ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಟ್ಟಿಯಲ್ಲಿ ಬಚ್ಚಿಟ್ಟ ಓದು

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ಹೌದು, ನಾನು ಮಿಡ್ಲ್ ಸ್ಕೂಲ್‌ನಿಂದ ಹೈಸ್ಕೂಲ್‌ಗೆ ಬರುವ ವೇಳೆಗೆ ಕ್ಲಾಸ್ ಪುಸ್ತಕಗಳಿಗಿಂತ ಹೆಚ್ಚಾಗಿ ಕಾದಂಬರಿಗಳನ್ನೋದುವುದೆಂದರೆ ತುಂಬ ಇಷ್ಟವಾಗಿತ್ತು. ಅದರಲ್ಲೂ ಎಂ. ಕೆ. ಇಂದಿರಾ, ತ್ರಿವೇಣಿ, ವಾಣಿ, ತರಾಸು, ಕಾಕೋಳು ಸರೋಜದೇವಿಯವರ ಕಾದಂಬರಿಗಳೆಂದರೆ ಪಂಚಪ್ರಾಣ ನನಗೆ. ಆದರೆ ನನ್ನ ಅಮ್ಮನಿಗೆ ಮಕ್ಕಳು ಕಾದಂಬರಿಯನ್ನೋದಿದರೆ ಕೆಟ್ಟುಹೋಗುತ್ತಾರೆಂದು ಯಾರು ಕಿವಿಯೂದಿದ್ದರೋ, ನನ್ನ ದುರದೃಷ್ಟ ನಾನು ಕಾದಂಬರಿಗಳನ್ನು ಓದಕೂಡದೆಂದು ಅಮ್ಮ ಕಟ್ಟಪ್ಪಣೆ ಮಾಡಿದ್ದರು. ಆದರೂ ಅಮ್ಮನ ಕಣ್ಣುತಪ್ಪಿಸಿ ಅಲ್ಲಿ, ಇಲ್ಲಿ ಪುಸ್ತಕ ಎರವಲು ತಂದು ಗೊತ್ತಾಗದಂತೆ ಓದುತ್ತಿದ್ದೆ.

ಒಮ್ಮೆ ಅಮ್ಮನ ಕೈಗೆ ಸಿಕ್ಕುಬಿದ್ದಾಗ ನಾಲ್ಕು ಬಾರಿಸಿ ಅದನ್ನು ಕಿತ್ತುಕೊಂಡರು. ‘ಅಮ್ಮಾ! ಬೇರೆಯವರ ಪುಸ್ತಕ ಅಮ್ಮಾ!!’ – ಎಂದು ಎಷ್ಟು ಅಂಗಲಾಚಿ ಬೇಡಿಕೊಂಡರೂ ಅದನ್ನು ಬೆಂಕಿ ಉರಿಯುತ್ತಿದ್ದ ನೀರೊಲೆಗೆ ಹಾಕಿ ಅಗ್ನಿ ದೇವನಿಗೆ ಆಹುತಿ ಮಾಡಿದ್ದರು. ಅಂದೆಲ್ಲಾ ಅಳುತ್ತಲೇ ಇದ್ದೆ. ಪಿ. ಯು. ಓದುತ್ತಿದ್ದ ಅಣ್ಣ ಲೈಬ್ರರಿಯಿಂದ ಗುಟ್ಟಾಗಿ ಕಥಾಪುಸ್ತಕಗಳನ್ನು ತಂದುಕೊಟ್ಟು ಬಚ್ಚಿಟ್ಟುಕೊಂಡು ಓದು ಎಂದು ಪ್ರೋತ್ಸಾಹಿಸಿದ. ಪುರುಷೋತ್ತಮನ ಸಾಹಸಗಳು, ಪತ್ತೇದಾರಿ ಕಾದಂಬರಿಗಳು, ಗಾಂಧೀಜಿ ಜೀವನ ಚರಿತ್ರೆ, ಪೌರಾಣಿಕ ಕಥೆಗಳು – ಹೀಗೆ ಎಷ್ಟೊಂದು ಪುಸ್ತಕಗಳನ್ನು ಹೇಗೆ ಓದುತ್ತಿದ್ದೆ ಗೊತ್ತೆ! ಅಮ್ಮ ಈರುಳ್ಳಿಬುಟ್ಟಿಗೆ ಪೇಪರ್ ಹಾಕಿ ಆಲೂಗಡ್ಡೆ ಈರುಳ್ಳಿ ತುಂಬಿಸಿಡುತ್ತಿದ್ದಳು. ಹಗಲೆಲ್ಲ ಆ ಪೇಪರ್ ಕೆಳಗೆ ಬಚ್ಚಿಟ್ಟು ರಾತ್ರಿ ಮಲಗುವ ವೇಳೆಗೆ ದಿಂಬಿನ ಅಡಿಯಿಟ್ಟು ಅಮ್ಮನಿಗೆ ಚೆನ್ನಾಗಿ ನಿದ್ರೆ ಬಂದ ಮೇಲೆ ಸೊಳ್ಳೆಪರದೆಯೊಳಗೆ ಟಾರ್ಚ್ ಲೈಟ್ ಹಾಕಿ ಓದಿ ಮುಗಿಸುತ್ತಿದ್ದೆ.

 ‘ನಿನಗೆ ಪುಸ್ತಕ ಒದಗಿಸುವುದೂ ಒಂದೇ, ಆನೆಗೆ ಮೇವು ಹಾಕುವುದೂ ಒಂದೇ’ ಎಂದು ಅಣ್ಣ ಹಾಸ್ಯ ಮಾಡಿದರೂ ಸಹ, ನನಗೆ ತೆಲುಗು ಓದಲು ಬರುತ್ತಿದ್ದರಿಂದ ತೆಲುಗು ಕಾದಂಬರಿಗಳನ್ನೂ, ‘ಆಂಧ್ರಪ್ರಭ’ ಎಂಬ ವಾರಪತ್ರಿಕೆಯನ್ನೂ ತಂದುಕೊಡುತ್ತಿದ್ದ. ಅನಂತರದ ದಿನಗಳಲ್ಲಿ ಮದುವೆಯಾಗಿ ಅತ್ತೆಮನೆಗೆ ಬಂದೆ. ಅಲ್ಲಿ ಕಾದಂಬರಿಗಳಿರಲಿಲ್ಲ; ಆದರೆ ಮನೆಗೆ ಪ್ರಜಾವಾಣಿ, ಸುಧಾ, ತರಂಗ, ಉತ್ಥಾನ, ಕಸ್ತೂರಿ –
ಹೀಗೆ ಅನೇಕ ಮ್ಯಾಗ್‌ಜೀನ್‌ಗಳನ್ನು ತರಿಸುತ್ತಿದ್ದರು. ನಾನು ಕಾದಂಬರಿಗಳನ್ನು ಬಿಟ್ಟು ಈ ಹೊಸ ರೀತಿಯ ಪುಸ್ತಕಗಳನ್ನು ಕಂಡು ಆನಂದವಾದರೂ, ನಮ್ಮದು ಕೂಡುಕುಟುಂಬವಾಗಿದ್ದರಿಂದ ಕೈ ತುಂಬಾ ಕೆಲಸಗಳಿರುತ್ತಿತ್ತು. ಆದರೂ ನನ್ನ ಓದಿನ ಆಸೆಗೆ ಕಳ್ಳದಾರಿಗಳನ್ನು ಹುಡುಕಿಕೊಂಡು ಹೇಗೋ ಎಲ್ಲವನ್ನೂ ಓದುತ್ತ, ನನ್ನ ಓದಿನ ದಾಹವನ್ನು ತೀರಿಸಿಕೊಳ್ಳುತ್ತಿದ್ದಂತೆ, ಬಗಲಿಗೆ ಚೊಚ್ಚಲ ಮಗು ಬಂದಿತ್ತು.
ಮಗುವನ್ನು ಎತ್ತಿಕೊಂಡು ಅಮ್ಮನ ಮನೆಯಿಂದ ಅತ್ತೆಯ ಮನೆಗೆ ಬಂದಾಗ ಅದನ್ನು ನೋಡಿಕೊಳ್ಳುವುದೇ ಅಗುತ್ತಿತ್ತು. ಒಮ್ಮೆ ತೊಡೆಯ ಮೇಲೆ ಮಗುವನ್ನು ಮಲಗಿಸಿಕೊಂಡು ಕಥೆ ಓದುವುದರಲ್ಲಿ ಮಗ್ನಳಾಗಿಹೋಗಿದ್ದೆ. ಮಲಗಿದ್ದ ಮಗು ಅದು ಹೇಗೊ ಮಗುಚಿಕೊಂಡು ಕೆಳಗೆ ಬಿದ್ದು ಅಳಲುತೊಡಗಿತು. ಆ ಅಳುವಿನ ಸದ್ದಿಗೆ ಮನೆಯವರೆಲ್ಲ ಓಡಿಬಂದಿದ್ದರು. ಅತ್ತೆ ಚೆನ್ನಾಗಿ ಬಯ್ಗಳ ಅರ್ಚನೆ ಮಾಡಿದರು; ನಮ್ಮವರೂ ಕೆಂಗಣ್ಣು ಬಿಟ್ಟಿದ್ದನ್ನು ನೋಡಿ ಸ್ವಲ್ಪ ದಿನ ಸುಮ್ಮನಿದ್ದೆ. ಆದರೂ ಕಲಿತ ಚಾಳಿ ಅಷ್ಟು ಬೇಗ ಬಿಡುವುದಿಲ್ಲ ಅಲ್ಲವೆ? ಹಾಗೂ ಹೀಗೂ ಅನ್ನುತ್ತಿದ್ದಂತೆ ಮತ್ತೊಂದು ಕಂದ ಹುಟ್ಟಿತು. ಮಕ್ಕಳ ಲಾಲನೆ, ಪಾಲನೆ, ಶಾಲೆ ಎಂದು ದೇಹ ಅಲೆದಾಡುತ್ತಿದ್ದರೂ ಮನಸ್ಸಲ್ಲಿ ಪುಸ್ತಕಗಳು ತುಂಬಿರುತ್ತಿದ್ದವು. ಅವನ್ನು ನನ್ನ ಮಕ್ಕಳಂತೆಯೆ ಹಾಸಿಗೆಯ ಅಕ್ಕಪಕ್ಕವೇ ಇಟ್ಟುಕೊಳ್ಳುತ್ತಿದ್ದೆ; ಆ ರಾತ್ರಿಗಳೆಲ್ಲಾ ನನ್ನ ಕಥಾರಾತ್ರಿಗಳಾಗುತ್ತಿದ್ದವು.

ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರ ಕಾಲೇಜು, ಕಾಲ ಕಾಲಕ್ಕೆಊಟ–ತಿಂಡಿ, ಮನೆಗೆಲಸಗಳ ಜವಾಬ್ಧಾರಿಯ ಮಧ್ಯೆಯೆ ನನ್ನ ಹವ್ಯಾಸವು ಕುಂಟುಕೊಂಡೇ ಸಾಗುತ್ತಿತ್ತು, ಬಿಟ್ಟಿರಲಿಲ್ಲ.
ನನ್ನ ನಲವತ್ತನೆಯ ವಯಸ್ಸಿಗೆ, ಅಷ್ಟು ದಿನಗಳೂ ಓದಿನಲ್ಲೇ ಕಳೆದಿದ್ದ ನಾನೂ ಏನಾದರೂ ಬರೆಯಬೇಕೆಂಬ ಅಭಿಲಾಷೆ ಉಂಟಾಯಿತು. 

ಮೊದಮೊದಲು ಸಣ್ಣ ಸಣ್ಣ ಲೇಖನಗಳನ್ನೂ ಅಡುಗೆ–ರೆಸಿಪಿಗಳನ್ನೂ ಬರೆಯುತ್ತಹೋದೆ. ಅನಂತರ ಕಥೆಗಳು, ಕವನಗಳು, ನಾನು ಕಂಡುಂಡ ಹಾಸ್ಯ ಕಥಾನಕಗಳನ್ನು ಕನ್ನಡದ ಪತ್ರಿಕೆಗಳಿಗೆ ಬರೆಯುತ್ತಹೋದೆ. ಅಂತೆಯೇ ಕನ್ನಡ ಪತ್ರಿಕೆಗಳ ಸಹಕಾರವೂ ದೊರೆತು ಕೈ ತುಂಬುತ್ತಿದ್ದವು.

ಇದೀಗ ನನ್ನ ಅರವತ್ತೈದರಲ್ಲಿ ನನ್ನ ಯಜಮಾನರ ಪ್ರೊತ್ಸಾಹದೊಂದಿಗೆ 'ಹೊಂಗೆಯ ನೆರಳು' ಕಥಾಸಂಕಲನ,' ಹಾಸ್ಯರಂಜಿನಿ' ಎಂಬ ಹಾಸ್ಯಸಂಕಲನ ಮತ್ತು ‘ಮೈ ಕಿಚನ್' ಎಂಬ ಎರಡು ಅಡುಗೆಪುಸ್ತಕಗಳನ್ನು ಬರೆದು ಪ್ರಕಟಿಸಿರುವೆ.  ಇದೀಗ ಕವನಸಂಕಲನವೂ ಸಿದ್ಧವಾಗುತ್ತಿದೆ.

ನನ್ನಲ್ಲಿ ಯಾವ ಮಹತ್ವಾಕಾಂಕ್ಷೆಗಳೂ ಇಲ್ಲ. ಓದಲು ಪುಸ್ತಕಗಳು, ಬರೆಯಲು ಕಾಗದ–ಪೆನ್ನು, ಇತ್ತೀಚೆಗೆ ಕಲಿತಿರುವ ಕನ್ನಡಬರಹಕ್ಕಾಗಿ ಒಂದು ಲ್ಯಾಪ್‌ ಟಾಪ್‌ – ಇವಿಷ್ಟೇ ನನ್ನ ನಿತ್ಯಜೀವನದ ಅವಿಭಾಜ್ಯ ಅಂಗಗಳು. ಇವೇ ಜೀವನದಲ್ಲಿ ಮಹತ್ವಪೂರ್ಣ ಎನ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT