ಭಾನುವಾರ, ಡಿಸೆಂಬರ್ 8, 2019
25 °C

ತೀರದ ಭೂದಾಹಕ್ಕೆ ಡೀಮ್ಡ್ ಅರಣ್ಯ ತರ್ಪಣ!

Published:
Updated:
ತೀರದ ಭೂದಾಹಕ್ಕೆ ಡೀಮ್ಡ್ ಅರಣ್ಯ ತರ್ಪಣ!

ಸ್ವಾತಂತ್ರ್ಯಾನಂತರವೂ ದೇಶದ ಅರಣ್ಯ ನಿರ್ವಹಣೆಯು ಬ್ರಿಟಿಷರು ರೂಪಿಸಿದ್ದ ‘ಭಾರತೀಯ ಅರಣ್ಯ ಕಾಯ್ದೆ– 1927’ರ ಅನ್ವಯವೇ ನಡೆಯುತ್ತಿತ್ತು. ಅರಣ್ಯದಿಂದ ಮರಮಟ್ಟು ಸಂಗ್ರಹಿಸುವ ಉದ್ದೇಶಕ್ಕಾಗಿ ಮಾತ್ರ ಇದ್ದ ಈ ಕಾನೂನಿನ ಮಿತಿ ಹಾಗೂ ಅಪಾಯಗಳು ಆ ನಂತರ ತೀವ್ರವಾಗಿ ಅರಿವಿಗೆ ಬರತೊಡಗಿದವು. ಆ ಚಿಂತನೆಗಳ ಫಲವಾಗಿಯೇ ಅರಣ್ಯ ಪ್ರದೇಶಗಳನ್ನು  ಸಂರಕ್ಷಿಸುವ ಅಶಯದ ‘ಅರಣ್ಯ ಸಂರಕ್ಷಣಾ ಕಾನೂನು–1980’ ರೂಪುಗೊಂಡಿತು. ಇದರನ್ವಯ ದೇಶದೆಲ್ಲೆಡೆ ಅರಣ್ಯ ಪ್ರದೇಶಗಳನ್ನು ಗುರುತಿಸಿ, ಘೋಷಿಸುವ ಕಾರ್ಯ ಆರಂಭವಾಯಿತು. ಅರಣ್ಯ ಇಲಾಖೆಯು ತನ್ನ ಸುಪರ್ದಿಯಲ್ಲಿನ ಅರಣ್ಯದ ನಕ್ಷೆ ರಚಿಸಿ, ಪಹಣಿ ತಯಾರಿಸಿ, ನಿರ್ವಹಿಸತೊಡಗಿತು. ಸರ್ಕಾರವು ಅರಣ್ಯ ಇಲಾಖೆಯಡಿಯಲ್ಲಿನ ಈ ಅರಣ್ಯವನ್ನು ಮಾತ್ರ ಅರಣ್ಯಭೂಮಿ ಎಂದು ಪರಿಗಣಿಸತೊಡಗಿತು. ಇದರಲ್ಲಿ ‘ಕಾಯ್ದಿಟ್ಟ ಅರಣ್ಯ’ (Reserve Forest), ‘ಸಂರಕ್ಷಿತ ಅರಣ್ಯ’ (Protected Forest) ಹಾಗೂ ‘ಗ್ರಾಮ ಅರಣ್ಯ’ (Village Forest) ಎನ್ನುವ ಮೂರು ಪ್ರಮುಖ ವಿಧಗಳಿವೆ. ಇವೆಲ್ಲವುಗಳ ಬಳಕೆಯ ಕುರಿತ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಕೇಂದ್ರ ಅರಣ್ಯ ಇಲಾಖೆ ಉಳಿಸಿಕೊಂಡಿತು.

ಆದರೆ, ಈ ಅರಣ್ಯ ಸಂರಕ್ಷಣಾ ಕಾನೂನಿನ ವ್ಯಾಪ್ತಿಗೆ ಒಳಪಡದ ಅಗಾಧ ವಿಸ್ತೀರ್ಣದ ಅರಣ್ಯ ಪ್ರದೇಶ ದೇಶದೆಲ್ಲೆಡೆ ಇದೆ. ನಮ್ಮ ರಾಜ್ಯದ ಕರಾವಳಿ, ಮಲೆನಾಡು ಮತ್ತು ಅರೆಮಲೆನಾಡಿನಲ್ಲೂ ಈ ಬಗೆಯ ಸಂಪದ್ಭರಿತ ಕಾನನಗಳಿವೆ. ಕಾದಿಟ್ಟ ಅರಣ್ಯಕ್ಕೆ ಹೊಂದಿಕೊಂಡಿರುವ ಈ ಕಾಡಿನ ಪ್ರದೇಶಗಳು ಪಾರಿಸರಿಕವಾಗಿ ಸ್ವಲ್ಪವೂ ಭಿನ್ನವಿಲ್ಲ. ಮುಗಿಲು ಮುಟ್ಟುವ ಮರಗಳು, ಅಪಾರ ಜೀವವೈವಿಧ್ಯ, ನದಿ-ತೊರೆಗಳು, ವನ್ಯಪ್ರಾಣಿಗಳು ಎಲ್ಲವೂ ಇಲ್ಲಿವೆ. ಆದರೆ, ಭೂಒಡೆತನ ಮಾತ್ರ ಅರಣ್ಯ ಇಲಾಖೆಯದ್ದಾಗಿರದೆ, ರಾಜ್ಯ ಸರ್ಕಾರದ ಕಂದಾಯ  ಇಲಾಖೆಯದು. ಅರಣ್ಯ ಇಲಾಖೆಯ ಹಂಗಿರದ ಈ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಪರಿವರ್ತಿಸುವುದು ಸರ್ಕಾರಕ್ಕೆ ಸುಲಭ. ಆದ್ದರಿಂದ, ಈ ಅಪ್ಪಟ ವನ್ಯಪ್ರದೇಶಗಳನ್ನು ಸರ್ಕಾರ ವಿವಿಧ ಸರ್ಕಾರಿ ಯೋಜನೆಗಳಿಗೆ ಬಳಸಿಕೊಳ್ಳತೊಡಗಿತು. 1990ರ ದಶಕದ ನಂತರವಂತೂ ಈ ಕಂದಾಯ ಅರಣ್ಯ ಭೂಮಿಯನ್ನು ಕೃಷಿಗಾಗಿ ಅತಿಕ್ರಮಿಸುವ ಪ್ರಮಾಣ ಹೆಚ್ಚಾಯಿತು!ಇದರ ಗಂಭೀರತೆಯ ಅರಿವು ಜಾಗೃತ ನಾಗರಿಕರಲ್ಲಿ 80ರ ದಶಕದಲ್ಲಿಯೇ ಮೂಡತೊಡಗಿತು. ಕಂದಾಯ ಭೂಮಿಯಲ್ಲಿನ ಕಾಡಿನ ನಾಶದ ಸಂಗತಿ ಅಲ್ಲಲ್ಲಿ ನ್ಯಾಯಾಲಯದ ಮೆಟ್ಟಿಲನ್ನೂ ಏರಿದವು. ದೀರ್ಘ ಕಾಲದಿಂದ ನಡೆಯುತ್ತಿದ್ದ ಗೋದಾವರ್ಮ ದಾವೆಯ ಭಾಗವಾಗಿ ದೇಶದ ಸುಪ್ರೀಂ ಕೋರ್ಟ್‌ ಈ ಅರಣ್ಯಗಳ ಕುರಿತಾಗಿ 1996ರ ಡಿಸೆಂಬರ್ 12ರಂದು ಒಂದು ಐತಿಹಾಸಿಕ ತೀರ್ಪು ನೀಡಿತು. ‘ಅರಣ್ಯವೆಂದರೆ, ಅರಣ್ಯ ಸಂರಕ್ಷಣಾ ಕಾನೂನು ಗುರುತಿಸಿರುವ ಅರಣ್ಯ ಭೂಮಿಯಲ್ಲಿನ ಕಾಡು ಮಾತ್ರವಲ್ಲ. ಸರ್ಕಾರಿ ಕಂದಾಯ ಇಲಾಖೆ ಅಥವಾ ಖಾಸಗಿ ಭೂಮಿಯಲ್ಲಿರುವ ನೈಸರ್ಗಿಕ ಕಾಡುಗಳೂ ಅರಣ್ಯವೇ. ಅವನ್ನು ‘ಡೀಮ್ಡ್ ಅರಣ್ಯ’ಗಳೆಂದೇ (Deemed Forest) ಗುರುತಿಸಬೇಕು’ ಎಂದು ಈ ತೀರ್ಪು ಸಾರಿತು. ಅಂದರೆ, ನೆಲದ ಮಾಲೀಕತ್ವ ಯಾರದ್ದಿದ್ದರೂ, ಕಾಡಿನ ಲಕ್ಷಣವಿರುವ ವನ್ಯಪ್ರದೇಶಗಳನ್ನೆಲ್ಲ ಅರಣ್ಯವೆಂದೇ ಗುರುತಿಸಿ, ಸಂರಕ್ಷಿಸಬೇಕು ಎನ್ನುವ ಆಳ ಪರಿಸರ ಪ್ರಜ್ಞೆಯ ತೀರ್ಮಾನವಿದು. ಇದರ ಪ್ರಕಾರ, ಹೆಕ್ಟೇರಿಗೆ ಕನಿಷ್ಠ 50 ನೈಸರ್ಗಿಕ ಮರಗಳುಳ್ಳ, ಎರಡು ಹೆಕ್ಟೇರಿಗಿಂತ ಹೆಚ್ಚಿನ ಸರ್ಕಾರಿ ಕಂದಾಯ ಭೂಮಿ ಒಂದೆಡೆಯಿದ್ದರೆ, ಅವನ್ನು ಡೀಮ್ಡ್ ಅರಣ್ಯವೆಂದು ಪರಿಗಣಿಸಬೇಕು. ಖಾಸಗಿ ಭೂಮಿಯಾದರೆ ಕನಿಷ್ಠ ಐದು ಹೆಕ್ಟೇರ್ ಅರಣ್ಯಪ್ರದೇಶ ಒಂದೆಡೆಯಿರಬೇಕು. ಇದರ ಅನ್ವಯ ಭೂಒಡೆತನವೇನೂ ಬದಲಾಗದು. ಈ ಕಾಡುಗಳ  ನಿರ್ವಹಣೆಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯ ಆಶಯಗಳನ್ನು ಮಾತ್ರ ಪಾಲಿಸಬೇಕಷ್ಟೆ. 

ಆದರೆ, ಈ ಡೀಮ್ಡ್ ಅರಣ್ಯದ ನಿಜವಾದ ವಿಸ್ತಾರವೆಷ್ಟು? ಎಲ್ಲೆಲ್ಲಿವೆ? ಈ ಕುರಿತ ಸೂಕ್ತ ಮಾಹಿತಿ ಎಲ್ಲಿಯೂ ಸಂಪೂರ್ಣವಾಗಿ ಲಭ್ಯವಿರಲಿಲ್ಲ. ತಳಮಟ್ಟದಲ್ಲಿ ಇವನ್ನು ಗುರುತಿಸಿದರೆ ಮಾತ್ರ ಇವುಗಳ ಸಂರಕ್ಷಣೆ ಸಾಧ್ಯ ಎಂಬ ದೃಷ್ಟಿಯಿಂದ, ತ್ವರಿತವಾಗಿ ಇವನ್ನು ಗುರುತಿಸಲು ಸುಪ್ರೀಂ ಕೋರ್ಟ್ ಆದೇಶಿಸಿತು. ಇದರನ್ವಯ ರಾಜ್ಯದ ಅರಣ್ಯ ಇಲಾಖೆ 1997ರಲ್ಲಿ ತಜ್ಞರ ಸಮಿತಿಯ ಮೂಲಕ ಒಂದು ವರದಿಯನ್ನು ಸಲ್ಲಿಸಿತು. ಆದರೆ, ಅದರಲ್ಲಿದ್ದ ನ್ಯೂನತೆಗಳಿಂದಾಗಿ, ನ್ಯಾಯಾಲಯವು ಅದನ್ನೊಪ್ಪಲಿಲ್ಲ. ಆ ಸಮಿತಿಯನ್ನು ಪುನರ್‌ರಚಿಸಿ, ಪರಿಷ್ಕೃತ ವರದಿ ನೀಡಲು ಅದು ಸರ್ಕಾರಕ್ಕೆ ಅದೇಶಿಸಿತು. ಈ ಸಮಿತಿ ಕಲೆಹಾಕಿದ ಅಂಕಿಅಂಶಗಳ ಅಧಾರದಲ್ಲಿ ರಾಜ್ಯ ಅರಣ್ಯ ಇಲಾಖೆ, ಸುಪ್ರೀಂ ಕೋರ್ಟ್‌ಗೆ 2002ರಲ್ಲಿ ಪುನಃ ವರದಿ ನೀಡಿತು. ಈ ವರದಿಯ ಪ್ರಕಾರ, ರಾಜ್ಯದಲ್ಲಿ ಸುಮಾರು 43 ಲಕ್ಷ ಹೆಕ್ಟೇರ್ ಘೋಷಿತ ಅರಣ್ಯವಿದ್ದರೆ (Notified), ಸುಮಾರು 10 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯವಿದೆ. ಆದರೆ, ಇಷ್ಟು ವಿಸ್ತಾರದ ಕಂದಾಯಭೂಮಿ ಅರಣ್ಯ ಪ್ರದೇಶವನ್ನು ಡೀಮ್ಡ್ ವ್ಯಾಪ್ತಿಗೆ ತಂದದ್ದರಿಂದ ವ್ಯಾಪಕ ಆಕ್ಷೇಪ  ಬಂತು.

ಈ ಹಿನ್ನೆಲೆಯಲ್ಲಿ, ಮತ್ತೊಮ್ಮೆ ತಳಮಟ್ಟದಲ್ಲಿ  ಪರಿಶೀಲಿಸಿ, ವೈಜ್ಞಾನಿಕ ವರದಿ ನೀಡಲು ನ್ಯಾಯಾಲಯ ಆದೇಶಿಸಿತು. ಇದರನ್ವಯ, ರಾಜ್ಯ ಸರ್ಕಾರ 2014ರ ಮೇ ತಿಂಗಳಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಗ್ರಾಮಮಟ್ಟದಲ್ಲಿ ಹೊಸದಾಗಿ ಸಮೀಕ್ಷೆ ನಡೆಸಿ ಅಂಕಿಅಂಶ ಕ್ರೋಡೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದವು. ಪ್ರತಿ ಅರಣ್ಯವಿಭಾಗ ಹಾಗೂ  ಜಿಲ್ಲಾಮಟ್ಟದ ಸಮಿತಿಗಳು ಈ ಮೂಲಕ ಸಲ್ಲಿಸಿದ ವರದಿಯ ಆಧಾರದಲ್ಲಿ, ರಾಜ್ಯ ಸಮಿತಿಯು ಡೀಮ್ಡ್ ಅರಣ್ಯಗಳ ಸಮಗ್ರ ಚಿತ್ರಣ ರೂಪಿಸಿತು. ಇದರ ಆಧಾರದಲ್ಲೀಗ ರಾಜ್ಯ ಸರ್ಕಾರ ಅಂತಿಮವಾಗಿ ಡೀಮ್ಡ್ ಅರಣ್ಯ ವ್ಯಾಪ್ತಿಯನ್ನು ನಿರ್ಧರಿಸಹೊರಟಿದೆ. ಮೊದಲು ಗುರುತಿಸಿದ್ದ ಪ್ರದೇಶದ ಸುಮಾರು ಅರ್ಧದಷ್ಟು (ಸುಮಾರು 5 ಲಕ್ಷ ಹೆಕ್ಟೇರ್) ಅರಣ್ಯವನ್ನೇ ಡೀಮ್ಡ್ ವ್ಯಾಪ್ತಿಯಿಂದ ಹೊರಗಿಡಲು ತೀರ್ಮಾನಿಸಿದೆ! ಜೊತೆಗೆ, ರಾಜ್ಯ ಸಚಿವ ಸಂಪುಟ ಸಭೆ  ಕಳೆದ ತಿಂಗಳ  22ರಂದು ನಡೆಸಿದ ಸಭೆಯಲ್ಲಿ ಈ 5 ಲಕ್ಷ ಡೀಮ್ಡ್ ಅರಣ್ಯವನ್ನು ಅರಣ್ಯ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಿಂದಲೇ ಹೊರಗಿಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ  ಪ್ರಮಾಣಪತ್ರ ಸಲ್ಲಿಸುವ ನಿರ್ಧಾರವನ್ನೂ ತೆಗೆದುಕೊಂಡಿದೆ!

ಈ ಎರಡೂ ಅನರ್ಥಕಾರಿ ನಡೆಗಳಿಗೆ ಎಲ್ಲೆಡೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ತಳಮಟ್ಟದಲ್ಲಿ ಸಮೀಕ್ಷೆ ನಡೆಸಿ ವರದಿ ತಯಾರಿಸುವಾಗ ವಿವಿಧ ಹಿತಾಸಕ್ತಿಗಳಿಗೆ ಮಣೆಹಾಕಿ, ಸಮೃದ್ಧ ಅರಣ್ಯ ಪ್ರದೇಶವನ್ನೇ ಹೊರಗಿಟ್ಟಿರುವ ಸಂಗತಿಗಳು ಮಲೆನಾಡು ಹಾಗೂ ಕರಾವಳಿಯ ಪ್ರದೇಶಗಳಿಂದ ಹೊರಬರುತ್ತಿವೆ. ಹಳ್ಳಿಗರ ಅಗತ್ಯದ ರಸ್ತೆ, ಶಾಲೆ, ಸಮುದಾಯ ಭವನಗಳ ಜಾಗಗಳನ್ನೋ ಅಥವಾ ಗ್ರಾಮವಾಸಿಗಳು ಮನೆಕಟ್ಟುವ ಜಾಗವನ್ನೋ ಅರಣ್ಯ ವ್ಯಾಪ್ತಿಯಿಂದ ಹೊರಗಿಟ್ಟರೆ ಅದು ಯೋಗ್ಯಕ್ರಮ. ಬಡರೈತರು ಕೃಷಿಗಾಗಿ ಅತಿಕ್ರಮಿಸಿದ ಕನಿಷ್ಠ ಅರಣ್ಯ ಭೂಮಿಯನ್ನು ಕೈಬಿಡುವುದೂ ನ್ಯಾಯಯುತ. ಆದರೆ, ರಾಜ್ಯ ಸರ್ಕಾರ ಕೈಬಿಡಲು ಹೊರಟಿರುವ ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿ ಇದರ ಪ್ರಮಾಣ ಕಡಿಮೆ. ಬದಲಾಗಿ,  ಭಾರಿ ಪ್ರಮಾಣದಲ್ಲಿ  ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸಿರುವ ಬಲಾಢ್ಯರ ಹಿತಾಸಕ್ತಿ ರಕ್ಷಿಸಲು ಸರ್ಕಾರ ಮುಂದಾಗಿರುವಂತಿದೆ. ಜೊತೆಗೆ, ಅರಣ್ಯ ಸಂರಕ್ಷಣಾ ಕಾನೂನಿನ ಹಂಗಿಲ್ಲದೆ ವಾಣಿಜ್ಯ ಹಾಗೂ ಕೈಗಾರಿಕಾ ಉದ್ದೇಶಗಳಿಗಾಗಿ ಡೀಮ್ಡ್ ಅರಣ್ಯವನ್ನು ಬಳಸಿಕೊಳ್ಳುವ ಹುನ್ನಾರವೂ ಇದರಲ್ಲಡಗಿದೆ.

ಹಾಗೆಂದೇ, ಶಿವಮೊಗ್ಗ ಜಿಲ್ಲೆಯ ಸಮೃದ್ಧ ದೇವರಕಾನು ಹಾಗೂ ನೀಲಗಿರಿ ನೆಡುತೋಪುಗಳು, ಚಿಕ್ಕಮಗಳೂರಿನ ಹುಲ್ಲುಗಾವಲುಗಳು, ಕರಾವಳಿಯ ಕುಮ್ಕಿ, ಕಾಂಡ್ಲಾ ಅರಣ್ಯಗಳು, ಧಾರವಾಡ-ಬೆಳಗಾವಿ ಜಿಲ್ಲೆಗಳ ಇನಾಂಭೂಮಿ ಅರಣ್ಯ- ಇವನ್ನೆಲ್ಲ ಡೀಮ್ಡ್ ವ್ಯಾಪ್ತಿಯಿಂದ ಹೊರಬಿಟ್ಟಿರುವದು! ಶಿವಮೊಗ್ಗ ಜಿಲ್ಲೆಯಲ್ಲಿ 1.74 ಲಕ್ಷ ಹೆಕ್ಟೇರ್ ಇದ್ದದ್ದು 65 ಸಾವಿರ್ ಹೆಕ್ಟೇರಿಗಿಳಿದರೆ,  ಚಿಕ್ಕಮಗಳೂರಿನಲ್ಲಿ 1.43 ಲಕ್ಷ ಹೆಕ್ಟೇರ್ 53 ಸಾವಿರ ಹೆಕ್ಟೇರಿಗಿಳಿದಿದೆ! ಮಲೆನಾಡು ಹಾಗೂ ಕರಾವಳಿಯ ಪ್ರತಿಜಿಲ್ಲೆಯಲ್ಲೂ ಡೀಮ್ಡ್ ಅರಣ್ಯದ ವ್ಯಾಪ್ತಿಯನ್ನು ಹೀಗೆ ಕಡಿತಗೊಳಿಸುವ ಕೆಲಸ ಅಡಳಿತ ಯಂತ್ರದ ಮೂಲಕವೇ ವ್ಯವಸ್ಥಿತವಾಗಿ ಜರುಗಿದ್ದು ವಿಷಾದಕರ. ರಾಜ್ಯದ ಒಟ್ಟೂ ಅರಣ್ಯ ಪ್ರದೇಶವೇ ಸುಮಾರು 43 ಲಕ್ಷ ಹೆಕ್ಟೇರ್. ಅದರಲ್ಲಿ ಐದು ಲಕ್ಷ ಹೆಕ್ಟೇರ್ ಎಂದರೆ, ಸುಮಾರು ಶೇ 12ರಷ್ಟು ಅರಣ್ಯವನ್ನೇ ಕೈಬಿಡುವುದು ಮಹಾಪರಾಧವಲ್ಲವೇ?

ಡೀಮ್ಡ್ ಅರಣ್ಯಗಳು ಬಂಜರು ಭೂಮಿಗಳಲ್ಲ. ಸಮೃದ್ಧ ಕಾಡಿನ ಹಸಿರುಪಟ್ಟಿಗಳು. ಹಳ್ಳಿಗರು  ಉರುವಲು, ಹಸಿಸೊಪ್ಪು, ಸಾವಯವ ತ್ಯಾಜ್ಯ, ಗಿಡಮೂಲಿಕೆಗಳು ಇತ್ಯಾದಿಗಳನ್ನು ಪಡೆಯುವುದು ಇಲ್ಲಿಂದಲೇ. ಜೇನು, ಅಂಟುವಾಳ, ಶೀಗೆಕಾಯಿಯಂಥ ಚೌಬಿನೇತರ ಉತ್ಪನ್ನಗಳನ್ನು ಸದಾ ಪೂರೈಸುವ ಜೀವವೈವಿಧ್ಯದ ಹಿತ್ತಿಲುಗಳಿವು. ಹೊಳೆ-ಹಳ್ಳ, ಕೆರೆಗಳಿಗೆ ನೀರು ತುಂಬಿಸಿ, ಅಂತರ್ಜಲ ಕಾಪಾಡುವ ಜಲಾನಯನ ಪ್ರದೇಶಗಳೂ ಹೌದು. ವನ್ಯಜೀವಿಗಳಿಗೆ ನೆಲೆ ಒದಗಿಸುವ ಹಸಿರು ತಪ್ಪಲುಗಳು ಸಹ. ಈ ಮೂಲಕ ಸಂರಕ್ಷಿತ ಅರಣ್ಯಗಳ ಮೇಲಿನ ಒತ್ತಡ ಕಡಿಮೆ ಮಾಡುವ ಜೈವಿಕತಾಣಗಳು. ಹಳ್ಳಿಗರ ಜೀವನೋಪಾಯ ಸುರಕ್ಷತೆ ಮತ್ತು ದೀರ್ಘಕಾಲೀನ ಪರಿಸರ ಸಂರಕ್ಷಣೆ- ಇವೆರಡೂ ದೃಷ್ಟಿಯಿಂದ ಇವುಗಳ ಸಂರಕ್ಷಣೆ ತೀರಾ ಅಗತ್ಯ. ವನವಾಸಿಗಳ ಸಹಭಾಗಿತ್ವದೊಂದಿಗೆ ಇವನ್ನು ರಕ್ಷಿಸಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಬೇಕು. ಹಾಗೆಂದು, 2016ರ ಫೆಬ್ರುವರಿಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಪೀಠ ಕೂಡಾ ಆದೇಶಿಸಿದೆ. 

ಆದರೆ ಏನಾಗುತ್ತಿದೆ? ಅಧಿಕಾರದ ದುರುಪಯೋಗ ಮಾಡಿ ಸರ್ಕಾರವೇ ಡೀಮ್ಡ್ ಅರಣ್ಯವನ್ನು ಕಡಿತಗೊಳಿಸುವ ಹುನ್ನಾರ ಒಂದೆಡೆ. ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವವರ ಕುಮ್ಮಕ್ಕಿನಿಂದಾಗಿ ಬಲಾಢ್ಯರು ಹೊಸದಾಗಿ ಅರಣ್ಯ ಅತಿಕ್ರಮಣ ಮಾಡುತ್ತಿರುವುದು, ಇನ್ನೊಂದೆಡೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಅರಣ್ಯವು ಈ ಕಾರಣಕ್ಕಾಗಿ ವ್ಯಾಪಕವಾಗಿ ನಾಶವಾಗುತ್ತಿದೆ. ಈ ಆಘಾತಕಾರಿ ಬೆಳವಣಿಗೆಯನ್ನು ಇತ್ತೀಚಿನ ಸಿಎಜಿ ವರದಿಯೂ ದೃಢೀಕರಿಸಿದೆ. ರಾತ್ರೋರಾತ್ರಿ ಕಾಡಿನ ಮರಗಳನೆಲ್ಲ ಕಡಿದು, ಶುಂಠಿ, ರಬ್ಬರ್ ಇತ್ಯಾದಿ ಬೆಳೆಸುವ ಕುಕೃತ್ಯವೂ ಸಾಗಿದೆ! ಅರಣ್ಯಹಕ್ಕು ಕಾಯ್ದೆಯ ಅನ್ವಯ ರಾಜ್ಯದ ಬಹುತೇಕ ಅರ್ಹ ವನವಾಸಿಗಳಿಗೆ ಇನ್ನೂ ಭೂಮಿಯ ಪಟ್ಟಾ ದೊರಕಿಲ್ಲ. ಆದರೆ, ರಾಜಕೀಯ ಬಲವುಳ್ಳವರು ಬಗರ್-ಹುಕುಂ ಹೆಸರಿನಲ್ಲಿ ಅರಣ್ಯಭೂಮಿಯನ್ನು ಒತ್ತುವರಿ ಮಾಡುವುದು ಮಾತ್ರ ನಿಂತಿಲ್ಲ!

ಸರ್ಕಾರವೇ ಅಧಿಕಾರ ದುರ್ಬಳಕೆ ಮಾಡಿ ಅರಣ್ಯನಾಶಕ್ಕೆ ಕಾರಣವಾಗುತ್ತಿರುವುದು ತೀರಾ ಅಪಾಯಕಾರಿಯಾದದ್ದು. ಡೀಮ್ಡ್ ಅರಣ್ಯವು ಹಳ್ಳಿಗರ ಬಡವರಿಗೆ ಮಾರಕ ಎಂಬಂತೆ ತಪ್ಪು ಅಭಿಪ್ರಾಯ ಮೂಡಿಸಿ, ಹಳ್ಳಿಗರನ್ನು ಪ್ರತಿಭಟನೆಗಿಳಿಸಲು, ಸರ್ಕಾರದ ಉನ್ನತ ಸ್ತರದಲ್ಲಿರುವವರೇ ಪ್ರಚೋದನೆ ನೀಡುತ್ತಿರುವ ವಿದ್ಯಮಾನಗಳೂ ಜರುಗುತ್ತಿವೆ! ಸರ್ಕಾರವು ಸರಿದಾರಿ ತುಳಿಯುವಂತೆ ಕಣ್ತೆರೆಸಲು, ನಾಗರಿಕ  ಸಮಾಜವು ಶೀಘ್ರ ಎಚ್ಚೆತ್ತುಕೊಂಡರೆ ಮಾತ್ರ ಕರುನಾಡಿನ ಹಸಿರು ಪುಪ್ಪಸಗಳು ಉಳಿದಾವು.

* * *

ಹವಾಮಾನ ವೈಪರೀತ್ಯ

ಸತತವಾಗಿ ಕಾಡು ನಾಶವಾಗುತ್ತಿರುವುದರಿಂದ ಮಳೆ ಕೊರತೆ ಹಾಗೂ ತಾಪಮಾನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನೀರು ಬೇಕಿದ್ದರೆ ಸ್ಥಳೀಯ ಪ್ರಭೇದದ ಮಳೆಕಾಡುಗಳನ್ನು ಬೆಳೆಸಬೇಕಾದ ಅನಿವಾರ್ಯ ಇದೆ. ಸಹ್ಯಾದ್ರಿ ಶ್ರೇಣಿಯಲ್ಲಿ ನಡೆಸಿದ ಅಧ್ಯಯನ ಇದನ್ನು ದೃಢಪಡಿಸಿದೆ. ಕರ್ನಾಟಕದಲ್ಲಿ ಕಳೆದ ವರ್ಷ ಶೇ 26ರಿಂದ ಶೇ 28ರಷ್ಟು ಮಳೆ ಕೊರತೆಯಾಗಿದೆ. ತಾಪಮಾನ  2 ಡಿಗ್ರಿ ಸೆಲ್ಸಿಯಸ್‌ನಷ್ಟು ಏರುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ‘ಶರಾವತಿಯ ನದಿ ಹುಟ್ಟುವ ಜಾಗದಿಂದ ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ 18 ತಿಂಗಳ ಕಾಲ ಅಧ್ಯಯನ ನಡೆಸಿದ್ದೇವೆ. ಸ್ಥಳೀಯ ಪ್ರಭೇದದ ಕಾಡುಗಳು ಇರುವ ಕಡೆ ವರ್ಷದ 12 ತಿಂಗಳ ಕಾಲ ಝರಿ ಹರಿದು, ನೀರು ಸಿಗುತ್ತದೆ. ನೆಡುತೋಪು ಇರುವ ಕಡೆ 6ರಿಂದ 8 ತಿಂಗಳು, ಕಾಡಿಲ್ಲದ ಕಡೆ ಕೇವಲ 4 ತಿಂಗಳು ನೀರು ಸಿಗುತ್ತದೆ. ಅಕೇಶಿಯಾ, ರಬ್ಬರ್‌, ನೀಲಗಿರಿ ಮರಗಳಿದ್ದರೆ ನೀರು ಹಿಡಿದಿಡುವ ಸಾಮರ್ಥ್ಯವೇ ಹೊರಟುಹೋಗುತ್ತದೆ ಎಂಬುದನ್ನು ಅಧ್ಯಯನ ದೃಢಪಡಿಸಿದೆ’ ಎಂದು ಅವರು ಹೇಳಿದರು.

ಡಾ.ಟಿ.ವಿ. ರಾಮಚಂದ್ರ,

ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ, ಐಐಎಸ್‌ಸಿ

ಇಚ್ಛಾಶಕ್ತಿ ಇಲ್ಲ

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ವಿಭಾಗ, ಕೊಪ್ಪ ವಿಭಾಗದಲ್ಲಿ 10 ಎಕರೆಯಿಂದ 30 ಎಕರೆವರೆಗೆ ಅರಣ್ಯ ಭೂಮಿ ಒತ್ತುವರಿ ಮಾಡಿದವರನ್ನು ತೆರವು ಮಾಡಿಸಲು ಸರ್ಕಾರ ನಿರ್ದೇಶನ ನೀಡಬೇಕು ಎಂದು 2013ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಗಿತ್ತು. ಈ ಕುರಿತು ಕೋರ್ಟ್‌ ಸರ್ಕಾರಕ್ಕೆ ಚಾಟಿ ಬೀಸಿದೆ. ಹಾಗಿದ್ದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಸಚಿವರು, ಶಾಸಕರು, ಪ್ರಭಾವಿ ರಾಜಕಾರಣಿಗಳ ಕುಟುಂಬದವರನ್ನು ಮುಟ್ಟಲು ಸರ್ಕಾರ ಹೋಗಿಲ್ಲ. ಅರ್ಧ, ಮುಕ್ಕಾಲು, ಒಂದು ಎಕರೆ ಒತ್ತುವರಿ ಮಾಡಿದವರನ್ನು ಮಾತ್ರ ತೆರವು ಮಾಡಿದೆ’ ಎಂದು ಟೀಕಿಸಿದರು.

ಎಸ್.ಆರ್. ಹಿರೇಮಠ,

ಸಾಮಾಜಿಕ  ಕಾರ್ಯಕರ್ತ

ಒತ್ತುವರಿಯ ಲೆಕ್ಕವಿಲ್ಲ

ಇಡೀ ಶೃಂಗೇರಿ ತಾಲ್ಲೂಕಿನಲ್ಲಿ ಸಣ್ಣ, ಮಧ್ಯಮ ರೈತರು ಮಾಡಿರುವ ಒತ್ತುವರಿಗಿಂತ ಹೆಚ್ಚಿನ ಪ್ರಮಾಣದ ಒತ್ತುವರಿಯನ್ನು ಟಾಟಾ ಕಂಪೆನಿಯೊಂದೇ ಕೊಪ್ಪ ತಾಲ್ಲೂಕಿನಲ್ಲಿ ಮಾಡಿದೆ. ಟಾಟಾ ಕಂಪೆನಿಗೆ ಸೇರಿದ ಎಸ್ಟೇಟ್‌ನೊಳಗೆ ಇವತ್ತಿಗೂ ಅರಣ್ಯ ಅಥವಾ ಕಂದಾಯ ಇಲಾಖೆ ಅಧಿಕಾರಿಗಳು ಹೋಗಿಲ್ಲ. ಅದರ ಸರ್ವೇಯೂ ಆಗಿಲ್ಲ. ಒತ್ತುವರಿ ವಿಷಯ ಎಂಬುದು ಬಡವರು ಮತ್ತು ಶ್ರೀಮಂತರ ಮಧ್ಯೆ ಸಂಘರ್ಷದಂತಾಗಿದೆ.

ಕಲ್ಕುಳಿ ವಿಠಲ್‌ ಹೆಗ್ಡೆ,

ಪರಿಸರವಾದಿ

ಪ್ರತಿಕ್ರಿಯಿಸಿ (+)