20ರಷ್ಟು ಮಂದಿಯದು ದೊಡ್ಡ ಸಮಸ್ಯೆ ಅಲ್ಲ. ಉಳಿದವರದ್ದು ಕಠಿಣ ಸಮಸ್ಯೆ. ದಲಿತರಿಗಿರುವ ಹಾಗೆ ಮುಸ್ಲಿಮರಿಗೆ ಸಾಮಾಜಿಕ ನಿರಾಕರಣೆ ಇಲ್ಲ. ಅವರ ಮೇಲಿರುವುದು ಧಾರ್ಮಿಕ ನಿರಾಕರಣೆ. ದಲಿತರಿಗೆ ತನ್ನನ್ನು ತಾನು ವಿಕಾಸಗೊಳಿಸಿಕೊಳ್ಳಲು ತಡೆ ಒಡ್ಡುವ ನಿಯಮಗಳು ಸಮುದಾಯದ ಒಳಗೆ ಇಲ್ಲ. ಅವರಿಗೆ ತಡೆಗಳಿರುವುದು ಸಮುದಾಯದ ಹೊರಗೆ. ಮುಸ್ಲಿಮರಿಗೆ ತಡೆಗಳಾಗಿರುವವು ಸಮುದಾಯದ ಒಳಗಿನ ನಿಯಮಗಳು. ಸಮುದಾಯದ ಒಳಗಿರುವ ನಿಯಮಗಳಿಂದಾಗಿ ವಿಕಾಸದ ತಡೆ ಉಂಟಾದವರಿಗೆ ಮೊದಲು ಒಳಗಿನ ತಡೆಗಳನ್ನು ನಿವಾರಿಸಿಕೊಳ್ಳಬೇಕಾದ ಅಗತ್ಯ ಇರುತ್ತದೆ.ಆ ಕೆಲಸವನ್ನು ಸಮುದಾಯದ ನಾಯಕತ್ವ ಮಾಡಬೇಕು ಅಥವಾ ಶಿಕ್ಷಣದ ಮೂಲಕ ಸಮುದಾಯ ತಾನೇ ತಾನಾಗಿ ಒಳಗಿನ ತಡೆಗಳನ್ನು ನಿವಾರಿಸಿಕೊಳ್ಳಬೇಕು. ಆಮೇಲೆ ಮೀಸಲಾತಿಯು ಮುಸ್ಲಿಮರಿಗೆ ಒಂದು ಮಟ್ಟದ ಸಹಾಯವನ್ನು ಮಾಡಲು ಸಾಧ್ಯ.ಮೀಸಲಾತಿಯ ಮಾನದಂಡವಾಗಿರುವ ಸಾಮಾಜಿಕ ಹಿಂದುಳಿಯುವಿಕೆಯ ಸ್ವರೂಪವನ್ನು ಸಮಾಜಕ್ಕೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡದೆ ಇದ್ದರೆ ‘ಬಡತನದ ಮಾನದಂಡ’ವೇ ಸ್ಥಿರ ಧೋರಣೆಯಾಗುವ ಸಾಧ್ಯತೆ ಇದೆ. ಆಗ ಮೀಸಲಾತಿಯ ಸಾಂವಿಧಾನಿಕ ಆಶಯ ನಾಶವಾಗುತ್ತದೆ.

ಪ್ರತಿಕ್ರಿಯಿಸಿ (+)