ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಂತ್ಯದ ಸೊಪ್ಪಿನ ತಿನಿಸುಗಳು: ರುಚಿಗೂ ಆರೋಗ್ಯಕ್ಕೂ

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

-ಎಲ್. ಎನ್. ವಸುಂಧರಾ ದೇವಿ.

*

ಮೆಂತ್ಯ ಸೊಪ್ಪಿನ ಕೋಸಂಬರಿ
ಬೇಕಾಗುವ ಸಾಮಗ್ರಿಗಳು

ಎಳೆಯ ಮೆಂತ್ಯಸೊಪ್ಪು - 1 ಕಟ್ಟು, ತೆಂಗಿನತುರಿ – 1 ಬಟ್ಟಲು, ಕ್ಯಾರೆಟ್ ತುರಿ – 1/2 ಕಪ್, ಕೊತ್ತಂಬರಿ - 1 ಹಿಡಿಯಷ್ಟು, ಒಣ ಮೆಣಸಿನಕಾಯಿ – 4, ಸಾಸಿವೆ – 1/2 ಚಮಚ, ಜೀರಿಗೆ – 1/2 ಚಮಚ, ಕರಿಬೇವು – 2 ಎಸಳು, ಎಣ್ಣೆ – 2 ಚಮಚ, ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ  ವಿಧಾನ
ಮೆಂತ್ಯಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ಒಂದು ಸಣ್ಣ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಸಾಸಿವೆಯನ್ನು ಸಿಡಿಸಿ ಜೀರಿಗೆ, ಸಣ್ಣಗೆ ಹೆಚ್ಚಿದ ಕರಿಬೇವು ಹಾಕಿ ಒಣಮೆಣಸಿನ ಕಾಯಿ ಮುರಿದು ಹಾಕಿ ಒಗ್ಗರಣೆಯನ್ನು ತಯಾರಿಸಿಕೊಳ್ಳಬೇಕು. ಕೆಳಕ್ಕಿಳಿಸಿ ಈ ಒಗ್ಗರಣೆ ತಣ್ಣಗಾದ ನಂತರ ಸಣ್ಣಗೆ ಹೆಚ್ಚಿದ ಮೆಂತ್ಯಸೊಪ್ಪು ಮತ್ತು ಕ್ಯಾರೆಟ್‌ತುರಿಗಳನ್ನು ಹಾಕಿ, ತೆಂಗಿನತುರಿ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿದರೆ ಆರೋಗ್ಯಕರವಾದ ರುಚಿಯಾದ ಮೆಂತ್ಯಸೊಪ್ಪಿನ ಕೋಸಂಬರಿ ಊಟದ ಜೊತೆ ನೆಂಚಿಕೊಳ್ಳಲು ತಯಾರಾಗಿರುತ್ತದೆ.
 

**

ಮೆಂತ್ಯಸೊಪ್ಪಿನ ಪಕೋಡ
ಬೇಕಾಗುವ ಸಾಮಗ್ರಿಗಳು

ಎಳೆಯ ಮೆಂತ್ಯಸೊಪ್ಪು - 1/2 ಕಟ್ಟು, ಕಡಲೆಹಿಟ್ಟು - 2 ಕಪ್, ಅಕ್ಕಿಹಿಟ್ಟು - 3 ಚಮಚ, ಕೊತ್ತಂಬರಿಸೊಪ್ಪು - 2 ಹಿಡಿಯಷ್ಟು, ನುರಿಸಿದ ಹಸಿಮೆಣಸಿನಕಾಯಿ -2 ಚಮಚ, ಶುಂಠಿ ಬೆಳ್ಳುಳ್ಳಿ ಮಿಶ್ರಣ -2 ಚಮಚ, ಓಮದ ಕಾಳು - 1/2 ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ - 4, ಉಪ್ಪು - ರುಚಿಗೆ ತಕ್ಕಷ್ಟು, ಅಡುಗೆಸೋಡಾ - 1 ಚಿಟಿಕೆ, ಕರಿಯಲು ಎಣ್ಣೆ

ತಯಾರಿಸುವ  ವಿಧಾನ
ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು ಹಾಕಿ ಸಣ್ಣಗೆ ಕತ್ತರಿಸಿದ ಮೆಂತ್ಯಸೊಪ್ಪು, ಕೊತ್ತಂಬರಿಸೊಪ್ಪು ಹಾಕಿ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಮಿಶ್ರಣ, ಹಸಿಮೆಣಸಿನಕಾಯಿ ನುರಿಸಿದ್ದು, ಓಮದ ಕಾಳು, ಅಡುಗೆಸೋಡ, ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಕಾಯಿಸಿದ ಎಣ್ಣೆಯನ್ನು 2-3 ಚಮಚದಷ್ಟು ಹಾಕಿ ಮಿಶ್ರ ಮಾಡಿ ಸ್ವಲ್ಪ, ನೀರನ್ನು ಸೇರಿಸಿ ಗಟ್ಟಿಯಾಗಿ ಕಲೆಸಿಕೊಂಡು, ಕಾದಿರುವ ಎಣ್ಣೆಯಲ್ಲಿ ಪಕೋಡದ ರೀತಿ ಹಾಕಿ ಕರಿದು ತೆಗೆಯಬೇಕು. ಗರಿಗರಿಯಾದ ಮೆಂತ್ಯಸೊಪ್ಪಿನ ಪಕೋಡ ಸಂಜೆಯ ಕಾಫಿ ಜೊತೆಯ ತಿಂಡಿಯಾಗಿ ತಿನ್ನಲು ಬಲು ಚೆನ್ನ.

**
ಮೆಂತ್ಯಸೊಪ್ಪಿನ ಪೂರಿ

ಬೇಕಾಗುವ ಸಾಮಗ್ರಿಗಳು
ಮೆಂತ್ಯಸೊಪ್ಪು – 1 ಕಟ್ಟು, ಗೋಧಿಹಿಟ್ಟು – 2 ಕಪ್, ಕಡಲೆಹಿಟ್ಟು – 3/4 ಕಪ್, ಒಣಕಾರದ ಪುಡಿ - 2 ಚಮಚ, ಅರಿಶಿನಪುಡಿ – 1/2 ಚಮಚ, ಜೀರಿಗೆಪುಡಿ - 2 ಚಮಚ, ಎಣ್ಣೆ – 4 ಚಮಚ, ಉಪ್ಪು - ರುಚಿಗೆ ತಕ್ಕಂತೆ, ಕರಿಯಲು ಎಣ್ಣೆ

ತಯಾರಿಸುವ  ವಿಧಾನ
ಮೆಂತ್ಯಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ಪಾತ್ರೆಗೆ ಗೋಧಿಹಿಟ್ಟು ಮತ್ತು ಕಡಲೆಹಿಟ್ಟು ಹಾಕಿ ಉಪ್ಪು, ಜೀರಿಗೆ ಪುಡಿ, ಖಾರದಪುಡಿ, ಅರಿಶಿನಪುಡಿಯನ್ನು ಹಾಕಬೇಕು. 4 ಚಮಚ ಎಣ್ಣೆಯನ್ನು ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಚೆನ್ನಾಗಿ ಮಿಶ್ರ ಮಾಡಿ ಮೆಂತ್ಯಸೊಪ್ಪನ್ನು ಹಾಕಿ ಮತ್ತೊಮ್ಮೆ ಮಿಶ್ರ ಮಾಡಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಡಬೇಕು. ಈ ಹಿಟ್ಟು 15 ನಿಮಿಷಗಳ ಕಾಲ ಮುಚ್ಚಿಟ್ಟು ನಂತರ ಈ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪೂರಿಗಳಂತೆ ಲಟ್ಟಿಸಿ; ಅವನ್ನು ಕಾದ ಎಣ್ಣೆಯಲ್ಲಿ ಕರಿದು ತೆಗೆದರೆ ಮೆಂತ್ಯಸೊಪ್ಪಿನ ಪೂರಿ ಯಾವುದೇ ಚಟ್ನಿ ಜೊತೆ ತಿನ್ನಲು ಸಿದ್ಧ.

**

ಮೆಂತ್ಯಸೊಪ್ಪಿನ ಮೊಸರು ಸಾರು
ಬೇಕಾಗುವ ಸಾಮಗ್ರಿಗಳು

ಎಳೆಯ ಮೆಂತ್ಯಸೊಪ್ಪು - 2 ಕಟ್ಟು, ಮೊಸರು - 3/4 ಲೀ., ಹಸಿಮೆಣಸಿನಕಾಯಿ – 6 ರಿಂದ 8, ತೆಂಗಿನತುರಿ – 4 -5 ಚಮಚ, ಶುಂಠಿ – 1 ಇಂಚಿನಷ್ಟು, ಬೆಳ್ಳುಳ್ಳಿ – 10 ಹಿಳುಕು, ಅರಿಶಿನಪುಡಿ - 1/2 ಚಮಚ, ಕಾಳುಮೆಣಸು – 10 -12 ಕಾಳು, ಜೀರಿಗೆ – 1 ಚಮಚ, ಕೊತ್ತಂಬರಿ - ಸ್ವಲ್ಪ, ಕರಿಬೇವು – 2 ಎಸಳು, ಒಣಮೆಣಸಿನಕಾಯಿ - 4, ಈರುಳ್ಳಿ - 1, ಸಾಸಿವೆ - 1/2 ಚಮಚ, ಉಪ್ಪು - ರುಚಿಗೆ ತಕ್ಕಷ್ಟು.

ತಯಾರಿಸುವ  ವಿಧಾನ
ಮೆಂತ್ಯಸೊಪ್ಪನ್ನು ಬಿಡಿಸಿ ತೊಳೆದು ಸಣ್ಣಗೆ ಕತ್ತರಿಸಿ ಇಟ್ಟು ಕೊಳ್ಳಬೇಕು. ಮಿಕ್ಸಿಗೆ ತೆಂಗಿನತುರಿ, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕಾಳುಮೆಣಸು, ಅರಿಶಿನಪುಡಿ, ಕೊತ್ತಂಬರಿಸೊಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಮೊಸರಿಗೆ ಸ್ವಲ್ಪವೇ ನೀರು ಸೇರಿಸಿ ಕಡೆದಿಟ್ಟುಕೊಳ್ಳಬೇಕು. ಒಂದು ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಸಾಸಿವೆಯನ್ನು ಸಿಡಿಸಿ ಜೀರಿಗೆ ಹಾಕಿ ಈರುಳ್ಳಿ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ ಹೆಚ್ಚಿದ ಮೆಂತ್ಯಸೊಪ್ಪನ್ನು ಹಾಕಿ ಹುರಿಯಬೇಕು. 

ಸೊಪ್ಪು ಒಗ್ಗರಣೆಯಲ್ಲಿ ಬೆಂದ ನಂತರ ರುಬ್ಬಿದ ಮಸಾಲೆ ಹಾಕಿ ಸ್ವಲ್ಪ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಬೇಕು. ಹಸಿವಾಸನೆ ಹೋಗುವವರೆಗೆ ಕುದಿಸಿ ಕೆಳಕ್ಕಿಳಿಸಬೇಕು. ಕೊಂಚ ತಣ್ಣಗಾದ ನಂತರ ಕಡೆದಿಟ್ಟು ಕೊಂಡಿರುವ ಮೊಸರನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. ರುಚಿಯಾದ ಮೆಂತ್ಯಸೊಪ್ಪಿನ ಮೊಸರು ಸಾರು ಅನ್ನ ಮುದ್ದೆಯ ಜೊತೆ ತಿನ್ನಲು ತಯಾರು. ಮೆಂತ್ಯಸೊಪ್ಪಿನ ಪೂರಿ ಜೊತೆ ತಿನ್ನಲೂ ಇದು ಒಳ್ಳೆಯ ರುಚಿಯಾದ ಪದಾರ್ಥ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT