ಶನಿವಾರ, ಡಿಸೆಂಬರ್ 14, 2019
21 °C

ಜೀವನದಲ್ಲಿ ನವೋಲ್ಲಾಸ

ನಳಿನಿ. ಟಿ. ಭೀಮಪ್ಪ Updated:

ಅಕ್ಷರ ಗಾತ್ರ : | |

ಜೀವನದಲ್ಲಿ ನವೋಲ್ಲಾಸ

ನನ್ನ ಹವ್ಯಾಸ ಬರವಣಿಗೆ ಎಂದು ಗೊತ್ತಾಗಿದ್ದೇ ಇತ್ತೀಚಿನ ಮೂರು ವರ್ಷಗಳಲ್ಲಿ. ಮೊದಮೊದಲು ಓದುವುದಷ್ಟೇ ಹವ್ಯಾಸ ಎಂದು ತಿಳಿದಿದ್ದ ನನಗೆ ಬರವಣಿಗೆಯ ಹುಚ್ಚು ಹಚ್ಚಿಸಿದವರು ನನ್ನ ಪತಿದೇವರು.

‘ಇಷ್ಟೊಂದು ಪುಸ್ತಕ, ಪತ್ರಿಕೆ, ಮ್ಯಾಗಜೀನ್‌ಗಳನ್ನು ಓದುತ್ತೀಯಾ, ಏನಾದರೂ ಬರೆಯಬಾರದೇ?’ ಎಂದು ಹೇಳಿದ ಆ ಒಂದು ಮಾತು ಬರೆಯಲು ಪ್ರೇರಣೆ ನೀಡಿತ್ತು. ಹೇಗಿದ್ದರೂ ಕನ್ನಡ ಹಾಗೂ ಇಂಗ್ಲಿಷ್ ಟೈಪಿಂಗ್ ಗೊತ್ತಿದ್ದರಿಂದ, ‘ನುಡಿ’ಯನ್ನು ಡೌನ್‌ಲೋಡ್ ಮಾಡಿ ಕಂಪ್ಯೂಟರ್ ಕೀಬೋರ್ಡನಲ್ಲಿ ಕನ್ನಡ ಟೈಪ್ ಮಾಡಲು ಕಲಿತಾಗ ಸ್ವರ್ಗಕ್ಕೆ ಮೂರೇ ಗೇಣು! ನನ್ನ ಮೊದಲ ಸಣ್ಣ ಲೇಖನ ಪ್ರಜಾವಾಣಿಯ ‘ಕಾಮನಬಿಲ್ಲಿ’ನಲ್ಲಿ ಪ್ರಕಟವಾಗಿ ಕೆಳಗೆ ನನ್ನ ಹೆಸರು ಕಂಡಾಗ ಮೈಯೆಲ್ಲಾ ಪುಳಕಗೊಡಿತ್ತು. ಅಂದಿನಿಂದ ಶುರುವಾದ ಬರವಣಿಗೆ ನನ್ನ ಜೀವನದಲ್ಲಿ ಹೊಸ ದಿಕ್ಕನ್ನೇ ತೋರಿಸಿದೆ.

ಈಗ ಬೆಳಿಗ್ಗೆ ವಾಕಿಂಗ್ ಹೋಗವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಕಣ್ಣಿಗೆ ಬೀಳುವ ವಸ್ತು, ಜನ, ಪ್ರಸಂಗ, ಪ್ರಕೃತಿ – ಹೀಗೆ ಏನೇ ನೋಡಿದರೂ ‘ಇದರ ಬಗ್ಗೆ ಬರೆಯಬಹುದಲ್ಲ’, ‘ಶುರು ಮಾಡುವುದು ಹೇಗೆ’ – ಎಂದು ಮನಸ್ಸು ಆಲೋಚಿಸತೊಡಗುತ್ತದೆ. ಅದೇನೋ ಹೇಳುತ್ತಾರಲ್ಲ – ‘ನಿಮ್ಮ ಕನಸೇ ನಿಮ್ಮನ್ನು ನಿದ್ದೆಯಿಂದ ಎಬ್ಬಿಸಲಿ’ ಎಂದು ಹಾಗೆ ಬರೆಯಬೇಕೆಂಬ ತುಡಿತವೇ ನನ್ನನ್ನು ಸದಾ ಉಲ್ಲಸಿತವಾಗಿಟ್ಟಿರುತ್ತದೆ. ಕಸ, ನೆಲ, ಪಾತ್ರೆ ಬಟ್ಟೆ – ಏನೇ ಕೆಲಸ ಮಾಡುತ್ತಿದ್ದರೂ ಮನಸ್ಸು ಮಾತ್ರ ಲೇಖನದ ಸಾಲುಗಳನ್ನು ಹೆಣೆಯುವುದರಲ್ಲಿ ತಲ್ಲೀನವಾಗಿರುತ್ತದೆ. ಬರವಣಿಗೆಯ ಸಾಲುಗಳು ಪುಂಖಾನುಪುಂಖವಾಗಿ ಹೊಮ್ಮುತ್ತಿರುವಾಗ, ಎಲ್ಲಿ ಟೈಪು ಮಾಡುವ ಹೊತ್ತಿಗೆ ಮರೆತುಬಿಡುತ್ತದೆಯೋ ಎಂಬ ಆತಂಕ ಶುರುವಾಗಿ ಅಡುಗೆಮನೆಯ ಶೆಲ್ಫಿನಲ್ಲೇ ಒಂದು ಪುಸ್ತಕ, ಪೆನ್ನು ಇಟ್ಟುಕೊಂಡಿದ್ದೇನೆ. ಮುಖ್ಯಾಂಶಗಳನ್ನು ನೆನಪಾದ ತಕ್ಷಣ ಕೆಲಸದ ನಡುವೆಯೇ ಅದರಲ್ಲಿ ಬರೆದುಬಿಡುತ್ತೇನೆ.

ಗಂಡ–ಮಕ್ಕಳು ಶಾಲೆಗೆ ಹೋಗುವುದನ್ನೇ ಕಾದು ನಂತರ ಕಂಪ್ಯೂಟರ್‌ನಲ್ಲಿ ಪುಸ್ತಕದ ಮುಖ್ಯಾಂಶಗಳು ಸಾರಾಂಶಗಳಾಗಿ ರೂಪ ತಳೆದಾಗ ಮನಸ್ಸು ಧನ್ಯತೆಯನ್ನು ಅನುಭವಿಸುತ್ತದೆ. ಜೀವನದಲ್ಲಿ ಕಂಡು ಕೇಳಿದ ನೋವು, ನಲಿವುಗಳು ಬರವಣಿಗೆಯಲ್ಲಿ ಬೆರೆತಾಗ ಸಿಗುವ ಆನಂದ ಸೀಮಾತೀತ.

ಮೊದಲು ಸೋಮಾರಿಯಾಗಿ ಸಂಜೆಯ ತನಕ ಕೆಲಸಗಳನ್ನು ಮುಂದೂಡಿ ಕಾಲಹರಣ ಮಾಡುತ್ತಿದ್ದೆ. ಆದರೆ ಈಗ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಎಲ್ಲ ಕೆಲಸಗಳನ್ನು ಮುಗಿಸಿ ಬರವಣಿಗೆಗೆ ಯಾವಾಗ ಕುಳಿತುಕೊಳ್ಳುತ್ತೇನೆಯೋ ಎಂದು ಮನಸ್ಸು ಚಡಪಡಿಸುತ್ತದೆ. ಎಷ್ಟೋ ಸಲ ಕೆಲವು ದಿನಗಳ ಮಟ್ಟಿಗೆ ಊರಿಗೆ ಹೋಗಿದ್ದರಿಂದಲೋ ಅಥವಾ ಅತಿಥಿಗಳ ಆಗಮನದಿಂದಲೋ – ಹೀಗೇ ಏನೋ ಕೆಲವು ಕಾರಣಗಳಿಂದ ಕೆಲವೊಮ್ಮೆ ಬರವಣಿಗೆ ಅರ್ಧಕ್ಕೆ ಎಷ್ಟೋ ಸಲ ಮುಂದುವರೆಯದೆ ನಿಂತಿರುತ್ತದೆ. ಆದರೆ ಸಂಸಾರದ ಜಂಜಾಟಗಳ ನಡುವೆಯೂ ಹಾಗೇ, ಹೀಗೇ ಸಮಯ ಹೊಂದಿಸಿಕೊಂಡು ಲೇಖನವು ಅಂತಿಮ ರೂಪವನ್ನು ಪಡೆದಾಗ ಮನದಲ್ಲಿ ಸಾರ್ಥಕ ಭಾವ. ಮನಸ್ಸು ಮಾಡಿದರೆ ಬೆಟ್ಟವನ್ನೇ ಕಡಿಯಬಹುದು ಎಂದಿದ್ದಾರೆ ಹಿರಿಯರು, ಅಂಥದ್ದರಲ್ಲಿ ಬರವಣಿಗೆಗಾಗಿ ಸ್ವಲ್ಪ ಸಮಯವನ್ನು ನನ್ನ ಮಧ್ಯಾಹ್ನದ ನಿದ್ದೆಯ ಅವಧಿಯನ್ನು ಮೊಟಕುಗೊಳಿಸಿಯಾದರೂ ಹೊಂದಿಸಿಯೇ ತೀರುತ್ತೇನೆ. ಹವ್ಯಾಸ ಎಂಬುದು ಮನುಷ್ಯನನ್ನು ಆಲಸಿತನದಿಂದ ಚಟುವಟಿಕೆಯ ಜೀವನದತ್ತ ಕರೆದೊಯ್ಯುತ್ತದೆ ಎಂಬುದು ನಾನು ಜೀವನದಲ್ಲಿ ಕಲಿತ ಸುಂದರ ಪಾಠ.

ಪ್ರತಿಕ್ರಿಯಿಸಿ (+)